Sidlaghatta : ಭಾರತ ಸೇರಿದಂತೆ ವಿಶ್ವದ ವಿವಿಧ ಕಡೆ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿದೆ. ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಇವುಗಳೇ ಸಾಕ್ಷಿ. ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆಯನ್ನು ಬಿಂಬಿಸುತ್ತಿದೆ. ನಶಿಸಿಹೋಗುತ್ತಿರುವ ವಿಶ್ವಕರ್ಮರ ಕುಲಕಸುಬುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ, ಮುಂದುವರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಚಿಂತಾಮಣಿ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಶಿಡ್ಲಘಟ್ಟ ತಾಲ್ಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಅಮರಶಿಲ್ಪ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಕಣಾಚಾರಿ ಯವರು ತಮ್ಮ ಜೀವನವನ್ನೇ ಶಿಲ್ಪ ಕಲೆಗಾಗಿ ಮುಡಿಪಿಟ್ಟಿದ್ದವರು, ಅವರ ಕೆತ್ತನೆಯ ಬೇಲೂರಿನ ಚನ್ನಕೇಶವ ದೇವಾಲಯವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ಇದು ಇಂದಿನ ಯುವ ಪೀಳಿಗೆಗೆ ಅವರಿಂದ ಅತ್ಯಂತ ಮಹತ್ತರವಾದ ಕೊಡುಗೆಯಾಗಿದ್ದು ಇಂದಿನ ಆಧುನಿಕ ಯುಗದಲ್ಲಿ ಶಿಲ್ಪಿಕಲೆ ನಶಿಸಿಹೋಗುತ್ತಿದೆ ಅಮರ ಶಿಲ್ಪಿ ಜಕಣಾಚಾರಿ ಅವರ ಪರಂಪರೆಯನ್ನು ನಾವು ಉಳಿಸಿ ಬೆಳೆಸೋಣ ಎಂದರು.
ವಿಶ್ವಕರ್ಮರನ್ನು ವಿಶ್ವರೂಪ, ದಕ್ಷಿಣಾಚಾರ್ಯ, ಜಕಣಾಚಾರ್ಯ, ಸ್ಥಪತಿ ಇನ್ನಿತರ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಸ್ಥಪತಿ ಎಂದರೇ ಶಿಲ್ಪಿಗಳಲ್ಲಿ ಅಗ್ರಗಣ್ಯ ಎಂದರ್ಥ. ವಾಸ್ತುಪ್ರಕಾರ ಶಿಲ್ಪ ರಚಿಸುವವರನ್ನು ಸ್ಥಪತಿ ಎನ್ನಲಾಗುತ್ತದೆ. ಸ್ಥಪತಿಯಾದವನು ತನ್ನ ಹೆಸರನ್ನು ಎಲ್ಲೂ ಪ್ರಸ್ತುತಪಡಿಸುವುದಿಲ್ಲ. ಸೃಷ್ಟಿಯ ಮೂಲಕರ್ತೃವಾಗಿರುವ ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಾಚಾರಿ ಅವರನ್ನು ಜಗತ್ತಿನ ಮೊದಲ ಮುಖ್ಯ ಎಂಜಿನಿಯರ್ ಎನ್ನಬಹುದು. ಜಕಣಾಚಾರಿಯವರು ಸಾಮಾನ್ಯ ಜನರಿಗೆ ದೇವರ ಪರಿಕಲ್ಪನೆ ನೀಡುವ ಮಧ್ಯಸ್ಥಿಕೆದಾರರಾಗಿದ್ದರು. ವಿಶ್ವಕರ್ಮರ ಶಿಲ್ಪಕಲೆ ಅಮರವಾಗಿದೆ ಎಂದು ಹೇಳಿದರು.
ಮುಖ್ಯ ಭಾಷಣಾಕಾರ ಜನಾರ್ದನ ಮೂರ್ತಿ ಮಾತನಾಡಿ, 900 ವರ್ಷಗಳ ಹಿಂದೆ ಇಡೀ ವಿಶ್ವವೇ ಬೆರಗಾಗುವಂತೆ ಕಲ್ಲನ್ನು ಹೂವಾಗಿ ಅರಳಿಸಿದ ಅಮರಶಿಲ್ಪಿ ಜಕಣಾಚಾರಿ, ಬೇಲೂರು ಹಳೇಬೀಡು ದೇವಾಲಯಗಳಿಗೆ ವಿಶ್ವ ಭೂಪಟದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿಕೊಟ್ಟಿದ್ದಾರೆ. ಇಂದು ಆಧುನಿಕತೆಯೊಂದಿಗೆ ಕೌಶಲ ಉಳಿಸಿಕೊಳ್ಳಬೇಕಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಕುಲ ಕಸುಬು ಅವಲಂಬಿತರಿಗೆ ನುಂಗಲಾರದ ತುತ್ತಾಗಿದೆ. ಮೊಬೈಲ್‌ನಲ್ಲಿ ಕೇಳುವ ಪ್ರಶ್ನೆಗಳಿಗೆ ಮೊಬೈಲ್ ಸುಲಭವಾಗಿ ಉತ್ತರಿಸುತ್ತಿದೆ. ಹಾಗಾಗಿ ಉಳಿ, ಸಾಣೆ ಹಿಡಿದು ಚಿತ್ರಬಿಡಿಸುವ, ಕಲ್ಲನ್ನು ಕೆತ್ತುವ ಅವಕಾಶ ತಪ್ಪುತ್ತಿದೆ. ಆದರೆ ವಿಶ್ವಕರ್ಮ ಸಮುದಾಯ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಕೌಶಲ ಕಣ್ಮರೆಯಾಗದಂತೆ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗಬೇಕು ಇದರ ಬಗ್ಗೆ ಸರ್ಕಾರಗಳು ಗಮನಹರಿಸಬೇಕಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕ ಆರ್.ಸುಂದರಾಚಾರಿ, ನಿವೃತ್ತ ಶಿಕ್ಷಕ ನಂದೀಶ್, ಶಿಲ್ಪಿ ನಾಗರಾಜಚಾರಿ, ಆರ್.ಜಗದೀಶ್ ಕುಮಾರ್, ಮಂಜುಳಾದೇವಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸ ನಾಯ್ಡು, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಾಚಾರಿ, ಗೌರವಾಧ್ಯಕ್ಷ ಕೆ.ಎನ್.ಜನಾರ್ಧನ್ ಮೂರ್ತಿ, ಶ್ರೀನಾಥ್, ನಾರಾಯಣಸ್ವಾಮಿ, ಹಿತ್ತಲಹಳ್ಳಿ ಗೋಪಾಲಗೌಡ ಹಾಜರಿದ್ದರು.