Varadanayakanahalli, Sidlaghatta, Chikkaballapur : ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದನ್ನು ಮನೆಯಲ್ಲಿ ಮತ್ತೆ ಓದಬೇಕು ಹಾಗೂ ನೀವು ಕಲಿತ ಸಂಗತಿಗಳನ್ನು ಮನೆಯಲ್ಲಿ ಪೋಷಕರಿಗೂ ಹೇಳಬೇಕು. ಅನೇಕ ಗಣ್ಯರು ಸರ್ಕಾರಿ ಶಾಲೆಗಳಲ್ಲೇ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿತ ಮಕ್ಕಳು ಮುಂದಿನ ದಿನಗಳಲ್ಲಿ ಕೀರ್ತಿವಂತರಾಗಿ ಬೆಳೆಯಬೇಕೆಂದು ತಹಶೀಲ್ದಾರ್ ಗಗನ ಸಿಂಧು ಹೇಳಿದರು.
ತಾಲ್ಲೂಕಿನ ವರದನಾಯಕನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಕರ,ಶಿಕ್ಷಕರ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲಾ ಮಕ್ಕಳೊಂದಿಗೆ ಕುಳಿತು ಊಟ ಮಾಡಿ ಮಕ್ಕಳಿಗೆ ಶಿಕ್ಷಣ ಮಹತ್ವದ ಬಗ್ಗೆ ತಿಳಿಸಿದರು. ಪೋಷಕರಿಗೂ ಮಕ್ಕಳ ಶಿಕ್ಷಣದ ಬಗ್ಗೆ ಹಾಗೂ ಅವರು ಕಲಿಯುತ್ತಿರುವ ಶಾಲೆಯ ಬಗ್ಗೆ ಕಾಳಜಿ ವಹಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಕಸಬಾ ಹೋಬಳಿ ಆರ್.ಐ ವೇಣುಗೋಪಾಲ್, ವಿ.ಎ. ನಾಗರಾಜ್, ಶಾಲಾ ಮುಖ್ಯ ಶಿಕ್ಷಕಿ ಶಾಮಲ, ಲಕ್ಷ್ಮಿದೇವಿ, ಅಂಜಲಿ, ಶ್ರೀನಾಥ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಈ ಧರೆ ಪ್ರಕಾಶ್, ಎಸ್.ಡಿಎಂಸಿ ಅಧ್ಯಕ್ಷ ಗಂಗಾಧರ್, ಕವಿತಾ, ನಾಗರಾಜ್, ಮಹೇಶ್, ಮೂರ್ತಿ, ಅಕ್ಕಯಮ್ಮ ಹಾಜರಿದ್ದರು.
Sidlaghatta, Chikkaballapur : ಪದವಿ ಶಿಕ್ಷಣವನ್ನು ಪೂರೈಸಿದ ವಿದ್ಯಾರ್ಥಿಯು ಸರ್ಕಾರಿ ಉದ್ಯೋಗ ಸಿಗದಿದ್ದರೂ ಬದುಕನ್ನು ಕಟ್ಟಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ, ಕೌಶಲತೆ, ಜ್ಞಾನ ಹೊಂದುವ ಶಿಕ್ಷಣ ಲಭಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬಿಟ್ಟು ಪುಸ್ತಕ ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ “ಆರೋಹಣ – ವಿಜ್ಞಾನ ಮತ್ತು ಕುತೂಹಲದೊಂದಿಗೆ ಅಭ್ಯುದಯ” ಎಂಬ ಮೂರು ದಿನಗಳ ಕಾಲ ನಡೆಯಲಿರುವ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವೈಜ್ಞಾನಿಕ ಮನೋಭಾವವನ್ನು, ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಮನಸ್ಸು ಶುದ್ಧ ಬೆಣ್ಣೆಯಂತಹದ್ದು. ಜೇಡಿ ಮಣ್ಣನ್ನು ಸುಂದರ ಆಕಾರವಾಗಿ ರೂಪಿಸುವಂತೆ, ಶಿಕ್ಷಕರು ಉತ್ತಮ ವಿಚಾರ, ಸ್ವಯಂ ಅಭಿವ್ಯಕ್ತಿ, ಆಲೋಚನಾ ಕ್ರಮಗಳು, ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕು ಎಂದರು.
ಸಮಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಮಕ್ಕಳ ಮನಸ್ಸು ವಿಕಸಿತವಾಗಬೇಕು. ಪಠ್ಯದ ಜೊತೆಗೆ ವಿಜ್ಞಾನ ವಸ್ತುಪ್ರದರ್ಶನ, ಆಟೋಟಗಳು, ಕಲೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಮನಸ್ಸು ಮತ್ತು ಪ್ರತಿಭೆ ಅರಳುತ್ತದೆ. ಜೊತೆಯಲ್ಲಿ ಆ ಮಕ್ಕಳು ಮುಂದೆ ಆತ್ಮಸ್ಥೈರ್ಯದಿಂದ ಬದುಕನ್ನು ಕಟ್ಟಿಕೊಳ್ಳಲಿಕ್ಕೂ ಸಾಧ್ಯ ಎಂದು ಹೇಳಿದರು.
ವಿಜ್ಞಾನ ಮತ್ತುತಂತ್ರಜ್ಞಾನ ಅಕಾಡೆಮಿ ಸದಸ್ಯ ಹುಲಿಕಲ್ ನಟರಾಜ್ ಮಾತನಾಡಿ, ವಿಜ್ಞಾನ ಎಂಬುದು ಜ್ಞಾನವನ್ನು ಕೊಡುವ ಪ್ರಯೋಗ ಶಾಲೆ. ಈ ಶಾಲೆಯಲ್ಲಿ ಕಲಿತವರು ಎಂದಿಗೂ ಅಜ್ಞಾನದ ಹಿಂದೆಯಾಗಲೀ, ಮೌಢ್ಯತೆಯ ಹಿಂದೆಯಾಗಲೀ ಬಿದ್ದು ಸಮಾಜವನ್ನುಅಧಃಪತನಕ್ಕೆ ತಳ್ಳುವ ಕೆಲಸ ಮಾಡುವುದಿಲ್ಲ ಎಂದರು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಶಿಕ್ಷಣ ಅಂಕಗಳಿಗಿಂತ ಮೌಲ್ಯಗಳಿಂದ ನಿರ್ಧಾರವಾಗಬೇಕು. ವಿದ್ಯಾರ್ಥಿಗಳ ಬದುಕಿಗೆ ಜೀವನ ಕೌಶಲ್ಯವು ಅತೀ ಮುಖ್ಯವಾದುದು. ತರಗತಿಗಳಲ್ಲಿ ಕಲಿಯುವುದಕ್ಕಿಂತ ಪ್ರಾಯೋಗಿಕವಾಗಿ ವಸ್ತು ಪ್ರದರ್ಶನಗಳಲ್ಲಿ ಮಾದರಿಗಳನ್ನು ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳ 150 ಕ್ಕೂ ಹೆಚ್ಚು ಮಾದರಿಗಳು, ಮೊಬೈಲ್ ಪ್ಲಾನೆಟೋರಿಯಂ, ವಿದ್ಯಾರ್ಥಿಗಳ ಕುಂಚದಿಂದ ಅರಳಿರುವ ಕಲಾಕೃತಿಗಳು, ಆಯುರ್ ಹಬ್ ಎಂಬ ಆರೋಗ್ಯವಂತ ಜೀವನಕ್ಕೆ ಬಳಸಬಹುದಾದ ಸೊಪ್ಪು, ತರಕಾರಿ, ಹಣ್ಣುಗಳು ಮತ್ತು ಅವುಗಳ ಔಷಧೀಯ ಗುಣಗಳ ಪ್ರದರ್ಶನ, ಅಂಚೆ ಚೀಟಿ ಸಂಗ್ರಹಕಾರ ವಿನೋದ್ ಪುಠಾಣಿಕರ್ ಅವರು ಭಾರತೀಯ ಪ್ರಾಚೀನ ನಾಣ್ಯಗಳು, ಭಾರತ ಗಣರಾಜ್ಯದ ನಾಣ್ಯಗಳು, “ಅಂಚೆ ಚೀಟಿಯಲ್ಲಿ ಕರ್ನಾಟಕ ದರ್ಶನ” ಎಂಬ ಅಂಚೆ ಇಲಾಖೆ ಕರ್ನಾಟಕದ ಕುರಿತು ಬಿಡುಗಡೆ ಮಾಡಿರುವ ಅಂಚೆ ಚೀಟಿಗಳು, ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶೇಷ ವ್ಯಕ್ತಿಗಳ ಪರಿಚಯವುಳ್ಳವರ ವ್ಯಕ್ತಿ ಚಿತ್ರಗಳನ್ನು ಪ್ರದರ್ಶಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ನಂದೀಶ್ ಅವರಿಂದ ಪುರಾತನ ನಾಣ್ಯಗಳ ಮತ್ತು ವಿವಿಧ ದೇಶಗಳ ನೋಟುಗಳ ಮತ್ತು ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಡಾಲ್ಫಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಪ್ರಾಂಶುಪಾಲರುಗಳಾದ ಡಾ. ಸುದರ್ಶನ್, ಡಾ. ಶ್ರೀನಿವಾಸಮೂರ್ತಿ.ಎನ್, ಆರಿಫ್ ಅಹಮದ್, ಮುನಿಕೃಷ್ಣಪ್ಪ, ಮುನಿಶಾಮಪ್ಪ ಸೇರಿದಂತೆ ಎಲ್ಲಾ ಶಿಕ್ಷಕರುಗಳು, ಪೋಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
