35.1 C
Sidlaghatta
Friday, March 29, 2024

ನೋಡಿದಿರಾ ಧೂಮಕೇತುವಿನ ನೆತ್ತಿಗೆ ಕೊಟ್ಟ ಪೆಟ್ಟನ್ನು?

- Advertisement -
- Advertisement -

ದೂರದ ಆಗಸದಲ್ಲಿ ಪಟಾಕಿಯ ಸಿಡಿತ, ಶಬ್ದವಾಯಿತೇ? ತಿಳಿಯಲಿಲ್ಲ. ನೋಡಲು ಆ ದೃಶ್ಯ ಮಾತ್ರ ಗೋಚರವಾಯಿತು ಅದೂ ಟಿವಿ ಪರದೆಯ ಮೇಲೆ. ಅಂದು ೨೦೦೫ರ ಜುಲೈ ತಿಂಗಳ ನಾಲ್ಕನೇ ದಿನ. ಅಮೆರಿಕನ್ನರಿಗೆ ಸ್ವಾತಂತ್ರ ದಿನಾಚರಣೆಯ ದಿನ. ಅಂದು ಜನರಿಗೆ ಕೊಡುಗೆಯಾಗಿ ಅಮೆರಿಕದ ಪ್ರತಿಷ್ಠಿತ ನಾಸಾ ಅಥವಾ ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಟೆಂಪೆಲ್-೧ ಎಂಬ ಹೆಸರಿನ ಧೂಮಕೇತುವಿಗೆ ಸುತ್ತಿಗೆಯೇಟು ನೀಡುವುದನ್ನು ಬೃಹತ್ ಪರದೆಯ ಮೇಲೆ ತೋರಿಸ ಹೊರಟಿತ್ತು. ಅಂದು ಹವಾಯಿ ನಡುಗಡ್ಡೆಯ ವೈಕಿಕಿ ಬೀಚಿನಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಅಮೆರಿಕನ್ನರು ಈ ಕೌತುಕವನ್ನು ವೀಕ್ಷಿಸಿದರು. ನಿಗದಿತ ಸಮಯಕ್ಕೆ ಸರಿಯಾಗಿ ಸುತ್ತಿಗೆಯೇಟು ಧೂಮಕೇತುವಿನ ತಲೆಯಭಾಗಕ್ಕೆ ಜೋರಾಗಿ ಅಪ್ಪಳಿಸಿತು. ಬಿಳಿಯ ಮೋಡ ಟೆಂಪೆಲ್-೧ ರ ಶಿರಭಾಗದಿಂದ ಭುಗಿಲ್ಲೆಂದು ಮೇಲೆದ್ದಿತು. ಚಂದ್ರಾ ವೀಕ್ಷಣಾಲಯ, ಹಬ್ಬಲ್ ದೂರದರ್ಶಕ ಅಲ್ಲದೆ ಇನ್ನೂ ಅನೇಕ ಪ್ರಯೋಗಾಲಯಗಳು ಈ ಅಭೂತಪೂರ್ವ ಘಟನೆಯನ್ನು ದಾಖಲಿಸಿದವು. ನೆರೆದ ನಾಸಾದ ವಿಜ್ಞಾನಿಗಳು ‘ಓಹ್! ನಾವಿಂದು ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸಿದೆವು’ ಎಂದು ಅಭಿನಂದನೆಗಳನ್ನು ಹಂಚಿಕೊಂಡರು.
