Appegowdanahalli, Sidlaghatta : ಕೃಷಿ ಇಲಾಖೆಯಿಂದ ಹನಿ ನೀರಾವರಿ ಪದ್ದತಿಗಾಗಿ ರೈತರಿಗೆ ವಿತರಿಸಿದ್ದ ಪಿವಿಸಿ ಪೈಪ್ ಮತ್ತು ಲ್ಯಾಟರಲ್ ಗಳು ಕಳಪೆ ಗುಣಮಟ್ಟದ್ದಾಗಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಗುಣ ನಿಯಂತ್ರಣ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿ ಮೈಸೂರಿನ ಸೇಫೆಟ್ ಸಂಸ್ಥೆಗೆ ರವಾನಿಸಿದ್ದಾರೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಲಕ್ಷ್ಮೀನಾರಾಯಣರೆಡ್ಡಿ ಅವರ ಕೇಶವಪುರ ಗೇಟ್ ನಲ್ಲಿನ ತೋಟದಲ್ಲಿ ಅಳವಡಿಸಲು ಕೃಷಿ ಇಲಾಖೆಯಿಂದ ನೀಡಿದ್ದ ಪ್ರೀಮಿಯರ್ ಇರಿಗೇಷನ್ ಅಡ್ರಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪಿವಿಸಿ ಪೈಪ್, ಲ್ಯಾಟರಲ್ ಗಳ ಮಾದರಿ ಸಂಗ್ರಹಿಸಲಾಯಿತು.
ಕೃಷಿ ಸಹಾಯಕ ನಿರ್ದೇಶಕ ಪಿ.ಆರ್.ರವಿ, ಕೃಷಿ ತಾಂತ್ರಿಕ ಅಧಿಕಾರಿ ನಾರಾಯಣರೆಡ್ಡಿ ತೋಟಕ್ಕೆ ತೆರಳಿ ಅಲ್ಲಿ ರೈತರ ಸಮ್ಮುಖದಲ್ಲಿ ಸಂಗ್ರಹಿಸಿದ ಮಾದರಿಗಳನ್ನು ಮೈಸೂರಿನ ಸೆಂಟ್ರಲ್ ಇನ್ಸಿಟ್ಯೂಟ್ ಫಾರ್ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ(ಸೀಫೆಟ್)ಗೆ ಕಳುಹಿಸಲಾಗಿದೆ.
ಅಪ್ಪೇಗೌಡನಹಳ್ಳಿಯ ರೈತ ಲಕ್ಷ್ಮಿನಾರಾಯಣರೆಡ್ಡಿ ಅವರಿಗೆ ನಮ್ಮ ಇಲಾಖೆಯಿಂದ ವಿತರಿಸಿದ್ದ ಪಿವಿಸಿ ಪೈಪ್, ಲ್ಯಾಟರಲ್ ಗಳ ಗುಣಮಟ್ಟ ಕಳಪೆ ಎಂಬ ದೂರು ಬಂದ ಹಿನ್ನಲೆಯಲ್ಲಿ ತೋಟದಿಂದ 5 ಮೀಟರ್ ಪಿವಿಸಿ ಪೈಪ್, 7 ಮೀಟರ್ ಲ್ಯಾಟರಲ್, 335 ಮೀಟರ್ ನಷ್ಟು ಇನ್ ಲ್ಯಾಂಡ್ ಮಾದರಿ ಸಂಗ್ರಹಿಸಿ ಮೈಸೂರಿನ ಸೀಫೆಟ್ ಸಂಸ್ಥೆಗೆ ಗುಣ ಮಟ್ಟ ಪರಿಶೀಲನೆಗೆ ಕಳುಹಿಸಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಪಿ.ಆರ್.ರವಿ, ಕೃಷಿ ಸಹಾಯಕ ನಿರ್ದೇಶಕ