ನಗರದ ಬಸ್ ನಿಲ್ದಾಣದ ಬಳಿ ಶುಕ್ರವಾರ ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸಲು ಪರಿವರ್ತನಾ ಕಲಾ ಸಂಸ್ಥೆಯ ಮೂಲಕ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ನಿಮ್ಮ ಮನೆ ಅಥವಾ ಅಂಗಡಿಗಳ ತ್ಯಾಜ್ಯವನ್ನು ರಸ್ತೆಯಲ್ಲಿ ಸುರಿಯಬಾರದು ಎಂದು ಅವರು ತಿಳಿಸಿದರು.
ನಗರ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರ ವಾಗಿದ್ದು, ಅವರ ಸೇವೆಯನ್ನಿಲ್ಲಿ ಸ್ಮರಿಸಲಾಗಿದೆ. ಜೊತೆಗೆ ಜನರು ಯಾವ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಕಸದ ವಾಹನ ಬಂದಾಗ ಮನೆಯ ಕಸವನ್ನು ಯಾವ ರೀತಿಯಲ್ಲಿ ವಿಂಗಡಿಸಿ ನೀಡಬೇಕು, ಎಂಬುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ತ್ಯಜಿಸುವುದು, ನೈರ್ಮಲ ಜಾಗೃತಿ ಮೂಡಿಸುವುದರ ಕುರಿತು ನಾಟಕದ ಮೂಲಕ ಹೇಳಲಾಗುತ್ತಿದೆ ಎಂದರು.
ನಾಗರಿಕರು ಮನೆಯಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು. ರಸ್ತೆಯಲ್ಲಿ ಕಸಕಡ್ಡಿ ಅಥವಾ ತ್ಯಾಜ್ಯವನ್ನು ಸುರಿದರೆ ಅದನ್ನು ಮನೆಯ ಮುಂದೆ ಅಥವಾ ಅಂಗಡಿಯ ಮುಂದೆ ಡಂಪ್ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕಿ ಶೋಭಾ, ನೀರು ಸರಬರಾಜು ವಿಭಾಗದ ಮುರಳಿ ಹಾಜರಿದ್ದರು.
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಮಾತನಾಡಿದರು.
ವಿಜ್ಞಾನ ಕಲಿಕೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ವಿಜ್ಞಾನ ಬೋಧನೆ ಮಾಡುವ ಶಿಕ್ಷಕರು ಮಾಡಬೇಕು. ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ವಿಜ್ಞಾನ ಕಷ್ಟ ಎಂಬ ಭಾವನೆ ಇದ್ದು, ಇದನ್ನು ಆಕರ್ಷಕವಾಗಿ ಬೋಧನೆ ಮಾಡಿದಲ್ಲಿ ಓದುಗರ ಸಂಖ್ಯೆ ಹೆಚ್ಚುತ್ತದೆ. ದೇಶದ ಬೆಳವಣಿಗೆಯಲ್ಲಿ ವಿಜ್ಞಾನದ ಪಾತ್ರ ಅತ್ಯಂತ ಮಹತ್ವವಾದುದು. ಹೀಗಾಗಿ ವಿಜ್ಞಾನದ ವಿಷಯ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಸಿ.ಆರ್.ಪಿ ವೀಣಾ ಮಾತನಾಡಿ, ಶಿಕ್ಷಕರ ಮಾರ್ಗದರ್ಶನಲ್ಲಿ ಶಾಲೆಗಳಲ್ಲಿ ತಯಾರಿಸುವ ವಿಜ್ಞಾನ ವಸ್ತು ಮಾದರಿಗಳಿಂದ ವಿನೋದದ ಮೂಲಕವೇ ವಿಜ್ಞಾನದ ಕಡೆಗೆ ಮಕ್ಕಳ ಜ್ಞಾನವು ವೃದ್ಧಿಸುತ್ತದೆ. ಮಾನವ ಕುಲದ ಅಭಿವೃದ್ಧಿಗಾಗಿ ಹಾಗೂ ಶಾಂತಿಗಾಗಿ ಶ್ರಮಿಸುತ್ತಿರುವ ವಿಶ್ವದ ಎಲ್ಲಾ ವಿಜ್ಞಾನಿಗಳಿಗೆ ನಾವು ಅಭಿನಂದನೆ ತಿಳಿಸಬೇಕು. ವಿಜ್ಞಾನದ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಹೆಚ್ಚಿಸಬೇಕಿದೆ. ಇದಕ್ಕಾಗಿ ವಿಜ್ಞಾನ ಪ್ರದರ್ಶಗಳು ಬಹಳ ಸಹಕಾರಿಯಾಗಿವೆ ಎಂದು ಹೇಳಿದರು.
ಮುಖ್ಯಶಿಕ್ಷಕ ಚೌಡರೆಡ್ಡಿ, ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕ ಶ್ರೀಧರ್, ವಿಜ್ಞಾನ ಶಿಕ್ಷಕಿ ಶಿಲ್ಪಕಲಾ ತೀರ್ಪುಗಾರರಾಗಿದ್ದರು. ಪ್ರಥಮ ಬಹುಮಾನವನ್ನು ಜಯಸಿಂಹನ ಜೆಸಿಬಿ ಮಾಡೆಲ್ ಗೆ , ಎರಡನೆಯ ಬಹುಮಾನವನ್ನು ಐಶ್ವರ್ಯಳ ಸೌರ ಮಂಡಲ ಮಾದರಿಗೆ, ಮೂರನೇ ಬಹುಮಾನವನ್ನು ಜೀವಂತ ಮತ್ತು ಸಂದೀಪನಿಗೆ ನೀಡಿದರು.
