ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತನ ಖಾತೆಗೆ ಹಣ ವರ್ಗಾವಣೆ ಮಾಡುವಾಗ ಅಧಿಕಾರಿಯು ಮಾಡಿದ ಎಡವಟ್ಟಿನಿಂದಾಗಿ ರೈತ ಹಣವನ್ನು ಕಳೆದುಕೊಂಡು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಗುಂಡ್ಲಹಳ್ಳಿಯ ರೈತ ಜಿ.ಎಂ.ಮಂಜುನಾಥ ಡಿಸೆಂಬರ್ 4 ರಂದು ನೂರು ಕೇಜಿ ರೇಷ್ಮೆ ಗೂಡನ್ನು ತಂದು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ ಹರಾಜಿನ ಮೂಲಕ ಮಾರಿದ್ದಾನೆ. ಬ್ಯಾಂಕ್ ಆಫ್ ಬರೋಡಾದ ಈತನ ಖಾತೆಯ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಅಧಿಕಾರಿಯ ಎಡವಟ್ಟಿನಿಂದಾಗಿ ಈತನಿಗೆ ಬರಬೇಕಾದ 45 ಸಾವಿರ ರೂ ಹಣ ಇನ್ಯಾರದೋ ಖಾತೆಗೆ ಹೋಗಿದೆ. ಈ ಬಗ್ಗೆ ಮಾರುಕಟ್ಟೆಯ ಅಧಿಕಾರಿಯನ್ನು ಸಂಪರ್ಕಿಸಿದಾಗ ಸರಿಪಡಿಸುತ್ತೇವೆ ಒಂದೆರಡು ದಿನ ತಡೆದುಕೋ ಎಂದಿದ್ದಾರೆ. ಈ ಘಟನೆ ನಡೆದು ೨೨ ದಿನಗಳಾದರೂ ರೈತನ ಖಾತೆಗೆ ಹಣ ಬಂದಿಲ್ಲ. ಇದೀಗ ಅಧಿಕಾರಿಯು ರೈತನು ಫೋನ್ ಮಾಡಿದರೆ ಉತ್ತರಿಸುತ್ತಿಲ್ಲ ಎಂದು ರೈತ ಮಂಜುನಾಥ್ ದೂರಿದ್ದಾರೆ. ಹಣ ತರದೆ ಮನೆಗೆ ಬರಬೇಡ ಎಂದು ಮನೆಯವರೂ ಮಂಜುನಾಥನನ್ನು ಹೊರಕ್ಕೆ ಕಳಿಸಿದ್ದಾರೆ ಎನ್ನಲಾಗಿದೆ.
ಕಷ್ಟಪಟ್ಟು ಬೆಳೆದ ಬೆಳೆಯ ಹಣವನ್ನು ಕಳೆದುಕೊಂಡ ರೈತ ತ್ರಿಶಂಕು ಸ್ಥಿತಿಯಲ್ಲಿದ್ದಾನೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ರೈತ ಮಂಜುನಾಥ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾರುಕಟ್ಟೆಯ ಅಧಿಕಾರಿ ನರಸಿಂಹಮೂರ್ತಿ ಅವರನ್ನು ಕೇಳಿದಾಗ, “ಪ್ರತಿನಿತ್ಯ ಸಾವಿರಾರು ರೈತರು, ರೀಲರ್‌ಗಳು ಮಾರುಕಟ್ಟೆಗೆ ಬಂದು ಹೋಗುತ್ತಾರೆ. ಇ ಹರಾಜು ನಂತರ ನೀಡಲಾಗುವ ಹರಾಜು ಪ್ರತಿಯನ್ನು ಪರಿಶೀಲನೆ ಮಾಡಿಕೊಂಡು ಹಣ ವರ್ಗಾವಣೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದು ಎಲ್ಲಾ ರೈತರಿಗೆ ತಿಳಿಸಿದರೂ ಸಹ ತರಾತುರಿಯಲ್ಲಿ ಹೊರಟುಹೋಗುತ್ತಾರೆ. ಮಂಜುನಾಥ ಎಂಬ ರೈತ ಈ ಹರಾಜು ಶುರುವಾಗುವ ಮೊದಲಿನಿಂದಲೂ ಮಾರುಕಟ್ಟೆಗೆ ಬರುವ ರೈತನಾಗಿದ್ದು ಈ ಹಿಂದೆಯೂ ಸಾಕಷ್ಟು ಬಾರಿ ಮಾರುಕಟ್ಟೆಗೆ ಬಂದಿದ್ದಾನೆ. ಆತನಿಗೆ ಮಾರುಕಟ್ಟೆ ಹೊಸದೇನಲ್ಲ, ಅವರು ಮಾರುಕಟ್ಟೆಗೆ ಏನು ಮಾಹಿತಿ ನೀಡಿದ್ದಾರೋ ಆ ಮಾಹಿತಿಯಂತೆ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ರೈತರಿಗೆ ಸೇರಬೇಕಾದ ಹಣ ಬೇರೆ ಬ್ರಾಂಚಿಗೆ ಹೋಗಿರುವ ಬಗ್ಗೆ ಸಂಬಂದಪಟ್ಟ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತನಾಡಲಾಗಿದೆ. ಅವರು ಆದಷ್ಟು ಬೇಗ ಹಣವನ್ನು ರೈತನ ಖಾತೆಗೆ ವರ್ಗಾಯಿಸುವ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರೈತ ಮಂಜುನಾಥ್ ಆತಂಕ ಪಡುವುದು ಬೇಡ” ಎಂದು ಹೇಳಿದರು.