Chowdasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದಲ್ಲಿ ರೈತ ರಾಮಾಂಜಿನಪ್ಪ ಅವರ ಕುರಿ ದೊಡ್ಡಿ ಮೇಲೆ ಮಂಗಳವಾರ ಬೆಳಗಿನ ಜಾವದಲ್ಲಿ ಪ್ರಾಣಿಯೊಂದರಿಂದ ಧಾಳಿಗೀಡಾಗಿ 4 ಕುರಿಗಳು ಸ್ಥಳದಲ್ಲೇ ಸತ್ತು, 5 ಕುರಿಗಳು ತೀವ್ರವಾಗಿ ಗಾಯಗೊಂಡಿವೆ.
ಕೆಲವರು ನಾಯಿಯಿರಬೇಕು ಎನ್ನುತ್ತಾರೆ, ಮತ್ತೆ ಕೆಲವರು ಚಿರತೆ ದಾಳಿ ನಡೆಸಿರಬಹುದು ಎನ್ನುತ್ತಿದ್ದಾರೆ ಎಂದು ರೈತ ರಾಮಾಂಜಿನಪ್ಪ ತಿಳಿಸಿದರು.
ಸ್ಥಳಕ್ಕೆ ಭೇಟೀ ನೀಡಿದ್ದ ಪಶುವೈದ್ಯ ಡಾ.ಚಂದನ್ ಮಾತನಾಡಿ, 4 ಕುರಿಗಳು ಸತ್ತಿವೆ, ಇನ್ನು 4 ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು ಸಾಯುವ ಸ್ಥಿತಿಯಲ್ಲಿವೆ. ಮೇಲ್ನೋಟಕ್ಕೆ ಯಾವುದೋ ಕಾಡು ಪ್ರಾಣಿಯ ಧಾಳಿ ಇದ್ದಂತೆ ಕಂಡುಬರುತ್ತಿದೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಧಾಳಿ ಮಾಡಿರುವ ಪ್ರಾಣಿಗಳ ಹೆಜ್ಜೆಗುರುತನ್ನು ಪರಿಶಿಲನೆ ನಡೆಸಿದರು.
ಕಳೆದ ವಾರವಷ್ಟೇ ಪ್ರಭಾಕರ್ ಎಂಬುವರಿಗೆ ಸೇರಿದ್ದ ಕುರಿದೊಡ್ಡಿಗೆ ಇದೇ ರೀತಿ ಪ್ರಾಣಿಯೊಂದು ಧಾಳಿ ಮಾಡಿ 2 ಕುರಿ 3 ಮೇಕೆಗಳನ್ನು ಕೊಂದಿತ್ತು. ಒಂದು ವಾರದ ಅಂತರದಲ್ಲಿ ಈ ರೀತಿ ಕುರಿಗಳನ್ನು ಕಳೆದುಕೊಂಡಿರುವುದಲ್ಲದೆ, ಯಾವ ಕಾಡು ಪ್ರಾಣಿ ಎಂಬುದು ತಿಳಿಯದೇ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.