Kachahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು ನೀಡಿರುವ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.
ಶಾಸಕರು ಮಕ್ಕಳ ಕಲಿಕೆಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದು ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ನೀಡಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. ಕಾಚಹಳ್ಳಿಯ ಹಿರಿಯರು ಹಾಗೂ ದಾನಿ ರಾಜಣ್ಣ ಅವರು ಕಾಚಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತೀ ವರ್ಷ ವರ್ಷಕ್ಕೆ ಆಗುವಷ್ಟು ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದು, ಈ ವರ್ಷವೂ ಎಲ್ಲಾ ಮಕ್ಕಳಿಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿ, ಚೆನ್ನಾಗಿ ಓದಿ ಒಳ್ಳೆಯ ಪ್ರಜೆಗಳಾಗಿ ಶಾಲೆಗೆ ತಂದೆ ತಾಯಿಗಳಿಗೆ ಹಾಗೂ ಗ್ರಾಮಕ್ಕೆ ಒಳ್ಳೆಯ ಹೆಸರನ್ನು ತನ್ನಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಉಮಾ, ಗ್ರಾಮಸ್ಥರಾದ ರತ್ನಮ್ಮ, ಸುಶೀಲಮ್ಮ, ಮೀನಾ, ಶೇಖರ್, ಗಂಗಮ್ಮ, ಶಿಕ್ಷಕರಾದ ಆರ್. ರಾಜೇಶ್ವರಿ, ವಿ.ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತೆ ಸುಜಾತ, ಅಡುಗೆ ಸಹಾಯಕಿ ಗಾಯತ್ರಿ ಹಾಜರಿದ್ದರು.