ದಿನಾಲು ಬೆಳಿಗ್ಗೆ, ಸಂಜೆ, ರಸ್ತೆಯಲ್ಲಿ ಎದುರಾಗುವ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಯಾರನ್ನು ಕೇಳಿದರೂ ಒಂದಲ್ಲಾ ಒಂದು ಟ್ಯೂಷನ್ ಗೆ ಹೋಗಿ ಬರುತ್ತಿರುವುದಾಗಿ ಉತ್ತರಿಸುವ ದೃಶ್ಯ ಸಾಮಾನ್ಯವಾಗುತ್ತಿದೆ. ಶಾಲೆ ಕಾಲೇಜುಗಳ ಅವಧಿ ಪ್ರಾರಂಭವಾಗುವುದಕ್ಕೆ ಮುನ್ನ, ಅವಧಿ ಮುಗಿದ ಅನಂತರ ಕೂಡಾ ಹೀಗೆ ಟ್ಯೂಷನ್ – ಟ್ಯೂಷನ್ ಎಂದು ಒಂದೆಡೆಯಿಂದ ಇನ್ನೊಂದೆಡೆ ಸುತ್ತುವ ಇವರೆಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಮನೆಯಲ್ಲಿ ಏನು ಮಾಡುತ್ತಾರೆ?. ಬದುಕೆಂದರೆ ಬರೀ ಮೂರೂ ಹೊತ್ತು ಓದುತ್ತಲೇ ಇರುವುದೋ ಹೇಗೆ? ಆಟೋಟ, ಮನರಂಜನೆ ಇವರ ಪಾಲಿಗೆ ಮುಗಿದ ಅಧ್ಯಾಯವೇ? ಪ್ರಶ್ನೆಗಳ ಪ್ರಾರಂಭದಲ್ಲಿ ಕೇಳಬೇಕಾದ ಪ್ರಶ್ನೆ ಟ್ಯೂಷನ್ ಎಂದರೆ ಏನು?
ಇಂಗ್ಲೀಷ್ ನಿಘಂಟಿನಲ್ಲಿ ತಿಳಿಸಿದ ಪ್ರಕಾರ ಈ ಪದದ ಮೂಲ ಲ್ಯಾಟಿನ್ ಮೂಲಾರ್ಥ ಕಾಳಜಿವಹಿಸು ಎಂದು. ಅಂದರೆ ಮಕ್ಕಳ ಕುರಿತು ಕಾಳಜಿ ತೋರುವುದು. ಅವರ ವಿದ್ಯಾಭ್ಯಾಸದ ಕುರಿತು ಕಾಳಜಿ ತೋರುವುದು. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದು. ಅವರನ್ನು ತಿದ್ದಿ ತಿಳಿಹೇಳಿ ಬುದ್ಧಿವಂತರನ್ನಾಗಿಸುವುದು. ಅದನ್ನು ಮಾಡುವವರೇ ಟ್ಯೂಟರ್. ಅಂದರೆ ಸಾಮಾನ್ಯ ಅರ್ಥದಲ್ಲಿ ಕಲಿಸುವವರು. ಸ್ವಾರಸ್ಯವೆಂದರೆ ಸ್ಕಾಟ್ ಕಾನೂನಿನನ್ವಯ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗ ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಪಾಠ ಹೇಳುವವನು. ಆದರೆ ಈಗ ಈ ದೇಶದ ಸಂದರ್ಭದಲ್ಲಿ ವಯಸ್ಸಿನ ನಿಬಂಧನೆಗಳೇನೂ ಇಲ್ಲ. ಅಲ್ಲಿಯ ಕಾನೂನಿನ ಹಿಂದಿನ ಉದ್ದೇಶ ಬೇರೆಯದ್ದೇ ಇದ್ದಿರಬಹುದು.
