Sidlaghatta : 2023-24ನೇ ಸಾಲಿನಲ್ಲಿ SSLC ಪರೀಕ್ಷೆಯನ್ನು ಬರೆಯಲಿರುವ ಶಿಡ್ಲಘಟ್ಟ ತಾಲ್ಲೂಕಿನ ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಶುಕ್ರವಾರ ವಿಡಿಯೋ ಕಾನರೆನ್ಸ್ ಹಮ್ಮಿಕೊಂಡಿದ್ದು ಇಲಾಖೆ ಅಧಿಕಾರಿಗಳು ಹಾಗೂ ವಿಷಯವಾರು ತಜ್ಞ ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
ಶಿಡ್ಲಘಟ್ಟ ನಗರದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತಾಲ್ಲೂಕಿನ ಸರ್ಕಾರಿ, ಅನುದಾನಿತ ಹಾಗೂ ಖಾಸಗಿಯ 58 ಪ್ರೌಢಶಾಲೆಗಳಲ್ಲಿನ ಸುಮಾರು 2600 ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನರೆನ್ಸ್ ಮೂಲಕ ಸಂವಹನ ನಡೆಸಲಾಯಿತು.
ಬೆಳಗ್ಗೆ 11 ಗಂಟೆಗೆ ಆರಂಭವಾದ ವಿಡಿಯೋ ಕಾನ್ಫರೆನ್ಸ್ ಮದ್ಯಾಹ್ನ 2 ಗಂಟೆಯವರೆಗೂ ನಡೆಯಿತು. ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮೂಲಕ ಪರೀಕ್ಷಾ ವ್ಯವಸ್ಥೆ ಹಾಗೂ ವಿಷಯವಾರು ಅನುಮಾನಗಳನ್ನು ಬಗೆಹರಿಸಿಕೊಂಡರು.
ಶಿಕ್ಷಣ ಸಂಯೋಜಕ ಭಾಸ್ಕರ್‌ಗೌಡ, ವಿಷಯವಾರು ಶಿಕ್ಷಕ ಸಂಪನ್ಮೂಲಕ ವ್ಯಕ್ತಿಗಳಾಗಿ ಕನ್ನಡ-ಎಲ್.ವಿ.ವೆಂಕಟರೆಡ್ಡಿ, ಇಂಗ್ಲೀಷ್-ಉಮಾಶಂಕರ್, ಹಿಂದಿ-ಆರ್.ಹೇಮಾವತಿ, ಗಣಿತ-ಡಾ.ಎಂ.ಶಿವಕುಮಾರ್, ವಿಜ್ಞಾನ-ಎಂ.ಆರ್.ನಳಿನ, ಸಮಾಜ ವಿಜ್ಞಾನ-ಇ.ಶಂಕರಪ್ಪ ಭಾಗವಹಿಸಿದ್ದರು.
ಪರೀಕ್ಷಾರ್ಥಿಗಳು ಪರೀಕ್ಷಾ ಸಮಯದಲ್ಲಿ ಆರೋಗ್ಯ ಸುರಕ್ಷತೆಯನ್ನು ಕಾಪಾಡಿಕೊಂಡು ಭಯ, ಆತಂಕ, ಪರೀಕ್ಷಾ ಒತ್ತಡ ಹೋಗಲಾಡಿಸಿ ಆತ್ಮವಿಶ್ವಾಸ ಹಾಗೂ ಆತ್ಮ ಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸಲು ಇರುವ ಗೊಂದಲಗಳನ್ನು ನಿವಾರಿಸಲು ಹಾಗೂ ಪರೀಕ್ಷಾ ವ್ಯವಸ್ಥೆ ಕುರಿತಂತೆ ಫೋನ್ ಇನ್ ಕಾರ್ಯಕ್ರಮ ನಡೆಸಲು ಇಲಾಖೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು.
ಆದರೆ ಕಡೆ ಗಳಿಗೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೂ ನೆರವಾಗಲಿ ಎನ್ನುವ ಉದ್ದೇಶದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದ್ದಾರೆ.