Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಶೌಚಾಲಯ ಬೇಕಿದೆ. ಸಂಜೆ ಹೊತ್ತು ಶಾಲೆಯ ಆವರಣದಲ್ಲಿ ಪುಂಡುಪೋಕರಿಗಳ ಹಾವಳಿ ಹೆಚ್ಚಿದೆ. ಅವರು ಬಿಸಾದಿ ಹೋಗುವ ಗಲೀಜನ್ನು ನಾವುಗಳು ಬೆಳಗ್ಗೆ ಬಂದು ಸ್ವಚ್ಛಗೊಳಿಸಬೇಕಿದೆ. ಇದಕ್ಕೆ ಕಡಿವಾಣ ಹಾಕಿಸಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಸರ್ಕಾರಿ ಪ್ರೌಢಶಾಲೆಗೆ ಮೊದಲು ಆಟದ ಮೈದಾನವಿತ್ತು. ಈಗ ಏಕೋ ಗೊತ್ತಿಲ್ಲ ಅದರಲ್ಲಿ ಖಾಸಗಿಯವರಿದ್ದು, ನಮಗೆ ಆಡಲು ಮೈದಾನವಿಲ್ಲದಂತಾಗಿದೆ. ಈ ಬಾರಿ ನಮ್ಮನ್ನು ಶಾಲೆಯಿಂದ ಪ್ರವಾಸಕ್ಕೆ ಕರೆದೊಯ್ದಿಲ್ಲ. ಜಲಜೀವನ್ ಮಿಷನ್ ಕಾಮಗಾರಿಯಿಂದಾಗಿ ರಸ್ತೆಗಳೆಲ್ಲ ಕಿತ್ತುಹೋಗಿದೆ. ಕುಡಿಯುವ ನೀರಿನ ನಲ್ಲಿ, ಚರಂಡಿ ಸ್ವಚ್ಛತೆ, ಶಾಲಾ ಕಾಂಪೌಂಡ್ ಮುಂತಾದ ಅಗತ್ಯತೆಗಳ ಬಗ್ಗೆ ವಿದ್ಯಾರ್ಥಿಗಳು ಬೇಡಿಕೆಯಿಟ್ಟರು.
ವಿದ್ಯಾರ್ಥಿಗಳಿಂದ ಅಹವಾಲನ್ನು ಸ್ವೀಕರಿಸಿದ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಪಿಡಿಒ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ.ರವಿಪ್ರಸಾದ್, ಎಂ.ಜೆ.ಶ್ರೀನಿವಾಸ್, ದೇವರಾಜ್, ಭಾಗ್ಯಲಕ್ಷ್ಮಿ, ಶೋಭಾ, ಕಮಲಮ್ಮ, ಪಿಡಿಒ ಶಾರದಾ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎಂ.ಭಾಸ್ಕರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.