ಶಿಡ್ಲಘಟ್ಟ ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಶುಕ್ರವಾರ ಶಿಡ್ಲಘಟ್ಟ ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿ ಪದಗ್ರಹಣ ಹಾಗೂ ಸಾಹಿತ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿದರು.
ಕನ್ನಡ ನಾಡಿನ ಏಕೀಕರಣ ಹಾಗೂ ಇಪ್ಪತ್ತನೆಯ ಶತಮಾನದಿಂದ ಮೊದಲ್ಗೊಂಡು ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪರಿಷತ್ತು ಆಯೋಜಿಸುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾಹಿತ್ಯ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ, ಮಾತ್ರವಲ್ಲದೆ ಸಾಮಾಜಿಕ ಸಂಸ್ಕಾರಯುತ ಜೀವನ ಸಾಗಿಸಲು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಉಗಮ ಕುರಿತಾದ ವಿವರಗಳನ್ನು ಸಾಂಸ್ಕೃತಿಕ ಇತಿಹಾಸದ ಪುಟಗಳಲ್ಲಿ ಸೇರಿಸುವಂತೆ ಮಾಡೋಣ ಎಂದು ಅವರು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿ ಕಟ್ಟಿದ ಕಸಾಪ 107 ವರ್ಷಗಳ ಇತಿಹಾಸ ಹೊಂದಿದ್ದು, ಜಿಲ್ಲಾ ಕಸಾಪ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ನಾಡು, ನುಡಿ ಮತ್ತು ಸಾಹಿತ್ಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಕುರಿತು ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಸ್.ಎನ್.ಅಮೃತ್ ಕುಮಾರ್ ಮಾತನಾಡಿ, ಮನುಷ್ಯ ಜೀವನದ ಮೌಲ್ಯಗಳು ಸಾಹಿತ್ಯದಲ್ಲಿದೆ. ತಮ್ಮ ಮತ್ತು ಸಮಾಜದ ಒಳಿತಿಗಾಗಿ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಿ ತಿಳಿಯುವಂತಾಗಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತಿಗಳು ಕೂಡ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರದ ಕೊಡುಗೆ ನೀಡಿದ್ದಾರೆ. ವ್ಯಕ್ತಿಯ ಜೀವನ, ಸಮಾಜ, ಅರ್ಥವ್ಯವಸ್ಥೆ ಮತ್ತು ರಾಜಕಾರಣಗಳೆಲ್ಲವು ಮೌಲ್ಯಾಧಾರಿತವಾಗಿರಬೇಕು. ಮೌಲ್ಯಗಳ ಅಳವಡಿಕೆಯಿಂದ ವ್ಯಕ್ತಿಯ ಘನತೆ ವೃದ್ಧಿಸಿ ಚಿನ್ನದಂತೆ ಪರಿಶುದ್ಧಗೊಂಡು ಬದುಕು ಬಂಗಾರವಾಗುತ್ತದೆ.
ಸಂಸ್ಕಾರ ಮತ್ತು ಸಂಸ್ಕೃತಿಗಳು ನಮ್ಮ ಜೀವದಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ವದ ಮೌಲ್ಯಗಳು, ಉತ್ತಮ ಜೀವನ ನಡೆಸಲು ಇವೆರಡೂ ಅತೀ ಅಗತ್ಯ ಎಂದರು.
ತಾಲ್ಲೂಕು ಕಸಾಪ ದ ನಿಕಟಪೂರ್ವ ಅಧ್ಯಕ್ಷ ಎ.ಎಂ .ತ್ಯಾಗರಾಜ್ ನೂತನ ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ರವರಿಗೆ ಕಸಾಪ ಧ್ವಜ ಹಸ್ತಾಂತರ ಮಾಡಿದರು.
ನೂತನ ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ನನ್ನ ಮೆಚ್ಚಿನ ಪುಸ್ತಕ, ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ, ಕವಿ ಕಾವ್ಯ ಪರಿಚಯ, ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ, ಲೇಖನ ಬರೆಯುವುದು ಹೇಗೆ? ಕವನ ಬರೆಯುವುದು ಹೇಗೆ? ಮುಂತಾದ ಕಾರ್ಯಗಾರಗಳು ಮತ್ತು ಆನ್ ಲೈನ್ ಕಾರ್ಯಕ್ರಮ ಗಳ ಮೂಲಕ ಪರಿಷತ್ತನ್ನು ಕ್ರಿಯಾಶೀಲವಾಗಿ ಕಟ್ಟುತ್ತೇವೆ ಮತ್ತು ಶಿಡ್ಲಘಟ್ಟ ತಾಲ್ಲೂಕು ಕಸಾಪ ವಿನೂತನ ಕಾರ್ಯಕ್ರಮಗಳ ಮೂಲಕ ಇಡೀ ಜಿಲ್ಲೆಗೆ ಮೊದಲಿಗರಾಗಬೇಕೆಂಬ ನಮ್ಮ ಆಶಯವಾಗಿದೆ ಎಂದರು.
ಜಿಲ್ಲಾ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಶಿಡ್ಲಘಟ್ಟ ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿ.ಪೂ.ಅಧ್ಯಕ್ಷ ಎ.ಎಂ.ತ್ಯಾಗರಾಜ್, ಎಸ್.ಎನ್.ಅಮೃತ್ ಕುಮಾರ್, ಡಾ.ಡಿ.ಟಿ.ಸತ್ಯನಾರಾಯಣ ರಾವ್, ಚಲಪತಿಗೌಡ, ಸಾಹಿತಿ ಚಂದ್ರಶೇಖರ ಹಡಪದ್, ಕಸಾಪ ಸದಸ್ಯರು, ಕನ್ನಡ ಪರ ಸಂಘಟನೆಯ ಮುಂಖಂಡರು ಮತ್ತು ರೈತ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.