Sidlaghatta : ಹಿತ್ತಲಹಳ್ಳಿಯ ತ್ಯಾಜ್ಯ ಘಟಕದ ಬಳಿ ಶುಕ್ರವಾರ ಬೆಳಗ್ಗೆ ನಾಯಿಗಳ ಧಾಳಿಗೆ ತುತ್ತಾಗಿ ನಿತ್ರಾಣವಾಗಿದ್ದ ಮುಳ್ಳುಹಂದಿಯನ್ನು ಕಂಡ ರೈತ ಹಿತ್ತಲಹಳ್ಳಿ ಎಚ್.ಕೆ.ಸುರೇಶ್, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ರಕ್ಷಿಸಿದ್ದಾರೆ.
ಅರಣ್ಯ ಇಲಾಖೆಯ ಆನಂದ್ ಮತ್ತು ಕಿರಣ್ ಅವರು ಸ್ಥಳಕ್ಕೆ ಆಗಮಿಸಿ, ಮುಳ್ಳುಹಂದಿಯನ್ನು ಹುಷಾರಾಗಿ ಬಲೆಯಲ್ಲಿ ಹಾಕಿಕೊಂಡು ಪಶುವೈದ್ಯರ ಬಳಿ ಕರೆದೊಯ್ದರು.
“ಅರಣ್ಯ ಇಲಾಖೆಯ ಸಿಬ್ಬಂದಿ ಮುಳ್ಳು ಹಂದಿಯನ್ನು ನಮ್ಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಂದಿದ್ದರು. ಅದರ ಮುಖದಲ್ಲಿ ಕೆಲವೊಂದು ನಾಯಿಗಳು ಕಚ್ಚಿರುವ ಗಾಯ ಇದ್ದು ರಕ್ತ ಸೋರುತ್ತಿತ್ತು. ಕಾಲುಗಳು ಸ್ವಾಧೀನ ಇರಲಿಲ್ಲ. ಮೊದಲು ನಾವು ರೇಬಿಸ್ ಟೆಸ್ಟ್ ಕಿಟ್ಟನ್ನು ಉಪಯೋಗಿಸಿ ರೇಬಿಸ್ ನೆಗೆಟಿವ್ ಇರುವುದನ್ನು ಖಚಿತಪಡಿಸಿಕೊಂಡು, ಅಗತ್ಯ ಚಿಕಿತ್ಸೆ ನೀಡಿ ಮತ್ತೆ ಅರಣ್ಯ ಇಲಾಖೆಗೆ ಒಪ್ಪಿಸಿದೆವು” ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ತಿಳಿಸಿದರು.
“ಸಕಾಲದಲ್ಲಿ ರೈತರು ನೋಡಿ, ಮಾಹಿತಿ ನೀಡಿದ್ದರಿಂದ ಮುಳ್ಳುಹಂದಿಯನ್ನು ರಕ್ಷಿಸಲು ಸಾಧ್ಯವಾಯಿತು. ವೈದ್ಯರು ಚಿಕಿತ್ಸೆ ನೀಡಿದ ಕೆಲ ಹೊತ್ತಿನಲ್ಲಿ ಅದು ಚೇತರಿಸಿಕೊಂಡಿತು. ಆನಂತರ ಅದನ್ನು ಕಾಡಿನಲ್ಲಿ ಬಿಟ್ಟೆವು” ಎಂದು ಅರಣ್ಯ ಇಲಾಖೆಯ ಆನಂದ್ ಮತ್ತು ಕಿರಣ್ ತಿಳಿಸಿದರು.