ನಮ್ಮಲ್ಲೂ ಈ ಟ್ಯೂಷನ್ ಗೆ ಸಮನಾರ್ಥಕವಾಗಿ ಮನೆ ಪಾಠ ಮತ್ತು ಖಾಸಗೀ ಪಾಠಗಳೆಂಬ ಪದಗಳನ್ನು ಬಳಸುತ್ತೇವೆ. ಹಿಂದೆ ಊರಿನಲ್ಲಿ ತಿಳಿದ ವಿದ್ಯಾಭ್ಯಾಸ ಬಲ್ಲ ಯಾರೂ ತಮ್ಮ ಮನೆಯಲ್ಲೇ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಪಾಠ ಹೇಳುವ ಕ್ರಮವಿತ್ತು. ಕಾಲ ಬದಲಾದಂತೆ ಕಲಿಕೆಗೆ ಶುಲ್ಕ ಎಂಬುದು ಬಂದ ಅನಂತರ ಅದು ಖಾಸಗೀ ಪಾಠವಾಗಿ ಪರಿವರ್ತನೆ ಹೊಂದಿರಲಿಕ್ಕೆ ಸಾಕು. ಅಂದರೆ ಶಾಲೆ ಕಾಲೇಜುಗಳಲ್ಲಿನ ಪಾಠಗಳಿಗೆ ಸರ್ಕಾರ ಅಥವಾ ಸಂಸ್ಥೆ ಸಂಬಳ ನೀಡುತ್ತದೆ. ಆ ಶಾಲಾ ಕಾಲೇಜುಗಳ ಅವಧಿಯ ಅಚೀಚಿನ ಅವಧಿಯಲ್ಲಿ ಖಾಸಗಿಯಾಗಿ ಅದೇ ಶಿಕ್ಷಕರು ಅಥವಾ ಬೇರೆ ಯಾರೋ ಅದನ್ನೇ ಹೆಚ್ಚುವರಿಯಾಗಿ ಕಲಿಸಿದರೆ ಅದು ಖಾಸಗೀ ಪಾಠ ಮತ್ತು ಅದಕ್ಕೆ ನೀಡುವ ಶುಲ್ಕ ಖಾಸಗೀ ಶುಲ್ಕ.
ಶಾಲೆ ಕಾಲೇಜುಗಳಿಗೆ ನೀಡುವ ಶುಲ್ಕದ ಜೊತೆಗೆ ಈ ಶುಲ್ಕವೂ ಸೇರಿದರೆ ಒಟ್ಟು ಮೊತ್ತ ಹೆಚ್ಚಾಗುತ್ತಲೇ ಸಾಗುತ್ತದೆ. ಶಾಲೆ ಕಾಲೇಜುಗಳಿಗೆ ಶುಲ್ಕದ ಮೊತ್ತ ನಿರ್ದಿಷ್ಟವಾಗಿದ್ದರೆ ಖಾಸಗೀ ಶುಲ್ಕದ ಮೊತ್ತ ಅವುಗಳನ್ನು ನಡೆಸುವವರ ಮರ್ಜಿಗನುಗುಣವಾಗಿರುತ್ತದೆ. ಇದು ಸಾಮಾನ್ಯ ಜನರಿಗೆ ಭರಿಸಲು ಕಷ್ಟಕರ ಎಂಬುದು ನಿಜವಾದರೂ ಸಾಮಾನ್ಯ ಜನರು ಕೂಡಾ ಈ ಟ್ಯೂಷನ್ ತರಗತಿಗಳಿಗೆ ಮುಗಿ ಬೀಳುತ್ತಿರುವುದರ ಕಾರಣ ಮಾತ್ರ ಅರ್ಥವಾಗುವುದು ಸ್ವಲ್ಪ ಕಷ್ಟ.