Sidlaghatta, chikkaballapur : ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ತಹಶೀಲ್ದಾರ್ ಗಗನಸಿಂಧು ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಿದ ವೀರರಾಣಿ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒರ್ವ ಕೋಟೆ ಕಾವಲುಗಾರನ ಹೆಂಡತಿಯಾಗಿ, ಕೋಟೆಗೆ ಆಪತ್ತು ಎದುರಾದಾಗ, ಸಮಯಪ್ರಜ್ಞೆಯಿಂದ ವೈರಿಗಳ ರುಂಡ ಚಂಡಾಡಿದ ವೀರ ವನಿತೆ ಓಬವ್ವ ಎಲ್ಲರಿಗೂ ಮಾದರಿಯಾಗಬೇಕು. ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಕಾಣಬೇಕು. ನಮ್ಮ ಕ್ಷೇತ್ರದ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ನಮ್ಮಊರಿನ ಕೀರ್ತಿ ಹೆಚ್ಚುತ್ತದೆ ಎಂದರು.
ಶಿಕ್ಷಕ ಜಿ.ಎಂ.ಶ್ರೀನಿವಾಸ್ ಅವರು ಒನಕೆ ಓಬವ್ವ ಕುರಿತು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಇಪ್ಪತ್ತು ಮಂದಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮುದಾಯದ ಹತ್ತು ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣ್ ರಾಜು, ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ನಿರ್ದೇಶಕ ಟಿ.ಟಿ.ನರಸಿಂಹಪ್ಪ, ಜಿಲ್ಲಾಧ್ಯಕ್ಷ ತ್ಯಾಗರಾಜ್ ಬಿ.ಛಲವಾದಿ, ತಾಲ್ಲೂಕು ಉಪಾಧ್ಯಕ್ಷ ಬಿ.ಎಂ.ಬಾಬು, ಎಚ್.ಎನ್.ಮುನಿಯಪ್ಪ, ಜೈಭೀಮ್ ಸಂಘದ ಅರಿಕೆರೆ ಮುನಿರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಸಿಡಿಪಿಒ ವಿದ್ಯಾ ವಸ್ತ್ರದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.
Sidlaghatta, chikkaballapur : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 24ರಂದು ಶಿಡ್ಲಘಟ್ಟಕ್ಕೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ಬಿ.ಎನ್. ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸೇರಿದಂತೆ ಹಲವಾರು ಅಧಿಕಾರಿಗಳು ಶಿಡ್ಲಘಟ್ಟದ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು, “ನವೆಂಬರ್ 24ರಂದು ಜಿಲ್ಲಾದ್ಯಂತ ಸುಮಾರು ₹1,800 ಕೋಟಿ ರೂಗಳ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮತ್ತು ಕಟ್ಟಡ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಉದ್ಘಾಟಿಸಲಿದ್ದಾರೆ,” ಎಂದು ಹೇಳಿದರು.
