ಗ್ರಾಮಸ್ಥರಿಂದ ತ್ಯಾಜ್ಯ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಹೊರವಲಯದಲ್ಲಿನ ಹಿತ್ತಲಹಳ್ಳಿ ಬಳಿ ಇರುವ ನಗರ ತ್ಯಾಜ್ಯ ಘಟಕದಿಂದ ಹತ್ತಾರು ಸಮಸ್ಯೆಗಳು ಎದುರಾಗುತ್ತಿವೆ. ದಶಕದಿಂದಲೂ ಹೇಳಿಕೊಂಡು ಬಂದರೂ ಸಮಸ್ಯೆಗಳು ಮಾತ್ರ ನಿವಾರಣೆಯಾಗಿಲ್ಲ. ಹಾಗಾಗಿ ಕಸದ ತ್ಯಾಜ್ಯ ಘಟಕವನ್ನು ಇಲ್ಲಿಂದ ಸ್ಥಳಾಂತರಿಸಿ ಎಂದು ಹಿತ್ತಲಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದಿಂದ ಕಸ ತುಂಬಿಕೊಂಡು ಬಂದ ನಗರಸಭೆಯ ಕಸ ವಿಲೇವಾರಿ ವಾಹನಗಳನ್ನು ರಸ್ತೆಯಲ್ಲೇ ತಡೆದು, ತ್ಯಾಜ್ಯ ಘಟಕಕ್ಕೆ ಬೀಗ ಜಡಿದು ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಕೇವಲ ಭರವಸೆಯ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ಸಮಸ್ಯೆಗೆ ಪರಿಹಾರ ಸಿಗುವವರೆಗೂ ಪ್ರತಿಭಟನೆ ಕೈ ಬಿಡುವ ಪ್ರಶ್ನೆಯಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಏಳೆಂಟು ವರ್ಷಗಳಿಂದಲೂ ಪ್ರತಿ ವರ್ಷ ಬೇಸಿಗೆಯಲ್ಲಿ ಕಸದ ರಾಶಿಗೆ ಬೆಂಕಿ ಬೀಳುತ್ತದೆ. ವಾರ ತಿಂಗಳುಗಟ್ಟಲೆ ಬೆಂಕಿ ಉರಿದರೂ ಅದನ್ನು ನಂದಿಸುವ ಕೆಲಸ ಸಂಪೂರ್ಣವಾಗಿ ಆಗುತ್ತಿಲ್ಲ. ಅಗ್ನಿಶಾಮಕ ವಾಹನ, ಸಿಬ್ಬಂದಿ ಕೊರತೆ, ನೀರಿನ ಕೊರತೆ ಇನ್ನಿತರೆ ಕಾರಣಗಳಿಂದ ಒಂದೆರಡು ದಿನಗಳ ಕಾಲ ಬಂಕಿ ನಂದಿಸಿ ಸುಮ್ಮನಾಗಿ ಬಿಡುತ್ತಾರೆ.

ಕಸದ ರಾಶಿಯ ಮೇಲ್ಮೇಲೆ ಮಾತ್ರ ಬೆಂಕಿಯನ್ನು ನಂದಿಸುತ್ತಾರೆ, ಆದರೆ ಕಸದ ರಾಶಿಯ ಒಳಗಿನ ಬೆಂಕಿ ಮಾತ್ರ ತಿಂಗಳು ಗಟ್ಟಲೆ ಉರಿಯುವ ಕಾರಣ ದಟ್ಟವಾದ ಹೊಗೆ, ಧೂಳು ಸುತ್ತಮುತ್ತಲಿನ ಹೊಲ ಗದ್ದೆ ತೋಟ ಹಳ್ಳಿಗಳನ್ನು ಆವರಿಸುತ್ತಿದೆ.

ಇದರಿಂದ ಮುಖ್ಯವಾಗಿ ರೇಷ್ಮೆ ಹುಳು ಸಾಕಣೆ ಮೇಲೆ ನೇರವಾದ ಪರಿಣಾಮ ಬೀರುತ್ತಿದೆ. ಜತೆಗೆ ಮಕ್ಕಳು ಬಾಣಂತಿ ಗರ್ಭಿಣಿಯರಲ್ಲಿ ಉಸಿರಾಟದ ನಾನಾ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಕಸದಲ್ಲಿನ ಕೋಳಿ ಮಾಂಸದ ತ್ಯಾಜ್ಯ ತಿನ್ನಲು ನೂರಾರು ನಾಯಿಗಳು ದಿನವೂ ಇಲ್ಲಿಗೆ ಬರುತ್ತಿವೆ.

