Malamachanahalli, sidlaghatta : ವಿದ್ಯುತ್ ತಂತಿ ತಗುಲಿ ಮಹಿಳೆಯೋರ್ವಳು ಮೃತ ಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದ ಭಾಗ್ಯಮ್ಮ(55) ಮೃತ ದುರ್ದೈವಿ ಎನ್ನಲಾಗಿದೆ.
ರೇಷ್ಮೆ ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದ ಮೃತ ಭಾಗ್ಯಮ್ಮ ಎಂದಿನಂತೆ ಸೋಮವಾರ ಬೆಳಗ್ಗೆ ರೇಷ್ಮೆ ಹುಳುಗಳಿಗೆ ಹಿಪ್ಪು ನೇರಳೆ ಸೊಪ್ಪು ತರಲು ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಮೃತ ಭಾಗ್ಯಮ್ಮ ರವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆಯ ಹಿನ್ನಲೆ :
ತಮ್ಮ ಜಮೀನಿನಲ್ಲಿರುವ ವಿದ್ಯುತ್ ತಂತಿಯೊಂದು ತುಂಡಾಗಿರುವ ಬಗ್ಗೆ ಅ 15 ರಂದು ಗ್ರಾಮದ ಲೈನ್ ಮನ್ ಸಿದ್ದಪ್ಪ ಎಂಬುವವರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಭಾನುವಾರ ಸಂಜೆ ಬಂದ ಲೈನ್ ಮನ್ ಸಿದ್ದಪ್ಪ ತರಾತುರಿಯಲ್ಲಿ ರಿಪೇರಿ ಮಾಡಿ ಹೋಗಿದ್ದು, ಇದನ್ನು ಕಂಡ ಕೆಲ ಗ್ರಾಮಸ್ಥರು ವಿದ್ಯುತ್ ತಂತಿಯ ರಿಪೇರಿಯನ್ನು ಸರಿಯಾಗಿ ಮಾಡದಿರುವ ಬಗ್ಗೆ ಕೇಳಿದ್ದಾರೆ. ಇದಕ್ಕೆ ಸಿದ್ದಪ್ಪ ಮತ್ತೊಮ್ಮೆ ಕಟ್ಟಾದರೆ ನಾಳೆ ಬಂದು ಸರಿ ಮಾಡುತ್ತೇನೆ ಎಂದು ಬೇಜವಾಬ್ದಾರಿ ಉತ್ತರ ನೀಡಿರುತ್ತಾರೆ. ಎಂದಿನಂತೆ ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ತೋಟಕ್ಕೆ ಹೋದ ಭಾಗ್ಯಮ್ಮ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದು ನಮ್ಮ ತಾಯಿಯ ಸಾವಿಗೆ ಲೈನ್ ಮನ್ ಸಿದ್ದಪ್ಪ ಸೇರಿದಂತೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಹಾಗಾಗಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮೃತಳ ಪುತ್ರಿ ಅರುಣಮ್ಮ ಶಿಡ್ಲಘಟ್ಟ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.