ಟ್ಯೂಷನ್ ಬೇಕಾಗಿರುವುದು ತರಗತಿಯಲ್ಲಿ ಹೇಳಿದ ಪಾಠಗಳು ತಲೆಗೆ ಹತ್ತದ ಯಾ ಹತ್ತಿಸಿಕೊಳ್ಳದ ದಡ್ಡ ವಿದ್ಯಾರ್ಥಿಗಳಿಗೆ ಎಂಬ ನಂಬಿಕೆ ಒಂದು ಕಾಲದಲ್ಲಿತ್ತು. ಆದರೆ ಇಂದು ಟ್ಯೂಷನ್ ಗೆ ಕಳಿಸದಿದ್ದರೆ ದಡ್ಡರಾಗುತ್ತಾರೆ ಎಂಬ ನಂಬಿಕೆ ಬಲವಾಗುತ್ತಿದೆ. ಹಾಗಾಗಿ ಇಂದು ಟ್ಯೂಷನ್ ಸೆಂಟರುಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದೆ. ಜನರ ನಂಬಿಕೆಗಳನ್ನು ಬಂಡವಾಳವನ್ನಾಗಿಸಿಕೊಳ್ಳುವ ಕಲೆ ಅವುಗಳಿಗೆ ಕರಗತವಾಗಿದೆ. ಆದರೆ ಇದು ಅಷ್ಟು ಸರಳವೂ ಅಲ್ಲ. ಟ್ಯೂಷನ್ ತರಗತಿಗಳಲ್ಲಿ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಅವಧಿಯಲ್ಲಿ ತಪ್ಪದೇ ಪಾಠ ದೊರೆಯುತ್ತದೆ. ನೋಟ್ಸ್ ದೊರೆಯುತ್ತದೆ. ಪರಿಕ್ಷಾ ಪ್ರಶ್ನೆ ಪತ್ರಿಕೆಗಳ ಮಾದರಿ ಮತ್ತು ಮಾದರಿ ಉತ್ತರಗಳು ಸಿಗುತ್ತದೆ. ತಿಳಿಯದ್ದನ್ನು ಕೇಳಿ ತಿಳಿದುಕೊಳ್ಳಲು ಆಗುತ್ತದೆ ಎಂಬುದು ಮಾತ್ರ ಸತ್ಯ.
ಶಾಲೆ ಕಾಲೇಜುಗಳಲ್ಲಿ ಮಾತ್ರ ಇವೆಲ್ಲಾ ಸಾಧ್ಯವಾಗುವುದಿಲ್ಲವೇ? ಪ್ರಶ್ನೆ ಸುಲಭ. ಉತ್ತರ ಕಷ್ಟ. ಬಹುತೇಕ ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇರುವುದಿಲ್ಲ. ಖಾಸಗೀ ಸಂಸ್ಥೆಗಳು ಇದ್ದುದರಲ್ಲೇ ವಾಸಿ. ಹಾಗಾಗಿ ವೈಯಕ್ತಿಕವಾಗಿ ವಿದ್ಯಾರ್ಥಿಗಳತ್ತ ಗಮನ ಶಿಕ್ಷಕರಿಗೂ ಅಸಾಧ್ಯ. ಅಷ್ಟಲ್ಲದೇ ಎಲ್ಲಾ ವಿಷಯಗಳಿಗೂ ಶಿಕ್ಷಕರು ಇದ್ದೇ ಇರುತ್ತಾರೆಂಬ ಖಾತ್ರಿ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಪಾತದಲ್ಲಿ ಶಿಕ್ಷಕರು ಇರುವುದಿಲ್ಲ. ಕೊಠಡಿಗಳ ಸಮಸ್ಯೆ ವೇಳಾಪಟ್ಟಿ ಹೊಂದಿಸುವ ಸಮಸ್ಯೆ ಹೀಗಾಗಿ ಒಂದು ಹಂತದಲ್ಲಿ ಈ ಶಾಲಾ ಕಾಲೇಜುಗಳೇ ವಿದ್ಯಾರ್ಥಿಗಳನ್ನು ಅನಿವಾರ್ಯವಾಗಿ ಟ್ಯೂಷನ್ ಸೆಂಟರ್ ಗಳತ್ತ ಕಳಿಸುತ್ತಿವೆಯೇನೋ ಅನಿಸುತ್ತದೆ. ಹಾಗೇ ಶಾಲಾ ಕಾಲೇಜುಗಳಲ್ಲಿನ ಶಿಕ್ಷಕ ವರ್ಗದಲ್ಲಿ ವೃತ್ತಿಯ ಮೇಲಿನ ಪ್ರೀತಿಗಿಂತ ಹೆಚ್ಚಾಗಿ ವಿತ್ತದ ಮೇಲೆ ಪ್ರೀತಿ ಹೊಂದಿಸಿದವರು. ತಮ್ಮದೇ ಟ್ಯೂಷನ್ ಸೆಂಟರ್ ಗಳನ್ನು ಪ್ರಾರಂಭಿಸಿ ಅನಿವಾರ್ಯವಾಗಿ ತಮ್ಮ ವಿದ್ಯಾರ್ಥಿಗಳೇ ಅದಕ್ಕೆ ಬರುವಂತೆ ವ್ಯವಸ್ಥಿತವಾಗಿ ಸಂಚು ಮಾಡುತ್ತಿದ್ದರೂ ಮಾಡುತ್ತಿರಬಹುದೆಂಬ ಗುಮಾನಿ ಇದೆ.
