23.1 C
Sidlaghatta
Friday, February 3, 2023

ಯೋಧ ನಮನ ಕಾರ್ಯಕ್ರಮ

- Advertisement -
- Advertisement -

Sidlaghatta : ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರಿಗೆ ಕೊನೆಯ ಘಟ್ಟದಲ್ಲಿ ಅಭೀಷ್ಟ ಸಿದ್ಧಿಗಳನ್ನು ಕರುಣಿಸಿ ಆಶೀರ್ವದಿಸಿದ ದಿನವೇ ಕಲ್ಪತರು ದಿನ. ಇಂತಹ ಶುಭ ದಿನದಂದು ಭರತಮಾತೆಯ ಹೆಮ್ಮೆಯ ಯೋಧ ಪುತ್ರರಲ್ಲಿ ಒಬ್ಬರಾದ ವೆಂಕಟೇಶ ಅಯ್ಯರ್ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಚಾರವೆಂದು ನಿವೃತ್ತ ಶಿಕ್ಷಕ ಜಿ.ಎನ್.ಶಾಮಸುಂದರ್ ತಿಳಿಸಿದರು.

ಕಲ್ಪತರು ದಿನದ ಅಂಗವಾಗಿ ಭಾನುವಾರ ನಿವೃತ್ತ ಯೋಧ ಎಸ್.ವೆಂಕಟೇಶ ಅಯ್ಯರ್ ರವರ ಮನೆಯಲ್ಲಿ ಹಮ್ಮಿಕೊಂಡಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಡ್ಲಘಟ್ಟದ ಎಸ್.ವಿ.ಅಯ್ಯರ್ 1963 ರಿಂದ 1978 ರವರೆಗೂ ಹದಿನೈದು ವರ್ಷಗಳ ಕಾಲ ದೇಶದ ವಾಯುಸೇನೆಯಲ್ಲಿ ಕಾರ್ಯ ನಿರ್ವಹಿಸಿ ಪಾಕಿಸ್ತಾನ ಮತ್ತು ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಭಾಗವಹಿಸಿದ್ದವರು. ಪ್ರತಿಷ್ಠಿತ ಜನರಲ್ ಸರ್ವಿಸ್ ಇಂಡಿಯಾ ಪದಕ, ಲಾಂಗ್ ಸರ್ವೀಸ್ ಪದಕ, ಸೈನ್ಯ ಸೇವಾ ಪದಕ, 1965ರ ಪಾಕಿಸ್ತಾನ ವಾರ್ ಪದಕ, ಸಂಗ್ರಾಂ ಪದಕ, ಪಶ್ಚಿಮಿಸ್ಟಾರ್ ಪದಕ, ಬಾಂಗ್ಲಾ ಲಿಬರೇಷನ್ ವಾರ್ ಪದಕ, ಸ್ಕೌಟ್ಸ್ ಮತ್ತು ಗೈಡ್ಸ್ ಪದಕ ಸೇರಿದಂತೆ ಹಲವಾರು ಪದಕಗಳು ಅವರ ಸಾಧನೆಯ ದ್ಯೋತಕಗಳಾಗಿವೆ ಎಂದರು.

ಪಾಲಮ್ ಏರ್‌ಬೇಸ್‌ನ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ಕಾರ್ಯಾರಂಭ ಮಾಡಿದ ಅವರು ಬರ್ನಾಲ, ಜಮ್ಮು, ಶಿಲಾಂಗ್, ಗುಜರಾತ್‌ನ ಜಾಮ್‌ನಗರ್, ಅಸ್ಸಾಮ್‌ನ ಡಿಂಜಾನ್, ಜೋರಾತ್, ತೇಜ್ಪುರ್ ಮುಂತಾದೆಡೆ ಕಾರ್ಯನಿರ್ವಹಿಸಿದ್ದರು. ತರಬೇತಿಗೆಂದು ಪ್ರಪಂಚದ ಅತ್ಯಂತ ಶೀತಲ ಪ್ರದೇಶ ರಶಿಯಾದ ಸೈಬೀರಿಯಾ, ಯೂರೋಪ್‌ನ ಫ್ರಾನ್ಸ್, ಜರ್ಮನಿ ಹಾಗೂ ಇಂಗ್ಲೆಂಡ್‌ಗೆ ಕೂಡ ಹೋಗಿ ಬಂದಿದ್ದರು ಎಂದು ವಿವರಿಸಿದರು.

