Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಗುರುವಾರ ಕಸಾಪ ವತಿಯಿಂದ ಆಯೋಜಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ನವರ 162 ನೇ ಜನ್ಮ ದಿನ ಮತ್ತು Engineers’ Day ಕಾರ್ಯಕ್ರಮವನ್ನು ಆಚರಿಸಲಾಯಿತು ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು “ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಕನ್ನಡ ನಾಡಿನ, ಭಾರತದ ಶ್ರೇಷ್ಠ ಸುಪುತ್ರರಲ್ಲಿ ಒಬ್ಬರು. ಅವರು ನುಡಿದಂತೆ ನಡೆದವರು. ಒಂದು ಸಮಾಜದ ಭಾಗ್ಯೋದಯದ ಹಾಗೆ ಅವರು ಬದುಕಿದರು. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅವರು ನೀಡಿದ ಕೊಡುಗೆ ಹೋಲಿಕೆಯಿಲ್ಲದ್ದು” ಎಂದು ತಿಳಿಸಿದರು.
ಬದುಕಿನುದ್ದಕ್ಕೂ ಶಿಸ್ತನ್ನು ಉಸಿರನ್ನಾಗಿಸಿಕೊಂಡಿದ್ದ ವಿಶ್ವೇಶ್ವರಯ್ಯನವರು “ಮೋಂಬತ್ತಿ ಕೊನೆಯವರೆಗೆ ಉರಿಯುವಂತೆ ಮನುಷ್ಯ ಬದುಕಬೇಕು” ಎನ್ನುವ ಮಾತಿಗೆ ನಿದರ್ಶನವಾಗಿದ್ದರು. ಅವರು ಅಪರೂಪದ ಪ್ರತಿಭೆಯಷ್ಟೆ ಅಲ್ಲದೆ ಬಿಡುವನ್ನೆ ಬಯಸದ ಅವರ ಕೆಲಸ ಮಗ್ನತೆ, ಒಂದು ನಿಮಿಷವನ್ನು ವ್ಯರ್ಥ ಮಾಡದಂತಹ ಕಾಲದ ಬೆಲೆಯ ಅರಿವು, ಶಿಸ್ತು, ಪ್ರಾಮಾಣಿಕತೆ ಎಲ್ಲ ಎಷ್ಟು ಸರಳವೋ ಅಷ್ಟೇ ಗೌರವಾರ್ಹ ಎಂದರು.
ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕಶಕ್ತಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕಾರಣಕರ್ತರೂ ಹೌದು. “ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿ, ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲದ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತಕಾಲದಲ್ಲಿಯೇ ದಂತಕತೆಯಾದರು, ಜಗತ್ಪ್ರಸಿದ್ಧರಾದರು ಎಂದು ಹೇಳಿದರು.
ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಎಸ್.ವೆಂಕಟೇಶಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಕಸಾಪ ತಾಲ್ಲೂಕಿನಲ್ಲಿರುವ 60 ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಹಂತದ ಕಾಲೇಜುಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ರವರ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸಿ, ಈ ದಿನ ಏಕಕಾಲದಲ್ಲಿ ಬಹುಮಾನಗಳನ್ನು ವಿತರಿಸಿ, ಸರ್.ಎಂ.ವಿ.ಜನ್ಮದಿನ ಮತ್ತು ಎಂಜಿನಿಯರ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಜಗತ್ತು ಕಂಡ ಕ್ರಿಯಾಶೀಲ ಶ್ರೇಷ್ಠ ಎಂಜಿನಿಯರ್ ಸರ್.ಎಂ.ವಿ ರವರ ಶಿಸ್ತು, ಕೆಲಸ, ಸಾದನೆ ಮತ್ತು ಕೊಡುಗೆಗಳು ಅಜರಾಮರವಾಗಿದೆ ಎಂದರು.
ಶಾಲಾ ಆವರಣದಲ್ಲಿ ಸರ್.ಎಂ.ವಿ.ಜನ್ಮ ದಿನದ ನೆನಪಿನಲ್ಲಿ ಗಿಡ ನೆಡಲಾಯಿತು. “ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ರವರ ಸಾದಧನೆ ಮತ್ತು ಕೊಡುಗೆಗಳು” ವಿಷಯವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಸರ್.ಎಂ.ವಿ.ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ತಾಲ್ಲೂಕಿನ ವಿವಿದೆಡೆ ಕಸಾಪ ವತಿಯಿಂದ ಒಟ್ಟು 180 ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ಆಯಾ ಶಾಲಾ ಕಾಲೇಜುಗಳಲ್ಲಿ ನೀಡಲಾಯಿತು.
ಎಂಜಿನಿಯರ್ ದಿನದ ಅಂಗವಾಗಿ ಬೆಸ್ಕಾಂ ಎಂಜಿನಿಯರ್ ವೈ.ಎಸ್.ವೆಂಕಟೇಶಪ್ಪ ಮತ್ತು ಬಿ.ಪ್ರಭು ರವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಕೆ.ರಮೇಶ್, ಐ.ಜಿ.ಆರ್.ಎಸ್ ಪ್ರಾಂಶುಪಾಲೆ ವಿಜಯಶ್ರೀ, ಶಿಡ್ಲಘಟ್ಟ ತಾಲ್ಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಕೆ.ಮಂಜುನಾಥ್, ಬೆಸ್ಕಾಂ ಅಧಿಕಾರಿಗಳಾದ ಎಸ್.ಎಂ. ವಿಜಯಕುಮಾರ್, ಎಂ.ಮುನಿರಾಜು, ಆರ್.ನವೀನ್‌ಕುಮಾರ್, ಆರ್.ಆಂಜನೇಯ ರೆಡ್ಡಿ, ಬಿ.ಮಂಜುನಾಥ್, ವೀರಭದ್ರಾಚಾರಿ, ಕೆ.ಎನ್.ನವೀನ್, ಚಂದನ್, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.