Melur, Sidlaghatta : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಪಕ್ಷಾತೀತ ಮನೋಭಾವದಿಂದ ಶ್ರಮಿಸುವ ಗುಣವನ್ನು ಪ್ರತಿಯೊಬ್ಬ ಸದಸ್ಯರೂ ರೂಡಿಸಿಕೊಳ್ಳಬೇಕೆಂದು ಶಾಸಕ ಬಿ.ಎನ್. ರವಿಕುಮಾರ್ ಕರೆ ನೀಡಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಳಮಾಚನಹಳ್ಳಿ, ಹೊಸಪೇಟೆ, ಮತ್ತು ನಾಗಮಂಗಲ ಗ್ರಾಮ ಪಂಚಾಯಿತಿಗಳ ಜೆಡಿಎಸ್ ಬೆಂಬಲಿತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
“ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಪ್ರತಿಯೊಬ್ಬ ಸದಸ್ಯರೂ ಮತದಾರರ ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಜನತೆ ತೋರಿಸಿರುವ ವಿಶ್ವಾಸಕ್ಕೆ ದಕ್ಕೆ ಬಾರದಂತೆ ಗ್ರಾಮೀಣ ಭಾಗಗಳ ಅಭಿವೃದ್ದಿ ಕಾರ್ಯಗಳಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ಅಭಿವೃದ್ಧಿ ಕೆಲಸಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಗ್ರಾಮ ಪಂಚಾಯಿತಿಗಳಾಗಿ ಹೊರಹೊಮ್ಮಲು ಶ್ರಮಿಸಬೇಕು” ಎಂದು ಹೇಳಿದರು.
ಇತ್ತೀಚೆಗೆ ನಡೆದ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ 48 ಸ್ಥಾನಗಳಿಗೆ ಆಯೋಜಿಸಲಾಗಿದ್ದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 35 ಮಂದಿ ಸದಸ್ಯರು ಗೆದ್ದು, ಎಲ್ಲಾ ನಾಲ್ಕು ಪಂಚಾಯಿತಿಗಳ ಮೇಲಿನ ಹಿಡಿತ ಸಾಧಿಸಿದ್ದಾರೆ. “ಈ ಗೆಲುವು ನಮಗೆ ಹೆಚ್ಚುವರಿ ಹೊಣೆ ಹೊತ್ತುಕೊಳ್ಳುವ ಒತ್ತಾಯವನ್ನು ತಂದಿದೆ. ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಿ ಉತ್ತಮ ಹೆಸರು ಪಡೆಯುವುದು ಮುಖ್ಯ” ಎಂದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಹುಜಗೂರು ರಾಮಣ್ಣ, ಜೆ.ವಿ. ಸದಾಶಿವ, ಮುಗಿಲಡಿಪಿ ನಂಜಪ್ಪ, ಕೆಂಪರೆಡ್ಡಿ, ಗಂಗರೆಡ್ಡಿ, ನಾರಾಯಣಸ್ವಾಮಿ, ಸಿ.ವಿ. ಆಂಜಿನಪ್ಪ, ರಾಮಚಂದ್ರಪ್ಪ, ಮಂಜುನಾಥ್, ರವಿಕುಮಾರ್, ಸೌಭಾಗ್ಯಮ್ಮ, ಮಾರೇಗೌಡ, ರಮೇಶ್, ಮುನಿಕೃಷ್ಣ ಮತ್ತು ಇತರ ಪ್ರಮುಖರು ಭಾಗವಹಿಸಿದ್ದರು.