Sidlaghatta : ಬಡತನ, ಕೌಟುಂಬಿಕ ಹಿನ್ನೆಲೆ ಇದ್ಯಾವುದು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ತೋರಿಸಿ SSLC ಪರೀಕ್ಷೆಯಲ್ಲಿ ಇಂದಿರಾಗಾಂಧಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು 625 ಕ್ಕೆ 619 ಅಂಕ ಪಡೆದಿರುವರು. ಇದರೊಂದಿಗೆ ಇಂದಿರಾಗಾಂಧಿ ವಸತಿ ಶಾಲೆಯು (Indira Gandhi Residental School) ಈ ಬಾರಿ ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ (Appegowdanahalli) ಗ್ರಾಮದ ಬಳಿಯಿರುವ ಇಂದಿರಾಗಾಂಧಿ ವಸತಿ ಶಾಲೆಯ ಒಟ್ಟು 49 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 4 ವಿದ್ಯಾರ್ಥಿಗಳು 625 ಕ್ಕೆ 619 ಅಂಕ ಪಡೆದಿದ್ದಾರೆ. 11 ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು ಅಂಕ ಗಳಿಸಿದರೆ 24 ವಿದ್ಯಾರ್ಥಿಗಳು ಶೇ 85 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದು ಪರೀಕ್ಷೆ ಬರೆದ ಎಲ್ಲರೂ ಉತ್ತೀರ್ಣರಾಗಿದ್ದಾರೆ.
619 ಅಂಕ ಪಡೆದಿರುವ ನಾಲ್ವರು ವಿದ್ಯಾರ್ಥಿಗಳ ಪೈಕಿ ಬಿ.ಎನ್.ಭರತ್‌ಕುಮಾರ್ ತಂದೆ ಬಟ್ಟೆ ನೇಯ್ಗೆ ಕೆಲಸ ಮಾಡಿದರೆ ಮತ್ತೋರ್ವ ವಿದ್ಯಾರ್ಥಿ ಅಶೋಕ್.ಕೆ.ಎನ್. ಪೋಷಕರು ರೇಷ್ಮೆ ಕೂಲಿ ಕೆಲಸ ಮಾಡುತ್ತಾರೆ. ಇನ್ನುಳಿದ ವಸತಿಶಾಲೆಯ ಬಹುತೇಕ ಮಕ್ಕಳ ಪೋಷಕರು ಬಡ ರೈತರು, ಕೂಲಿಕಾರರಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಂಡು ಶಾಲೆಯ ಶಿಕ್ಷಕರು ಸೇರಿದಂತೆ ಪೋಷಕರಲ್ಲಿ ಸಂತಸ ಮನೆ ಮಾಡಿದೆ.