“ಶಿಡ್ಲಘಟ್ಟದ ಹೈಟೆಕ್ ರೇಷ್ಮೆ ಮಾರುಕಟ್ಟೆ, ನಗರದ ಒಳಚರಂಡಿ ಯೋಜನೆ, ರಾಮಸಮುದ್ರದಿಂದ ಕುಡಿಯುವ ನೀರಿನ ಯೋಜನೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡ ಉದ್ಘಾಟನೆ ಸೇರಿದಂತೆ ಹಲವಾರು ಪ್ರಮುಖ ಕಾಮಗಾರಿಗಳು ಪ್ರಾರಂಭ ಹಾಗೂ ಪೂರ್ಣಗೊಂಡಿವೆ. ಈ ಯೋಜನೆಗಳೆಲ್ಲವೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದವು,” ಎಂದು ವಿವರಿಸಿದರು.
ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಯಾವ ರೀತಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಚರ್ಚಿಸಿದ್ದೇವೆ. ಈಗ ಹೈಟೆಕ್ ರೇಷ್ಮೆ ಮಾರುಕಟ್ಟೆಯ ಜಾಗದಲ್ಲಿ ವೇದಿಕೆಗೆ ಸಿದ್ಧತೆ ಮಾಡಿಕೊಳ್ಳಲು ಸ್ಥಳ ಪರಿಶೀಲನೆ ಮಾಡಲು ನಾನು, ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ರವಿಕುಮಾರ್ ಇಲ್ಲಿಗೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎನ್. ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಟ್, ತಹಶೀಲ್ದಾರ್ ಎನ್. ಗಗನ ಸಿಂಧು, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಪೌರಾಯುಕ್ತೆ ಜಿ. ಅಮೃತ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಹಾಗೂ ತಾದೂರು ರಘು ಉಪಸ್ಥಿತರಿದ್ದರು.
Sidlaghatta, Chikkaballapur : ಈ ದಿನ ಶಿಡ್ಲಘಟ್ಟದಲ್ಲಿ ನಡೆದ ಓಟ್ ಚೋರ್ ಗದ್ದಿ ಛೋಡ್ ಕಾರ್ಯಕ್ರಮದಲ್ಲಿ ಪಕ್ಷದ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಐ.ಎನ್.ಟಿ.ಯು.ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಅವರು ಸೋಮವಾರ ಶಿಡ್ಲಘಟ್ಟ ನಗರದಲ್ಲಿ ಓಟ್ ಚೋರ್ ಗದ್ದಿ ಛೋಡ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದಕ್ಕೆ ಪಕ್ಷದ ಬೆಂಬಲವಿಲ್ಲ. ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಇತರೆ ಪದಾಧಿಕಾರಿಗಳ ಗಮನಕ್ಕೆ ತರದೇ ಕಾರ್ಯಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದರು.
ಜತೆಗೆ ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಗಿದ್ದ ಮತ್ತು ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ಬಳಸಿಕೊಂಡು ಅವರನ್ನು ಮುಂದಿಟ್ಟುಕೊಂಡು ಪಕ್ಷದ ಮೇಲೆ ಹಿಡಿತ ಸಾಧಿಸಲು ಕೆಲವರು ಹುನ್ನಾರ ನಡೆಸಿದ್ದು ಅದು ಎಂದಿಗೂ ಸಾಧ್ಯವಿಲ್ಲ ಎಂದು ಪುಟ್ಟು ಆಂಜಿನಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದಿಂದ ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಸಂಘಟನೆ ಮಾಡಬೇಕಾದರೆ ಪಕ್ಷದ ನೀತಿ ನಿಯಮಗಳನ್ನ ಪಾಲಿಸಬೇಕು, ಬ್ಲಾಕ್ ಕಾಂಗ್ರೆಸ್ ಹಾಗೂ ವಿವಿಧ ಮುಂಚೂಣಿ ಘಟಕಗಳನ್ನು ವಿಶ್ವಾಶಕ್ಕೆ ತೆಗೆದುಕೊಂಡು ಕಾರ್ಯಕ್ರಮ ರೂಪಿಸಬೇಕು.