ಈ ಟ್ಯೂಷನ್ ಮೋಹದಿಂದ ವಿದ್ಯಾರ್ಥಿಗಳು ಹೊರ ಬರಬೇಕೆಂದರೆ ಮೊದಲು ಶಾಲಾ ಕಾಲೇಜುಗಳೇ ಟ್ಯೂಷನ್ ಸೆಂಟರ್ ಗಳಂತೆ ಕಾರ್ಯ ನಿರ್ವಹಿಸುವಂತೆ ಆದರೆ ಸಾಧ್ಯವಾಗಬಹುದು. ಅಂದರೆ ಸಾಕಷ್ಟು ಸಂಖ್ಯೆಯ ಶಿಕ್ಷಕ ವರ್ಗ ಮತ್ತು ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಮಿತಿ ಮತ್ತು ಕೊಠಡಿಗಳ ಲಭ್ಯತೆ ಇಷ್ಟಾದರೆ ಬಹಳಷ್ಟು ಸುಧಾರಣೆಯಾಗಬಹುದು.
ಟ್ಯೂಷನ್ ಪಡೆಯುವ ಮಕ್ಕಳೆಲ್ಲಾ ಬುದ್ಧಿವಂತರಾಗಿರುತ್ತಾರೆ. ರ್ಯಾಂಕ್ ಗಳಿಸುತ್ತಾರೆ ಎಂಬುದು ಮಾತ್ರ ಭ್ರಮೆ. ಯಾಕೆಂದರೆ ಶಾಲಾ ಕಾಲೇಜು ಟ್ಯೂಷನ್ ಎಂದು ಸುತ್ತಿ ಸುತ್ತಿ ಸುಸ್ತಾಗುವ ವಿದ್ಯಾರ್ಥಿಗಳ ಮಾನಸಿಕ ಒತ್ತಡಕ್ಕೆ ತುತ್ತಾಗುವ ಸಾಧ್ಯತೆಯೇ ಅಧಿಕ.
ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ಒಂದೆಡೆ ಟ್ಯೂಷನ್ ಗೆ ಹೋಗುವ ವಿದ್ಯಾರ್ಥಿಗಳು ಇನ್ನೊಂದೆಡೆ ಟ್ಯೂಷನ್ ಗೆ ಹೋಗಲಾರದ ವಿದ್ಯಾರ್ಥಿಗಳು. ಹೀಗೆ ವಿದ್ಯಾರ್ಥಿಗಳಲ್ಲೇ ಎರಡು ಬಣ ಸೃಷ್ಠಿಯಾಗಿದೆ. ಟ್ಯೂಷನ್ ಗೆ ಹೋಗುವವರ ಧಿಮಾಕು ಒಂದೆಡೆಯಾದರೆ ಹೋಗಲಾಗದವರ ಕೀಳರಿಮೆ ಇನ್ನೊಂದೆಡೆ. ಇದಕ್ಕಿಂತ ಹೆಚ್ಚು ಆತಂಕದ ಸಂಗತಿಯೆಂದರೆ ಟ್ಯೂಷನ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಶಾಲಾ ಕಾಲಾಜಿನ ಪಾಠವೆಂದರೆ ಅಸಡ್ಡೆ. ಹೇಗೂ ಟ್ಯೂಷನ್ ಕ್ಲಾಸ್ ಗಳಲ್ಲಿ ಹೇಳಿಕೊಡುತ್ತಾರೆ. ಅಥವಾ ಹೇಳಿಕೊಟ್ಟಿದ್ದಾರೆ ಎಂದು. ಇವರ ಅಸಡ್ಡೆ ತರಗತಿಗಳಲ್ಲಿ ಅವರು ಅನ್ಯ ಮನಸ್ಕರಾಗಿರುವುದರಿಂದ ಮತ್ತು ಅನಾವಶ್ಯಕವಾದ ತಂಟೆ ತಕರಾರು ಪಿಸುಗುಟ್ಟುವಿಕೆಯಿಂದಲೂ ಪ್ರಕಟವಾಗುತ್ತಲೇ ಇದ್ದಾಗ ಶಾಲಾ ಕಾಲೇಜುಗಳಲ್ಲಷ್ಟೇ ಕಲಿಯಲು ಬಂದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಪಾಠ ಕೇಳುವಲ್ಲಿ ಕಿರಿಕಿರಿ. ಹಾಗೆಯೇ ಪ್ರಾಮಾಣಿಕವಾಗಿ ಪಾಠ ಹೇಳಲು ಬಂದ ಶಿಕ್ಷಕರಿಗೂ ಕಿರಿಕಿರಿಯಾಗಿ ಒಟ್ಟಾರೆ ವ್ಯವಸ್ಥೆಯೇ ಹದಗೆಡುತ್ತದೆ. ಆಗ ಪ್ರಾಮಾಣಿಕವಾಗಿ ಶಾಲಾ ಕಾಲೇಜುಗಳಲ್ಲಿ ಓದಲು ಬಂದವರು ಕೂಡಾ ಟ್ಯೂಷನ್ ಗಳತ್ತ ಮುಖ ಮಾಡುವಂತಾದರೆ ಯಾರನ್ನು ದೂಷಿಸಬೇಕು? ವ್ಯವಸ್ಥೆಯನ್ನು ಸರಿಪಡಿಸುವವರ್ಯಾರು? ಈ ಪ್ರಶ್ನೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು? ಎಂಬ ಪ್ರಶ್ನೆಯಂತೆ.
