Sidlaghatta : ವೈಕುಂಠ ದ್ವಾದಶಿಯ ಪ್ರಯುಕ್ತ ಮಂಗಳವಾರ ನಗರದ ವಾಸವಿ ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠದ ಬಾಗಿಲು ತೆಗೆಯಲಾಗಿತ್ತು. ವಿಶೇಷ ಪೂಜೆಯನ್ನು ವಾಸವಿ ಮಂಡಳಿ ಮತ್ತು ವಾಸವಿ ಯುವಜನ ಸಂಘದಿಂದ ಆಯೋಜಿಸಲಾಗಿತ್ತು.
ವಾಸವಿ ರಸ್ತೆಯಲ್ಲಿ ಸಾಲುಗಟ್ಟಿದ್ದ ಜನರು ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು. ದೇವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು, ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿರಿಸಿದ್ದು, ಭಕ್ತರು ದೇವರ ಅಡಿಯಲ್ಲಿ ಹಾದು ಬರಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ತಂಡೋಪತಂಡವಾಗಿ ಆಗಮಿಸಿದ ಭಕ್ತಾಧಿಗಳು ಮದ್ಯಾಹ್ನದವರೆಗೂ ವೈಕುಂಠದ ಬಾಗಿಲ ಮೂಲಕ ದೇವರ ದರ್ಶನ ಪಡೆದರು.
“ಮುಕ್ಕೋಟಿ ದ್ವಾದಶಿ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ. ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ ಸಲುವಾಗಿ ಆ ದ್ವಾರದ ಮೂಲಕ ತೆರಳುತ್ತಾರೆ. ಆದ್ದರಿಂದ ದೇವಾಲಯಗಳ ಉತ್ತರ ದಿಕ್ಕಿನ ದ್ವಾರಗಳನ್ನು ತೆರೆಯಲಾಗುತ್ತದೆ. ಆ ಮೂಲಕ ದರ್ಶನ ಪಡೆಯಲಾಗುತ್ತದೆ. ಏಕಾದಶಿಯ ಮರು ದಿನ ಮುಕ್ಕೋಟಿ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ” ಎಂದು ಅರ್ಚಕ ದಾಶರಥಿ ತಿಳಿಸಿದರು.
ವಾಸವಿ ಮಂಡಳಿ, ವಾಸವಿ ಯುವಜನ ಸಂಘ ಹಾಗೂ ವಾಸವಿ ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.