Sidlaghatta : ರೇಷ್ಮೆ ಗೂಡಿನ ದರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು ರೇಷ್ಮೆ ಬೆಳೆಗಾರಾರಿಗೆ ತುಂಬಾ ನಷ್ಟ ಹಾಗೂ ಕಷ್ಟ ಆಗುತ್ತಿದೆ. ಪ್ರತಿ ಒಂದು ಕೆಜಿ ಗೂಡಿಗೆ ಕನಿಷ್ಟ 600 ರೂಗಳು ಬೆಂಬಲ ಬೆಲೆ ನಿಗದಿ ಮಾಡುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಒತ್ತಾಯಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಸಾಮೂಹಿಕ ಬಣ) ತಾಲ್ಲೂಕು ಘಟಕದ ವತಿಯಿಂದ ರೇಷ್ಮೆಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಮಹದೇವಯ್ಯ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಪಥಮ ಸ್ಥಾನದಲ್ಲಿದ್ದು ತಾಲೂಕಿನ ಶೇಕಡಾ 80 ರಷ್ಟು ರೈತರು ರೇಷ್ಮೆಉದ್ದಿಮೆಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ನಮ್ಮದು ಬಯಲು ಸೀಮೆಯ ಬರಪೀಡಿತ ಜಿಲ್ಲೆಯಾಗಿದ್ದು ಯಾವುದೇ ನದಿಗಳ ಅಶ್ರಯ ಇಲ್ಲದೆ ಸಾಲ ಸೋಲ ಮಾಡಿ ಕೊಳವೆ ಬಾವಿ ಕೊರೆಯಿಸಿ ಅದರಿಂದ ಬರುವ ಅಲ್ಪ ಸ್ವಲ್ಪ ನೀರಿನಲ್ಲಿ ರೇಷ್ಮೆ ಬೆಳೆಯನ್ನು ಬೆಳೆದು, ಅದರಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.
ಸುಮಾರು 15 ದಿನಗಳಿಂದ ಸರಾಸರಿ ಪ್ರತಿದಿನ ರೇಷ್ಮೆ ಗೂಡಿನ ದರ ಇಳಿಕೆಯಾಗುತ್ತಿದೆ. ಪ್ರತಿ ಒಂದು ಕೆಜಿ ರೇಷ್ಮೆ ಗೂಡು 500 ರೂಗಳಿಂದ 700ರೂ ವರೆಗೂ ಇದ್ದದ್ದು, ಇಂದು 300 ರೂಗಳಿಂದ 350 ರೂಗಳಿಗೆ ಇಳಿಕೆಯಾಗಿದೆ.
ಇದರಿಂದ ರೇಷ್ಮೆ ಬೆಳೆಗಾರರು ಆತಂಕ ಹಾಗೂ ತುಂಬಾ ನಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಕೆಲವರಂತೂ ರೇಷ್ಮೆ ಉದ್ದಿಮೆಯನ್ನೇ ಬಿಡುವಂತಹ ಸ್ಥಿತಿಗೆ ತಲುಪಿದ್ದಾರೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಈ ಕೂಡಲೇ ರೇಷ್ಮೆ ಬೆಳಗಾರರು ಹಾಗೂ ಅಧಿಕಾರಿಗಳ ಸಭೆ ಕರೆಯಬೇಕು. ದರ ಇಳಿಕೆಯಾಗಲು ಕಾರಣವನ್ನು ಪತ್ತೆ ಮಾಡಬೇಕು. ಸರ್ಕಾರ ಪ್ರತಿ ಒಂದು ಕೆಜಿ ರೇಷ್ಮೆ ಗೂಡಿಗೆ ಕನಿಷ್ಠ 600 ರೂ ಬೆಂಬಲ ಬೆಲೆ ನಿಗದಿ ಮಾಡಬೇಕು. ಆ ದರಕ್ಕಿಂತ ಕಡಿಮೆ ಆದರೆ, ಸರ್ಕಾರ ಸಬ್ಸಿಡಿ ರೂಪದಲ್ಲಿ ಹಣವನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿದರು.
ರೈತಸಂಘ(ಸಾಮೂಹಿಕ ಬಣ) ಜಿಲ್ಲಾ ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನಚಾರ್ಯ, ಎಚ್.ಎನ್.ಕದೀರೇಗೌಡ, ಆಂಜಿನಪ್ಪ, ಡಿ.ವಿ.ನಾರಾಯಣಸ್ವಾಮಿ, ಅರುಣ್, ಬಳುವನಹಳ್ಳಿ ಪ್ರಕಾಶ್, ಮಾಳಮಾಚನಹಳ್ಳಿ ರಮೇಶ, ಮಂಜುನಾಥ್, ಶ್ರೀರಾಮಪ್ಪ, ದೊಡ್ಡತೇಕಹಳ್ಳಿ ವೆಂಕಟೇಶ್ ಹಾಜರಿದ್ದರು.