26 C
Sidlaghatta
Thursday, January 23, 2025

ಕ್ಷುದ್ರಗ್ರಹಗಳ ಅಧ್ಯಯನ: ಶೋಧನೌಕೆ ಡಾನ್ ಪಯಣ

- Advertisement -
- Advertisement -

‘ನಾವಿಂದು ವೆಸ್ತಾದ ಕಕ್ಷೆಯನ್ನು ಸೇರಲಿದ್ದೇವೆ!!’ ಸೆಕ್ಯುರಿಟಿ ಚೆಕ್ ಮಾಡಲು ಬಂದÀವನಿಗೆ ಮುಖದ ತುಂಬಾ ನಗು ತುಂಬಿದ ಇಂಜಿನಿಯರ್ ಮಾರ್ಕ್ ರೇಮಂಡ್ ಹೇಳಿದ. ಆ ನಗು ಸಾಂಕ್ರಾಮಿಕವಾಗಿ ಬಿಗುಮುಖದ ಗಾರ್ಡ್‍ನನ್ನೂ ಆವರಿಸಿಕೊಂಡುಬಿಟ್ಟಿತು. ಆತನಿಗೆಷ್ಟು ಅರ್ಥವಾಯಿತೋ ಬಿಟ್ಟಿತೋ, ‘ಹೌದೇ ಸರ್?’ ಎಂದು ಆತನೂ ಸಂಭ್ರಮಿಸುತ್ತ ತಪಾಸಣೆ ನಡೆಸತೊಡಗಿದ.
ಅಂದು ಜುಲೈ 16, 2011. ಮುಂಜಾನೆಯೇ ತಂತ್ರಜ್ಞರು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯ ಕಛೇರಿಯೊಳಗೆ ನುಗ್ಗುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹಾರಿಬಿಟ್ಟ ‘ಡಾನ್’ ಅಂದು ತನ್ನ ಗುರಿಯನ್ನು ತಲುಪಲಿದೆ.
ಏನಿದು ವೆಸ್ತಾ? ಏನಿದು ಡಾನ್? ಅದು ಹೊರಟಿದ್ದೆಲ್ಲಿಗೆ?
‘ಡಾನ್’ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತರಿಕ್ಷಕ್ಕೆ ಕಳುಹಿಸಿದ ರೊಬಾಟ್ ನೌಕೆ. ಸೌರಮಂಡಲದ ನಡುವಿನ ‘ಕ್ಷುದ್ರಗ್ರಹಗಳ ಪಟ್ಟಿ’ಯ* ಪ್ರಮುಖ ಎರಡು ಕಾಯಗಳಾದ ವೆಸ್ತಾ ಮತ್ತು ಸಿರಿಸ್‍ಗಳ ರಹಸ್ಯಗಳನ್ನು ಭೇದಿಸಲು ಹೊರಟ ಬಾನವಾಹನ.
ತುಂಬಾ ಹಿಂದೆ ಬಾನಲ್ಲಿ ದೂಳು ಮತ್ತು ಅನಿಲ ಒಗ್ಗೂಡುತ್ತ ಬಂದು ಅಲ್ಲಲ್ಲಿ ಗುರುತ್ವದ ಕೇಂದ್ರಗಳಾಗುತ್ತಾ ಗ್ರಹಗಳು ತಯಾರಾದವು ಮತ್ತು ಕೇಂದ್ರದಲ್ಲಿದ್ದ ಸೂರ್ಯನ ಸುತ್ತ ಸುತ್ತತೊಡಗಿದವು, ಆ ಗ್ರಹಗಳಲ್ಲೊಂದು ಭೂಮಿ, ಮುಂದೆ ಭೂಮಿಯಲ್ಲಿ ಜೀವಿಗಳ ಉಗಮವಾಯಿತು ಎಂದೆಲ್ಲ ನಾವು ಶಾಲೆಯಲ್ಲಿ ಓದಿದ್ದೇವೆ. ಆದರೆ ನಮ್ಮ ಸೌರಮಂಡಲದ ವಿಧವಿಧದ ಗ್ರಹಗಳ ರಚನೆಗೆ ಕಾರಣವೇನು? ಭೂಮಿ ಹೇಗೆ ನೀಲಿ ಗ್ರಹವಾಯಿತು? ಭೂಮಿಯ ಹೊರತಾಗಿ ಬೇರೆಲ್ಲಾದರೂ ನೀರಿರಬಹುದೆ? ಜೀವಿಗಳಿರಬಹುದೆ?
