Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ಸೂಕ್ತವಾದ ಜಾಗವನ್ನು ಗುರುತಿಸಲು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದ್ದು, ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ದಾಸಶ್ರೇಷ್ಠ ಕನಕದಾಸರು ಕೇವಲ ಕುರುಬ ಸಮುದಾಯದವರೆಂದಲ್ಲ, ಬದಲಿಗೆ ಸಮಾಜದ ಎಲ್ಲ ವರ್ಗಗಳಿಗೂ ಮಾರ್ಗದರ್ಶಕರಾದ ವ್ಯಕ್ತಿತ್ವ. 15-16ನೇ ಶತಮಾನದಲ್ಲಿಯೇ ಜಾತಿ ವ್ಯತ್ಯಾಸಕ್ಕೆ ವಿರೋಧವಾಗಿ ಸಮಾನತೆಯ ಸಂದೇಶ ಸಾರಿದ ಮಹಾನ್ ಭಕ್ತ,” ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯದ SSLC ಮತ್ತು PUC ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಹಿರಿಯ ಸದಸ್ಯರಿಗೆ ಸನ್ಮಾನ ನಡೆಯಿತು. ಜಯಪ್ರಕಾಶ್ ನಾರಾಯಣ್ ಹಾಗೂ ಎಚ್.ಡಿ. ದೇವೇಗೌಡ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹5,000 ಪ್ರೋತ್ಸಾಹ ಧನ ನೀಡಲಾಯಿತು.
ನಗರದ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಡೊಳ್ಳು ಕುಣಿತ, ಗಾರುಡಿಗೊಂಬೆ, ಕೀಲುಕುದುರೆ ಮುಂತಾದ ಜನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ನಾಗರಾಜ್, ತಾಲ್ಲೂಕು ಅಧ್ಯಕ್ಷ ಕೆ. ಮಂಜುನಾಥ್, ಕಾರ್ಯದರ್ಶಿ ಎಂ. ರಾಮಾಂಜಿ, ಗೌರವಾಧ್ಯಕ್ಷ ಎಂ. ಗಣೇಶಪ್ಪ, ಮೇಲೂರು ಮಂಜುನಾಥ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ನಗರಸಭೆ ಆಯುಕ್ತೆ ಅಮೃತ ಮತ್ತು ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366









