Sidlaghatta ಶಿಡ್ಲಘಟ್ಟ : ಶಿಡ್ಲಘಟ್ಟ ನಗರದ ಕನಕನಗರದಲ್ಲಿರುವ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಶಾಲೆಯ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನೂರಾರು ಮಕ್ಕಳು ಹಾಗೂ ಪೋಷಕರು ಪ್ರತಿನಿತ್ಯ ಕೆಸರಿನಲ್ಲಿ ಹೆಜ್ಜೆ ಇಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಒಳಚರಂಡಿ (ಯುಜಿಡಿ) ಕಾಮಗಾರಿಗಾಗಿ ಈ ರಸ್ತೆಯನ್ನು ಸಂಪೂರ್ಣ ಅಗೆದು ಹಾಕಲಾಗಿದ್ದು, ಸುಮಾರು ಒಂದು ತಿಂಗಳಿನಿಂದ ಈ ಸ್ಥಿತಿ ಮುಂದುವರಿದಿದೆ. ಇತ್ತೀಚಿನ ಮಳೆಯಿಂದಾಗಿ ಇಡೀ ರಸ್ತೆ ಕೆಸರುಮಯವಾಗಿ, ವಾಹನಗಳಿರಲಿ ಕಾಲ್ನಡಿಗೆಯಲ್ಲಿ ಸಾಗುವುದೂ ದುಸ್ತರವಾಗಿದೆ. ಈಗಾಗಲೇ ಮೂರ್ನಾಲ್ಕು ಮಕ್ಕಳು ಹಾಗೂ ಪೋಷಕರು ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.
ಮಗುವಿನ ಕಣ್ಣಿನ ಬಳಿ ಗಾಯ, ಪೋಷಕರ ಆತಂಕ
ಇಲ್ಲಿನ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಚಂದನಾ, ಶಾಲೆಗೆ ಬರುವ ವೇಳೆ ಕೆಸರಿನ ರಸ್ತೆಯಲ್ಲಿ ಜಾರಿ ಬಿದ್ದು ಕಣ್ಣಿನ ಬಳಿ ಗಾಯ ಮಾಡಿಕೊಂಡಿದ್ದಾಳೆ. ಮಗುವಿನ ತಾಯಿ ಶಾರದಾ ಪ್ರತಿಕ್ರಿಯಿಸಿ, “ಅಕಸ್ಮಾತ್ ಕಣ್ಣಿಗೇ ಪೆಟ್ಟು ಬಿದ್ದಿದ್ದರೆ ಏನಾಗುತ್ತಿತ್ತೋ ಯೋಚಿಸಿದರೇ ಭಯವಾಗುತ್ತದೆ. ಈ ರಸ್ತೆಯನ್ನು ಸಂಬಂಧಪಟ್ಟವರು ಸರಿಪಡಿಸಬಾರದೇ? ಒಂದು ತಿಂಗಳಿನಿಂದ ನಮಗೆ ನಿತ್ಯ ನರಕ ದರ್ಶನವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಶಾಲೆಗೆ ಪ್ರತಿದಿನ ಮಕ್ಕಳನ್ನು ಕರೆದೊಯ್ಯುವ ಪೋಷಕರು, ಇಟ್ಟಿಗೆಗಳನ್ನು ಪೇರಿಸಿಕೊಂಡು ಅವುಗಳ ಮೇಲೆ ಹೆಜ್ಜೆ ಇಡುತ್ತಾ ಸಾಗುವ ದೃಶ್ಯಗಳು ಸಾಮಾನ್ಯವಾಗಿವೆ. ಒಂದೆಡೆ ಆಳವಾಗಿ ಅಗೆದ ಮಣ್ಣಿನ ರಾಶಿ, ಇನ್ನೊಂದೆಡೆ ಮೊಣಕಾಲುದ್ದ ನಿಂತ ಕೆಸರು ನೀರು – ಈ ನಡುವೆಯೇ ಮಕ್ಕಳು ಶಾಲೆಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಟ್ರಾನ್ಸ್ ಫಾರ್ಮರ್ ಕೂಡ ಅಪಾಯಕಾರಿ
ರಸ್ತೆ ಬದಿಯಲ್ಲೇ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುತ್ತಲೂ ಕೆಸರು ನೀರು ನಿಂತಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದೇ ಭಾಗದಲ್ಲಿರುವ ಹಾಲಿನ ಡೈರಿಗೆ ವಾಹನ ಹಾಗೂ ಜನರ ಓಡಾಟವೂ ದುಸ್ತರವಾಗಿದ್ದು, ಸೂರ್ಯ ಲೇಔಟ್ ನಿವಾಸಿಗಳಿಗೂ ಇದೇ ಸಂಕಷ್ಟ ಎದುರಾಗಿದೆ. ಮನೆಗಳಿಗೆ ತೆರಳುವ ನಿವಾಸಿಗಳು ಕೂಡ ಇದೇ ಕೆಸರು ರಸ್ತೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ.

