Sidlaghatta : ಚಿಕ್ಕಬಳ್ಳಾಪುರದಿಂದ ದಿಬ್ಬೂರಹಳ್ಳಿ ಮಾರ್ಗವಾಗಿ ಶುಕ್ರವಾರ ಸಂಜೆ ಶಿಡ್ಲಘಟ್ಟಕ್ಕೆ ಆಗಮಿಸಿದ ಶ್ರೀರಾಮನ ಸಂದೇಶ ಸಾರುವ, ಅಯೋಧ್ಯೆ ಇತಿಹಾಸ ತಿಳಿಸುವ ಹನುಮ ರಥಕ್ಕೆ ಭವ್ಯ ಸ್ವಾಗತವನ್ನು ಕೋರಲಾಯಿತು.
ರಥಕ್ಕೆ ಸ್ವಾಗತ ಕೋರಿದ ಸಂದರ್ಭದಲ್ಲಿ ರಾಜ್ಯ ನಮೋ ಬ್ರಿಗೇಡ್ ವಿಸ್ತಾರಕ ಅಭಿಲಾಷ್ ಮಾತನಾಡಿ, ಭಾರತ ಹಿಂದೂಗಳ ಪವಿತ್ರ ನಾಡು. ಈ ನಾಡಿನಲ್ಲಿನ ಪ್ರತಿಯೊಬ್ಬ ಹಿಂದೂ ಧರ್ಮಿಯ ಶ್ರೀರಾಮನ ಸಂದೇಶ, ಚರಿತ್ರೆ ತಿಳಿಯಬೇಕು. ಅಯೋಧ್ಯೆಯ ಇತಿಹಾಸ ತಿಳಿಸಲಿರುವ ಹನುಮರಥ ಶಿಡ್ಲಘಟ್ಟಕ್ಕೆ ಬಂದಿರುವುದಲ್ಲದೆ, ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಜನರಿಗೆ ತಿಳಿಸಿಕೊಡುತ್ತಿದೆ ಎಂದು ಹೇಳಿದರು.
ಹಿಂದೂಗಳು ಸಂಘಟಿತರಾದರೆ ದೇಶದ ಅಭಿವೃದ್ಧಿಯ ಪಥವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದು. ನಮ್ಮ ಪರಂಪರೆಯ ಬಗ್ಗೆ ಎಲ್ಲರೂ ತಿಳಿದು ಕೊಳ್ಳಬೇಕು. ಯುವ ಸಮುದಾಯವು ಹಿಂದೂ ಧರ್ಮದ ವಿಚಾರಗಳನ್ನು ಅರಿತು ಬಾಳಬೇಕು.
ಅಯೋಧ್ಯೆಯ ರಾಮ ಮಂದಿರ ಸಂಘರ್ಷಕ್ಕೆ 492 ವರ್ಷಗಳ ಇತಿಹಾಸವಿದೆ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಜನವರಿ 22 ರಂದು ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ಶ್ರೀರಾಮ ಚರಿತ್ರೆಯನ್ನು ಸಾರುವ ಈ ರಥಗಳು ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಾ ರಾಮ ಮಂದಿರದ ಹೋರಾಟದ ಇತಿಹಾಸವನ್ನು ತಿಳಿಸುತ್ತಿವೆ. ಭಾರತದಲ್ಲಿನ ಹಿಂದೂ ದೇವಾಲಯಗಳು ಪುನರುಜ್ಜೀವಗೊಳ್ಳುವ ರೋಚಕ ಹಂತಗಳನ್ನು ತಿಳಿಸಿಕೊಡಲಿರುವ ಈ ರಥವು ರಾಜ್ಯದಲ್ಲಿ 60 ದಿನಗಳು ಸಂಚರಿಸಲಿವೆ ಎಂದರು.
ಅಯೋಧ್ಯೆಯ ಹನುಮ ರಥ ಮತ್ತು ಸೇನಾಪತಿ ವಾಹನಗಳು ಶುಕ್ರವಾರ ಸಂಜೆ ಶಿಡ್ಲಘಟ್ಟ ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿ ಬಂದಾಗ ನಮೋ ಬ್ರಿಗೇಡ್ ಸದಸ್ಯರು ಹಾಗೂ ರಾಮ ಭಕ್ತರು ಹನುಮ ರಥಕ್ಕೆ ಪೂಜೆ ಸಲ್ಲಿಸಿ, ಹೂಗಳನ್ನು ಚೆಲ್ಲಿ, ಜಯ ಘೋಷಗಳನ್ನು ಕೂಗುವ ಮೂಲಕ ಭವ್ಯವಾದ ಸ್ವಾಗತ ಕೋರಿದರು.
ನಗರದ ಮಾರಮ್ಮ ಸರ್ಕಲ್, ಉಲ್ಲೂರು ಪೇಟೆ ಮಾರ್ಗವಾಗಿ ಹೂವಿನ ವೃತ್ತ, ಕೋಟೆ ಸರ್ಕಲ್ ಹಾಗೂ ಬಸ್ ನಿಲ್ದಾಣದ ಬಳಿ ಎಲ್.ಇ.ಡಿ ವಾಲ್ ಮೂಲಕ ಅಯೋಧ್ಯೆಯ ರಾಮ ಮಂದಿರದ ಕಿರು ಚಿತ್ರವನ್ನು ಪ್ರದರ್ಶಿಸಿ ನಂತರ ಕೋಲಾರದ ಕಡೆ ಹೊರಡಿತು.
ರಾಮ ಭಕ್ತರು, ವಿಶ್ವಹಿಂದು ಪರಿಷತ್ ಸದಸ್ಯರು, ಬಿಜೆಪಿ ಮುಖಂಡರು, ರೈತ ಮುಖಂಡರು, ಮಹಿಳೆಯರು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.