ಆದರೆ ಪುಟ್ಟು ಆಂಜಿನಪ್ಪ ಅವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಕೆಲ ಬೆಂಬಲಿಗರನ್ನು ಹಿಂದೆ ಇಟ್ಟುಕೊಂಡು ಓಟ್ ಚೋರ್ ಗದ್ದಿ ಛೋಡ್ ಮಾಡಿದ್ದು ಇದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲಿದೆ.
ಇದೇ ತಿಂಗಳ 16ನೇ ತಾರೀಖು ಅಧಿಕೃತವಾಗಿ ಪಕ್ಷದಿಂದ ಓಟ್ ಚೋರ್ ಗದ್ದಿ ಛೋಡ್ ಕಾರ್ಯಕ್ರಮವನ್ನು ರೂಪಿಸಲಿದ್ದು ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು, ಜಿಲ್ಲಾ ಮತ್ತು ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
Sidlghatta, chikkaballapur : ಶಿಡ್ಲಘಟ್ಟ ನಗರದಲ್ಲಿ ಸೋಮವಾರ ಬಿಜೆಪಿ ಸರ್ಕಾರವು ಮತಗಳ್ಳತನ ನಡೆಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಪಕ್ಷವು “ವೋಟ್ ಚೋರ್, ಗದ್ದಿ ಛೋಡ್” ಸಹಿ ಸಂಗ್ರಹ ಅಭಿಯಾನವನ್ನು ಭಾರಿ ಉತ್ಸಾಹದಿಂದ ಪ್ರಾರಂಭಿಸಿತು. ಈ ಅಭಿಯಾನಕ್ಕೆ ಮಾಜಿ ಶಾಸಕ ವಿ. ಮುನಿಯಪ್ಪ ಚಾಲನೆ ನೀಡಿದರು.
ನಗರದ ಬಸ್ ನಿಲ್ದಾಣದಿಂದ ಕಾಂಗ್ರೆಸ್ ಕಚೇರಿಯವರೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತಗಳ್ಳತನ ವಿರೋಧಿಸಿ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದರು. “ವೋಟ್ ಚೋರ್ ಗದ್ದಿ ಛೋಡ್”, “ಪ್ರಜಾಪ್ರಭುತ್ವ ಉಳಿಸಿ” ಎಂಬ ಘೋಷಣೆಗಳೊಂದಿಗೆ ನಗರ ಬೀದಿಗಳು ಮೊಳಗಿದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, “ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಅಪಾಯದಲ್ಲಿದೆ. ಚುನಾವಣಾ ಆಯೋಗದ ಸಹಕಾರದಿಂದ ಬಿಜೆಪಿ ಸರ್ಕಾರ ಮತಗಳ್ಳತನ ಮಾಡುತ್ತಿದೆ ಎಂಬುದು ಜನರ ಮುಂದೆ ಬರುತ್ತಿದೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಯ,” ಎಂದು ಹೇಳಿದರು.
