ಶಿಡ್ಲಘಟ್ಟ ತಾಲ್ಲೂಕಿನ ವಿವಿದೆಡೆ ಈಚೆಗೆ ನವಿಲಿನ ಸಂತತಿ ಹೆಚ್ಚಿದ್ದು, ಹಲವಾರು ಗ್ರಾಮಗಳಲ್ಲಿ ಮುಂಜಾನೆ ನವಿಲಿನ ಕೂಗು ಕೇಳಿಸುವುದು ಸಾಮಾನ್ಯವಾಗಿದೆ. ಬೇಸಿಗೆ ಕಾಲದ ಬಿಸಿ ನವಿಲುಗಳನ್ನೂ ತಟ್ಟಿದ್ದು, ಆಗಾಗ್ಗೆ ಅವು ನೀರು ಮತ್ತು ಆಹಾರಕ್ಕಾಗಿ ತೋಟಗಳ ಬಳಿಯೂ ಬಂದು ಹೋಗುತ್ತಿರುತ್ತವೆ. ಅವು ಅತ್ಯಂತ ನಾಚಿಕೆ ಮತ್ತು ಚುರುಕಿರುವುದರಿಂದ ಮನುಷ್ಯರಿಂದ ದೂರವುಳಿಯುತ್ತವೆ.
ಸೋಮವಾರ ಸದ್ದಹಳ್ಳಿ ಗ್ರಾಮದ ಚನ್ನಕೃಷ್ಣ ಎಂಬುವವರ ಜೋಳದ ತೋಟದಲ್ಲಿ ಕಾಲಿಗೆ ಗಾಯಮಾಡಿಕೊಂಡಿದ್ದ ಗಂಡು ನವಿಲು ಸಿಕ್ಕಿದ್ದು, ಅದನ್ನು ರಕ್ಷಣೆ ಮಾಡಿ ಅವರು ಅರಣ್ಯ ಇಲಾಖೆಯ ವಶಕ್ಕೆ ನೀಡಿದರು.
ನೀರು ಮತ್ತು ಆಹಾರಕ್ಕಾಗಿ ಗಂಡು ನವಿಲೊಂದು ನಮ್ಮ ತೋಟಕ್ಕೆ ಬಂದಿದೆ. ಆದರೆ ಅದು ಹೇಗೋ ಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ಅದು ಓಡಿ ಹೋಗಲು ಸಾಧ್ಯವಾಗಿಲ್ಲ. ಹುಷಾರಾಗಿ ಅದನ್ನು ಹಿಡಿದು, ಮನೆಗೆ ತಂದು ಆರೈಕೆ ಮಾಡಿದೆವು. ನಂತರ ಅರಣ್ಯ ಇಲಾಖೆಯವರಿಗೆ ಮಾಹಿತಿ ಕೊಟ್ಟೆವು ಎಂದು ಸದ್ದಹಳ್ಳಿ ಗ್ರಾಮದ ಚನ್ನಕೃಷ್ಣ ತಿಳಿಸಿದರು.
ವಲಯ ಅರಣ್ಯ ಉಪ ಅಧಿಕಾರಿ ಜಯಚಂದ್ರ, ಸಿಬ್ಬಂದಿ ಕಿರಣ್, ಮಾದೇಶಪ್ಪ, ಶ್ರೀನಿವಾಸ್, ಗ್ರಾಮಸ್ಥರಾದ ಹರೀಶ್, ಗಂಗಾಧರ್ ಹಾಜರಿದ್ದರು.