Sidlaghatta : ಪತ್ರಿಕೆಗಳು ತುರ್ತು ಸಾಹಿತ್ಯ ಮಾಧ್ಯಮ, ಅಘೋಷಿತ ವಿಶ್ವವಿದ್ಯಾನಿಲಯ ಹಾಗೂ ಸಾಹಿತ್ಯ ಲೋಕದ ಹೆಬ್ಬಾಗಿಲು ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ವಾಸವಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ನಡೆದ ಕೋಲಾರ ಪತ್ರಿಕೆ ಸುವರ್ಣ ಸಂಭ್ರಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಮನುಷ್ಯನ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ಅಪಾರವಾದದ್ದು. ಪತ್ರಿಕೆಗಳು ಕೂಡ ಸಾಹಿತ್ಯ ಪ್ರಕಾರವೇ. ಪತ್ರಿಕೆಗಳ ಭಾಷೆ ಭಾವವಾಹಿನಿಯಿದ್ದಂತೆ. ಜನರ ಹೃದಯ ತಟ್ಟಬಲ್ಲದು. ಅತಿಯಾದ ಅವಲಂಬನೆ ಮನುಷ್ಯನನ್ನು ಅಧೋಗತಿಗೆ ಒಯ್ಯುತ್ತದೆ ಎಂದು ಹೇಳಿದರು.
ಇತಿಹಾಸ ಸಂಶೋಧಕ ಪ್ರೊ.ಕೆ.ಆರ್.ನರಸಿಂಹನ್ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯ ಪತ್ರಿಕೋದ್ಯಮಕ್ಕೆ ಹಾದಿ ತೋರಿದವರು ಪ್ರಹ್ಲಾದ ರಾವ್ ಅವರು. ಕೋಲಾರ ಪತ್ರಿಕೆಯ ನಿರಂತರತೆ ಅದ್ಭುತ. ಒಂದೂ ದಿನ ಕೂಡ ನಿಲ್ಲಲಿಲ್ಲ. ಸಾಹಿತ್ಯಕವಾಗಿ ಹಾಗೂ ಸಾಮಾಜಿಕವಾಗಿ ವೇದಿಕೆ ಸೃಷ್ಟಿ ಮಾಡಿ ಸಾಹಿತಿಗಳನ್ನು ಕೋಲಾರ ಪತ್ರಿಕೆ ಬೆಳೆಸಿದೆ ಎಂದು ಹೇಳಿದರು.
ಕೋಲಾರ ಪತ್ರಿಕೆ ಪ್ರಕಾಶಕಿ ಕೆ.ಎನ್.ಶ್ರೀವಾಣಿ ಪ್ರಹ್ಲಾದರಾವ್ ಅವರು ಕೋಲಾರ ಪತ್ರಿಕೆಯ 50 ವರ್ಷಗಳ ಸುಧೀರ್ಘ ಹಾದಿ, ಪ್ರಕಟಿಸಿದ ಪುಸ್ತಕಗಳು, ನಡೆಸಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಲುಕು ಹಾಕಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಾಪುರ ಮಂಜುನಾಥ್, ಶ್ರೀ ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್. ಶ್ರೀಕಾಂತ್, ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಟಿ.ಎ.ಕೃಷ್ಣಯ್ಯಶೆಟ್ಟಿ, ಕೋಲಾರ ಪತ್ರಿಕೆ ಸಂಪಾದಕ ಸುಹಾಸ್ ಪ್ರಹ್ಲಾದರಾವ್, ವಾಸವಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ರೂಪಸಿ ರಮೇಶ್, ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ನಾರಾಯಣಸ್ವಾಮಿ ಹಾಜರಿದ್ದರು.