ತಾಲ್ಲೂಕಿನ ಕೊತ್ತನೂರು ಕೆರೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೆರೆ ಸಂಜೀವಿನಿ ಕಾರ್ಯಕ್ರಮದ ಅಡಿಯಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ನಮ್ಮ ಭಾಗದಲ್ಲಿ ನದಿ ನಾಲೆಗಳಿರದ ಕಾರಣ ನಾವುಗಳು ಹಿಂದಿನಿಂದಲೂ ನಂಬಿರುವುದು ಆಗಸದಿಂದ ಬೀಳುವ ಮಳೆಯನ್ನು. ಅದನ್ನು ಹಿಡಿದಿಡಲೆಂದೇ ಹಿಂದಿನವರು ಕೆರೆಗಳನ್ನು ಕಟ್ಟಿಸಿದ್ದಾರೆ. ಅವುಗಳನ್ನು ಉಳಿಸಿಕೊಂಡು, ಮಳೆ ನೀರು ಹಿಡಿದಿಟ್ಟುಕೊಳ್ಳಲು ಅನುವು ಮಾಡಿಕೊಡಲು ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ರುಪಿಸಿರುವುದು ತುಂಬಾ ಉಪಯುಕ್ತಕರ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೆರೆಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದು ಕೃಷಿ ಕ್ಷೇತ್ರಕ್ಕೆ ಅಲ್ಲದೆ ಕುಡಿಯುವ ನೀರಿಗೂ ತೀವ್ರ ಅಭಾವವಾಗಿದೆ. ಇಂತಹ ಸಮಯದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಕೆರೆಗಳಲ್ಲಿ ಹೂಳೆತ್ತುವ ಯೋಜನೆ ವರದಾನವಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಅಂತರ್ಜಲಮಟ್ಟ ಹೆಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯಿಂದ ಕೇವಲ ಸಾಮಾಜಿಕ ಕಾರ್ಯಕ್ರಮಗಳು ಅಲ್ಲದೆ ಮಹಿಳೆಯರಿಗೆ ತರಬೇತಿ ನೀಡಿ ಧನ ಸಹಾಯವನ್ನು ನೀಡುವುದರಿಂದ ಮಹಿಳೆಯರು ಸ್ವಾವಲಂಭಿಗಳಾಗಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. ಹಳೆಯ ದೇವಾಲಯಗಳ ಜೀರ್ಣೋದ್ದಾರ ಮತ್ತು ಅವಿದ್ಯಾವಂತರಿಗೆ ಶಿಕ್ಷಣ ನೀಡುವ ಅಂಗವಿಕಲರಿಗೆ ವೃದ್ದರಿಗೆ ಹಾಗೂ ವಿಧವೆಯರಿಗೆ ಮಾಶಾಸನ ಮುಂತಾದ ಸಾಮಾಜಿಕ ಕಾರ್ಯಗಳನ್ನು ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ಸಂಸ್ಥೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ಯೋಜನಾ ನಿರ್ದೇಶಕ ಬಿ.ವಸಂತ್ ಮಾತನಾಡಿ, ಕಳೆದ 4 ವರ್ಷಗಳಿಂದ ಕೆರೆಗಳ ಪುನಶ್ಚೇತನ ಕಾರ್ಯಕ್ರಮ ನಡೆಯುತಿದೆ. ಕಳೆದ ಮಳೆಗಾಲದಲ್ಲಿ ಪುನಶ್ಚೇತನಗೊಂಡ ಎಲ್ಲ ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳೂ ಮರುಜೀವ ಪಡೆದುಕೊಂಡಿವೆ. ರೈತರು ಕೃಷಿ ಕಾರ್ಯ ಪ್ರಾರಂಭಿಸಿದ್ದಾರೆ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ. ಕೊತ್ತನೂರು ಕೆರೆಯ ಪುನಶ್ಚೇತನದಿಂದ ಈ ಭಾಗದ ಜನ ಜಾನುವಾರುಗಳಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದರು.
ತಹಶೀಲ್ದಾರ್ ಬಿ.ಎಸ್. ರಾಜೀವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಪಿಡಿಒ ಅಶ್ವತ್ಥಪ್ಪ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಸುರೇಶ್, ವೆಂಕಟಸ್ವಾಮಿರಡ್ಡಿ, ಸುಭ್ರಮಣಿ, ಕೆರೆ ಸಮಿತಿ ಅಧ್ಯಕ್ಷ ಪಂಚಾಕ್ಷರಿ ರೆಡ್ಡಿ, ಪ್ರಾದೇಶಿಕ ನಿರ್ದೇಶಕ ಸೀನಪ್ಪ, ದೇವರಾಜು, ಚಂದ್ರಪ್ಪ, ದೇವರಾಜು, ಜ್ಞಾನೇಶ್ ಹಾಜರಿದ್ದರು.
ಶಿಡ್ಲಘಟ್ಟದ ಆರ್.ಆರ್ಯ ರುಶೀಲ್ ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ನಡೆದ ವಿಶ್ವದಾಖಲೆಯ ಅತಿದೊಡ್ಡ ಫ್ರೀಸ್ಟೈಲ್ ಸ್ಕೇಟಿಂಗ್ ಈವೆಂಟ್ ನಲ್ಲಿ ಭಾಗವಹಿಸಿದ್ದು, ಇದೀಗ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಮಾಣಪತ್ರ ಮತ್ತು ಮೆಡಲ್ ಪಡೆದುಕೊಂಡಿದ್ದಾನೆ. ಶಿಕ್ಷಕ ಅರುಣ್ ಕುಮಾರ್ ಇದ್ದಾರೆ.