ತ್ಯಾಜ್ಯ ಘಟಕಕ್ಕೆ ಬೀಗ ಹಾಕದ ಕಾರಣ ನಾಯಿಗಳು ಒಳಗೆ ಹೋಗಿ ಕೋಳಿ ಮಾಂಸದ ತ್ಯಾಜ್ಯ ತಿಂದು ಕೊಬ್ಬಿ ಸುತ್ತ ಮುತ್ತಲ ಹೊಲ ಗದ್ದೆ ತೋಟ ಹಾಗೂ ಮನೆಗಳ ಬಳಿ ಬೀಡು ಬಿಟ್ಟು ಮಲಗುತ್ತವೆ. ಮಕ್ಕಳು ಮರಿ ಮುದುಕರ ಮೇಲೆ ದಾಳಿ ಮಾಡಿದ ಸಾಕಷ್ಟು ಘಟನೆಗಳು ನಡೆದಿವೆ.

ಇದಲ್ಲದೆ ತ್ಯಾಜ್ಯ ಘಟಕದ ಮುಂಭಾಗ ನಾಯಿಗಳ ಗುಂಪು ಪರಸ್ಪರ ಕಚ್ಚಾಡಿಕೊಂಡು ಏಕಾ ಏಕಿ ರಸ್ತೆಗೆ ನುಗ್ಗುವ ಕಾರಣ ಶಿಡ್ಲಘಟ್ಟ-ಶಿಡ್ಲಘಟ್ಟ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬೈಕ್ ಸವಾರರು ನಾಯಿ ಅಡ್ಡ ಬಂದ ಕಾರಣ ರಸ್ತೆ ಬಿದ್ದು ಕೈ ಕಾಲು ಮುರಿದುಕೊಂಡು ಬಹಳಷ್ಟು ಘಟನೆಗಳು ದಾಖಲಾಗಿವೆ.

ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವಂತೆ, ಇಲ್ಲವೇ ತ್ಯಾಜ್ಯ ಘಟಕವನ್ನಾದರೂ ಸ್ಥಳಾಂತರ ಮಾಡಿ, ಆಗದಿದ್ದರೆ ನಮ್ಮೂರನ್ನೇ ಸ್ಥಳಾಂತರ ಮಾಡಿ ಎಂದು ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲ ಅಧಿಕಾರಿಗಳಿಗೂ ಸಾಕಷ್ಟು ಭಾರಿ ಮನವಿ ಮಾಡಿದ್ದೇವೆ. ಆದರೆ ನಮಗೆ ಸಿಕ್ಕಿದ್ದು ಭರವಸೆ ಮಾತ್ರವೇ ಹೊರತು ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಸ ಹೊತ್ತು ತಂದ ನಗರಸಭೆಯ ಕಸ ಸಂಗ್ರಹ ಮತ್ತು ಸಾಗಾಣಿಕೆ ವಾಹನಗಳನ್ನು ಬಿಡದ ಕಾರಣ ರಸ್ತೆಯುದ್ದಕ್ಕೂ ಕಣ್ಣಿಗೆ ಕಾಣುವಷ್ಟು ದೂರ ಕಸ ತುಂಬಿದ ವಾಹನಗಳು ನಿಂತಿದ್ದವು.

ಸ್ಥಳಕ್ಕೆ ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ಧಾರ್ ಗಗನ ಸಿಂಧು, ನಗರಸಭೆ ಪೌರಾಯುಕ್ತೆ ಜಿ.ಅಮೃತ ಇನ್ನಿತರೆ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಸಮಸ್ಯೆ ನಿವಾರಣೆಗೆ ಆಗ್ರಹಿಸಿದರು, ಭರವಸೆಗಳು ಬೇಡ ಕಾರ್ಯಗತ ಅಗಲಿ ಎಂದು ಆಗ್ರಹಿಸಿದರು.