ಧೂಮಕೇತುಗಳ ದರ್ಶನವೆಂದರೆ ಅಪಶಕುನವೆಂದು ಭೂಮಿಯ ಎಲ್ಲಾ ಕಡೆ ನಂಬಿಕೆಯಿದ್ದ ಕಾಲವೊಂದಿತ್ತು. ಆದರೀಗ ಮುಂದುವರೆದ ವಿಜ್ಞಾನ ತಂತ್ರಜ್ಞಾನಗಳು ಧೂಮಕೇತುಗಳ ಕುರಿತಾದ ಸಾಕಷ್ಟು ವಿವರಗಳನ್ನು ಕಂಡುಹಿಡಿದಿವೆ. ಇಪ್ಪತ್ತೊಂದನೇ ಶತಮಾನದ ವಿಜ್ಞಾನ ಒಂದು ಕಾಲಕ್ಕೆ ಅಪಶಕುನಕಾರಿಯಾಗಿದ್ದ ಧೂಮಕೇತುವೆಂಬ ವಸ್ತುವಿನ ತಲೆಬುರುಡೆಗೇ ಏಟು ನೀಡುವಷ್ಟು ಮುಂದುವರೆದಿದೆ.
ಆ ಕೆಲಸ ಸುಲಭವಾಗಿರಲಿಲ್ಲ. ಟೆಂಪೆಲ್-೧ ಹೆಸರಿನ ಆ ಧೂಮಕೇತು ೧೩ ಕೋಟಿ ಕಿ.ಮೀ. ಆಚೆ ಅತಿ ವೇಗದಲ್ಲಿ ಓಡುತ್ತಿತ್ತು (ಗಂಟೆಗೆ ೩೭ ಸಾವಿರ ಕಿ.ಮೀ.) ಭೂಮಿಯಿಂದ ಹಾರಿ ೧೩ ಕೋಟಿ ಕಿ.ಮೀ. ದೂರವನ್ನು ಸವೆಸಿ ಧೂಮಕೇತುವಿನ ವೇಗಕ್ಕೆ ಸರಿಯಾಗಿ ಓಡಿ ಸಮಯಕ್ಕೆ ಸರಿಯಾಗಿ ಅದರ ತಲೆಗೆ ಸುತ್ತಿಗೆಯನ್ನು ಬೀಸಿ ಕೂಡಲೇ ತಾನು ಅಲ್ಲಿಂದ ಪಾರಾಗಿ ಬರುವಂತಹ ನೌಕೆಯೊಂದು ತಯಾರಾಗಬೇಕಿತ್ತು. ಸುತ್ತಿಗೆಯಾಗಿ ಕಾರ್ಯನಿರ್ವಹಿಸುವ ವಸ್ತು ಕೂಡ ಮಾತೃನೌಕೆಯಿಂದ ಹೊರಬಿದ್ದಕೂಡಲೇ ಅತಿ ವೇಗವಾಗಿ ಸಾಗಿ ಧೂಮಕೇತುವಿನ ತಲೆಯನ್ನಪ್ಪಳಿಸಿ ಆತ್ಮಹತ್ಯೆಗೊಳಗಾಗುವ ಮೊದಲು ಒಂದಿಷ್ಟು ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಬೇಕಿತ್ತು. ಇವೆಲ್ಲವನ್ನೂ ಹಬ್ಲ್ ನಂತಹ ಪ್ರಮುಖ ದೂರದರ್ಶಕಗಳು ದಾಖಲಿಸಬೇಕಿತ್ತು. ಮತ್ತು ಈ ಕಾರ್ಯ ಅಮೆರಿಕದ ಸ್ವಾತಂತ್ರ್ಯ ದಿನದಂದೇ ನಡೆಯಬೇಕಿತ್ತು.