ಹೀಗೆ ಟ್ಯೂಷನ್ ಸೆಂಟರ್‍ಗಳು ಜನಪ್ರಿಯಗೊಳ್ಳುತ್ತಾ ಅವುಗಳ ಮಾಯೆಗೆ ವಿದ್ಯಾರ್ಥಿಗಳು ಒಳಗಾಗುತ್ತಿರುವ ಸತ್ಯವನ್ನು ಕಂಡುಕೊಂಡ ಟ್ಯೂಷನ್ ಸೆಂಟರ್‍ಗಳು ಇತ್ತೀಚಿಗಿನ ವರ್ಷಗಳಲ್ಲಿ ಕಂಪ್ಯೂಟರ್ ಕಲಿಕೆಗೆ ಸರಾಗವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿಸುವುದಕ್ಕೆ ಹೀಗೆ ಇಂದಿನ ಅಗತ್ಯಗಳಿಗೆ ತಕ್ಕಂತೆ ಶಾಖೆಗಳನ್ನು ತೆರೆಯುತ್ತಿದೆ. ಹೀಗಾಗುತ್ತಾ ಸಾಗಿದಂತೆ ಶಾಲಾ ಕಾಲೇಜುಗಳೂ ನಾಮಕಾವಸ್ಥೆಯಾಗುತ್ತಾ ಅವು ವಿದ್ಯಾರ್ಥಿಗಳಿಗೆ ಮಂಡಳಿ, ಅಥವಾ ವಿಶ್ವವಿದ್ಯಾನಿಲಯದ ಅಂಕಪಟ್ಟಿ ಪದವಿ ಪಟ್ಟಿಗಳನ್ನು ನೀಡುವುದಕ್ಕೆ ಸೀಮಿತವಾದರೆ?
ಭಯವೇನೋ ಸಹಜ. ಹಾಗೆಯೇ ವಿದೇಶಿ ವಿಶ್ವವಿದ್ಯಾಲಯಗಳು ಈ ದೇಶದಲ್ಲಿ ತಳವೂರಲು ನಡೆಸಿರುವ ಹುನ್ನಾರ, ಅವುಗಳ ಪ್ರಭಾವ ಇವನ್ನು ಯೋಚಿಸುವುದು ಸೂಕ್ತ. ಪ್ರಪಂಚದ ಮಾರುಕಟ್ಟೆಗೊದಗುವಂತೆ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಗುರಿಹೊತ್ತು ಅವೆಲ್ಲಾ ಬರುತ್ತಿವೆ ಎಂಬುದು ಸತ್ಯವೋ? ಅಥವಾ ಹಣಗಳಿಕೆಗೆ ಇದೂ ಒಂದು ಲಾಭದಾಯಕ ದಂಧೆ ಎಂದುಕೊಂಡು ಬರುತ್ತಿರುವುದು ಸತ್ಯವೋ ಎಂದು ಕಾಲವೇ ನಿರ್ಧರಿಸಬೇಕು. ಆದರೆ ಲಾಭವಿಲ್ಲದೇ ಹೊರಗಿನವರೆಲ್ಲಾ ಬರುವುದಿಲ್ಲ ಎಂಬುದಂತೂ ಸತ್ಯ. ಅವರು ಬಂದಾಕ್ಷಣ ಇಲ್ಲಿನ ವ್ಯವಸ್ಥೆ ಬುಡಮೇಲಾಗುತ್ತದೆ ಎಂದು ಭಾವಿಸಬೇಕಿಲ್ಲ. ಅವು ಹೆಚ್ಚೆಂದರೆ, ಹೆಚ್ಚಿನ ಶುಲ್ಕ ವಸೂಲಿಯ ಹೊಸ ಅವತಾರದ ಟ್ಯೂಷನ್ ಸೆಂಟರ್ ಗಳಾಗಿ ಇರಬಹುದು. ದುಡ್ಡುಳ್ಳವರಿಗೆ, ದೊಡ್ಡ ದೊಡ್ಡ ಷಹರದವರಿಗೆ, ಅವು ಆಕರ್ಷಕವಾಗಬಹುದು.
