Sidlaghatta : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಚಿಕ್ಕಬಳ್ಳಾಪುರ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಶಿಡ್ಲಘಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಸೋಮವಾರ ನಗರದಲ್ಲಿ ಬೃಹತ್ ಮತದಾರರ ಜಾಗೃತಿ ಜಾಥಾ ನಡೆಸಲಾಯಿತು.
ನಗರ ಪೊಲೀಸ್ ಠಾಣೆ ಮುಂಭಾಗದಿಂದ ನೆಹರೂ ಮೈದಾನದವರೆಗೆ ನಡೆದ ಜಾಥಾದ ಮೂಲಕ ಸಾರ್ವಜನಿಕರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವಿಶೇಷ ಸಮೀಕ್ಷೆ (ಎಸ್.ಐ.ಆರ್) ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ತಹಶೀಲ್ದಾರ್ ಗಗನ್ ಸಿಂಧು, ಪೌರಾಯುಕ್ತೆ ಅಮೃತ, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಅಧಿಕಾರಿಗಳು ನೀಡಿದ ಮಾಹಿತಿಯಂತೆ, 2002ರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದವರ ವಿವರಗಳನ್ನು ಆಧರಿಸಿ ಪ್ರಸ್ತುತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ. ತಂದೆ-ತಾಯಿ ಅಥವಾ ಅಜ್ಜ-ಅಜ್ಜಿಯರ ಹಳೆಯ ಮತದಾರರ ವಿವರಗಳನ್ನು ಒದಗಿಸಿದರೆ ಅದಕ್ಕೆ ಅನುಗುಣವಾಗಿ ಮ್ಯಾಪಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮ್ಯಾಪಿಂಗ್ ವೇಳೆ ಪ್ರತ್ಯೇಕ ದಾಖಲೆಗಳ ಅಗತ್ಯವಿಲ್ಲ. ಆದರೆ ಮ್ಯಾಪಿಂಗ್ ಸಾಧ್ಯವಾಗದ ಸಂದರ್ಭಗಳಲ್ಲಿ ಜನ್ಮ ದಿನಾಂಕ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಹಾಗೂ ಬೂತ್ ಮಟ್ಟದ ಏಜೆಂಟ್‌ಗಳು (ಬಿ.ಎಲ್.ಎ) ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸಲಿದ್ದಾರೆ. ಅರ್ಹ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಜೊತೆಗೆ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಿದ್ದಾರೆ.
ಬಿ.ಎಲ್.ಒ.ಗಳು ಮನೆಗಳಿಗೆ ಭೇಟಿ ನೀಡಿದಾಗ ಎನ್ಯುಮರೇಷನ್ ಫಾರ್ಮ್ ಗಳನ್ನು ವಿತರಿಸಲಿದ್ದು, ಸಾರ್ವಜನಿಕರು ತಮ್ಮ ನಿಖರ ಮಾಹಿತಿ ಹಾಗೂ ಹೊಸ ಭಾವಚಿತ್ರದೊಂದಿಗೆ ಫಾರ್ಮ್ ಅನ್ನು ಎರಡು ಪ್ರತಿಗಳಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. ಫಾರ್ಮ್ ಸ್ವೀಕರಿಸಿದ ನಂತರ ಬಿ.ಎಲ್.ಒ.ಗಳು ಸಹಿ ಮಾಡಿದ ಸ್ವೀಕೃತಿ ಪತ್ರವನ್ನು ಮತದಾರರಿಗೆ ನೀಡಲಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಎಲ್ಲಾ 244 ಮತಗಟ್ಟೆಗಳಲ್ಲೂ ಮತದಾರರ ಸೌಲಭ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಅಲ್ಲದೆ ತಾಲ್ಲೂಕು ಕಚೇರಿ ಹಾಗೂ ನಗರಸಭೆ ಕಚೇರಿಗಳಲ್ಲಿಯೂ ಬಿ.ಎಲ್.ಒ. ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರಿಗೆ ಫಾರ್ಮ್ ಭರ್ತಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಪ್ರತಿದಿನ ನಿಗದಿತ ಸಮಯದಲ್ಲಿ ಒದಗಿಸಲಾಗುತ್ತಿದೆ.
ಈ ವಿಶೇಷ ಪರಿಷ್ಕರಣೆ ಅಭಿಯಾನದ ಮುಖ್ಯ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವುದು ಹಾಗೂ ಅನರ್ಹ ಅಥವಾ ನಕಲಿ ಹೆಸರುಗಳನ್ನು ತೆಗೆದುಹಾಕುವುದಾಗಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಈಗಾಗಲೇ ಶೇ 97.7ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಮತದಾರರ ಪಟ್ಟಿಯನ್ನು ಶೇ 100ರಷ್ಟು ನಿಖರಗೊಳಿಸಲು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡುವಂತೆ ತಹಸೀಲ್ದಾರ್ ಗಗನ್ ಸಿಂಧು ಮನವಿ ಮಾಡಿದರು.