ತಾಲ್ಲೂಕಿನ ಹೇಮಾರ್ಲಹಳ್ಳಿ ಗ್ರಾಮದಲ್ಲಿ 14ನೇ ಶತಮಾನಕ್ಕೆ (ಕ್ರಿ.ಶ. 1407) ಸೇರಿದ ವಿಜಯನಗರದ ಅರಸ ಒಂದನೇ ದೇವರಾಯನ ಶಾಸನ ಪತ್ತೆಯಾಗಿದೆ. ಕಳೆದ ತಿಂಗಳು ಇತಿಹಾಸ ಆಸಕ್ತರಾದ ಶಶಿಧರ್ ಮತ್ತು ಸುದರ್ಶನ್ ರೆಡ್ಡಿಯವರು ನಡೆಸಿದ್ದ ಪ್ರಾಥಮಿಕ ತನಿಖೆಯಿಂದ ಇದು ವಿಜಯನಗರದ ಕಾಲಕ್ಕೆ ಸೇರಬಹುದಾದ ಶಾಸನ ಎಂದು ತಿಳಿದುಬಂದಿತ್ತು. ಅದರಂತೆ ಶಾಸನ ತಜ್ಞ ಕೆ. ನರಸಿಂಹನ್ ಮತ್ತು ಇತಿಹಾಸ ಸಂಶೋಧಕ ಯುವರಾಜ್ ಸ್ಥಳಕ್ಕೆ ಭೇಟಿ ನೀಡಿ ಶಾಸನವನ್ನು ಓದಿದ್ದಾರೆ.
ಈ ಸಂದರ್ಭದಲ್ಲಿ ಅವರು ಅಪರೂಪದ ಚಾರಿತ್ರಿಕ ದಾಖಲೆಗಳನ್ನು ಹೊಂದಿರುವ ಶಾಸನದ ಕಲ್ಲುಗಳನ್ನು ಗ್ರಾಮಸ್ಥರು ಸಂರಕ್ಷಿಸಬೇಕು. ಈ ಶಾಸನದ ಅರ್ಥವನ್ನು ವಿವರಿಸುವ ಫಲಕವನ್ನು ಸಿದ್ಧಮಾಡಿಕೊಡುತ್ತೇವೆ. ಇದರಿಂದ ಮುಂದಿನ ಪೀಳಿಗೆಯವರಿಗೆ ಮತ್ತು ಇತಿಹಾಸ ಆಸಕ್ತರಿಗೆ ನೆರವಾಗುತ್ತದೆ” ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
“ಈ ಶಾಸನ ರಸ್ತೆ ಕಾಮಗಾರಿ ವೇಳೆ ತುಂಡಾಗಿದ್ದು, ಎರಡು ಚೂರುಗಳು ಸಿಕ್ಕಿಲ್ಲ. ಆದರೆ ಲಭ್ಯವಿದ್ದ ಪಾಠದ ಮೇರೆಗೆ ಇದು ಒಂದನೇ ದೇವರಾಯನ ಸಾಮಂತನಾಗಿದ್ದ ಸೊಣ್ಣಯನಾಯಕನ ಮಗ ಅಂಕಯನಾಯಕ (ಈತನ ಹೆಸರು ಇರಬೇಕಾದ ಭಾಗ ತುಂಡಾಗಿದೆ. ಸಮಕಾಲೀನ ಶಾಸನಗಳ ಆಧಾರದ ಮೇಲೆ ಅಂಕಯನಾಯಕ ಎಂದು ಭಾವಿಸಲಾಗಿದೆ) ಅಚಪ್ಪನಹಳ್ಳಿಯ ಕೆರೆಯ ಕೆಳಗಿನ ಗದ್ದೆಭೂಮಿಯನ್ನು ವಿವಿಧ ಗೋತ್ರದ ಬ್ರಾಹ್ಮಣರಿಗೆ ದಾನವಾಗಿ ನೀಡಿದ ವಿವರಗಳಿವೆ. ಈ ದಾನವನ್ನು ದುರುಪಯೋಗ ಮಾಡಿಕೊಂಡವರಿಗೆ ಉಗ್ರವಾದ ಶಾಪ ತಟ್ಟುತ್ತದೆಯೆಂಬ ಶಾಪಾಶಯದ ಶ್ಲೋಕವಿದೆ. ಹೇಮಾರ್ಲಹಳ್ಳಿಯ ಇತಿಹಾಸ ಆಸಕ್ತರಾದ ಮನೋಹರ್, ಪ್ರವೀಣ್ ಕುಮಾರ್, ಅನಿಲ್ ಮತ್ತು ಮುನಿರಾಜ (ಪುಟ್ಟಣ್ಣ) ಅವರು ಶಾಸನದ ರಕ್ಷಣೆ ಮತ್ತು ಓದುವುದಕ್ಕೆ ಸಹಕಾರ ನೀಡಿದ್ದಾರೆ” ಎಂದು ಶಾಸನ ತಜ್ಞ ಕೆ. ನರಸಿಂಹನ್ ತಿಳಿಸಿದರು.
ನಗರದ ಬೆಸ್ಕಾಂ ಇಲಾಖೆಯ ಕಚೇರಿಯ ಮುಂದೆ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿದರು.