ಮಾನವನ ಜೀವನದಲ್ಲಿ ನಡೆಯುವ ಅವಘಡಗಳಿಗೆ ಧೂಮಕೇತುಗಳ ದರ್ಶನ ಕಾರಣವಲ್ಲವೆಂದು ಸಾಬೀತಾದ ಬಳಿಕವೂ ಈ ಟೆಂಪೆಲ್-೧ ಧೂಮಕೇತುವಿನ ಮೇಲೆ ವಿಜ್ಞಾನಿಗಳಿಗೇಕೆ ಆಕ್ರೋಶ? ಹಾಗೆ ನೋಡಿದರೆ ಧೂಮಕೇತುಗಳ ಮೇಲೆ ವಿಜ್ಞಾನಿಗಳ ಗೃದ ದೃಷ್ಟಿ ಇಂದು ನಿನ್ನೆಯದಲ್ಲ. ಆಗೀಗ ಬೇರೆ ಬೇರೆ ಧೂಮಕೇತುಗಳ ಬಳಿ ಬಾಹ್ಯಾಕಾಶ ನೌಕೆಯನ್ನು ಕಳಿಸಿ ಅತಿ ಸಮೀಪದಿಂದ ಅವುಗಳ ನೋಟದ ಸೆರೆ, ಅವುಗಳ ಬಾಲದಲ್ಲಿರುವ ಅನಿಲಗಳನ್ನು ಸಂಗ್ರಹಿಸುವ ಕಾರ್ಯ ಇತ್ಯಾದಿಗಳು ನಡೆದಿವೆ.
ಧೂಮಕೇತುಗಳ ಬಗ್ಗೆ ದೀರ್ಘವಾದ ಅಧ್ಯಯನದ ಬಳಿಕ ಅವು ಸೌರವ್ಯೂಹದ ಉಗಮದ ಸಮಯದಲ್ಲಿ ಹುಟ್ಟಿಕೊಂಡ ಅನಿಲದ ಚೆಂಡುಗಳಾಗಿದ್ದು ಸೌರವ್ಯೂಹದ ಅತಿ ಹೊರಗಿನ ಕವಚವಾದ ಊರ್ತ್ ಮೋಡ * ಗಳಿಂದ ಹೊರಜಿಗಿದು ಸೂರ್ಯನನ್ನು ಸುತ್ತುಹಾಕುತ್ತವೆಂದು ನಂಬಲಾಗುತ್ತಿದೆ. ಸೌರವ್ಯೂಹದ ಅತಿ ಹೊರಗಿನ ಗ್ರಹವೆಂದರೆ ಪ್ಲೂಟೋ ಅಲ್ಲವೆ? ಈ ಪ್ಲೂಟೋದಿಂದ ಆಚೆ ಮೋಡದಂತಹ ಕವಚವೊಂದು ಕವಿದಿದ್ದು ಅದನ್ನು ಊರ್ತ್ ಮೋಡವೆಂದು ಕರೆಯಲಾಗುತ್ತದೆ. ಈ ಊರ್ತ್ ಕವಚದಲ್ಲಿ ಸುಮಾರು ಮೂವತ್ತು ಸಾವಿರ ಕೋಟಿ ಧೂಮಕೇತುಗಳು ಅವಿತಿವೆ. ಸುತ್ತಲಿನ ವಿಶಾಲ ಆಕಾಶದ ಯಾವುದ್ಯಾವುದೋ ನಕ್ಷತ್ರಗಳ ಪ್ರಭಾವಕ್ಕೆ ಒಳಗಾಗಿ ಅವುಗಳಲ್ಲಿ ಕೆಲವು ಬಾಣ ಚಿಮ್ಮಿದಂತೆ ಸೌರವ್ಯೂಹವನ್ನು ಪ್ರವೇಶಿಸುತ್ತವೆ. ಮುಂದೆ ಸೂರ್ಯನ ಸುತ್ತಲೂ ಗಸ್ತು ತಿರುಗುವುದೇ ಅವುಗಳ ಕೆಲಸ. ಸೌರವ್ಯೂಹಕ್ಕೆ ಪ್ರವೇಶ ಗಿಟ್ಟಿಸಿದ ಧೂಮಕೇತುಗಳೊಂದೊಂದರದ್ದೂ ವಿಭಿನ್ನ ಗುಣ ಲಕ್ಷಣಗಳು. ಅವುಗಳ ಗಾತ್ರ ಬೇರೆ ಬೇರೆ. ಅವುಗಳ ಪರಿಭ್ರಮಣಾ ಅವಧಿ ಅಥವಾ ಸೂರ್ಯನನ್ನು ಒಂದು ಪ್ರದಕ್ಷಿಣೆ ಹಾಕಲು ಅವು ತೆಗೆದುಕೊಳ್ಳುವ ಸಮಯ ಕೂಡ ಬೇರೆ ಬೇರೆ. ಕೆಲವು ನಿಯಮಿತವಾಗಿ ಸೂರ್ಯನನ್ನು ಗಸ್ತು ಹೊಡೆಯುತ್ತಿವೆಯಾದರೆ ಕೆಲವು ಎಲ್ಲೋ ಒಮ್ಮೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತವೆ. ನಮಗೆ ಪರಿಚಿತವಾದ ಹ್ಯಾಲಿ ಧೂಮಕೇತುವನ್ನೇ ತೆಗೆದುಕೊಂಡರೆ ಪ್ರತಿ ಎಪ್ಪತ್ತಾರು ವರುಷಗಳಿಗೊಮ್ಮೆ ಸೂರ್ಯನನ್ನು ಸುತ್ತು ಹಾಕುವ ಇದು ಕಳೆದ ೧೯೮೬ರಲ್ಲಿ ಭೂಮಿಯ ಸಮೀಪ ಬಂದಿತ್ತು.
ಇಷ್ಟಕ್ಕೂ ಧೂಮಕೇತುಗಳ ಒಡಲಾಳದಲ್ಲಿರುವುದೇನು? ಬರೀ ಹಿಮದ ಗಡ್ಡೆ, ಅದೂ ರಾಸಾಯನಿಕಗಳಿಂದ ಕಲುಷಿತವಾದ ಹಿಮದ ತುಂಡು ಎಂದು ಫ಼್ರೆಡ್ ವಿಪಲ್ ಎಂಬ ಸಂಶೋಧಕರ ಅಂಬೋಣ. ಸರಿ ಹಾಗಾದರೆ ಬಿಳಿ ಮೋಡದಂತಹ ಬಾಲವಿದೆಯಲ್ಲ ಅದೇನಿರಬಹುದು? ದೂರದ ನೆಪ್ಚೂನ್ ಅಥವಾ ಕೆಲಬಾರಿ ಪ್ಲೂಟೋ ಆಚೆಯಿಂದಲೂ ಪ್ರತ್ಯಕ್ಷವಾಗುವ ಹಿಮದ ಗಡ್ಡೆ ಸೂರ್ಯನಿಗೆ ಹತ್ತಿರವಾದ ಹಾಗೆ ಕರಗುತ್ತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಗುರುಗ್ರಹದ ಬಳಿ ಬಂದಂತೆ ಕರಗಿ ಆವಿಯಾದ ಅದರ ಸಂಯುಕ್ತ ವಸ್ತುಗಳು ಹೊರಗೆ ಹಾರಲಾರದೆ ಸುತ್ತಲೂ ಕವಿದುಕೊಳ್ಳುತ್ತವೆ. ಭೂಮಿಯಲ್ಲಿರುವ ನಮಗೆ ಗೋಚರವಾಗುವ ಸಮಯದಲ್ಲಿ ಈ ಕರಗಿದ ಅನಿಲಗಳು ಮಧ್ಯದ ಧೂಮಕೇತುವಿನ ಮೂಲರೂಪವನ್ನು ಮುಚ್ಚಿ ಹಾಕಿ ಬರೀ ಮೋಡದ ಉಂಡೆ ಬಾಲದೊಡನೆ ಹಾರುತ್ತಿರುವಂತೆ ಕಾಣುತ್ತದೆ.
