Palicherlu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಮತ್ತು ದೊಗರನಾಯಕನಹಳ್ಳಿ ಗ್ರಾಮದ ಮಧ್ಯದ ಗೋಮಾಳದಲ್ಲಿ ಕುರಿ-ಮೇಕೆಗಳನ್ನು ಮೇಯಿಸುತ್ತಿದ್ದ ದ್ಯಾವಪ್ಪ ಎಂಬುವವರ ಮೇಲೆ ಸೋಮವಾರ ಮಧ್ಯಾಹ್ನ ಅಚಾನಕವಾಗಿ ಚಿರತೆ ದಾಳಿ ಮಾಡಿದೆ. ಚಿರತೆ ಮೇಕೆಯೊಂದರ ಕುತ್ತಿಗೆಯನ್ನು ಹಿಡಿದಾಗ, ದ್ಯಾವಪ್ಪ ಅವರು ತಕ್ಷಣವೇ ಜೋರಾಗಿ ಕೂಗಿ, ಕೈಯಲ್ಲಿ ಸಿಕ್ಕಿದ ಕಲ್ಲನ್ನು ಎಸೆದು ಚಿರತೆಯನ್ನು ಓಡಿಸಲು ಪ್ರಯತ್ನಿಸಿದರು. ಅವರ ತಕ್ಷಣದ ಪ್ರತಿಕ್ರಿಯೆಯಿಂದ ಚಿರತೆ ಮೇಕೆಯನ್ನು ಬಿಟ್ಟು ಹಿಂದಕ್ಕೆ ಓಡಿದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಕೆಲವೇ ಗಂಟೆಗಳ ನಂತರ, ದೇವೇಂದ್ರ ಎಂಬುವವರು ಪಲಿಚೇರ್ಲುವಿಗೆ ಕುಂದಲಗುರ್ಕಿಯಿಂದ ಮರಳುವಾಗ, ರಾಚನಹಳ್ಳಿ ಮಣ್ಣೂ ರಸ್ತೆಯ ಬಳಿ ಚಿರತೆ ಓಡಿಹೋಗುತ್ತಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತಂತೆ, ಪಲಿಚೇರ್ಲು ಮತ್ತು ದೊಗರನಾಯಕನಹಳ್ಳಿ ನಡುವಿನ ಪ್ರದೇಶದಲ್ಲಿ ತಮ್ಮ ಜಮೀನಿನಲ್ಲಿ ಚಿಕ್ಕ ಮನೆಯನ್ನು ಕಟ್ಟಿಕೊಂಡಿರುವ ಮಾಜಿ ಸೈನಿಕ ಆರ್.ವಿ. ಮಂಜುನಾಥ್, ಮೇಕೆಯ ಫೋಟೋ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಅರಣ್ಯ ಇಲಾಖೆಗೆ ಕಳುಹಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.