Melur, Sidlaghatta : ಶ್ರಾವಣಮಾಸದ ಆರಂಭದಲ್ಲಿಯೇ ಬರುವ ನಾಗರ ಪಂಚಮಿಯನ್ನು (Nagara Panchami) ತಾಲ್ಲೂಕಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು. ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾದ ಈ ಹಬ್ಬದ ಆಚರಣೆಯಲ್ಲಿ ಪ್ರಕೃತಿಯ ಆರಾಧನೆ ಹಾಗೂ ಮನುಷ್ಯ ಮತ್ತು ಸಕಲ ಜೀವಿಗಳ ಸಾಮರಸ್ಯದ ಸಂಬಂಧದ ಆಶಯವೂ ಹೊಂದಿದೆ.
ಅನೇಕರು ಕುಟುಂಬ ಸಮೇತರಾಗಿ ಪೂಜೆಯ ಭಾಗವಾಗಿ ನಾಗರ ಕಲ್ಲುಗಳಿಗೆ ಎಳನೀರು ಹಾಗೂ ಹಾಲಿನಿಂದ ಅಭಿಷೇಕವನ್ನು ಮಾಡಲಾಯಿತು. ಇದಕ್ಕೆ “ತನಿ ಎರೆಯುವುದು” ಎಂದು ಕರೆಯುವರು.
ಹಲವರು ಹುತ್ತಗಳಿಗೆ ಪೂಜಿಸುವರು. ಆದರೆ ಹಾವುಗಳು ವಾಸಿಸುವ ಹುತ್ತಗಳಿಗೆ ಹಾಲನ್ನು ಬಹಳ ಎರೆದರೆ ಅವುಗಳಿಗೆ ಹಾನಿಯಾಗುವ ಸಂಭವವಿರುವುದರಿಂದ, ಎಚ್ಚರವನ್ನು ವಹಿಸುವುದು ಒಳ್ಳೆಯದು ಎನ್ನುತ್ತಾರೆ ಹಿರಿಯರು.
ಸಹೋದರ ಸಹೋದರಿಯರು ಒಂದೆಡೆ ಸೇರಿಕೊಂಡು, ಪ್ರೀತಿ, ವಾತ್ಸಲ್ಯಭಾವದಿಂದ ಸಹೋದರರನ್ನು ಹಾರೈಸುವುದು, ಅವರ ಆಶೀರ್ವಾದಗಳನ್ನು ಪಡೆಯುವುದು ನಡೆಯುತ್ತದೆ. ಸಹೋದರರ ಒಳಿತನ್ನು ಕೋರಿ ಸಹೋದರಿಯರು ಅವರಿಗೆ ಬೆನ್ನುಪೂಜೆಯನ್ನು ಮಾಡುವುದು ಈ ಹಬ್ಬದ ವಿಶೇಷವಾಗಿದೆ.