Home News ಕೃಷಿಯಾಧಾರಿತ ಕೈಗಾರಿಕೆ ಸ್ಥಾಪನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಕೃಷಿಯಾಧಾರಿತ ಕೈಗಾರಿಕೆ ಸ್ಥಾಪನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

0
Sidlaghatta Request Government to setup agri industry

Sidlaghatta : ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ಕೃಷಿಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹ ನೀಡುವ ಮತ್ತು ರೈತರ ಮಕ್ಕಳು ಉದ್ಯೋಗಿಗಳಾಗಲು ಅನುಕೂಲ ಮಾಡಿಕೊಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವನಹಳ್ಳಿ ಲೊಕೇಶ್‌ ಗೌಡ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ, ಕೃಷಿ, ತೋಟಗಾರಿಕೆ, ರೇಷ್ಮೆ ಉತ್ಪನ್ನಗಳ ಬೆಲೆಯ ಏರಿಳಿತ, ಕೃಷಿ ಸಲಕರಣೆಗಳ ಬೆಲೆ ಹೆಚ್ಚಳ, ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕೊರತೆ ಮುಂತಾದ ಸಮಸ್ಯೆಗಳಿಂದ ರೈತರು ಎದುರಿಸುತ್ತಿರುವ ವಿವಿಧ ರೀತಿಯ ಸಂಷಕ್ಟಗಳ ಬಗ್ಗೆ ವಿವರಿಸಿ, ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಈ ಎರಡೂ ಜಿಲ್ಲೆಗಳ ರೈತರು ಉತ್ತಮ ಫಸಲು ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟ ಕಾಪಾಡಿಕೊಂಡು ರಫ್ತು ಮಾಡುತ್ತಿರುವುದು ಸಂತಸದ ವಿಚಾರ ಎಂದರು.

ಹಾಗಾಗಿ ಈ ಭಾಗದ ಕೃಷಿ ಮತ್ತು ಕೃಷಿಕರನ್ನು ಉಳಿಸಬೇಕಾದರೆ ಕೃಷಿಗೆ ಇನ್ನಷ್ಟು ಉತ್ತೇಜನ ನೀಡುವ ಯೋಜನೆಗಳನ್ನು ಜಾರಿ ಮಾಡಬೇಕಿದೆ. ಕೃಷಿ ಆಧಾರಿತ ಕೈಗಾರಿಕೆಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.

ಕೃಷಿಯಿಂದ ಆರ್ಥಿಕ ಲಾಭ ಇಲ್ಲದಾಗಿದೆ. ಕೃಷಿಯನ್ನು ನಂಬಿದರೆ ಬದುಕು ಕಟ್ಟಿಕೊಳ್ಳುವುದು ಕಷ್ಟ ಎನ್ನುವ ಮಾತು ಇದೆ ಮತ್ತು ಅದರಂತೆ ವಾಸ್ತವ ಪರಿಸ್ಥಿತಿ ಕೂಡ ಇದೆ. ಹಾಗಾಗಿ ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿರುವುದು ಆತಂಕದ ವಿಷಯ ಎಂದರು.

ಆದ್ದರಿಂದ ಕೃಷಿಕರನ್ನು ಉಳಿಸುವ ಮತ್ತು ಕೃಷಿಕರ ಮಕ್ಕಳನ್ನು ಕೂಡ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಕೃಷಿ ಆಧಾರಿತ ಕೈಗಾರಿಕೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹಾಗೆಯೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೈತರಿಗೆ ಸರ್ಕಾರವು ವಿಶೇಷ ನೆರವು ನೀಡಬೇಕು. ಇತ್ತೀಚಿಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ದ್ರಾಕ್ಷಿ-ದಾಳಿಂಬೆ ಇನ್ನಿತರೆ ಬೆಳೆಗಳನ್ನು ಕಳೆದುಕೊಂಡು ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿಶೇಷ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ವಿಶ್ವ ಒಕ್ಕಲಿಗರ ಮಹಾವೇದಿಕೆಯ ಅಧ್ಯಕ್ಷ ವೈ.ಡಿ.ರವಿಶಂಕರ್, ಮೀಡಿಯಾ ಕನೆಕ್ಟ್ ಸಂಸ್ಥೆಯ ಮುಖ್ಯಸ್ಥೆ ದಿವ್ಯ, ರೈತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version