ಇವು ಮಾನವನನ್ನು ಎಂದಿನಿಂದಲೂ ಕಾಡುತ್ತಿರುವ ಪ್ರಶ್ನೆಗಳು. ಪುರಾತನ ಕಾಲದಿಂದ ಹಿಡಿದು ಇಂದಿನ ಆಧುನಿಕ ವಿಜ್ಞಾನದವರೆಗೆ ಬಾಹ್ಯಾಕಾಶದ ಕೌತುಕಗಳಿಗೆ ವಿವರಣೆ ನೀಡಲು ಮಾನವ ಹಿಡಿದ ದಾರಿ ನೂರಾರು. ಐವತ್ತು ವರ್ಷಗಳ ಹಿಂದೆ ಮೊದಲ ಮಾನವ ನಿರ್ಮಿತ ಉಪಗ್ರಹ ಗಗನಕ್ಕೆ ಹಾರಿದ ನಂತರದ ವರ್ಷಗಳಲ್ಲಿ ಸಿರಿವಂತ, ಮಧ್ಯಮವರ್ಗಕ್ಕೆ ಸೇರಿದ (ಆರ್ಥಿಕ ಸಂಪತ್ತಿನ ಅರ್ಥದಲ್ಲಿ) ದೇಶಗಳು ಅಂತರಿಕ್ಷ ಅವಲೋಕನಕ್ಕೆ ಸಾಕಷ್ಟು ಹಣವನ್ನು ಮೀಸಲಾಗಿಡತೊಡಗಿವೆ. ಈ ನಿಟ್ಟಿನಲ್ಲಿ ಅಮೆರಿಕದ ನಾಸಾ ಮುಂಚೂಣಿಯಲ್ಲಿರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ಹೆಚ್ಚಿನ ದೇಶಗಳು ಭೂಮಿಯ ಸುತ್ತಲ ಪ್ರದೇಶಕ್ಕೆ ತಮ್ಮ ಸಂಶೋಧನೆಗಳನ್ನು ಸೀಮಿತವಾಗಿರಿಸಿದರೆ ನಾಸಾ ಸೌರಮಂಡಲದ ಇತರ ಗ್ರಹಗಳನ್ನು, ಅಂತರ ಗ್ರಹ ವಲಯಗಳನ್ನು ಹಾಗೂ ಅನ್ಯತಾರೆಗಳನ್ನು ಅಧ್ಯಯನ ನಡೆಸುವ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ.
ಇಂಥಹ ಯೋಜನೆಗಳಲ್ಲೊಂದು ಕ್ಷುದ್ರಗ್ರಹಗಳ ಪರಿಶೋಧನೆ. ನಾಸಾದ ‘ಡಾನ್’ ಹೆಸರಿನ ಗಗನನೌಕೆ ಕ್ಷುದ್ರಗ್ರಹಗಳ ವಲಯದ ಪ್ರಮುಖ ಸದಸ್ಯರುಗಳಾದ ವೆಸ್ತಾ ಮತ್ತು ಸಿರಿಸ್ ಗಳ ಬಳಿ ಸಾಗಿ ಸಂಶೋಧನೆ ನಡೆಸಲಿದೆ. ಇದೇ ಮೊದಲ ಬಾರಿ ಎರಡು ಆಕಾಶಕಾಯಗಳ ಅಧ್ಯಯನಕ್ಕೆಂದು ಮಾನವ ನಿರ್ಮಿತ ಬಾನನೌಕೆ ಹಾರಿದೆ.
ವೆಸ್ತಾ ಮತ್ತು ಸಿರಿಸ್ ಇವೆರಡೂ ಸೌರಮಂಡಲದ ಉಗಮದ ವೇಳೆಯಲ್ಲಿ ರೂಪುಗೊಂಡ ಕಾಯಗಳು. ಇದುವರೆಗಿನ ಅನ್ವೇಷಣೆಯ ಪ್ರಕಾರ ಗ್ರಹಗಳಾಗಬೇಕಿದ್ದ ವೆಸ್ತಾ ಮತ್ತು ಸಿರಿಸ್ ರಚನೆ ಬೃಹದ್ ಕಾಯವಾದ ಗುರುಗ್ರಹದ ಗುರುತ್ವದ ಬಲದೆದುರು ಒಂದು ಹಂತದಲ್ಲಿ ಸ್ತಬ್ಧವಾಗಿಬಿಟ್ಟಿದೆ. ಇಲ್ಲವಾದರೆ ಮಂಗಳನ ಸಮೀಪವಿರುವ ವೆಸ್ತಾ ಬುಧ, ಶುಕ್ರ ಭೂಮಿ ಮತ್ತು ಮಂಗಳರಂತೆ ಗಟ್ಟಿ ಗ್ರಹವೂ ಗುರುವಿಗೆ ಸಮೀಪವಿರುವ ಸಿರಿಸ್ ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್‍ಗಳಂತೆ ಅನಿಲದ ಚೆಂಡಾಗಿಯೂ ಹಾರುವ ಸಾಧ್ಯತೆ ಇತ್ತು. ಈ ಎರಡೂ ಸಂಪೂರ್ಣ ವಿಕಾಸ ಹೊಂದಿಲ್ಲದ ಕಾರಣ ಅವುಗಳ ಅಧ್ಯಯನವು ಸೌರಮಂಡಲದ ರಚನೆಯ ಕುರಿತು ಇನ್ನಷ್ಟು ಬೆಳಕು ಚೆಲ್ಲಬಹುದೆಂದು ವಿಜ್ಞಾನಿಗಳು ನಂಬಿದ್ದಾರೆ. ಸೌರವ್ಯೂಹದ ಉಗಮದ ಕುರುಹುಗಳನ್ನು ಇನ್ನೂ ಧರಿಸಿರುವ ಇವೆರಡೂ ಕ್ಷುದ್ರಗ್ರಹಗಳನ್ನು ‘ಪ್ರೋಟೋಗ್ರಹಗಳು’ ಅಥವಾ ಆದಿಗ್ರಹಗಳೆಂದು ಕರೆಯಲಾಗುತ್ತಿದೆ.
