Sidlaghatta : ವಿಜ್ಞಾನದ ಕಲಿಕೆಯು ಗ್ರಾಮೀಣಭಾಗದ ವಿದ್ಯಾರ್ಥಿಗಳಿಗೆ ಕಷ್ಟವೆಂಬ ಭಾವನೆಯಿದ್ದು, ಮೂಲವಿಜ್ಞಾನದ ಕಲಿಕೆಯು ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಆಗಬೇಕಿದೆ. ಅದಕ್ಕಾಗಿ ವಿಜ್ಞಾನ ಬೋಧನೆಯನ್ನು ಪ್ರಾಯೋಗಿಕ ವಿಧಾನದಿಂದ ಮಾಡುವುದರಿಂದ ಶಾಶ್ವತವಾದ ಮತ್ತು ಸುಲಭವಾಗಿ ಪಡೆಯಬಹುದಾದ ಅನುಭವ ಮತ್ತು ಜ್ಞಾನವಾಗಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಟೀಂ-ಲೀಡ್ ಇಂಡಿಯಾ ಸಂಸ್ಥೆಯ ಲಿಟೆರೆಸಿ ಪ್ರಾಜೆಕ್ಟ್, ಚೈಲ್ಡ್ ರೈಟ್ಸ್, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇವೈ ಸಿ.ಎಸ್.ಆರ್ ಅನುದಾನದಡಿ ಹಮ್ಮಿಕೊಂಡಿದ್ದ ಉಚಿತ ವಿಜ್ಞಾನ ಕಿಟ್ ಗಳ ವಿತರಣೆ ಮತ್ತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲಾ ಹಂತದಿಂದಲೇ ವಿಜ್ಞಾನವನ್ನು ಪ್ರಯೋಗಶಾಲೆಗಳಲ್ಲಿ ಪ್ರಯೋಗಗಳನ್ನು ಮಾಡುವ ಮೂಲಕ ಕಲಿಸಬೇಕಿದೆ. ಪ್ರತಿ ಶಿಕ್ಷಕರು ಕಲಿಕೋಪಕರಣಗಳನ್ನು ಉಪಯೋಗಿಸಿ ಕಲಿಕೆಗೆ ಸುಗಮಕಾರರಾಗಿ ಪರಿಣಾಮಕಾರಿಯಾಗಿ ಬಳಸಿ ಕಾರ್ಯನಿವಹಿಸಬೇಕು ಎಂದರು.
ಕೆರಿಯರ್ ಗೈಡೆನ್ಸ್: ಮುಂದಿನ ದಿನಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಸಂಸ್ಥೆಗಳ ಸಹಕಾರದಲ್ಲಿ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಸಂಸ್ಥೆಗಳ ಸಹಕಾರ ಸಿಗಲಿದೆ ಎಂದರು.
ಬಿ.ಆರ್.ಸಿ ಸಂಯೋಜಕ ತ್ಯಾಗರಾಜು ಮಾತನಾಡಿ, ತಾಲ್ಲೂಕಿನ ಸುಮಾರು 117 ಸರ್ಕಾರಿ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ಪಠ್ಯಪುಸ್ತಕ ಆಧಾರಿತ ವಿಜ್ಞಾನ ವಸ್ತುಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಕಿಟ್ ನ ಬಳಕೆ ಮತ್ತು ವಿಜ್ಞಾನ ಗುಣಾತ್ಮಕ ಬೋಧನೆಗೆ ಪೂರಕವಾಗಿ ಒಂದು ದಿನದ ತರಬೇತಿ ನೀಡಿ ಸಜ್ಜುಗೊಳಿಸುತ್ತಿದ್ದು ಇನ್ನು ಮುಂದೆ ವಿಜ್ಞಾನದ ಕಲಿಕೆಯು ತಾಲ್ಲೂಕಿನ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಸುಲಭವಾಗಲಿದೆ ಎಂದರು.
ಟೀಂ-ಲೀಡ್ ಇಂಡಿಯಾ ಸಂಸ್ಥೆಯ ಲಿಟೆರೆಸಿ ಪ್ರಾಜೆಕ್ಟ್ ನ ದೀಕ್ಷಾ ಅವರು ಮಾತನಾಡಿ, ಲಿಟೆರೆಸಿ ಪ್ರಾಜೆಕ್ಟ್ ವತಿಯಿಂದ ಸರ್ಕಾರಿ ಶಾಲೆಗಳನ್ನು ಸಿ.ಎಸ್.ಆರ್ ಅನುದಾನದಡಿ ಮತ್ತಷ್ಟು ಉತ್ತಮಪಡಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತಯುತ್ತಿರುವ ಬಡ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಮತ್ತಷ್ಟು ಉತ್ತಮಪಡಿಸುವತ್ತ ಶಿಕ್ಷಕರು, ಪೋಷಕರ ಪಾತ್ರವಿದೆ ಎಂದರು.
ತಾಲ್ಲೂಕಿನ 117 ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಕಿಟ್ ಗಳನ್ನು ವಿತರಿಸಲಾಯಿತು. ಕಿಟ್ ನ ಬಳಕೆ, ವಿಜ್ಞಾನ ಬೋದನೆಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ತರಬೇತಿ ನೀಡಲಾಯಿತು.
ಟೀಂ-ಲೀಡ್ ಇಂಡಿಯಾ ಸಂಸ್ಥೆಯ ಲಿಟೆರೆಸಿ ಪ್ರಾಜೆಕ್ಟ್ ನ ಸವಿತಾ, ಸಮೀರ್, ಚೈಲ್ಡ್ ರೈಟ್ಸ್ ನ ಸಂಯೋಜಕ ಜಯರಾಂ ಸತೀಶ್, ಶಿಕ್ಷಣ ಸಂಯೋಜಕಿ ಪರಿಮಳಾ, ಬಿ.ಆರ್.ಪಿ ಚಂದ್ರಕಲಾ, ಕೆ. ಮಂಜುನಾಥ್, ಮುಖ್ಯಶಿಕ್ಷಕಿ ಕಮಲಾ ಹಾಜರಿದ್ದರು.