ಆದರೆ, ದೇಶದ ಗ್ರಾಮಾಂತರ ಪ್ರದೇಶದ ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಅಧಿಕವಾಗಿರುವಲ್ಲಿ ಇಲ್ಲಿಯ ಸರಕಾರೀ ಅಥವಾ ಖಾಸಗೀ ಶಿಕ್ಷಣ ಸಂಸ್ಥೆಗಳೇ ನಿಜವಾದ ಅರ್ಥದಲ್ಲಿ ವಿದ್ಯಾದಾನ ನೀಡುವಂಥವುಗಳಾಗಿರುತ್ತದೆ. ಬಡ ವಿದ್ಯಾರ್ಥಿಗಳ ಆಶಾಕಿರಣ ಅವೇ ಅಗಿರುತ್ತದೆ. ಅಲ್ಲಿನ ಲೋಪದೋಷಗಳೇನೇ ಇದ್ದರೂ ಒಂದು ಮಿತಿಯಲ್ಲಿ ಅವುಗಳ ಸೇವೆ ಸಾರ್ಥಕವಾಗಿದ್ದಾಗಿರುವುದರಲ್ಲಿ ಸಂದೇಹವಿಲ್ಲ. ಕಲೆಗೆ ಬೇಕಾದ್ದು ಕಲಿಯ ಬೇಕೆಂಬ ಹಸಿವು. ಅದನ್ನು ಹಿಂಗಿಸಿಕೊಳ್ಳಲು ಶಾಲಾ ಕಾಲೇಜುಗಳಲ್ಲೇ ಇರುವ ಅವಕಾಶಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುವ ನೈಪುಣ್ಯತೆ ಇದ್ದಲ್ಲಿ ಹೊರಗಿನ ಥಳುಕು ಬಳುಕಿನ ಕುರಿತು ಮೋಹಿತವಾಗಬೇಕಾದ್ದೂ ಇಲ್ಲ. ಬೆದರ ಬೇಕಾದ್ದೂ ಇಲ್ಲ. ಅಧಿಕ ಹಣ ತೆತ್ತರಷ್ಟೇ ಅಧಿಕ ಜ್ಞಾನ ಪ್ರಾಪ್ತವಾಗುತ್ತದೆ ಎಂಬುದು ಭ್ರಮೆ.
ಕೊನೆಯ ಮಾತು. ಬಂಗಾರ ಸುಂದರ ಬೆಲೆಯುಳ್ಳದ್ದು. ಆಭರಣಕ್ಕಾದೀತು. ಆದರೆ ದಿನ ನಿತ್ಯದ ಈ ನೆಲದ ಕಾಯಕಕ್ಕೆ ಕತ್ತಿ, ಕುಡುಗೋಲು, ಹಾರೆ, ಗುದ್ದಲಿಗಳನ್ನು ತಯಾರಿಸಲು ಅದರಿಂದಾಗದು. ಅದಕ್ಕೆ ಎಂದಿದ್ದರೂ ಗಟ್ಟಿ ಕಬ್ಬಿಣವೇ ಬೇಕು. ಕಬ್ಬಿಣದ ಕಾಯಕ ಬಂಗಾರವನ್ನು ಎಳೆದು ತಂದೀತು.
ರವೀಂದ್ರ ಭಟ್ ಕುಳಿಬೀಡು
- Advertisement -
- Advertisement -
- Advertisement -
- Advertisement -