Sidlaghatta : ತಾಲ್ಲೂಕಿನಲ್ಲಿ ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಸೂಸೂತ್ರವಾಗಿ ನಡೆಸಲು ಕೊಠಡಿ ಮೇಲ್ವಿಚಾರಕರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸದೇ ವಸ್ತುನಿಷ್ಟವಾಗಿ ಮಕ್ಕಳು ಪರೀಕ್ಷೆ ಎದುರಿಸಲು ಎಲ್ಲ ಪರೀಕ್ಷಾ ಸಿಬ್ಬಂದಿಯೂ ಮುಂದಾಗಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಹನುಮಂತರಪುರ ಗೇಟ್‌ನಲ್ಲಿನ ಬಿಜಿಎಸ್ ಶಾಲಾ ಆಡಿಟೋರಿಯಮ್ ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಸ್ಸೆಸ್ಸೆಲ್ಸಿ ಕೊಠಡಿ ಮೇಲ್ವಿಚಾರಕರಿಗಾಗಿ ಹಮ್ಮಿಕೊಂಡಿದ್ದ ಒಂದುದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಲ್ ಅವಧಿ ಅನುಸರಣೆ, ಪ್ರಶ್ನೆಪತ್ರಿಕೆ ಹಂಚಿಕೆ, ಉತ್ತರಪತ್ರಿಕೆಗಳ ನಿರ್ವಹಣೆ, ನಮೂನೆಗಳನ್ನು ತುಂಬುವುದರ ಬಗ್ಗೆ ಕೊಠಡಿ ಮೇಲ್ವಿಚಾರಕರು ಅಗತ್ಯ ಅರಿವು ಹೊಂದಿರಬೇಕು. ಪರೀಕ್ಷಾ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ, ಅವ್ಯವಹಾರಗಳಿಗೆ ಅವಕಾಶ ಕೊಡಬಾರದು. ಪರೀಕ್ಷೆಯ ಯಶಸ್ವಿ ಪೂರ್ಣಗೊಳಿಸುವಲ್ಲಿ ಕೊಠಡಿ ಮೇಲ್ವಿಚಾರಕರ ಕಾರ್ಯವು ಪ್ರಮುಖವಾದುದು ಎಂದರು.
ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಲ್.ವಿ.ವೆಂಕಟರೆಡ್ಡಿ ಅವರು ಕೊಠಡಿ ಮೇಲ್ವಿಚಾರಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು, ಮೇಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎಂ.ಭಾಸ್ಕರ್ ಅವರು ನಿರ್ವಹಿಸಬೇಕಾದ ನಮೂನೆಗಳ ಕುರಿತು ತರಬೇತಿ ನೀಡಿದರು.
ಶಿಕ್ಷಣಸಂಯೋಜಕ ಇ.ಭಾಸ್ಕರಗೌಡ, ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲ ಮಹದೇವ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಖಜಾಂಚಿ ಗೋಪಾಲಕೃಷ್ಣ, ಸಿ.ಆರ್.ಪಿ ಪ್ರಭಾಕರ್, ತಾಲ್ಲೂಕಿನ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ 200 ಕ್ಕೂ ಹೆಚ್ಚು ಶಿಕ್ಷಕರು ಹಾಜರಿದ್ದರು.