ನಾಸಾದ ಈ ಯೋಜನೆ ಆರಂಭವಾಗಿದ್ದು ವರ್ಷಗಳ ಹಿಂದೆಯೇ. ಇಂಪಾಕ್ಟರ್ ಎಂಬ ೩೭೦ ಕೆ.ಜಿ. ಅಥವಾ ಒಂದು ವಾಶಿಂಗ್ ಮಶಿನ್ನಿನಷ್ಟು ತೂಕದ ಉಪಕರಣವನ್ನು ಹೊತ್ತ ಡೀಪ್ ಇಂಪಾಕ್ಟ್ ಹೆಸರಿನ ನೌಕೆ ಕೆಲಕಾಲ ಭೂಮಿಯ ಕಕ್ಷೆಯಲ್ಲಿ ಹಾರುತ್ತಿದ್ದು ೨೦೦೫ರ ಜನವರಿ ನಾಲ್ಕರಂದು ಬಾಹ್ಯಾಕಾಶವನ್ನು ಸೇರಿ ಧೂಮಕೇತುವಿನತ್ತ ತನ್ನ ಪಯಣವನ್ನು ಪ್ರಾರಂಭಿಸಿತು. ಜುಲೈ ಮೂರರಂದು ಓಡುತ್ತಿರುವ ಧೂಮಕೇತುವಿನ ಬಳಿ ಸಾಗಿದ ನೌಕೆ ಅದರ ನೆತ್ತಿಗೆ ಪೆಟ್ಟನ್ನು ನೀಡಿದ ನಂತರ ಪಕ್ಕಕ್ಕೆ ಸರಿದು ಮತ್ತೂ ಇಪ್ಪತ್ನಾಲ್ಕು ಗಂಟೆಗಳ ಕಾಲ ಓಡುತ್ತ ನಡೆದ ಘಟನೆಯನ್ನು ಚಾಚೂ ತಪ್ಪದೆ ಗ್ರಹಿಸಿ ಅವನ್ನು ಭೂಮಿಗೆ ರವಾನಿಸಿತು. ಭೂಮಿಗೆ ಡೀಪ್ ಇಂಪಾಕ್ಟ್ ಕಳಿಸಿದ ವರದಿಗಳು ಭೂಮಿಯನ್ನು ತಲುಪಿದಾಗ ಇಪ್ಪತ್ನಾಲ್ಕು ಗಂಟೆಗಳು ಕಳೆದಿದ್ದವು.
೧೮೬೭ರಲ್ಲಿ ಟೆಂಪೆಲ್-೧ ಧೂಮಕೇತುವನ್ನು ಪತ್ತೆಹಚ್ಚಿದ ವಿಜ್ಞಾನಿ ವಿಲ್ಹೆಲ್ಮ್ ಟೆಂಪೆಲ್. ಗುರುಗ್ರಹದ ಅತಿ ಪ್ರಭಾವಕ್ಕೊಳಗಾದ ಅದರ ಕಕ್ಷೆ ಮೊದಲು ೫.೭೪ ವರ್ಷ ನಂತರ ೫.೬೮ ವರ್ಷ ಹಾಗೂ ಈಗ ಆರೂವರೆ ವರ್ಷಕ್ಕೊಮ್ಮೆಯೆಂದು ಹೇಳಲಾಗುತ್ತಿದೆ. ೧೯೦೫ ರಿಂದ ಅನೇಕ ವರ್ಷಗಳ ಕಾಲ ಸಂಶೋಧಕರ ಕಣ್ಣಿಗೆ ಮಣ್ಣೆರೆಚಿದ್ದ ಈ ಧೂಮಕೇತು ೧೯೭೨ರಲ್ಲಿ ಕಾಣಿಸಿಕೊಂಡು ಅಂದಿನಿಂದ ಅದರ ಚಲನೆಯನ್ನು ವಿಜ್ಞಾನಿಗಳು ನಿಖರವಾಗಿ ಸೆರೆ ಹಿಡಿಯಲು ಸಾಧ್ಯವಾಯಿತು.
