ಕಷ್ಟಪಟ್ಟು ದುಡಿಯುವ ಪೌರಕಾರ್ಮಿಕರಿಗೆ ವೇತನ ನೀಡುತ್ತಿಲ್ಲ, ಕೆಲಸಕ್ಕೆ ಬರದವರೊಂದಿಗೆ ಶಾಮೀಲಾಗಿ ಶೇಕಡಾ 60 ರಷ್ಟು ವೇತನದ ಹಣವನ್ನು ಅಧಿಕಾರಿಗಳು ಕಬಳಿಸುತ್ತಿದ್ದಾರೆ. ಇಲ್ಲದೇ ಇರುವ ಬ್ಲೀಚಿಂಗ್ ಪೌಡರಿಗೆ ಬಿಲ್ ಮಾಡಿದ್ದಾರೆ, ನಗರಸಭಾ ಸದಸ್ಯರಾದ ನಾವುಗಳು ನಮ್ಮ ಹಣದಲ್ಲಿ ತಂದ ಬ್ಲೀಚಿಂಗ್ ಪೌಡರನ್ನು ನಮ್ಮ ವಾರ್ಡುಗಳಲ್ಲಿ ಹಾಕಿಸಬೇಕಾದ ಪರಿಸ್ಥಿತಿಯಿದೆ. ಹದಿನೇಳು ಮಂದಿಗೆ ನಿಮ್ಮ ಕೆಲಸವನ್ನು ರೆಗ್ಯುಲರೈಸ್ ಮಾಡುವುದಾಗಿ ಹೇಳಿ ಅವರಿಂದ ಹಣ ತಿಂದಿದ್ದಾರೆ. ಬರೀ ಬೋಗಸ್ ಬಿಲ್ ನಡೆಯುತ್ತಿದೆ. ಕೊರೊನಾ ನಗರದಾದ್ಯಂತ ಹರಡುತ್ತಿದ್ದರೂ ಪೌರಾಯುಕ್ತರು ಸ್ವಚ್ಛತೆ ಮಾಡಿಸುತ್ತಿಲ್ಲ, ಪರಿಶಿಲನೆ ನಡೆಸುತ್ತಿಲ್ಲ ಎಂದು ನಾಲ್ಕನೇ ವಾರ್ಡ್ ಸದಸ್ಯ ಲಕ್ಷ್ಮಯ್ಯ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಶ್ರೀನಿವಾಸ್, “ಈ ಆರೋಪಗಳಲ್ಲಿ ಹುರುಳಿಲ್ಲ. ಸಂಬಳ ಕೊಡುವುದಕ್ಕೇ ಹಣವಿಲ್ಲ, ಇನ್ನು ಬೋಗಸ್ ಬಿಲ್ ಹೇಗೆ ತಾನೆ ಮಾಡಲು ಸಾಧ್ಯ. ಕೊರೊನಾ ನಿಯಂತ್ರಿಸಲು ಸ್ವಚ್ಛತೆ ಕಾರ್ಯ ನಡೆಸಿದ್ದೇವೆ. ಬ್ಲೀಚಿಂಗ್ ಪೌಡರ್ ತರಿಸುತ್ತೇವೆ” ಎಂದು ಹೇಳಿದರು.