Tummanahalli, Sidlaghatta : ಫಸಲು ಬಿಡುವ ಹಂತದಲ್ಲಿರುವ ದಾಳಿಂಬೆ ಗಿಡಗಳನ್ನು ನಾಶಪಡಿಸಿದ ಆರೋಪಿಗಳು ಯಾರೇ ಇರಲಿ ಅವರನ್ನ ಪತ್ತೆ ಹಚ್ಚಿ ಕಾನೂನಿನ ಕ್ರಮ ಜರುಗಿಸಿ, ಕಠಿಣ ಶಿಕ್ಷೆಗೆ ಒಳಪಡಿಸುವ ಕೆಲಸ ಆಗಬೇಕಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಹಾಗೂ ತಹಶೀಲ್ದಾರರಲ್ಲಿ ಮನವಿ ಮಾಡಿರುವುದಾಗಿ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯಲ್ಲಿ ರೈತ ಸುರೇಂದ್ರಗೌಡ ಅವರ ತೋಟದಲ್ಲಿ ಮೊದಲ ಫಸಲು ಬಿಡುವ ಹಂತಕ್ಕೆ ಬೆಳೆದು ನಿಂತಿದ್ದ ದಾಳಿಂಬೆ ಗಿಡಗಳನ್ನು ನಾಶ ಪಡಿಸಿದ ಘಟನೆ ನಡೆದಿದೆ. ಜಮೀನಿನ ವಿಷಯದಲ್ಲಿ ವೈಷಮ್ಯ ಇರುವ ಹಿನ್ನಲೆಯಲ್ಲಿ ಗಿಡಗಳನ್ನು ನಾಶಪಡಿಸುವಂತ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ.
ದಾಳಿಂಬೆ ಗಿಡಗಳನ್ನು ನಾಶಪಡಿಸಿದ ಸುರೇಂದ್ರಗೌಡ ಅವರ ತೋಟಕ್ಕೆ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಎಸ್.ಐ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ ರೈತನಿಗೆ ಸಾಂತ್ವನ ಹೇಳಿ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದಾಗಿ ರೈತನಿಗೆ ಭರವಸೆ ನೀಡಿ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿವೆ. ಇದು ಕ್ಷಮಿಸಲಾರದ ದುಷ್ಕೃತ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಸಾಲ ಸೋಲ ಮಾಡಿ ಬೆಳೆ ಇಟ್ಟು ಅದರಿಂದ ಬರುವ ಆರುಕಾಸು ಮೂರು ಕಾಸಿನ ಮೇಲೆ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಕಾಣುತ್ತಾರೆ. ಆದರೆ ಫಸಲು ಬಿಡುವ ಹಂತದಲ್ಲಿ ಈ ರೀತಿ ಆದರೆ ನೇಣುಹಾಕಿಕೊಳ್ಳುವಂತ ಸ್ಥಿತಿಗೆ ರೈತ ತಲುಪುತ್ತಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಪರಿಸ್ಥಿತಿ ಬಂದಾಗ ರೈತರು ಎದೆಗುಂದದೆ ಧೈರ್ಯದಿಂದ ಇರಬೇಕೆಂದು ರೈತರಿಗೆ ಧೈರ್ಯ ಹೇಳಿದ ಶಾಸಕರು, ಈ ದುಷ್ಕೃತ್ಯಕ್ಕೆ ಕಾರಣರಾದ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಕೆಗೆ ಒಳಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮೂರೂವರೆ ಎಕರೆ ಭೂಮಿಯಲ್ಲಿ, ಸುಮಾರು 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ 1350 ಕ್ಕೂ ಹೆಚ್ಚು ದಾಳಿಂಬೆ ಗಿಡಗಳನ್ನು ಬೆಳೆದಿರುವ ರೈತ ಸುರೇಂದ್ರ, ಮೊದಲ ಫಸಲಿನ ನಿರೀಕ್ಷೆಯಲ್ಲಿದ್ದರು. ಇದೀಗ ಸುಮಾರು 220 ಕ್ಕೂ ಹೆಚ್ಚು ದಾಳಿಂಬೆ ಗಿಡಗಳನ್ನು ಕಳೆದುಕೊಂಡಿರುವ ಇವರು ಬೆಳೆಯನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ
ತಹಶೀಲ್ದಾರ್ ಬಿ.ಎನ್.ಸ್ವಾಮಿ, ಎಸ್.ಐ ಸುನಿಲ್ ಕುಮಾರ್, ರೈತ ಸುರೇಂದ್ರಗೌಡ ಹಾಜರಿದ್ದರು.