ಬೆಸ್ಕಾಂ ಇಲಾಖೆಯ ಬೇಜವಾಬ್ದಾರಿತನದಿಂದಾಗಿ ವೋಲ್ಟೇಜ್ ವ್ಯತ್ಯಯದಿಂದ ಹಲವು ರೈತರ ಕೊಳವೆಬಾವಿಗಳ ಮೋಟರ್ ಪಂಪ್ ಸುಟ್ಟುಹೋಗಿವೆ. ರೈತರ ಬೆಳೆ ನಷ್ಟ ಹಾಗೂ ಮೋಟರ್ ಪಂಪ್ ರಿಪೇರಿ ಖರ್ಚನ್ನು ಬೆಸ್ಕಾಂ ಇಲಾಖೆಯ ಅಧಿಕಾರಿಗಳೇ ಭರಿಸಬೇಕು ಮತ್ತು ವೋಲ್ಟೇಜ್ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕಳೆದ ಇಪ್ಪತ್ತು ದಿನಗಳ ಹಿಂದೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಬಂದು ವೋಲ್ಟೇಜ್ ವ್ಯತ್ಯಯದಿಂದ ಮೋಟರ್ ಪಂಪ್ ಸುಟ್ಟುಹೋಗುತ್ತಿರುವ ಬಗ್ಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೆವು. ನಾಲ್ಕು ದಿನಗಳ ಕಾಲಾವಕಾಶ ಕೊಡಿ ಸರಿಪಡಿಸುತ್ತೇವೆ ಎಂದಿದ್ದರು. ಆದರೆ ಇಪತ್ತು ದಿನಗಳು ಕಳೆದವು ಹಾಗೆಯೇ ಹಲವಾರು ಮೋಟರ್ ಪಂಪ್ ಗಳು ಸುಟ್ಟುಹೋದವು. ಹಾಗೆಯೇ ನೀರಿಲ್ಲದೆ ರೈತರು ಅಪಾರ ನಷ್ಟ ಸಹ ಅನುಭವಿಸುವಂತಾಯಿತು. ಶೆಟ್ಟಹಳ್ಳಿ, ಕೋಟಹಳ್ಳಿ, ಮಲ್ಲಹಳ್ಳಿ ಭಾಗದ ರೈತರು ಸುಟ್ಟು ಹೋದ ಸುಮಾರು ಇಪ್ಪತ್ತು ಮೋಟರ್ ಪಂಪ್ ಗಳನ್ನು ಹೊತ್ತು ತಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಹೊಣೆಗಾರರಾದ ಅಧಿಕಾರಿಗಳು ನಷ್ಟ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಬೆಸ್ಕಾಂ ಇಲಾಖೆಯ ಎಒಒ ಪ್ರಭು ಮಾತನಾಡಿ, ನಾಳೆಯೇ ವೋಲ್ಟೇಜ್ ವ್ಯತ್ಯಯ ಆಗುವುದನ್ನು ಸರಿಪಡಿಸುತ್ತೇವೆ. ನಷ್ಟ ಪರಿಹಾರ ಕೊಡಲು ನಮಗೆ ಅಧಿಕಾರವಿಲ್ಲ. ನೀವು ಆಗಿರುವ ನಷ್ಟದ ಬಗ್ಗೆ ಪತ್ರವನ್ನು ನೀಡಿದರೆ ನಾವು ಮೇಲಧಿಕಾರಿಗಳಿಗೆ ಕಳುಹಿಸಿ ಪರಿಹಾರ ಸಿಗಲು ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.
ಬೆಸ್ಕಾಂ ಇಲಾಖೆಯ ಜೆ ಇ ವಿಜಯಕುಮಾರ್, ಡಿ.ಎನ್.ಶ್ರೀನಿವಾಸ್, ಪಿ.ಎನ್.ಶ್ರೀನಿವಾಸ್, ಶ್ರೀಧರ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರಾದ ಮುನಿನಂಜಪ್ಪ, ರಾಮಚಂದ್ರಪ್ಪ, ರಮೇಶ್, ಕೆಂಪಣ್ಣ, ಬಸವರಾಜು, ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ಮಂಜುನಾಥ್, ಶೆಟ್ಟಹಳ್ಳಿ, ಕೋಟಹಳ್ಳಿ, ಮಲ್ಲಹಳ್ಳಿ ಭಾಗದ ನಷ್ಟಕ್ಕೊಳಗಾದ ರೈತರಾದ ಬಚ್ಚೇಗೌಡ, ಈಶ್ವರ್, ಗೌಡ ಹಾಜರಿದ್ದರು.
ಶಿಡ್ಲಘಟ್ಟ ನಗರದ ಹೊರವಲಯದ ಹನುಮಂತಪುರ ಗ್ರಾಮದಲ್ಲಿ 8 ಕುರಿಗಳು ಸೋಮವಾರ ರಾತ್ರಿ ಯಾವುದೋ ಪ್ರಾಣಿಯ ಧಾಳಿಯಿಂದ ಮೃತಪಟ್ಟಿದ್ದು, ತೋಳವಿರಬಹುದು ಎಂದು ಕುರಿಗಳ ಮಾಲೀಕ ಹನುಮಂತಪುರದ ರಾಜು ಅಂದಾಜಿಸಿದ್ದಾರೆ.
ಆದರೆ ನಮ್ಮ ಭಾಗದಲ್ಲಿ ತೋಳಗಳು ಇಲ್ಲ. ಬಿಜಿಎಸ್ ವಿದ್ಯಾಸಂಸ್ಥೆಯ ಹತ್ತಿರದ ನೀಲಗಿರಿ ತೋಪಿನಲ್ಲಿ ಕಸಾಯಿಖಾನೆಯ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ಅವನ್ನು ತಿಂದುಕೊಂಡು ಹಲವು ನಾಯಿಗಳು ಚೆನ್ನಾಗಿ ಬಲಿತುಕೊಂಡಿವೆ. ಅವುಗಳು ಬಹುಶಃ ಬಂದು ಧಾಳಿ ನಡೆಸಿರಬಹುದೆಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಿದ್ದಾರೆ.
