Sidlaghatta : ಶಿಡ್ಲಘಟ್ಟ ನಗರದಲ್ಲಿ ಊರ ಜಾತ್ರೆ ಪ್ರಯುಕ್ತ ಮಂಗಳವಾರ ಹೆಣ್ಣುಮಕ್ಕಳು ಊರ ದೇವತೆಗಳಿಗೆ ದೀಪದಾರತಿಯನ್ನು ಬೆಳಗಿದರು. ತಲೆಯ ಮೇಲೆ ಹೂಗಳಿಂದ ಅಲಂಕರಿಸಿರುವ ದೀಪಗಳನ್ನು ಹೊತ್ತುಕೊಂಡು ಮಹಿಳೆಯರು ಮಂಗಳ ವಾದ್ಯಗಳೊಂದಿಗೆ ಗಂಗಮ್ಮ, ಮಾರಮ್ಮ, ಪೂಜಮ್ಮ, ಎಲ್ಲಮ್ಮ, ಸಲ್ಲಾಪುರಮ್ಮ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಆಷಾಡ ಮಾಸದಲ್ಲಿ ನಡೆಯುವ ಊರ ಜಾತ್ರೆಯು ಎರಡು ದಿನಗಳ ಕಾಲ ನಡೆಯುತ್ತದೆ. ಮೊದಲ ದಿನ ಹೆಣ್ಣುಮಕ್ಕಳು ಕೋಟೆ ವೇಣುಗೋಪಾಲಸ್ವಾಮಿ, ಟಿ.ಬಿ.ರಸ್ತೆಯ ಕೃಷ್ಣಸ್ವಾಮಿ, ಓ.ಟಿ.ವೃತ್ತದ ರಾಮರ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯಗಳಿಗೆ ಪೂಜೆ ಸಲ್ಲಿಸಿದರು. ಎರಡನೆಯ ದಿನ ಶಕ್ತಿ ದೇವತೆಗಳಾದ ಗಂಗಮ್ಮ, ಮಾರಮ್ಮ, ಪೂಜಮ್ಮ, ಎಲ್ಲಮ್ಮ, ಸಲ್ಲಾಪುರಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ನಗರದ ಉಲ್ಲೂರುಪೇಟೆ, ಕೆ.ಕೆ.ಪೇಟೆ, ಕುರುಬರಪೇಟೆ, ನೆಲ್ಲೀಮರದಹಳ್ಳಿ ಮುಂತಾದ ಬಡಾವಣೆಗಳಲ್ಲಿನ ನಿವಾಸಿಗಳು ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಊರಿನ ಒಗ್ಗಟ್ಟು, ಸೌಹಾರ್ಧತೆ ಹಾಗೂ ಅಭಿವೃದ್ಧಿ ಪೂರಕವಾದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು .
ಊರನ್ನು ಕಾಯುವ ಗಂಡು ಹಾಗೂ ಹೆಣ್ಣು ದೇವರುಗಳಿಗೆ ಪೂಜೆ ಸಲ್ಲಿಸುವುದರಿಂದ ಊರಿನಲ್ಲಿರುವ ಕೆಟ್ಟದ್ದು ತೊಲಗಿ ಒಳ್ಳೆಯದಾಗುತ್ತದೆ. ಮಳೆ ಬೆಳೆ ಚೆನ್ನಾಗಿ ನಡೆದು ಊರು ಪ್ರಗತಿ ಸಾಧಿಸುತ್ತದೆ ಎಂಬ ನಂಬಿಕೆಯಿದೆ. ಈ ಜಾತ್ರೆಯ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ತವರಿಗೆ ಕರೆಸಿಕೊಂಡು ಉಡುಗೊರೆಗಳನ್ನು ಕೊಡುವುದು ವಾಡಿಕೆ. ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು, ಬಂಧುಗಳನ್ನೆಲ್ಲಾ ಕರೆಸಿ ಭೂರಿ ಭೋಜನ ಏರ್ಪಡಿಸಲಾಗುತ್ತದೆ.