Sidlaghatta : ಶಿಡ್ಲಘಟ್ಟ : ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2024-25 ನೇ ಸಾಲಿನಲ್ಲಿ ಕನ್ನಡ ಭಾಷೆಯಲ್ಲಿ ಶೇಕಡ ನೂರು ಅಂಕಗಳು ಪಡೆದ ಪ್ರತಿಭಾನ್ವಿತ SSLC ಮತ್ತು PUC ಯ ಒಟ್ಟು 73 ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ, ನೆನಪಿನ ಕಾಣಿಕೆ, ಕನ್ನಡ ನಿಘಂಟು ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿ ರಂಗಪ್ಪ ಮಾತನಾಡಿ, ಗಡಿ ಭಾಗದಲ್ಲಿ ಪರಭಾಷೆಗಳ ಜೊತೆಗೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಜೋತುಬಿತ್ತಿರುವ ಸಮಾಜದಲ್ಲಿಂದು ಮಾತೃಭಾಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕಗಳು ಗಳಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕನ್ನಡ ನುಡಿ ಮತ್ತು ಭಾಷೆಯನ್ನು ಉಳಿಸುವಂತ ಕಾಯಕಕ್ಕೆ ಸನ್ನದ್ದರಾಗಬೇಕಿದೆ. ತಮ್ಮ ಗುರಿಯನ್ನು ಸಾರ್ಥಕಪಡಿಸಿಕೊಳ್ಳಲು ಕಲಿಕೆಯ ಜ್ಞಾನವನ್ನು ಕೈಬಿಡಬಾರದು. ಅದು ನಿಮ್ಮ ಶ್ರೇಯಸ್ಸಿಗೆ ದಾರಿ ದೀಪವಾಗಲಿದೆ ಎಂದು ಹೇಳಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಎಂ.ವಿ. ತ್ಯಾಗರಾಜ್ ಅವರು ಮಾತನಾಡಿ, ಅನೇಕ ಸಾಧಕರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಸಮಾಜಮುಖಿಯ ವ್ಯಕ್ತಿಗಳಾಗಿದ್ದಾರೆ. ವಿದ್ಯಾರ್ಥಿಗಳು ಮೌಡ್ಯತೆಗಳಿಗೆ ಬಲಿಯಾಗದೆ ಜ್ಞಾನದ ಅರಿವನ್ನು ಪಡೆದುಕೊಳ್ಳಬೇಕು. ಆಗ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ರೂಪಸಿ ರಮೇಶ್, ವಿ. ಕೃಷ್ಣ, ಬೆಳ್ಳೂಟಿ ಮುನಿಕೆಂಪಣ್ಣ, ಮುನೇಗೌಡ, ನಗರ್ತ ಮಂಡಳಿ ಅಧ್ಯಕ್ಷ ಕೆ.ಆರ್. ಶಿವಶಂಕರ್, ಮುನಿನಾರಾಯಣಪ್ಪ, ಎಸ್. ಸತೀಶ್, ಈ ಧರೆ ಪ್ರಕಾಶ್, ಟಿ.ಟಿ ನರಸಿಂಹಪ್ಪ, ಎಂ.ದೇವರಾಜ್, ರಾಮಾಂಜಿನಪ್ಪ, ಶಿವಕುಮಾರ್ ಕೆ.ಬಿ, ಮಂಜುನಾಥ್, ಸತ್ಯನಾರಾಯಣರಾವ್. ಡಿ.ಎಸ್, ಎನ್. ಸುಂದರ್ ಹಾಜರಿದ್ದರು.