ಈಗ ತನ್ನಷ್ಟಕ್ಕೆ ಓಡಿಕೊಂಡಿದ್ದ ಧೂಮಕೇತುವಿನ ತಲೆಗೊಂದು ಕುಟ್ಟಿದ್ದೇನೋ ಸರಿ, ಪರಿಣಾಮ ಫಲಿತಾಂಶಗಳು ಏನಿರಬಹುದು? ಧೂಮಕೇತುವಿನ ಗಾತ್ರ ಹಾಗೂ ಅದರ ವೇಗಕ್ಕೆ ಹೋಲಿಸಿದರೆ ಈ ಸುತ್ತಿಗೆಯೇಟು ಅದಕ್ಕೇ ಹೆಚ್ಚೇನೂ ಧಕ್ಕೆ ಉಂಟುಮಾಡಲಿಕ್ಕಿಲ್ಲ. ಆದರೆ ಢಿಕ್ಕಿಯ ಪರಿಣಾಮವಾಗಿ ಧೂಮಕೇತುವಿನ ಮೇಲ್ಮೈನ ಧೂಳು ಹಾಗೂ ಇತರ ವಸ್ತುಗಳು ಹೊರಕ್ಕೆ ಚದುರಬಹುದು. ಅವುಗಳ ಚಿತ್ರಗಳನ್ನು ಸೆರೆಹಿಡಿದು ಧೂಮಕೇತುವಿನ ಒಡಲಾಳದಲ್ಲಿರುವ ಭೌತಿಕ ಮತ್ತು ರಾಸಾಯನಿಕ ವಸ್ತುಗಳ ರೂಪ, ಪ್ರಮಾಣಗಳ ಲೆಕ್ಕ ಹಾಕಬಹುದೆಂದು ವಿಜ್ಞಾನಿಗಳ ನಿರೀಕ್ಷೆ. ಅಲ್ಲಿರುವುದು ನಿಜವಾಗಲೂ ಘನೀಕೃತ ಅನಿಲಗಳೇ? ಯಾವ ಅನಿಲಗಳಿದ್ದಾವು? ಸೃಷ್ಟಿಯ ಆದಿಯ ಸುಳುಹೇನಾದರೂ ಸಿಕ್ಕೀತೇ?
ಟೆಂಪೆಲ್-೧ರ ಶಿರ ಭೇದಿಸಿದ ನಾಸಾ ಅದಕ್ಕೆ ಎರಡು ಕಾರಣಗಳನ್ನು ನೀಡಿದೆ. ಮೊದಲನೆಯದು ಸೌರವ್ಯೂಹದ ಹುಟ್ಟಿನ ಬಗ್ಗೆ ಮಾಹಿತಿ ದೊರಕಿಸುವದು ಹಾಗೂ ಎರಡನೆಯದು ಈಗಲೇ ಧೂಮಕೇತುಗಳ ರಚನೆಯ ಬಗ್ಗೆ ತಿಳಿದಿಟ್ಟುಕೊಂಡರೆ ಮುಂದೆಂದಾದರೂ ಧೂಮಕೇತು ಭೂಮಿಗೆ ಅಪ್ಪಳಿಸಿದರೆ ಅದರಿಂದಾಗಬಹುದಾದ ಅವಘಡಗಳನ್ನು ತಪ್ಪಿಸುವುದು.
ವಿಜ್ಞಾನ ಮತ್ತು ತಂತ್ರಜ್ಞಾನಗಳ ಹೆಗ್ಗಳಿಕೆ ಈ ಘಟನೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಮುಖಾಮುಖಿಯ ಫಲಿತಾಂಶ ದೊರಕಲು ಇನ್ನೂ ಹಲವಾರು ವರ್ಷಗಳೇ ಬೇಕಾಗಬಹುದು. ಆದರೀಗ ನಾಲ್ಕೂ ಮೂಲೆಗಳಿಂದ ಪ್ರಶ್ನೆಯೊಂದು ಕೇಳಿಬರುತ್ತಿದೆ. ಭೂಮಿಯ ಮೇಲಿಂದು ಹಸಿವಿನಿಂದ, ಮಾರಕ ರೋಗಗಳಿಂದ ನರಳುತ್ತಿರುವ ಕೋಟಿಗಟ್ಟಲೆ ಜನರಿರುವಾಗ ಕೋಟಿಗಟ್ಟಲೆ ಡಾಲರ್ ಸುರಿದು ಕೋಟಿ ಮೈಲು ದೂರದ ಯಃಕಶ್ಚಿತ್ ಧೂಮಕೇತುವಿನ ಶಿರಚ್ಚೇದನ ಮಾಡುವುದವಶ್ಯವಿತ್ತೇ?
* ಸೌರವ್ಯೂಹದ ಆದಿಯನ್ನು ಸುಮಾರು ೪೫೦ ಕೋಟಿ ವರ್ಷಗಳ ಹಿಂದೆ ಆಯಿತೆನ್ನುತ್ತದೆ ವಿಜ್ಞಾನ. ಮೇಘಗಳ ರಾಶಿಯೊಂದು ಅಗಲವಾಗಿ ಹರಡಿಕೊಂಡು ನಟ್ಟನಡುವೆ ಉರಿಯುವ ಸೂರ್ಯ, ಸುತ್ತಲೂ ಗ್ರಹ, ಉಪಗ್ರಹಗಳ ನಿರ್ಮಾಣವಾಯಿತು. ಇವೆಲ್ಲವುಗಳನ್ನು ಆವರಿಸಿಕೊಂಡಂತೆ ಮೋಡದ ಒಂದು ಭಾಗ ಸೌರವ್ಯೂಹವನ್ನು ಹೊರಗಿನಿಂದ ಸುತ್ತುವರೆಯಿತು. ಯಾನ್ ಊರ್ತ್ ಎಂಬ ವಿಜ್ಞಾನಿ ಈ ವಿಷಯವನ್ನು ಕಂಡುಹಿಡಿದಿದ್ದರಿಂದ ಸೌರವ್ಯೂಹದ ಈ ಕವಚಕ್ಕೆ ಊರ್ತ್ ಕವಚವೆಂದೇ ಕರೆಯಲಾಗುತ್ತದೆ. ಸೂರ್ಯ, ಗ್ರಹ, ಉಪಗ್ರಹಗಳ ಉಗಮದ ನಂತರ ಉಳಿದ ಮೂಲ ಮೇಘರಾಶಿಯು ತುಣುಕುಗಳಾಗಿ ಸುತ್ತಲಿನ ಕವಚದಲ್ಲಿ ಹುದುಗಿಕೊಂಡಿವೆ. ಇವೇ ಆಗೀಗ ಧೂಮಕೇತುಗಳಾಗಿ ಸೌರವ್ಯೂಹದೊಳಕ್ಕೆ ನುಗ್ಗುತ್ತಿವೆ. ಈ ೪೫೦ ಕೋಟಿ ವರ್ಷಗಳಲ್ಲಿ ಗ್ರಹಗಳು, ಉಪಗ್ರಹಗಳು ಅನೇಕ ಬದಲಾವಣೆಗೊಳಗಾಗಿವೆ. ಆದರೆ ಧೂಮಕೇತುಗಳು ಮಾತ್ರ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡಿದ್ದು ಅವುಗಳ ರಚನೆಯನ್ನು ಕಂಡುಹಿಡಿಯಲು ಸಾಧ್ಯವಾದರೆ ಸೌರವ್ಯೂಹದ ಉಗಮದ ರಹಸ್ಯ ಹೊರಬಿದ್ದೀತು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.
ಸರೋಜ ಪ್ರಕಾಶ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!