ಸ್ಥಳಕ್ಕೆ ಕಸಬಾ ರಾಜಸ್ವ ನಿರೀಕ್ಷಕ ಪ್ರಶಾಂತ್, ಗ್ರಾಮಲೆಕ್ಕಿಗ ನಾಗರಾಜ್, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಂಚಣಿ ಮಾಡಿಸಿಕೊಡುತ್ತೇನೆಂದು ಹೇಳಿ ಒಬ್ಬಂಟಿ ವೃದ್ಧೆಯ ಬಳಿಯಿದ್ದ ಸುಮಾರು 80 ಗ್ರಾಮ್ ಚಿನ್ನ ಮತ್ತು 25 ಸಾವಿರ ರೂ ಹಣವನ್ನು ದೋಚಿರುವ ಘಟನೆ ನಗರದ ದೇಶದಪೇಟೆಯಲ್ಲಿ ನಡೆದಿದೆ.
ದೇಶದಪೇಟೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಗೌರಮ್ಮ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಸರ್ಕಾರದಿಂದ ಪ್ರತಿತಿಂಗಳು ಹಣ ಬರುವ ಪಿಂಚಣಿಯನ್ನು ಉಚಿತವಾಗಿ ಮಾಡಿಸಿಕೊಡುತ್ತೇನೆಂದು ಹೇಳಿದ್ದಾನೆ. ಒಡವೆಗಳನ್ನೆಲ್ಲಾ ಬಿಚ್ಚಿಡಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಪ್ರಮಾಣಪತ್ರ ಪಡೆಯಬೇಕು ಎಂದು ಹೇಳಿ ಕರೆದೊಯ್ದಿದ್ದಾನೆ. ಅವರ ಜೊತೆಗೆ ಪಕ್ಕದ ಮನೆ ಮಹಿಳೆಯೂ ಜೊತೆಯಲ್ಲಿ ಹೋಗಿದ್ದಾರೆ. ಆಸ್ಪತ್ರೆಯ ಬಳಿ ಹೋದಾಗ ರೇಷನ್ ಕಾರ್ಡ್ ಮತ್ತಿತರ ದಾಖಲೆಗಳು ಬೇಕೆಂದು ಹೇಳಿದ್ದಾನೆ. ವೃದ್ಧೆ ಗೌರಮ್ಮ ಪಕ್ಕದ ಮನೆ ಮಹಿಳೆಗೆ ಬೀಗದ ಕೈ ಕೊಟ್ಟು, ತಾನಿಲ್ಲೇ ಇರುವೆ ಹೋಗಿ ತನ್ನಿ ಎಂದಿದ್ದಾರೆ. ಅವರ ಮನೆಗೆ ಹೋದಾಗ ಆ ಅಪರಿಚಿತ ವ್ಯಕ್ತಿ ಪಕ್ಕದ ಮನೆ ಮಹಿಳೆಯನ್ನು ಆಕೆಯ ದಾಖಲಾತಿಗಳನ್ನು ತರಲು ಹೇಳಿ ಗೌರಮ್ಮ ಅವರ ಮನೆಯಲ್ಲಿ ಒಡವೆಗಳನ್ನುಮತ್ತು ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಗೌರಮ್ಮ ತಿಳಿಸಿದ್ದಾರೆ.
ಮರುಕಳಿಸಿದ ಘಟನೆ : ಇದೇ ರೀತಿಯಾಗಿ ಕೆಲ ದಿನಗಳ ಹಿಂದೆ ಶಿಡ್ಲಘಟ್ಟದ ಮುತ್ತೂರು ಬೀದಿಯಲ್ಲಿರುವ ವೃದ್ಧೆಯೊಬ್ಬರನ್ನು ಮೋಸಗೊಳಿಸಿ ಹಣ ಮತ್ತು ಒಡವೆಯನ್ನು ದೋಚಲಾಗಿತ್ತು.
ಒಬ್ಬಂಟಿ ವೃದ್ಧರನ್ನು ಮೋಸಗೊಳಿಸಿ ಹಣ ದೋಚುವ ಜಾಲವನ್ನು ಪೊಲೀಸರು ಭೇದಿಸಬೇಕು. ಕಳ್ಳರನ್ನು ಬಂಧಿಸಬೇಕು. ಹಲವೆಡೆ ರಾತ್ರಿ ವೇಳೆ ಯುವಕರು ವೀಲಿಂಗ್ ಮಾಡುತ್ತಾ ಕಿರುಚಾಡುವುದಕ್ಕೆ ಕಡಿವಾಣ ಹಾಕಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ ಒದಗಿಸುವ ಮೂರನೇ ಹಂತದ ಅಭಿಯಾನವನ್ನು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಪ್ರಾರಂಭಿಸಿದರು. ಸೋಮವಾರ 60 ವರ್ಷ ವಯಸ್ಸಿನ ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡಲಾಯಿತು.
“60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಇತರೆ ಆನಾರೋಗ್ಯ (ಕೋಮಾರ್ಬಿಡಿಟಿ) ಸಮಸ್ಯೆಗಳನ್ನು ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ–ವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಸಮಯ ಕಾಯ್ದಿರಿಸಬಹುದು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
“60 ವರ್ಷ ದಾಟಿದವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರು. ಬೇರೆ ರೋಗಗಳನ್ನು ಹೊಂದಿರುವ, ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ. ಒಂದು ಮೊಬೈಲ್ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‌ಪಿಆರ್ ಸ್ಮಾರ್ಟ್ ಕಾರ್ಡ್, ಭಾವಚಿತ್ರ ಇರುವ ಪೆನ್ಶನ್ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು. ಪ್ರತಿ ದಿನ ಸಂಜೆ 3 ಗಂಟೆಯವರೆಗೆ ಈ ಆಸ್ಪತ್ರೆಗೆ ಭೇಟಿ ನೀಡಿಯೂ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು” ಎಂದು ಅವರು ವಿವರಿಸಿದರು.
