Sugaturu, Sidlaghatta : ಕೇಸರಿ, ಬಿಳಿ, ನೀಲಿ ಮತ್ತು ಹಸಿರು ಬಣ್ಣದ ಬಲೂನ್‌ಗಳಿಂದ ಅಲಂಕೃತ ವೇದಿಕೆ, ಶಾಲಾ ಆವರಣದಲ್ಲಿ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಸಾಮೂಹಿಕ ಕವಾಯತ್ತು, ಸಂವಿಧಾನ ಪೀಠಿಕೆಯನ್ನು ಆಧರಿಸಿದ ನೃತ್ಯ, ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ದಾನಿಗಳಿಂದ ನೀಡಲಾದ ಸವಲತ್ತುಗಳು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಪಲ್ಲಕ್ಕಿಯಲ್ಲಿ ಭಾರತಾಂಬೆ ಮತ್ತು ರಾಷ್ಟ್ರೀಯ ನಾಯಕರ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ತಾಲ್ಲೂಕಿನ ಸುಗಟೂರು ಸರ್ಕಾರಿ ಶಾಲೆಯಲ್ಲಿ ನಡೆದವು.
ಗಣರಾಜ್ಯೋತ್ಸವ ಅಂಗವಾಗಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದಲ್ಲಿ ಅಳವಡಿಸಲಾದ ಮೂಲಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಇರಬೇಕು. ಸಂವಿಧಾನದ ಆಶಯಗಳನ್ನು ಗೌರವಿಸುವುದು ನಾಗರಿಕರ ಕರ್ತವ್ಯ ಎಂದು ಹೇಳಿದರು.
ಮುಖ್ಯಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಮತ್ತು ಮೌಢ್ಯತೆಯನ್ನು ದೂರಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಾರತ ವಿಶ್ವದಲ್ಲಿಯೇ ವಿಶಿಷ್ಟವಾದ ಲಿಖಿತ ಸಂವಿಧಾನ ಹೊಂದಿರುವ ದೇಶವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ, ಏಕತೆ ಮತ್ತು ಭಾತೃತ್ವ ನಮ್ಮ ದೇಶದ ಅಡಿಕೆ ಎಂಬ ಹೆಮ್ಮೆ ನಮ್ಮದಾಗಬೇಕು ಎಂದರು.
ಶಾಲಾ ಮಕ್ಕಳಿಂದ ಪಥಸಂಚಲನ, ಧ್ವಜವಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳ ಪ್ರಭಾತ್ ಭೇರಿ ಮೆರವಣಿಗೆ ಗ್ರಾಮ ಮುಖ್ಯ ಬೀದಿಗಳಲ್ಲಿ ನಡೆಯಿತು. ರಂಗೋಲಿ ಸ್ಪರ್ಧಾ ವಿಜೇತ ತಾಯಂದಿರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಶಬ್ಧಕೋಶ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಪ್ರಥಮ್ ಎಜುಕೇಶನ್ ಟ್ರಸ್ಟ್ ಮೂಲಕ ಶಾಲೆಗೆ ಗ್ರಂಥಾಲಯ ಪುಸ್ತಕಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಪಂಚಾಯತಿ ಉಪಾಧ್ಯಕ್ಷೆ ಇಂದಿರಾ ಶಿವಶಂಕರಪ್ಪ, ಸದಸ್ಯ ಎ. ಸತೀಶ್‌ಕುಮಾರ್, ಮತ್ತಿತರ ಅಧಿಕಾರಿಗಳು, ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.