ಅವರು ಮುಂದುವರಿದು, “ಮತಗಳ್ಳತನದ ವಿರುದ್ಧ ಜಾಗೃತಿ ಮೂಡಿಸಲು ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಈ ಚಳುವಳಿಯನ್ನು ಆರಂಭಿಸಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಇಲ್ಲವಾದರೆ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕುತ್ತದೆ,” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಬೇರ ಅಚ್ಚು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಬ್ರಮಣಿ, ಪುಟ್ಟು ಆಂಜಿನಪ್ಪ, ಗ್ರಾಮಪಂಚಾಯಿತಿ ಸದಸ್ಯೆ ಬೆಳ್ಳೂಟಿ ವರಲಕ್ಷ್ಮಿ ಸಂತೋಷ್, ಗುಡಿಹಳ್ಳಿ ಚಂದ್ರಶೇಖರ್, ಕ್ಯಾತಪ್ಪ, ಗೌಡನಹಳ್ಳಿ ಮಂಜುನಾಥ್, ರಾಜಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಚಂದ್ರ ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
Malamachanahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿಯನ್ನು ಅದ್ದೂರಿಯಾಗಿ, ಗ್ರಾಮಸ್ಥರೆಲ್ಲರೂ ಒಗ್ಗೂಡಿ ಸಂಭ್ರಮದಿಂದ ಆಚರಿಸಿದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. ಬಳಿಕ ಗ್ರಾಮದ ಶಿವಪಾರ್ವತಿ ಬ್ಯಾಟರಾಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ಬೆಳ್ಳಿರಥಕ್ಕೆ ಪೂಜೆ ಸಲ್ಲಿಸಿ ಭಕ್ತಿಯಿಂದ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಯುವ ಮುಖಂಡ ರವಿ ಬಿ. ಗೌಡ ಮಾತನಾಡಿ, “ಉಡುಪಿ ಶ್ರೀಕೃಷ್ಣ ಪರಮಾತ್ಮನ ಕೃಪೆಗೆ ಪಾತ್ರರಾದ ಕನಕದಾಸರು, ತಮ್ಮ ಕೀರ್ತನೆಗಳ ಮೂಲಕ ಜನಜೀವನಕ್ಕೆ ಧಾರ್ಮಿಕತೆ, ಸತ್ಯ ಮತ್ತು ಸಹಿಷ್ಣುತೆಯ ಸಂದೇಶ ನೀಡಿದರು,” ಎಂದರು.
ಜೆಡಿಎಸ್ ಯುವ ಮುಖಂಡ ಎಂ.ಜಿ. ನವೀನ್ ಕುಮಾರ್ ಮಾತನಾಡಿ, “ಕನಕದಾಸರ ಕೀರ್ತನೆಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಸಂದೇಶಗಳು ಇಡೀ ಮಾನವಕೊಳಗೆ ಅನ್ವಯಿಸುತ್ತವೆ. ಈ ಕೀರ್ತನೆಗಳು ಹೊಸ ತಲೆಮಾರಿಗೆ ತಲುಪುವಂತೆ ನಾವು ಪ್ರಯತ್ನಿಸಬೇಕು,” ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ರಾಜಶೇಖರ್ “ಗ್ರಾಮಸ್ಥರೆಲ್ಲರೂ ಒಂದಾಗಿ ಕನಕದಾಸರ ಜಯಂತಿಯನ್ನು ಆಚರಿಸಿರುವುದು ಸಂತೋಷದ ವಿಚಾರ. ಇದು ಸಾಮಾಜಿಕ ಏಕತೆಯ ನಿಜವಾದ ನಿದರ್ಶನ,” ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ “ದಾಸಶ್ರೇಷ್ಠ ಕನಕದಾಸರು ಹಾಡಿದ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ. ಅವರ ಆಶೀರ್ವಾದದಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ಇರಲಿ,” ಎಂದು ಪ್ರಾರ್ಥಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಮುನಿರಾಜು ಕನಕದಾಸರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಜಂಗಮ ಕೋಟೆ ಹೋಬಳಿಯಿಂದ ಸುಮಾರು ಹತ್ತುಕ್ಕೂ ಹೆಚ್ಚು ಕನಕದಾಸರ ಬೆಳ್ಳಿರಥಗಳು ಮೆರವಣಿಗೆ ನಡೆಸಿದವು. ಹಬ್ಬದ ಸಡಗರದ ಮಧ್ಯೆ ಅಂಗನವಾಡಿ, ಸರ್ಕಾರಿ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಬಿ.ಎನ್. ಕೃಷ್ಣಯ್ಯ, ರಾಮಯ್ಯ, ನಲ್ಲೂರಪ್ಪ, ನಾರಾಯಣಸ್ವಾಮಿ, ತಿಮ್ಮೇಗೌಡ, ಮುಖ್ಯ ಶಿಕ್ಷಕಿ ಅಹಲ್ಯಾ ಮೇಡಂ, ಶಿಕ್ಷಕರು, ಗ್ರಾಮಸ್ಥರು ಹಾಗೂ ಸಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.