“ನಮ್ಮ ತಾಲ್ಲೂಕು ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುತ್ತಿದ್ದು, ಬರುವವರು ಆಧಾರ್, ಎಲೆಕ್ಷನ್ ಕಾರ್ಡ್ ಮತ್ತು ತಮ್ಮ ಮೊಬೈಲ್ ಅನ್ನು ತರಬೇಕು.ಹಿರಿಯ ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಅವರು ಮನವಿ ಮಾಡಿದರು.
ಬಡತನಗಳಿಂದ ಬದುಕುತ್ತಿರುವ ತಳ ಸಮುದಾಯಗಳ ಜನರು ಗೌರವದಿಂದ ಎಲ್ಲರಂತೆ ಬದುಕಿ ಬಾಳಲು ಶಿಕ್ಷಣದ ಅಸ್ತ್ರವನ್ನು ಹೊಂದಬೇಕು. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯುವ ಮೂಲಕ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಮತಾ ಸೈನಿಕ ದಳ ತಾಲ್ಲೂಕು ಅಧ್ಯಕ್ಷ ಈ ಧರೆ ಪ್ರಕಾಶ್ ತಿಳಿಸಿದರು.
ತಾಲ್ಲೂಕು ಸಮತಾ ಸೈನಿಕ ದಳ ವತಿಯಿಂದ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ಗ್ರಾಮ ಶಾಖೆ ರಚನೆ ಮಾಡಿ, ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಸಮಾನತೆಯಿಂದ ಬದುಕಲೆಂದು ವಿಶ್ವಶ್ರೇಷ್ಠ ಸಂವಿಧಾನವನ್ನು ಕೊಡುಗೆ ನೀಡಿದ ಜ್ಞಾನ ಜ್ಯೋತಿ ಡಾ. ಬಿ.ಆರ್ ಅಂಬೇಡ್ಕರ್ ರವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಅವರ ತತ್ವ ಸಿದ್ದಾಂತಗಳನ್ನು ಅರಿಯಲು ಅವರ ಜೀವನ ಚರಿತ್ರೆಯನ್ನು ಓದಿ ತಿಳಿಯಬೇಕಿದೆ. ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮತಾ ಸೈನಿಕದಳ ಗೌರವಾಧ್ಯಕ್ಷ ಪಿಂಡಿಪಾಪನಹಳ್ಳಿ ಮುನಿಆಂಜಿನಪ್ಪ, ಪ್ರಧಾನಕಾರ್ಯದರ್ಶಿ ಜೆ.ವೆಂಕಟಾಪುರ ವಿಜಯಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೊಣ್ಣೇನಹಳ್ಳಿ ವೆಂಕಟೇಶಪ್ಪ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಡಿ.ಸಿ ನರಸಿಂಹಮೂರ್ತಿ, ತಾಲ್ಲೂಕು ಯುವ ಘಟಕ ಅಧ್ಯಕ್ಷ ವೈ ಹುಣಸೇನಹಳ್ಳಿ ವೇಣುಗೋಪಾಲ್, ಜಂಗಮಕೋಟೆ ಹೋಬಳಿ ಪ್ರಧಾನಕಾರ್ಯದರ್ಶಿ ಬಾಲಚಂದ್ರ, ಗ್ರಾಮದ ಹಿರಿಯ ಮುಖಂಡರಾದ ನಾರಾಯಣಪ್ಪ, ಚಿಕ್ಕಮುನಿಯಪ್ಪ ಹಾಜರಿದ್ದರು.
ಪದಾಧಿಕಾರಿಗಳ ಆಯ್ಕೆ :
ಅಧ್ಯಕ್ಷರಾಗಿ ಚೌಡಪ್ಪ, ಗೌರವಾಧ್ಯಕ್ಷ ಗಂಗರೆಡ್ಡಿ, ಕಾರ್ಯಾಧ್ಯಕ್ಷ ಆರ್. ಬಾಲಾಜಿ, ಪ್ರಧಾನ ಕಾರ್ಯದರ್ಶಿ ರಾಜು, ಖಜಾಂಚಿ ಮಾರೇಶ, ಉಪಧ್ಯಕ್ಷರಾಗಿ ಹರಿಪ್ರಸಾದ್, ನಿತೀನ್ ಕುಮಾರ್, ರವಿಕುಮಾರ್, ಪ್ರಶಾಂತ್. ವಿ, ಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾಗಿ ದೇವರಾಜ್, ಆನಂದ್, ಅಶೋಕ್, ನವೀನ್ ಆಯ್ಕೆಯಾದರು.
