Sidlaghatta : ಗೊಂಬೆಗಳ ಪ್ರದರ್ಶನ ವಿಜಯದಶಮಿಯ ಆಚರಣೆಗಳಲ್ಲಿ ಒಂದು. ಇತಿಹಾಸದ ಸ್ಮರಣೆ, ಸಂಪ್ರದಾಯದ ಆಚರಣೆ, ಸಂಸ್ಕೃತಿಯ ಸಂರಕ್ಷಣೆ, ಜಾನಪದ ಕಲೆಯ ಪೋಷಣೆ, ಕಲಾವಿದರಿಗೆ ಪ್ರೋತ್ಸಾಹ, ಹೀಗ ಹಲವು ವಿಚಾರಗಳನ್ನು ಒಳಗೊಂಡ ಪ್ರದರ್ಶನ ಮನೆಯವರಿಗಷ್ಟೇ ಅಲ್ಲ, ನೋಡುಗರಿಗೂ ಕುತೂಹಲ, ಸಂಭ್ರಮದ ವಿಚಾರ. ವೈವಿಧ್ಯಮಯ ಗೊಂಬೆಗಳ ಪ್ರದರ್ಶನ, ಅವು ಹೇಳುವ ಕತೆ ಸಹ ವಿಶಿಷ್ಟವಾದುದು.
ಇಂಥ ಕಲೆಯ ಪೋಷಣೆ ಮಾಡಿ, ಪ್ರತಿವರ್ಷ ವೈವಿಧ್ಯಮಯ ರೀತಿಯಲ್ಲಿ ಆಚರಿಸುವ ಪದ್ಧತಿ ನಗರದ ಡಾ. ರವಿಶಂಕರ್ ಅವರ ಮನೆಯಲ್ಲಿದೆ. ಶತಮಾನಗಳಷ್ಟು ಹಳೆಯ ಗೊಂಬೆಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷದ ಸಂಗತಿ. ಹಿಂದೆ ಈ ಗೊಂಬೆಗಳ ಪ್ರದರ್ಶನದಲ್ಲಿ ಮಾನವಾಕಾರದ ಗೊಂಬೆಗಳನ್ನು ತಯಾರಿಸುತ್ತಿದ್ದರು. ತಲೆಯ ಭಾಗ ಮಾತ್ರ ಇರುವ ಈ ಗೊಂಬೆಗಳಿಗೆ ದೇಹದಾಕೃತಿ ಕೊಟ್ಟು ಉಡುಗೆ ತೊಡುಗೆಗಳನ್ನು ಉಡಿಸುವುದೇ ದೊಡ್ಡ ಸವಾಲಾಗಿತ್ತು.
ಮರೆತೇ ಹೋಗಿದ್ದ ಈ ರೀತಿಯ ಗೊಂಬೆಗಳನ್ನು ನಗರದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್ ತಮ್ಮ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ತಮ್ಮ ಅಜ್ಜಿಯ ಕಾಲದಿಂದ ಉಳಿಸಿಕೊಂಡು ಬಂದಿರುವ ಈ ನೂರಕ್ಕೂ ಹೆಚ್ಚು ವರ್ಷದ ಗೊಂಬೆಗಳ ತಲೆ ಭಾಗಕ್ಕೆ ದೇಹದಾಕೃತಿಯನ್ನು, ಕಾಲಕ್ಕೆ ತಕ್ಕಂತ ಅಲಂಕರಿಸಿದ್ದಾರೆ. ಅದರೊಂದಿಗೆ ಸಂದೇಶವನ್ನೂ ಸಾರಿದ್ದಾರೆ. ಅಂತರ್ಜಾತೀಯ ವಿವಾಹವನ್ನು ಪ್ರತಿಪಾದಿಸುವ ಅಕ್ಕಪ್ಪ ಮತ್ತು ಅಕ್ಕಮ್ಮ ದೃಷ್ಟಿಬೊಂಬೆಗಳು, ರಾಜಸ್ಥಾನಿ ಬೆಡಗಿ ಮತ್ತು ಸಾಂಪ್ರದಾಯಿಕ ದಂಪತಿಗಳ ರೂಪವನ್ನು ನೀಡಿದ್ದಾರೆ. ತಂದೆ ತಾಯಿ ಮಗ ಮತ್ತು ಸೊಸೆಯ ಕೌಟುಂಬಿಕ ಚಿತ್ರಣ ಸಿಗುವಂತೆ ರೂಪಿಸಿದ್ದಾರೆ. ಇವರೊಂದಿಗೆ ಆಧುನಿಕ ಕಾಲದ ಬಾಲಕಿಯೂ ಇದ್ದಾಳೆ.
