Sugaturu, sidlaghatta : ಜಗತ್ತಿನಲ್ಲಿ ಇನ್ನಾವುದೇ ಭಾಗದಲ್ಲಿ ನಡೆಯದ ಸಾಮಾಜಿಕ ಕ್ರಾಂತಿಯಾದದ್ದು ಕರ್ನಾಟಕದಲ್ಲಿ ಶಿವಶರಣರಿಂದ ಮಾತ್ರ. ಶಿವಶರಣರು ನೀಡಿದ ವಚನಸಾಹಿತ್ಯವು ಅಪರೂಪದ ಮೌಲ್ಯಗಳ ಆಗರವಾಗಿದೆ. ವಚನಗಳನ್ನು ಉಳಿಸುವಲ್ಲಿ ಫ.ಗು.ಹಳಕಟ್ಟಿ ಅವರ ಕೊಡುಗೆಯು ಅಪಾರವಾದುದು ಎಂದು ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು, ಸಾಕ್ಷಿಮುರುಗನ್ ಸೇವಾ ಟ್ರಸ್ಟ್, ಬಂಗಲೆಕುಟುಂಬ ಆಶ್ರಯದಲ್ಲಿ ವಚನಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೋಟ್‌ಪುಸ್ತಕ, ಲೇಖನಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಪರೂಪದ ಕಲ್ಲೊಂದರಲ್ಲಿನ ಅನಗತ್ಯ ಭಾಗಗಳನ್ನು ಶಿಲ್ಪಿಯು ಕೆತ್ತಿದರೆ ಅದೇ ಶಿಲೆಯು ದೇವರಾಗಬಲ್ಲದು. ಮಗುವಿನಲ್ಲಿರುವ ಅನಗತ್ಯ ಅಂಶಗಳು, ಕೆಟ್ಟ ಗುಣಗಳನ್ನು ಹೋಗಲಾಡಿಸಿ ಮಗುವಿನಲ್ಲಿ ದೈವತ್ವಗುಣವನ್ನು ಮನೆಮಾಡಿಸುವಲ್ಲಿ ಶಿಕ್ಷಕರ ಪಾತ್ರವು ಮಹತ್ವದ್ದು. ಎಳೆಯ ವಯಸ್ಸಿನಿಂದಲೇ ಮಕ್ಕಳು ಅಧ್ಯಯನ ಶೀಲತೆ ಗುಣವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಿದಾನಂದ ಬಿರಾದಾರ್ ಮಾತನಾಡಿ, ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ವಚನಸಾಹಿತ್ಯ ಮತ್ತು ದಾಸಸಾಹಿತ್ಯಗಳೆರಡೂ ಅಪೂರ್ವವಾದುವು. ವಚನಗಳಲ್ಲಿ ಬದುಕಿನ ಮೌಲ್ಯಗಳಿದ್ದು, ಎಲ್ಲರೂ ವಚನಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚಬೇಕಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಿ ಸಂಶೋಧನೆ ಮತ್ತು ಮುದ್ರಣ ಕಾರ್ಯಕ್ಕೆ ಮುಂದಾಗದಿದ್ದರೆ ವಚನಸಾಹಿತ್ಯವು ಉಳಿಯುತ್ತಿರಲಿಲ್ಲ ಎಂದರು.
ಸಂಭ್ರಮ ಶನಿವಾರದ ಅಂಗವಾಗಿ ವಚನಗಾಯನ, ಭಾವಗೀತೆ ಗಾಯನ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು.
ಶಿಕ್ಷಕ ಟಿ.ಎಂ.ಮಧು, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಹಾಜರಿದ್ದರು.