Sidlaghatta : ಬಯಲು ಸೀಮೆ ಭಾಗದ ಕೆರೆಗಳಿಗೆ ನೀರು ಹರಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಎಚ್.ಎನ್. ವ್ಯಾಲಿ ಯೋಜನೆಯ ನೀರನ್ನು ಅಕ್ರಮವಾಗಿ ತೋಟಗಳಿಗೆ ಬಳಸುತ್ತಿರುವ ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನ ಅಬ್ಲೂಡು ಮತ್ತು ಗುಡಿಹಳ್ಳಿ ಗ್ರಾಮದ ಸರ್ಕಾರಿ ಕೆರೆಯ ನೀರನ್ನು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡು ಮೋಟರ್ ಮೂಲಕ ತೋಟಗಳಿಗೆ ಹರಿಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್ ನೇತೃತ್ವದಲ್ಲಿ ಬೆಸ್ಕಾಂ ಮತ್ತು ಪೊಲೀಸ್ ಸಿಬ್ಬಂದಿಯ ದಾಳಿ ನಡೆಸಿ, ಸ್ಥಳದಲ್ಲಿದ್ದ ಮೋಟರ್, ಪಂಪು, ಕೇಬಲ್ ವೈರ್‌ಗಳನ್ನು ವಶಪಡಿಸಿಕೊಂಡರು.
ಸರ್ಕಾರಿ ಕೆರೆಯ ನೀರನ್ನು ಯಾವುದೇ ಅನುಮತಿಯಿಲ್ಲದೆ ಬಳಸುವುದು ಕಾನೂನುಬಾಹಿರ ಕೃತ್ಯ. ಅದನ್ನು ಅಕ್ರಮವಾಗಿ ಮೋಟಾರ್‌ಗಳ ಮೂಲಕ ತೋಟಗಳಿಗೆ ಹರಿಸುವುದು ಮಾತ್ರವಲ್ಲ, ಅನಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು ಅಪಾಯಕಾರಿ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಇದರಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿದ್ದು, ಇಂತಹ ದುಸ್ಸಾಹಸ ತಡೆಯಬೇಕೆಂದು ರೈತರಿಗೆ ತಹಶೀಲ್ದಾರ್ ಎಚ್ಚರಿಕೆ ನೀಡಿದರು.
ಸ್ಥಳದಲ್ಲಿ ವಶಪಡಿಸಿಕೊಂಡ ಮೋಟರ್, ಪಂಪು, ಕೇಬಲ್ ವೈರ್‌ಗಳನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ ವರದಿ ಸಲ್ಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣೆ ಕ್ರೈಂ ಸಬ್‌ಇನ್‌ಸ್ಪೆಕ್ಟರ್ ನಾಗರಾಜ್, ಬೆಸ್ಕಾಂ ಸಹಾಯಕ ಎಂಜಿನಿಯರ್ ಕಿರಣ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ವೇಣುಗೋಪಾಲ್, ಗ್ರಾಮ ಲೆಕ್ಕಿಗ ಮುನಿರಾಜು ಸೇರಿದಂತೆ ಬೆಸ್ಕಾಂ ಸಿಬ್ಬಂದಿ ಹಾಜರಿದ್ದರು.