“ದೇವನಹಳ್ಳಿ ಮೂಲದ ಹಾರೋಬಂಡೆ ಕುಟುಂಬ ಗೊಂಬೆಗಳನ್ನು ಜೋಡಿಸುವುದಕ್ಕೆ, ಕಲಾತ್ಮಕವಾಗಿ ಪ್ರದರ್ಶಿಸುವುದಕ್ಕೆ ಪ್ರಸಿದ್ಧಿಯಾಗಿತ್ತು. ನಮ್ಮಜ್ಜಿಯ ಮನೆಯಲ್ಲಿ ರಾಜ, ರಾಣಿ, ಯುವ ರಾಜ, ಯುವರಾಣಿ, ಮಂತ್ರಿ, ಸೇನಾಧಿಪತಿ, ಅರಮನೆಯ ದರ್ಬಾರ್ ಎಲ್ಲವನ್ನೂ ಬೊಂಬೆಗಳ ಮೂಲಕವೇ ನಿರೂಪಿಸಲಾಗುತ್ತಿತ್ತು. ಗೊಂಬೆಗಳೆಂದರೆ ತಲೆ ಮಾತ್ರ ಇರುತ್ತಿದ್ದುದು. ಅವಕ್ಕೆ ಉಡುಗೆ ತೊಡಿಸಿ, ಕೈಕಾಲು ನಾವೇ ತಯಾರಿಸಿಡುತ್ತಿದ್ದೆವು” ಎಂದು ಡಾ. ರೋಹಿಣಿ ಸ್ಮರಿಸಿದರು.
ವಿಶ್ವದರ್ಶನ
ಗೊಂಬೆಹಬ್ಬದ ಕೇಂದ್ರಬಿಂದುವಾದ ಪಟ್ಟದ ಗೊಂಬೆಗಳೊಂದಿಗೆ, ಗೊಂಬೆಗಳಿಗೆ ಖ್ಯಾತಿ ಪಡೆದಿರುವ ತಂಜಾವೂರಿನ ನರ್ತಕಿ, ಶೆಟ್ಟಿ ದಂಪತಿಗಳು, ಮದುರೈನ ಮೀನಾಕ್ಷಿ ಸುಂದರೇಶ್ವರ, ಅಷ್ಟಲಕ್ಷ್ಮಿಯರು, ತಿರುಪತಿಯ ರಾಮ ಸೀತೆ ಲಕ್ಷಣ ಹನುಮ, ಅರ್ಧನಾರೀಶ್ವರ, ಬೆಂಗಳೂರಿನಿಂದ ತಂದ ದಶಾವತಾರ, ಯಕ್ಷಗಾನ, ಆಡಿಸಿ ನೋಡಿ ಬೀಳಿಸಿ ನೋಡು ಗೊಂಬೆಗಳು, ಒರಿಸ್ಸಾದ ಮೀನುಗಾರ, ಮಥುರೆಯ ಶ್ರೀಕೃಷ್ಣ, ಮೀರಾಬಾಯಿ, ರಾಜಾಸ್ಥಾನದ ಪಗಡಿಧಾರಿ ಪುರುಷ ಮತ್ತು ಸಾಂಪ್ರದಾಯಿಕ ಮಹಿಳೆ, ವೈಷ್ಣೋದೇವಿ ಮುಂತಾದ ಗೊಂಬೆಗಳು ದೇಶದ ವಿವಿಧ ರಾಜ್ಯಗಳ ವೈವಿಧ್ಯತೆಯನ್ನು ಹಾಗೂ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿವೆ. ಇವಲ್ಲದೆ ಯೂರೋಪ್, ಅಮೇರಿಕಾ, ಇಂಡೋಚೀನಾ ಮುಂತಾದ ದೇಶಗಳ ಗೊಂಬೆಗಳೂ ಸೇರಿಕೊಂಡು ಕುವೆಂಪುರವರ ವಿಶ್ವಮಾನವ ಸಂದೇಶ ಸಾರುತ್ತಿವೆ.