Sidlaghatta : ಶಿಡ್ಲಘಟ್ಟ ನಗರದಿಂದ ಭಾನುವಾರ ಸಂಜೆ ರಾಜ್ಯ ರೈತಸಂಘದ ಸದಸ್ಯರು ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಳಗಾವಿ ಅಧಿವೇಶನ ಮುತ್ತಿಗೆ ಹೋರಾಟದಲ್ಲಿ ಭಾಗವಹಿಸಲು ತೆರಳಿದರು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದೆ. ಆದರೆ, ರಾಜ್ಯ ಸರ್ಕಾರ ರದ್ದುಪಡಿಸಿಲ್ಲ. ಕೂಡಲೇ ಕೃಷಿ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ತಿಳಿಸಿದರು.
ರಾಜ್ಯ ರೈತಸಂಘದ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ಈ ಹಿಂದೆ ಪ್ರತಿಭಟನೆ ಮಾಡಿದ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು, ಹೊಸದಾಗಿ ಪ್ರಕರಣ ದಾಖಲಿಸಬಾರದು, ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಈ ಹಿಂದೆ ಇದ್ದ ಮಾದರಿಯಲ್ಲೇ 10 ಎಚ್.ಪಿಗೆ ಉಚಿತ ವಿದ್ಯುತ್ ಒದಗಿಸಬೇಕು, ಕೇಂದ್ರ ಸರ್ಕಾರ ಕೈಬಿಟ್ಟಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಪರೋಕ್ಷವಾಗಿ ಜಾರಿಗೆ ತರಲು ಯತ್ನ ನಡೆಸಿದೆ. ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುನಿನಂಜಪ್ಪ, ವೇಣುಗೋಪಾಲ್, ದೇವರಾಜ್, ರಮೇಶ್, ಕೆಂಪಣ್ಣ, ಕೆಂಪೇಗೌಡ, ಬೈರಪ್ಪ ಹಾಜರಿದ್ದರು.