ಡಾನ್ ಉಡ್ಡಯನ:
ನಾಲ್ಕು ವರ್ಷಗಳ ಹಿಂದೆ ಹತ್ತಾರು ಉಪಕರಣಗಳನ್ನು ಹೊತ್ತ ಡಾನ್ ನೌಕೆ ದಿಗಂತದೆಡೆಗೆ ಹಾರಿತು. ಮೂರು ಹಂತದ ಉಡ್ಡಯನದಲ್ಲಿ ರಾಕೆಟ್ಟುಗಳಿಂದ ವೇಗವನ್ನು ಪಡೆದು ಭೂಗುರುತ್ವವನ್ನು ಮೀರಿ ಚಿಮ್ಮುತ್ತ ಮುನ್ನಡೆದ ಡಾನ್ ಭೂವಾತಾವರಣವನ್ನು ದಾಟುತ್ತಲೇ ಕೇಬಲ್ ಹಗ್ಗಗಳಿಂದ ಬಂಧಿತವಾಗಿದ್ದ ಸೌರರೆಕ್ಕೆಗಳು ನಿಧಾನವಾಗಿ ಬಿಚ್ಚಿಕೊಂಡವು. ಇದಕ್ಕೆ ಮುನ್ನ ಸೂರ್ಯನಿರುವ ದಿಕ್ಕನ್ನು ಖಚಿತಪಡಿಸಿಕೊಂಡು ಆಕಡೆಗೆ ಸೌರರೆಕ್ಕೆಗಳನ್ನು ತಿರುಗಿಸಲೆಂದು ಪುಟ್ಟದೆರಡು ಸೋಲಾರ್ ಸೆಲ್ಲುಗಳು ಕಣ್ಣುಬಿಟ್ಟು ಸೂರ್ಯನನ್ನು ಗುರುತಿಸಿದವು. ಮುಂದಿನ 8 ವರ್ಷಗಳ ಕಾರ್ಯಾವಧಿಗೆ ಡಾನ್‍ನ ಉಪಕರಣಗಳಿಗೆ ಬೇಕಾದೆಲ್ಲ ವಿದ್ಯುತ್ ಶಕ್ತಿಯನ್ನೂ ಈಗಲೇ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಏಕೆಂದರೆ ಈಗ ಡಾನ್ ಸಾಗುತ್ತಿರುವುದು ಸೂರ್ಯನಿಂದ ದೂರದೂರಕ್ಕೆ, ಅಂದರೆ ಬಿಸಿಲು ಪ್ರಖರವಾಗಿಲ್ಲದ ಪ್ರದೇಶಕ್ಕೆ. (ಈ ಸೋಲಾರ್ ರೆಕ್ಕೆಗಳೋ ಅಮಿತ ಸಾಮಥ್ರ್ಯವುಳ್ಳವು. ಇರುವ ಐದು ರೆಕ್ಕೆಗಳಲ್ಲಿ ಒಂದೇ ಒಂದು ಕೆಲಸ ಮಾಡಿದರೂ ಇಡೀ ನೌಕೆಗೆ ಬೇಕಾಗುವಷ್ಟು ಸೌರವಿದ್ಯುತ್ ದೊರೆಯುತ್ತದೆ.)
ಡಾನ್ ಹೊತ್ತು ಸಾಗುತ್ತಿರುವ ಪ್ರಮುಖ ವೈಜ್ಞಾನಿಕ ಉಪಕರಣಗಳು: 1. ಫ್ರೇಮಿಂಗ್ ಕ್ಯಾಮೆರಾ 2. ಅವಗೆಂಪು ಮತ್ತು ಬೆಳಕಿನ ಸ್ಪೆಕ್ಟ್ರೋಮೀಟರ್ 3. ಗಾಮಾ ಕಿರಣ ಮತ್ತು ನ್ಯೂಟ್ರಾನ್ ಕಣ ಡಿಟೆಕ್ಟರ್
ಈ ಹಂತದಲ್ಲಿ ಅಯಾನ್ ಇಂಜಿನ್ ನೌಕೆಯನ್ನು ಮುನ್ನಡೆಸುತ್ತದೆ. ಅಯಾನ್ ಇಂಜಿನ್ನಿನಲ್ಲಿ ಕ್ಸೆನಾನ್ ಎಂಬ ಜಡ ಅನಿಲವನ್ನು ಬಳಸಲಾಗುತ್ತದೆ. ಬಲವಾದ ಸೌರವಿದ್ಯುತ್ ಕಿರಣಗಳು ಕ್ಸೆನಾನ್ ಅನಿಲದ ಮೇಲೆ ಬಿದ್ದಾಗ ಅದರ ಅಯಾನುಗಳು(ಅಂದರೆ ಅಸ್ಥಿರವಾದ ಅಣುಗಳು) ಬಿಡುಗಡೆಯಾಗುತ್ತವೆ. ಆ ಅಣುಗಳು ಅಪಾರ ವೇಗದಿಂದ ನೌಕೆಯ ಹಿಂಭಾಗದ ಸೂಸುನಳಿಕೆಯ ಮೂಲಕ ಹೊರಬಿದ್ದಾಗ ನೌಕೆಯು ಅದೇ ವೇಗವನ್ನು ಪಡೆದು ಮುಂದೆ ಹಾರುತ್ತದೆ.
