Sidlaghatta : ಜೂನ್ 09 ರಂದು ಶ್ರೀರಾಮ ಶೋಭಾಯಾತ್ರೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಮಾಜದವರು ಭಾಗವಹಿಸಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಭಜರಂಗ ದಳದ ತಾಲೂಕು ಸಂಯೋಜಕ ಬಿ.ವೆಂಕಟೇಶ್ ಮನವಿ ಮಾಡಿದರು.
ನಗರದ ಸಾರಿಗೆ ಬಸ್ ನಿಲ್ದಾಣ ಬಳಿಯ ಶ್ರೀಸಲ್ಲಾಪುರಮ್ಮ ದೇವಾಲಯದ ಬಳಿ ಶೋಭಾಯಾತ್ರೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಬಳಿ ಪೂಜೆ ಸಲ್ಲಿಸಿ ನಂತರ ಶಿಡ್ಲಘಟ್ಟ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯು ಸಂಚರಿಸಲಿದೆ, ನಾನಾ ಜನಪದ ಕಲಾ ತಂಡಗಳು ಇರಲಿವೆ ಎಂದರು.
12 ಅಡಿ ಎತ್ತರ ಶ್ರೀಕೋದಂಡರಾಮ ಮೂರ್ತಿ, 6 ಅಡಿ ಎತ್ತರದ ಬಾಲರಾಮನ ವಿಗ್ರಹ, ಕುರುಕ್ಷೇತ್ರ ರಥ ಹನುಮ ವೇಷಧಾರಿಗಳು, ಕೇರಳದ ಚಂಡೆ ವಾಧ್ಯ ಇನ್ನಿತರೆ ಕಲಾತಂಡಗಳು ಶೋಭಾಯಾತ್ರೆಯ ಆಕರ್ಷಣೆಯಾಗಿ ಇರಲಿದೆ ಎಂದು ಶ್ರೀರಾಮ ಶೋಭಾಯಾತ್ರೆಯ ವಿಶೇಷತೆಯನ್ನು ವರ್ಣಿಸಿದರು.
ನಂತರ ಸಂಜೆ ಸಾರಿಗೆ ಬಸ್ ನಿಲ್ದಾಣ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಬಹಿರಂಗ ಸಭೆಯಲ್ಲಿ ಹಿಂದೂಪರ ವಾಗ್ಮಿ ಹಾರಿಕಾ ಮಂಜುನಾಥ್ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಇನ್ನಿತರೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಈಗಾಗಲೆ ತಾಲೂಕಿನಾಧ್ಯಂತ ಗ್ರಾಮಪಂಚಾಯಿತಿವಾರು ಪ್ರವಾಸ ಮಾಡಿ ಎಲ್ಲ ಸಂಘ ಸಂಸ್ಥೆ, ಕನ್ನಡಪರ, ದಲಿತಪರ, ಹಿಂದೂಪರ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಿ ಶೋಭಾಯಾತ್ರೆಗೆ ಆಹ್ವಾನಿಸಿದ್ದೇವೆ. ಸಾಕಷ್ಟು ಗಾಮಗಳಿಂದ ಮುತ್ತಿನ ಪಲ್ಲಕಿ ಬರಲು ಸಿದ್ದತೆಗಳನ್ನು ನಡೆಸಿದ್ದಾರೆ.
ಶೋಭಾಯಾತ್ರೆಯು ಸಾಗಿ ಬರುವ ಮಾರ್ಗದ ಉದ್ದಕ್ಕೂ ಮನೆ ಮನೆ ಮುಂದೆ ಸಾರಿಸಿ ರಂಗೋಲೆ ಹಾಕಿ ಅದ್ದೂರಿಯಾಗಿ ಸ್ವಾಗತಿಸಲು ಶಿಡ್ಲಘಟ್ಟದ ನಾಗರೀಕರು ಸಜ್ಜಾಗಿದ್ದಾರೆ. ಇದಕ್ಕೆ ಎಲ್ಲ ಸಿದ್ದತೆಗಳು ನಡೆದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಂಧುಗಳು, ಶ್ರೀರಾಮನ ಭಕ್ತರು ಆಗಮಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಲಯನ್ ಕ್ಲಬ್‌ನ ಫುಡ್ ಮನೋಹರ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಯುವಜನ ಮತ್ತು ಕ್ರೀಡಾ ಇಲಾಖೆ ಸದಸ್ಯ ನಡಿಪಿನಾಯಕನಹಳ್ಳಿ ಅಜಿತ್‌ಕುಮಾರ್, ಕೊತ್ತನೂರು ರವಿ, ಹರೀಶ್, ಮೇಲೂರು ಅನಿಲ್, ಜೀವನ್, ಕಿರಣ್ ಇನ್ನಿತರರು ಹಾಜರಿದ್ದರು.