ಸಮಸ್ಯೆಗಳನ್ನು ಆಲಿಸಿದ ಶಾಸಕ ಬಿ.ಎನ್.ರವಿಕುಮಾರ್ ಅವರು ಅಧಿಕಾರಿಗಳ ಕೆಲ ಕಾಲ ಚರ್ಚಿಸಿ ಕೂಡಲೆ ಶಿಡ್ಲಘಟ್ಟ ಮಾತ್ರವಲ್ಲ ಜಿಲ್ಲೆಯ ಬೇರೆ ಬೇರೆ ಕಡೆಯಿಂದಲೂ ಅಗ್ನಿಶಾಮಕ ದಳದ ವಾಹನ, ಸಿಬ್ಬಂದಿಯನ್ನು ತರಿಸಿಕೊಳ್ಳಿ, ಅದಕ್ಕೆ ತಗಲುವ ವೆಚ್ಚವನ್ನು ನಗರಸಭೆಯಿಂದ ಭರಿಸಿ. ಎರಡು ದಿನಗಳಲ್ಲಿ ಬೆಂಕಿಯನ್ನು ನಂದಿಸುವ ಕೆಲಸ ಆಗಬೇಕು.

ಕೇವಲ ಮೇಲೆ ಮೇಲೆ ಬೆಂಕಿ ಆರಿಸಿದರೆ ಆಗುವುದಿಲ್ಲ. ನಾಲ್ಕು ಜೆಸಿಬಿಗಳನ್ನು ತಿರಿಸಿ ಕಸದ ರಾಶಿಯನ್ನು ಕದಲಿಸಿಕೊಂಡು ಬೆಂಕಿಯನ್ನ ನಂದಿಸಬೇಕೆಂದು ಸೂಚಿಸಿದರು.

ಇಲ್ಲಿನ ಇರುವ ಕಸವನ್ನು ಬಹಿರಂಗ ಹರಾಜು ಮೂಲಕ ಬೇಗ ವಿಲೇವಾರಿ ಮಾಡಿ. ಗ್ರಾಮಗಳು ಮತ್ತು ವಸತಿ ಪ್ರದೇಶದಿಂದ ದೂರ ಇರುವ ಜಾಗವನ್ನು ತ್ಯಾಜ್ಯ ಘಟಕಕ್ಕೆ ಗುರ್ತಿಸಿ ಎಂದು ತಹಶೀಲ್ದಾರರಿಗೆ ಸೂಚಿಸಿದರು. ನಗರದಿಂದ ಐದಾರು ಕಿಲೋ ಮೀಟರ್ ಹತ್ತಿರದಲ್ಲಿ ಜಾಗ ಗುರ್ತಿಸಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳುವಂತೆ ತಿಳಿಸಿದರು.

ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದೆರಡದು ದಿನಗಳಲ್ಲಿ ನಿಮ್ಮೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳೋಣ ಎಂದು ಅಧಿಕಾರಿಗಳಿಗೆ ಹೇಳಿದರು. ಪ್ರತಿಭಟನಾಕಾರರ ಮನವೊಲಿಸಿದರು.


ಈ ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ಸದಾಶಿವ ಅವರ ಅವಧಿಯಲ್ಲಿ ಮೂರರಿಂದ ನಾಲ್ಕು ಎಕರೆ ಜಮೀನಿನಲ್ಲಿ ವೃದ್ಧರಿಗೆ ಒಂದು ಸುಂದರವಾದ ಪಾರ್ಕ್ ನಿರ್ಮಿಸಲು ಹೇಳಿದ್ದರು. ಉಳಿದ ಮೂರು ಎಕರೆ ಜಮೀನು ಸ್ಮಶಾನಕ್ಕೆ ಮೀಸಲಿಡಲಾಗಿತ್ತು, ಉಳಿದ ಅರ್ಧ ಎಕರೆ ಇಲ್ಲಿ ಗೋಕುಂಟೆಗೆ ಮೀಸಲಿಡಲಾಗಿತ್ತು, ಆದರೆ ಈಗ ಎಲ್ಲಾ ಏಳುವರೆ ಎಕರೆ ಜಮೀನು ನಗರಸಭೆ ಕಾಂಪೌಂಡ್ ಹಾಕಿ ವಿಲೇವಾರಿ ಘಟಕ ಸ್ಥಾಪಿಸಿದ್ದಾರೆ.

ಗೋಪಾಲಗೌಡ, ಸ್ಥಳೀಯ ರೈತ ಮುಖಂಡರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!