ಇನ್ನು ಮುಂದೆ ಮಾತೃಗ್ರಹಕ್ಕೆ ಸಂದೇಶಗಳನ್ನು ಕಳುಹಿಸುವ ಸಮಯ. ಇಲ್ಲಿಯವರೆಗೂ ನಿದ್ರಾವಸ್ಥೆಯಲ್ಲಿರುವ (ಹೈಬರ್‍ನೇಶನ್) ಒಳಗಿರುವ ವೈಜ್ಞಾನಿಕ ಉಪಕರಣಗಳೆಲ್ಲವೂ ಬೆಚ್ಚಗಾಗುತ್ತವೆ. ಡಾನ್‍ನ ಅಂಟೆನಾಗಳ ಮೂಲಕ ರೇಡಿಯೋ ಟ್ರಾನ್ಸ್‍ಮೀಟರ್ ತನ್ನ ಕೆಲಸವನ್ನು ಆರಂಭಿಸುತ್ತದೆ. ಇದಕ್ಕೆಂದು ನೌಕೆಯೊಳಗೆ ಭದ್ರಪಡಿಸಿರುವ ಪ್ರಮುಖ ಅಂಟೆನಾ ಐದಡಿ ಉದ್ದವಿದೆ. ಇನ್ನೆರಡು ಪುಟ್ಟ ಅಂಟೆನಾಗಳು ನೌಕೆಯ ನಿರ್ವಹಣಾ ವಿವರಗಳನ್ನು ಕಳಿಸಿದರೆ ಈ ಮುಖ್ಯ ಅಂಟೆನಾ ಮಹತ್ವದ ವೈಜ್ಞಾನಿಕ ಮಾಹಿತಿಗಳು ಹಾಗೂ ಸ್ಪಷ್ಟ ಚಿತ್ರಗಳನ್ನು ಕಳಿಸಲು ಬಳಕೆಯಾಗುತ್ತದೆ. ಭೂಮಿಯತ್ತ ಸಂದೇಶಗಳು ಪ್ರಸಾರವಾಗತೊಡಗುತ್ತವೆ. ಗಿರಕಿ ಹೊಡೆಯುತ್ತಿರುವ ಡಾನ್‍ನ ಅಂಟೆನಾಗಳು ಭೂಮಿಯತ್ತ ಮುಖ ಮಾಡಿದಾಗ ಅಂದರೆ ತಾಸಿಗೆ ಮೂವತ್ತು ನಿಮಿಷಗಳ ಕಾಲ ಮಾತ್ರ ಸಂದೇಶಗಳು ಬೆಳಕಿನ ವೇಗದಲ್ಲಿ ಓಡುತ್ತ ಭೂಪ್ರಯೋಗಾಲಯಗಳನ್ನು ಸೇರುತ್ತವೆ.
ಮೊದಲ ಮೂರು ತಾಸಿನೊಳಗೆ ವಾಯುಮಂಡಲವನ್ನು ದಾಟಿ, ಭೂಉಪಗ್ರಹಗಳ ವಲಯವನ್ನೂ ಹಾದು ಹಾರಿದ ಡಾನ್ ಮುಂದೆ ಒಂದೇ ದಿನದೊಳಗೆ ಚಂದ್ರನ ಎಲಿಪ್ಟಿಕಲ್ ಕಕ್ಷೆಯನ್ನೂ ದಾಟಿ, ಇದುವರೆಗೆ ಮಾನವ ಅನ್ವೇಷಿಸದ ಬಾಹ್ಯಾಕಾಶ ಪ್ರದೇಶದಲ್ಲಿ ಹಾರಾಟ ನಡೆಸಿತು. ಆದರೆ ಅದಿನ್ನೂ ಡಾನಿಗೆ ಪ್ರಾರಂಭಿಕ ಹಂತವಷ್ಟೆ. ಮುಂದೆ ಇನ್ನೂ ಮತ್ತೂ ಪಯಣಿಸಬೇಕು.
ಎಂಥ ವಿಚಿತ್ರ! ‘ರವಿ ಕಾಣದ್ದನ್ನು ಕವಿ ಕಾಣುತ್ತಾನೆ’ ಎನ್ನುತ್ತಾರೆ. ಆದರೆ ಬಾಹ್ಯಾಕಾಶದ ವಿಷಯದಲ್ಲಿ ವಿಜ್ಞಾನಿಗಳು ಯಾವ ಕಲಾವಿದನ ಕಲ್ಪನೆಗೂ ಕಡಿಮೆಯಿಲ್ಲದಂತೆ ಅಥವಾ ಕಲಾವಿದನೊಬ್ಬ ಊಹೆಯನ್ನೂ ಮಾಡಲಾಗದ ಬ್ರಹ್ಮಾಂಡದ ಭಾಗವನ್ನು ಭೂಗ್ರಹದ ಪುಟ್ಟ ಪ್ರಯೋಗಾಲಯದಲ್ಲಿ ಕುಳಿತೇ ಶೋಧಿಸ ಹೊರಟಿದ್ದಾರೆ. ಆದರಿದು ಒಬ್ಬಿಬ್ಬರ ಬುದ್ಧಿವಂತಿಕೆಯ ಪ್ರದರ್ಶನವಲ್ಲ. ವಿಜ್ಞಾನದ ನಾನಾ ಕ್ಷೇತ್ರದ ಸಾವಿರಾರು ಅನ್ವೇಷಕರು ಹತ್ತಾರು ವರ್ಷಗಳಲ್ಲಿ ಸಾಧಿಸಿದ ಅಪ್ರತಿಮ ಸಾಧನೆಯ ಫಲವಿದು. ನಮ್ಮ ಪೂರ್ವಜರು ಹಾಕಿಕೊಟ್ಟ ಖಗೋಳಶಾಸ್ತ್ರದ ತಳಹದಿಯ ಮೇಲೆ ಇಂದಿನ ವಿಜ್ಞಾನ ವಿಕಾಸಗೊಂಡಿದೆ.