ಯೋಗ ಶಿಕ್ಷಕ ಶ್ರೀಕಾಂತ್ ಮಾತನಾಡಿ, ಸೈನಿಕ ದೇಶದ ಬೆನ್ನೆಲುಬು. ನಾವು ಬಂಧು-ಬಳಗದೊಂದಿಗೆ ಕೂಡಿ ಸಂತೋಷದಿಂದಿರಲು, ಚಳಿ ಮಳೆಗಾಳಿಗಳನ್ನು ಲೆಕ್ಕಿಸದೆ, ತಮ್ಮ ವೈಯಕ್ತಿಕ ಸಂತೋಷಗಳನ್ನು ಬಿಟ್ಟು ಗಡಿಯಲ್ಲಿ ಕಾಯುತ್ತಿರುವ ಯೋಧರು ಕಾರಣ. ಅಂತಹ ಯೋಧರಿಗೆ ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯವೂ, ಯುವಕರಿಗೆ ದೇಶಭಕ್ತಿ ಮತ್ತು ಯೋಧರ ಬಗ್ಗೆ ಗೌರವವನ್ನು ಬೆಳೆಸುವ ಪ್ರೇರಕವೂ ಆಗಿದೆ ಎಂದರು.

ತುಮನಹಳ್ಳಿ ಪ್ರೌಢಶಾಲೆಯ ಶಿಕ್ಷಕಿ ಹೇಮಾವತಿ ಮಾತನಾಡಿ, ಕಲ್ಪತರು ದಿನದ ಮಹತ್ವವನ್ನು ವಿವರಿಸಿ, ಶ್ರೀ ರಾಮಕೃಷ್ಣ ಪರಮಹಂಸರ ಪರಮಶಿಷ್ಯರಾದ ಸ್ವಾಮಿ ವಿವೇಕಾನಂದರ ಚೇತೋಹಾರಿ ನುಡಿಗಳು ಸರ್ವಕಾಲಿಕ ಎಂದರು ತಿಳಿಸಿದರು.

ನಿವೃತ್ತ ಯೋಧ ಸುಬ್ರಮಣ್ಯಂ ವೆಂಕಟೇಶ ಅಯ್ಯರ್ ಮಾತನಾಡಿ, “ಬರ್ನಾಲಾದಲ್ಲಿದ್ದಾಗ ಪಾಕಿಸ್ತಾನ ಯುದ್ಧದ ವೇಳೆ ನಾವಿದ್ದ ಭೂಮಿಯೊಳಗಿನ ಬಂಕರ್ ಬಗ್ಗೆ ಮಾಹಿತಿ ತಿಳಿದು ಪಾಕಿಸ್ತಾನದ 15 ಸ್ಟಾರ್ ಫೈಟರ್ಸ್ ವೈಮಾನಿಕ ಧಾಳಿ ನಡೆಸಿದವು. ಅವರ ಬಾಂಬ್ ಧಾಳಿಗೆ ನಾನು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಬಚಾವಾದೆ. ಆದರೆ ನಮ್ಮ ರೇಡಾರ್ ಸ್ಟೇಷನ್ ಹಾನಿಗೊಳಗಾಯಿತು. ಯುದ್ಧ ಭೂಮಿಯಲ್ಲಿ ವಿಮಾನವನ್ನು ಹತ್ತಿದ ಪೈಲೆಟ್ ವಾಪಸ್ಸಾಗುವ ನಂಬಿಕೆಯಿರುವುದಿಲ್ಲ. ಯಾವ ವಿಮಾನ ಹಾರಬೇಕೆಂದು ನಿರ್ಧರಿಸುತ್ತಿದ್ದ ಕಂಟ್ರೋಲ್ ಕಾರ್ಯಪಡೆಯಲ್ಲಿದ್ದ ನನಗೆ ಯುದ್ಧಕ್ಕೆ ಹೊರಟ ಪೈಲೆಟ್‌ಗಳನ್ನು ಬೀಳ್ಕೊಡಲು ಬರುತ್ತಿದ್ದ ಅವರ ಕುಟುಂಬದವರ ನೀರು ತುಂಬಿದ ಕಣ್ಣುಗಳು ಈಗಲೂ ಕಾಡುತ್ತವೆ. ಸತ್ತಂತೆ ಬದುಕುವುದಕ್ಕಿಂತ ದೇಶಕ್ಕಾಗಿ ಧೀರತೆಯಿಂದ ಬದುಕುವುದರಲ್ಲಿ ಅರ್ಥವಿದೆ. ಸಾವನ್ನು ಅಂಗೈಲಿರಿಸಿಕೊಂಡು ದೇಶಕ್ಕಾಗಿ ಹೋರಾಡುವವರು ಮತ್ತು ದೇಶಕ್ಕಾಗಿ ಅರ್ಪಿಸಿರುವ ಅವರ ಕುಟುಂಬದವರನ್ನು ಸದಾ ನೆನೆಯಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಸುಬ್ರಮಣ್ಯಂ ವೆಂಕಟೇಶ ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಮಾಲತಿ, ಅನಂತಲಕ್ಷ್ಮಿ, ನವನೀತ, ಅನುಪಮ, ಮಂಜುಳಾ, ನಿರ್ಮಲಾ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!