ಶಾಲಾ ವಾಹನ ಸಂಚಾರ ಸ್ಥಗಿತ: ಆಡಳಿತ ಮಂಡಳಿ ಬೇಸರ
ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಂಜುನಾಥ್ ಪ್ರತಿಕ್ರಿಯಿಸಿ, “ಶಾಲಾ ವಾಹನಗಳು ಒಳಗೆ ಬರಲು ಆಗುತ್ತಿಲ್ಲ. ಪೋಷಕರು ಮಕ್ಕಳನ್ನು ಕರೆತರುವುದೇ ಕಷ್ಟವಾಗಿದೆ. ಹಲವು ಮಕ್ಕಳಿಗೆ ಈಗಾಗಲೇ ಗಾಯಗಳಾಗಿವೆ. ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮದು ಮಾನಿಟರಿಂಗ್ ಕೆಲಸ ಮಾತ್ರ” – ಪೌರಾಯುಕ್ತೆ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯೆ ಕೇಳಿದಾಗ ನಗರಸಭೆ ಪೌರಾಯುಕ್ತೆ ಅಮೃತಾ, “ಇದು ಕೆ.ಯು.ಐ.ಡಿ.ಎಫ್.ಸಿ (KUIDFC) ವತಿಯಿಂದ ಕೈಗೆತ್ತಿಕೊಂಡಿರುವ ಯೋಜನೆ. ನಮ್ಮದು ಕೇವಲ ಮಾನಿಟರಿಂಗ್ ಕೆಲಸವಷ್ಟೇ. ನಮಗೂ ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ. ಸಂಬಂಧಪಟ್ಟ ಎಂಜಿನಿಯರ್ ಗೆ ಈಗಾಗಲೇ ವಿಷಯ ತಿಳಿಸಲಾಗಿದೆ” ಎಂದು ಪ್ರತಿಕ್ರಿಯಿಸಿದರು.
ಸ್ಥಳೀಯರ ಒತ್ತಾಯ ಏನು?
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೂಡಲೇ ರಸ್ತೆಗೆ ತಾತ್ಕಾಲಿಕ ಜಲ್ಲಿ/ಮರಳು ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು; ಟ್ರಾನ್ಸ್ ಫಾರ್ಮರ್ ಸುತ್ತ ರಕ್ಷಣಾ ಬೇಲಿ ಅಳವಡಿಸಬೇಕು; ಕಾಮಗಾರಿಯನ್ನು ತ್ವರಿತಗೊಳಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು; ಶಾಲಾ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಬೇಕು.
ಕಾಮಗಾರಿ ನಡೆಯುತ್ತಿರುವುದು ಜನಹಿತಕ್ಕಾಗಿಯೇ ಆದರೂ, ಅದರ ಅನುಷ್ಠಾನದಲ್ಲಿನ ನಿರ್ಲಕ್ಷ್ಯ ಮಕ್ಕಳ ಸುರಕ್ಷತೆಗೆ ಮಾರಕವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಶಾಶ್ವತ ಪರಿಹಾರವಲ್ಲದಿದ್ದರೂ ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು ಎಂಬುದು ಪೋಷಕರು ಹಾಗೂ ನಿವಾಸಿಗಳ ಒತ್ತಾಸೆ.
In English: The road in front of Garudadri English Public School in Kanakanagara, Sidlaghatta, has been dug up for UGD (underground drainage) works for about a month. Recent rain has turned it into a mud pit, injuring several children and parents, including a Class 3 student hurt near the eye. Residents also flagged an electric transformer standing in stagnant muddy water as a hazard. The municipal commissioner said the KUIDFC project is being monitored and the engineer concerned has been informed; locals are demanding temporary gravel filling, a safety fence around the transformer, and a faster completion timeline.