ದಿನಗಳು ಕಳೆದಂತೆ ಡಾನ್ ಇನ್ನೂ, ಮತ್ತೂ ವೇಗವನ್ನು ಪಡೆಯುತ್ತ ವೆಸ್ತಾದತ್ತ ಮುನ್ನುಗ್ಗುತ್ತಿದೆ. ಅಯಾನ್ ಇಂಜಿನ್ನಿನ ನೂಕು ಬಲವೇ ಅಂಥಾದ್ದು. ಮೊದಮೊದಲು ನಿಧಾನವಿದ್ದು ಮುಂದೆ ನಿರ್ವಾತ ಆಕಾಶದಲ್ಲಿ ಹೆಚ್ಚು ಬಲದಿಂದ ನೌಕೆಯನ್ನು ಮುಂದೂಡುತ್ತದೆ. ದಾರಿಯಲ್ಲಿ ಆಚೀಚಿನ ಆಕಾಶಕಾಯಗಳÀನ್ನು ಕ್ಯಾಮೆರಾ ಕ್ಲಿಕ್ಕಿಸುತ್ತದೆ. ಡಾನ್‍ನ ಅವರೋಹಿತ ಹಾಗೂ ದೃಷ್ಟಿಗೋಚರ ಸ್ಪೆಕ್ಟ್ರೋಮೀಟರ್‍ಗಳು ಸುತ್ತಲಿನ ಕಾಯಗಳು ಹೊರಸೂಸುವ ಬೆಳಕನ್ನು ಸೆರೆಹಿಡಿಯುತ್ತವೆ. ಆ ಚಿತ್ರಗಳು ಅದರ ಪಥ ನಿರ್ದೇಶನ ಮಾಡಲು ತಂತ್ರಜ್ಞರಿಗೆ ಸಹಾಯಕವಾಗುತ್ತವೆ. ಎರಡು ವರ್ಷ ಹಾರಿದ ಡಾನ್ 2009 ರಲ್ಲಿ ಮಂಗಳನ ಬಳಿ ಬಂದಾಗ ಅದರ ಗುರುತ್ವ ಬಲವನ್ನು ಉಪಯೋಗಿಸಿಕೊಂಡು ಇನ್ನೂ ವೇಗವನ್ನು ಹೆಚ್ಚಿಸಿಕೊಂಡಿದೆ.
ಮಂಗಳನನ್ನು ದಾಟಿ ಕ್ಷುದ್ರಗ್ರಹಗಳ ವಲಯವನ್ನು ಪ್ರವೇಶಿಸುವವರೆಗೂ ಡಾನ್ ವೇಗ ಏರುತ್ತಲೇ ಇತ್ತು. ವೆಸ್ತಾ ಡಾನ್‍ನ ಕ್ಯಾಮೆರಾ ಕಣ್ಣಿಗೆ ಬಿದ್ದಾಗಿನಿಂದ ಅದರ ವೇಗವನ್ನು ಹತೋಟಿಯಲ್ಲಿಟ್ಟು ಲೆಕ್ಕಾಚಾರ ಹಾಕಿ ಮುಂದುವರೆಯುವಂತೆ ಆದೇಶ ನೀಡಲಾಯಿತು.
ಜುಲೈ 1 ರಂದು ವೆಸ್ತಾ ತನ್ನ ಅಕ್ಷದ ಸುತ್ತ ತಿರುಗಲು 5 ತಾಸು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆಂಬುದನ್ನು ಡಾನ್ ದಾಖಲಿಸಿತು. ಇದೇ ಜುಲೈನಿಂದ ಮುಂದಿನ ಜುಲೈವರೆಗೆ ವೆಸ್ತಾದ ಕಕ್ಷೆಯಿಂದ ಸ್ವಲ್ಪವೇ ದೂರದಲ್ಲಿ ಅದರೊಂದಿಗೇ ಹಾರಾಟ ನಡೆಸುತ್ತ (ಭೂಮಿಯ ಸುತ್ತ ಚಂದ್ರ ತಿರುಗಿದಂತೆ) ಸತತ ಚಿತ್ರೀಕರಣ ನಡೆಸಲಿದೆ. ಸೂರ್ಯನನ್ನು ಸುತ್ತಲು ಭೂಮಿಯ ಐದೂಕಾಲು ವರ್ಷ ಕಾಲ ತೆಗೆದುಕೊಳ್ಳುವ ವೆಸ್ತಾಗೆ ಈ ಕಾಲ ಬೇಸಿಗೆ. ಅದರಲ್ಲೂ ಬೃಹದ್ ಕಣಿವೆಯುಳ್ಳ ದಕ್ಷಿಣ ಗೋಲಾರ್ಧದಲ್ಲಿ ಈಗ ಬಿರಿಬಿರಿ ಬಿಸಿಲು. ಚಿತ್ರಗಳನ್ನು ತೆಗೆಯಲು ಸಕಾಲ.