ತಾಲ್ಲೂಕಿನ ಮೇಲೂರಿನಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ರೈತ ಯುವಕ ಸಂಘದ ವತಿಯಿಂದ ನವದೇವತೆಗಳ ಉತ್ಸವವನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ದೇವರನ್ನೂ ಪಲ್ಲಕ್ಕಿಗಳಲ್ಲಿ ಹೊತ್ತು ಮೇಲೂರಿನ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಪೂಜಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೇಲೂರಿನ ಸುಪ್ರಸಿದ್ಧ ಗಂಗಾದೇವಿ ಆದಿಯಾಗಿ ಶ್ರೀ ಉಮಾಮಹೇಶ್ವರ, ಶ್ರೀ ಚನ್ನಕೇಶವ, ಶ್ರೀ ಸುಗ್ಗಲಮ್ಮದೇವಿ, ಶ್ರೀ ಚೌಡೇಶ್ವರಿದೇವಿ, ಶ್ರೀ ಮುನೇಶ್ವರಸ್ವಾಮಿ, ಶ್ರೀ ಸಪ್ಪಲಮ್ಮದೇವಿ, ನಗರದೇವತೆ ಶ್ರೀ ಅಣ್ಣಮ್ಮ, ಗಡ್ಡದನಾಯಕನಹಳ್ಳಿ ಶ್ರೀ ದುರ್ಗಾಮಹೇಶ್ವರಿದೇವಿಯವರ ನವದೇವತೆಗಳ ಉತ್ಸವ ಮಹೋತ್ಸವವನ್ನು ಹಾಗೂ ಮೆರವಣಿಗೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ವೀರಗಾಸೆ, ಡೋಲು, ಮಂಗಳ ವಾದ್ಯಗಳು, ಕರಡಿ ಸಮ್ಮೇಳ, ಗಾರುಡಿ ಗೊಂಬೆಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಮೆರುಗನ್ನು ತಂದವು.
“ಮಾತೃ ದೇವತಾ ಪಂಥದ ಜನಪದ ರೂಪಗಳೇ ಗ್ರಾಮ ದೇವತೆಗಳು. ಹಿಂದಿನ ಕಾಲದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿತ್ತು. ಮಾತೃ ದೇವತೆಗಳ ಪ್ರತಿನಿಧಿಗಳಾದ ಗ್ರಾಮದೇವತೆಗಳು ಗ್ರಾಮಗಳಲ್ಲಿ ಆರಾಧನೆಗೆ ಒಳಗಾದವು. ಗ್ರಾಮದೇವತೆಗಳು ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದುದು ಮಾತ್ರವಲ್ಲದೆ ಸಾಮಾಜಿಕ ಬದುಕನ್ನು ನಿಯಂತ್ರಿಸುವ ಸಾಧನಗಳೂ ಆಗಿದ್ದವೆಂಬುದು ಅರಿವಿಗೆ ಬರುತ್ತದೆ.
ಗ್ರಾಮದೇವತೆಯು ಗ್ರಾಮಸ್ಥರ ತಾಯಿ ಅಥವಾ ರಕ್ಷಕ ದೇವತೆಯನ್ನಿಸಿಕೊಳ್ಳುತ್ತಿದ್ದಳು. ಗ್ರಾಮಸ್ಥರ ಅಭಿಪ್ರಾಯದಂತೆ ಅವಳು ಗ್ರಾಮದ ಬೆಳೆಗಳನ್ನು ಕಾಪಾಡುತ್ತಾಳೆ. ಹೈನು ಹೆಚ್ಚಿಸುತ್ತಾಳೆ. ಸಕಾಲಕ್ಕೆ ಮಳೆಯನ್ನು ತರುತ್ತಾಳೆ. ಒಡ್ಡುಗಳನ್ನು ಸಂರಕ್ಷಿಸುತ್ತಾಳೆ, ಸಾಂಕ್ರಾಮಿಕ ರೋಗಗಳು ಊರೊಳಗೆ ಬಾರದಂತೆ ತಡೆಯುತ್ತಾಳೆ. ಭಕ್ತರ ರೋಗರುಜಿನಗಳನ್ನು ನಿವಾರಿಸುತ್ತಾಳೆ, ಸಂಕಷ್ಟಗಳನ್ನು ಪರಿಹರಿಸುತ್ತಾಳೆ, ಶಿಶುಮರಣವನ್ನು ತಡೆಯುತ್ತಾಳೆ. ಜಗಳಗಳನ್ನು ಪರಿಹರಿಸುತ್ತಾಳೆ. ಹೊಲದ ಗಡಿಗಳನ್ನು ನಿರ್ಧರಿಸುತ್ತಾಳೆ, ಭೂತ – ಪ್ರೇತ- ಗಾಳಿಗಳನ್ನು ನಿವಾರಿಸಿ ಹುಚ್ಚು ಬಿಡುತ್ತಾಳೆ. ಬಂಜೆತನವನ್ನು ಹೋಗಲಾಡಿಸಿ ಸಂತಾನ ಕೊಡುತ್ತಾಳೆ. ಗ್ರಾಮಸ್ಥರು ನಂಬುವಂತೆ ಈ ತಾಯಿ ಇಂಥ ಇನ್ನೂ ಅನೇಕ ಕಾರ್ಯಗಳನ್ನು ನಿರ್ವಹಿಸಬಲ್ಲಳು ಅಥವಾ ನಿರ್ವಹಿಸುತ್ತಿದ್ದಳು. ಅದಕ್ಕಾಗಿ ಗ್ರಾಮಸ್ಥರೆಲ್ಲರ ಸಹಕಾರದೊಂದಿಗೆ ನಮ್ಮ ಗ್ರಾಮ ಹಾಗೂ ತಾಲ್ಲೂಕಿಗೆ ಒಳಿತಾಗಲೆಂದು ನವದೇವತೆಗಳ ಉತ್ಸವವನ್ನು ಆಯೋಜಿಸಿದ್ದೇವೆ” ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ರೈತ ಯುವಕ ಸಂಘದ ವತಿಯಿಂದ ಎರಡು ದಿನಗಳ ಕಾಲ ನವದೇವತೆಗಳ ಉತ್ಸವ ಹಾಗೂ ಶ್ರೀ ಶನೇಶ್ವರಸ್ವಾಮಿ ಬಸಪ್ಪನವರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಮೇಲೂರಿನ ಸುಪ್ರಸಿದ್ಧ ಗಂಗಾದೇವಿ ಆದಿಯಾಗಿ ಶ್ರೀ ಉಮಾಮಹೇಶ್ವರ, ಶ್ರೀ ಚನ್ನಕೇಶವ, ಶ್ರೀ ಸುಗ್ಗಲಮ್ಮದೇವಿ, ಶ್ರೀ ಚೌಡೇಶ್ವರಿದೇವಿ, ಶ್ರೀ ಮುನೇಶ್ವರಸ್ವಾಮಿ, ಶ್ರೀ ಸಪ್ಪಲಮ್ಮದೇವಿ, ನಗರದೇವತೆ ಶ್ರೀ ಅಣ್ಣಮ್ಮ, ಗಡ್ಡದನಾಯಕನಹಳ್ಳಿ ಶ್ರೀ ದುರ್ಗಾಮಹೇಶ್ವರಿದೇವಿಯವರ ನವದೇವತೆಗಳ ಉತ್ಸವ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಆನೇಕಲ್ ತಾಲ್ಲೂಕಿನ ಪ್ರಸಿದ್ಧ ಮಂಚನಹಳ್ಳಿ ಬಸಪ್ಪನವರು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಾ ಭಕ್ತಗಣಕ್ಕೆ ಆಶಿರ್ವಾದ ನೀಡಿದ್ದು ವಿಶೇಷವಾಗಿತ್ತು. ಗ್ರಾಮದ ಮನೆಗಳಲ್ಲಿ ಪೂಜೆಗೆ ಕೊಟ್ಟು, ಪಾದ ಪೂಜೆ ಮಾಡುವ ಮೂಲಕ ಭಕ್ತಿ ಭಾವದಿಂದ ನಮಿಸಿದರು. ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬಸಪ್ಪ ಗ್ರಾಮದ ಕೆಲ ಮನೆಗಳಿಗೆ ಪ್ರವೇಶಿಸಿ ಮನೆಯವರನ್ನು ಆಶೀರ್ವದಿಸಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಭಕ್ತಾದಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವೀರಗಾಸೆ, ಡೋಲು, ಮಂಗಳ ವಾದ್ಯಗಳು, ಕರಡಿ ಸಮ್ಮೇಳ ಮೆರವಣಿಗೆಯಲ್ಲಿ ಮೆರುಗನ್ನು ತಂದವು.
ನಗರದ ಶ್ರೀ ವೆಂಕಟೇಶ್ವರ ಸಿನಿಮಾಸ್ ಚಿತ್ರಮಂದಿರಕ್ಕೆ ಪೊಗರು ಚಲನಚಿತ್ರ ತಂಡ ಶುಕ್ರವಾರ ಭೇಟಿ ನೀಡಿತ್ತು. ನಾಯಕನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ “ಪೊಗರು” ಚಲನಚಿತ್ರದ ವಿಜಯಾತ್ರೆ ಪ್ರಯುಕ್ತ ಶಿಡ್ಲಘಟ್ಟದ ಶ್ರೀವೆಂಕಟೇಶ್ವರ ಸಿನಿಮಾಸ್ ಚಿತ್ರ ಮಂದಿರಕ್ಕೆ ಆಗಮಿಸಿದ್ದರು.
ಧ್ರುವ ಸರ್ಜಾ ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರದೊಂದಿಗೆ ತಮ್ಮ ನಾಯಕ ನಟನನ್ನು ಸ್ವಾಗತಿಸಿದರು.
ಅಭಿಮಾನಿಗಳು ತಯಾರಿಸಿದ 148 ಕೇ ಜಿ ಕೇಕನ್ನು ಕತ್ತರಿಸಿ ಮಾತನಾಡಿದ ಧ್ರುವ ಸರ್ಜಾ, “ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸುವ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರೋತ್ಸಾಹಿಸಿ ಮತ್ತು ಬೆಳೆಸಿ. ಪೊಗರು ಚಿತ್ರ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ತಾಲ್ಲೂಕಿನ ಜನತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ಹರಸುವಂತೆ ಮನವಿ ಮಾಡಿದರು.
ರಾಜ್ಯಾದ್ಯಂತ ಈ ಚಲನಚಿತ್ರಕ್ಕೆ ಒಳ್ಳೆಯ ರೀತಿಯಲ್ಲಿ ಸ್ಪಂದಿನೆ ಸಿಕ್ಕಿದ್ದು ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಚಿತ್ರದ ನಿರ್ದೇಶಕ ನಂದಕಿಶೋರ್ ಮಾತನಾಡಿ, ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಳ್ಳೆಯ ಚಿತ್ರವನ್ನು ಜನತೆ ವೀಕ್ಷಿಸಿ ಜನರು ಬೆಂಬಲ ವ್ಯಕ್ತಪಡಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಜನತೆ ಅತಿ ಹೆಚ್ಚಾಗಿ ವೀಕ್ಷಿಸುವ ಮೂಲಕ ಶತದಿನೋತ್ಸವ ಆಚರಿಸುವಂತೆ ಮಾಡಬೇಕು ಎಂದರು .
ಚಿತ್ರದ ನಿರ್ಮಾಪಕ ಬಿ.ಕೆ. ಗಂಗಾಧರ್, ಟಿ ಆನಂದ್, ವೆಂಕಟೇಶ್ವರ ಸಿನಿಮಾಸ್ ಚಿತ್ರ ಮಂದಿರದ ಮಾಲೀಕ ಎಸ್.ಪ್ರಕಾಶ್, ಸಿದ್ದೇಶ್ವರ ಥಿಯೇಟರ್ ಮಾಲೀಕ ಟಿ.ಆನಂದ್, ಗಣೇಶ್, ಕಾರ್ತಿಕ್ ಹಾಗು ಅಪಾರ ಅಭಿಮಾನಿಗಳು ಹಾಜರಿದ್ದರು.