16 ಜುಲೈ. ಅಂದು ತಂತ್ರಜ್ಞರು ತವಕದಿಂದ ಕಾಯುತ್ತಿದ್ದ ದಿನ. ವೆಸ್ತಾದ ಕಕ್ಷೆಯನ್ನು ಪ್ರವೇಶಿಸಿದ ಡಾನ್ ಅದರ ಹಿಂದೆಯೇ ಹಾರುತ್ತ 16 ಸಾವಿರ ಕಿಮೀ ದೂರದಿಂದ ಚಿತ್ರವನ್ನು ಕ್ಲಿಕ್ಕಿಸಿ ಭೂಮಿಗೆ ರವಾನಿಸಿದೆ. ಅಂದುಕೊಂಡಂತೆ, ಇನ್ನೂರೆಂಬತ್ತು ಕೋಟಿ ಕಿಮೀ ದೂರವನ್ನು ನಾಲ್ಕು ವರ್ಷಗಳಲ್ಲಿ ಕ್ರಮಿಸಿ ಪಂಕ್ಚರ್ ಆದ ಫುಟ್ ಬಾಲಿನಂತಿದ್ದ ವೆಸ್ತಾದ ಸ್ಪಷ್ಟ ಚಿತ್ರವನ್ನು ಅಂದು ಡಾನ್ ಕಳುಹಿಸಿದಾಗ ಪ್ರಯೋಗಾಲಯದಲ್ಲಿ ಕುಳಿತ ಡಾನ್ ತಂತ್ರಜ್ಞರು ಹರ್ಷಿಸಿದ್ದಾರೆ. ಇನ್ನೂ ವೆಸ್ತಾದ ಬಳಿ ಸಾಗುತ್ತ ಜುಲೈ 23ಕ್ಕೆ ಬರೀ 5200 ಕಿಮೀ ದೂರದಿಂದ ಡಾನ್ ಕಳಿಸಿರುವ ವೆಸ್ತಾದ ಮೇಲ್ಮೈ ಚಿತ್ರ ಸುಟ್ಟ ಹಪ್ಪಳದಂತಿದೆ.
ಇನ್ನೊಂದು ವರ್ಷ ವೆಸ್ತಾದೊಂದಿಗೆ ಹಾರಾಟ ನಡೆಸಿ ಡಾನ್ ತನ್ನ ಪಥವನ್ನು ಬದಲಿಸಲಿದೆ. ಅದರ ಅಯಾನ್ ಎಂಜಿನ್ನುಗಳು ಭೂಮಿಯಿಂದ ಆದೇಶ ಪಡೆದು ಹೊಸ ನೂಕು ಬಲವನ್ನು ಒದಗಿಸಿ ವೆಸ್ತಾದ ಕಕ್ಷೆಯಿಂದ ಆಚೆ ಜಿಗಿದು ಸಿರಿಸ್ ನತ್ತ ತಳ್ಳಲಿವೆ.
ಇದುವರೆಗೆ ದೊರೆತ ವಿವರಗಳೆಲ್ಲವೂ ಭೂದೂರದರ್ಶಕಗಳು ಹಾಗೂ ಗಗನದಲ್ಲಿದ್ದ ಹಬ್ಬಲ್ ದರ್ಶಕ ತೆಗೆದ ಚಿತ್ರಗಳಾಗಿವೆ. ಈಗ ಡಾನ್ ಕಳುಹಿಸುವ ಚಿತ್ರಗಳು ಇದುವರೆಗೆ ನಮಗೆ ತಿಳಿದಿಲ್ಲದ ನೂರಾರು ರಹಸ್ಯಗಳನ್ನು ಬಹಿರಂಗಪಡಿಸಲಿವೆ.
ಹಾರಲು ಅಡ್ಡಬಂದ ತೊಂದರೆಗಳು: ಡಾನ್ 2007ರ ಜೂನ್ 20 ರಂದೇ ಹಾರಬೇಕಿತ್ತು. ಆದರೆ ಒಂದಾದ ನಂತರ ಒಂದು ಅಡ್ಡ ತೊಂದರೆಗಳು ಎದುರಾದವು. ಮೊದಲ ನಿಗದಿತ ದಿನದಂದು ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ಡಾನ್ ನ ಬಿಡಿಭಾಗಗಳಲ್ಲಿ ಕೆಲವು ಉಡ್ಡಯನಾ ಸ್ಥಳಕ್ಕೆ ಬಂದಿರಲಿಲ್ಲ. ಎಲ್ಲಾ ಸಿದ್ಧತೆ ನಡೆಸುತ್ತಿರುವಾಗ ಬಿಡಿಭಾಗಗಳನ್ನು ಜೋಡಿಸುವ ಕ್ರೇನ್ ಮುರಿಯಿತು, ಆನಂತರ ಎರಡನೇ ಹಂತದ ರಾಕೆಟ್ ಉಡ್ಡಯನಕ್ಕೆಂದು ಇಂಧನ ತುಂಬಿಸುವ ಕಾರ್ಯ ನಿಧಾನವಾಯಿತು. ಇಷ್ಟೆಲ್ಲ ನಡೆದಾಗ ಮಂಗಳ ಗ್ರಹಕ್ಕೆ ಹೊರಟಿದ್ದ ಫೀನಿಕ್ಸ್ ಅದೇ ಉಡ್ಡಯನಾ ಕೇಂದ್ರದಿಂದ ಹಾರುವ ಕಾರ್ಯದಲ್ಲಿ ಮತ್ತೂ ಒಂದಿಷ್ಟು ದಿನ ಕಳೆಯಿತು. ಇನ್ನೇನು ಹಾರುವ ದಿನದ ಕ್ಷಣಗಣನೆ ನಡೆಯುತ್ತಿರುವಾಗ ರಾಕೆಟ್ ಕಳಚಿ ಬೀಳಬೇಕಾಗಿದ್ದ ಸಮುದ್ರ ಪ್ರದೇಶದಲ್ಲಿ ನಿಷೇಧವಿದ್ದರೂ ಹಡಗೊಂದು ಚಲಿಸುತ್ತಿರುವುದು ಕಂಡುಬಂದಿತು. ದೂರಹೋಗಲು ಅದಕ್ಕೆ ಆಣತಿ ನೀಡುತ್ತಿರುವಂತೆಯೇ ಡಾನ್ ನ ಏರು ಮಾರ್ಗದಲ್ಲಿ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಅಡ್ಡ ಬರುವ ಸೂಚನೆ ದೊರಕಿತು. ಅದೂ ದೂರ ಚಲಿಸಿದ ನಂತರ ಅಂತೂ 2007 ರ ಸೆಪ್ಟೆಂಬರ್À ಹತ್ತರಂದು ಡಾನ್ ಅಂತರಿಕ್ಷನೌಕೆ ದೂರದ ಪಯಣವನ್ನು ಆರಂಭಿಸಿತು.
*ಕ್ಷುದ್ರಗ್ರಹಗಳ ಪಟ್ಟಿ: ಆ ಕಡೆ ನಾಲ್ಕು, ಈ ಕಡೆ ನಾಲ್ಕು (ಪ್ಲೂಟೋ ಈಗ ಗ್ರಹವಲ್ಲ) ಹೀಗೆ ಎಂಟು ಗ್ರಹಕಕ್ಷೆಗಳ ನಡುವಿನ ತೆಳ್ಳನೆಯ ನಡುಪಟ್ಟಿ ಇದು. ಇದರಲ್ಲಿ ಲಕ್ಷಗÀಟ್ಟಲೆ ವಿವಿಧ ಆಕಾರದ, ವಿವಿಧ ಬಣ್ಣದ ಲೋಹ ಮತ್ತು ಬಂಡೆಚೂರುಗಳು ಹಾಗೂ ಧೂಳಿನ ಮೋಡಗಳು ಸೂರ್ಯನ ಸುತ್ತ ಗಿರಗಿಟ್ಲೆ ಸುತ್ತುತ್ತಿವೆ. ಪ್ರಮುಖ ಎಂಟುಗ್ರಹಗಳಿಗಿಂತ ಆಕಾರದಲ್ಲಿ ಚಿಕ್ಕದಾಗಿರುವ ಹಾಗೂ ಸೂರ್ಯನ ಪ್ರದಕ್ಷಿಣೆ ಹಾಕುತ್ತಿರುವ ಈ ಕಾಯಗಳಿಗೆ ‘ಕ್ಷುದ್ರಗ್ರಹಗಳು’ ಎಂದು ಹೆಸರು. ಇವುಗಳಲ್ಲಿ ಸುಮಾರು ಒಂದು ಲಕ್ಷದಷ್ಟನ್ನು ಎಣಿಕೆ ಮಾಡಲಾಗಿದೆ, 12 ಸಾವಿರದಷ್ಟನ್ನು ಹೆಸರಿಸಲಾಗಿದೆ. ಇವೆಲ್ಲವುಗಳನ್ನು ಕ್ಷುದ್ರಗ್ರಹಗಳು ಎಂದು ಕರೆಯಲಾಗುತ್ತಿದೆ. ಆಗೀಗ ನಮಗೆ ಬಾನಿನಿಂದುದುರುವ ಉಲ್ಕೆಗಳು ಕಂಡು ಬರುತ್ತವಲ್ಲ? ಅವು ಇದೇ ಪಟ್ಟಿಯಲ್ಲಿ ನಡೆಯುವ ಗುದ್ದಾಟದ ಪರಿಣಾಮವಾಗಿ ಭೂಮಿಯತ್ತ ಜಿಗಿಯುವ ವಸ್ತುಗಳು. ಈ ಪಟ್ಟಿಯ ಆಚೆ ಸುತ್ತುತ್ತಿರುವ ಬೃಹದ್ ಕಾಯ ಗುರುಗ್ರಹ. ಈವರೆಗಿನ ಅನ್ವೇಷಣೆಗಳ ಪ್ರಕಾರ ನಾನೂರರವತ್ತು ಕೋಟಿ ವರ್ಷಗಳ ಹಿಂದೆ ಸೌರವ್ಯೂಹ ಉಗಮವಾಗುತ್ತಿರುವಾಗ, ಈ ವಲಯದಲ್ಲಿ ಪಯಣಿಸುತ್ತಿದ್ದ ಪುಟ್ಟ ಪುಟ್ಟ ಕಾಯಗಳು ಗುರುತ್ವದ ಸೆಳೆತದಲ್ಲಿ ಒಂದಾಗಿ ದೊಡ್ಡದಾಗುತ್ತ ಗ್ರಹಗಳಾಗುವ ಸಂಭವವನ್ನು ತಪ್ಪಿಸಿದ್ದು ಗುರು ಗ್ರಹ. ಏಕೆಂದರೆ ಭರ್ರೆಂದು ಹಾರುತ್ತಿದ್ದ ಗುರುವಿನ ಗುರುತ್ವ ಈ ಪುಟ್ಟ ಕಾಯಗಳ ಕಕ್ಷಾಪಥವನ್ನೇ ತಪ್ಪಿಸಿ ಅವು ಒಂದಾಗುವ ಅವಕಾಶವನ್ನೇ ನೀಡುತ್ತಿಲ್ಲ.
ಇವುಗಳಲ್ಲಿ ಅತಿ ದೊಡ್ಡ ಕಾಯ ಸಿರಿಸ್. ಕ್ಷುದ್ರಗ್ರಹಗಳ ವಲಯಕ್ಕೆ ಅದ್ಯಾವುದೋ ತಪ್ಪಿನಿಂದಾಗಿ ಸಿಕ್ಕಿಬಿದ್ದಂತೆ ತೋರುವ ಭಾರವಾದ ಕಾಯ ಸಿರಿಸ್. ಏಕೆಂದರೆ ಉಳಿದ ಕ್ಷುದ್ರಗ್ರಹಗಳಂತೆ ಜಜ್ಜಿದ ಬಟಾಟೆಯ ಆಕಾರದ ಬದಲಾಗಿ ದುಂಡಗಿರುವ ಸಿರಿಸ್ ಮೇಲ್ಮೈನಲ್ಲಿ ದಪ್ಪನಾದ ಹಿಮ ಕವಚ ಹಾಗೂ ಒಳಗಡೆ ವಿವಿಧ ಪದರಗಳನ್ನು ಹೊದ್ದಿರುವ ಕಪ್ಪು ಕಾಯ. ಇದರ ವ್ಯಾಸ ಸುಮಾರು 930 ಕಿಮೀ. 1801 ರಲ್ಲಿ ಇದರ ಪತ್ತೆಯಾದಾಗಿನಿಂದ, ಇದರ ದುಂಡನೆಯ ಆಕಾರದಿಂದಾಗಿ ಮುಂದಿನ ಐವತ್ತು ವರ್ಷಗಳ ಕಾಲ ಎಂಟನೆಯ ಗ್ರಹವೆಂದೇ ಹೆಸರುಪಡೆದಿತ್ತಿದು. ಈಗಿದನ್ನು ಕಿರುಗ್ರಹ ಎಂದು ಕರೆಯಲಾಗುತ್ತಿದೆ.
ಎರಡನೆಯ ದೊಡ್ಡ ಕಾಯ ವೆಸ್ತಾ. ಎರಡೂ ಒಂದಕ್ಕೊಂದು ಸಮೀಪವಿದ್ದರೂ ರಚನೆಯಲ್ಲಿ ಅಜಗಜಾಂತರ. 530 ಕಿಮೀ ಅಗಲದ ವೆಸ್ತಾ ಮೊದಲ ನಾಲ್ಕು ಗ್ರಹಗಳಂತೆ ಬಂಡೆಗ್ರಹ. ಹಿಂದೊಂದು ಕಾಲದಲ್ಲಿ ಇದು ಕರಗಿದ ಲಾವಾದಿಂದ ಕೂಡಿದ್ದು ಕಾಲಾಂತರದಲ್ಲಿ ಅದು ಗಟ್ಟಿಯಾಗಿ ಭಾರಲೋಹಗಳು ತಳಕ್ಕೆ ಸೇರಿ ಬಂಡೆಕಲ್ಲುಗಳ ಕವಚ ಉಂಟಾಗಿರಬಹುದೆಂದು ಈವರೆಗಿನ ಶೋಧ ತಿಳಸುತ್ತದೆ. ಎಷ್ಟೋ ವರ್ಷಗಳ ಹಿಂದೆ ಯಾವುದೋ ವಸ್ತು ಢಿಕ್ಕಿ ಹೊಡೆದು ಆಳವಾದ ಕುಳಿಯೊಂದು ವೆಸ್ತಾದಲ್ಲಿ ಒಡಮೂಡಿದೆ. ಅದೆಷ್ಟು ಆಳವಾಗಿದೆಯೆಂದರೆ ವೆಸ್ತಾದ ಗರ್ಭದೊಳಗಿನ ರಚನೆಯೂ ಕಂಡುಬರುತ್ತಿವೆ. ಇದೇನಾದರೂ ನಿಜವಾದಲ್ಲಿ, ಭೂಮಿಯಂತೆ ಶಿಲಾಗ್ರಹವಾದ ವೆಸ್ತಾವನ್ನು ಅಧ್ಯಯನ ಮಾಡಿ ಭೂಮಿಯ ರಚನೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಈ ಕುಳಿಯಿರುವ ಭಾಗವೇ ಈಗ ಡಾನ್‍ಗೆ ಎದುರಾಗಿದೆ.
ಸರೋಜ ಪ್ರಕಾಶ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!