22.1 C
Sidlaghatta
Tuesday, May 21, 2024

ಪ್ಲೂಟೋದ ರಹಸ್ಯ ಲೋಕಕ್ಕೆ ಲಗ್ಗೆ

- Advertisement -
- Advertisement -

ಪ್ಲೂಟೋ, ಸೌರವ್ಯೂಹದ ಒಂಭತ್ತನೆಯ, ಸೂರ್ಯನಿಂದ ಅತಿ ಹೆಚ್ಚು ದೂರದಲ್ಲಿರುವ ಹಾಗೂ ಅತಿ ಪುಟ್ಟದಾದ ಗ್ರಹ. ಉಳಿದ ಗ್ರಹಗಳಿಗೆ ಹೋಲಿಸಿದರೆ ಪ್ಲೂಟೋ ಬಗ್ಗೆ ನಮಗೆ ಗೊತ್ತಿರುವುದು ತುಂಬ ಕಡಿಮೆ ಎಂದೇ ಹೇಳಬೇಕು. ಅತಿ ಶಕ್ತಿಶಾಲಿಯಾದ ದೂರದರ್ಶಕದಿಂದ ಕೂಡ ಇದರ ಬಗ್ಗೆ ದೊರೆತ ವಿವರಗಳು ಕಡಿಮೆ. ೧೯೩೦ರಲ್ಲಿ ಕ್ಲೈಡ್ ಟಾಂಬಾಗ್ ಎಂಬ ವಿಜ್ಞಾನಿ ಈ ಗ್ರಹವು ಸೂರ್ಯನನ್ನು ಸುತ್ತುತ್ತಿರುವುದನ್ನು ಕಂಡುಹಿಡಿದಾಗಿನಿಂದ ಪಠ್ಯಪುಸ್ತಕಗಳಲ್ಲಿ ನಾವು ಸೂರ್ಯನಿಗೆ ಒಂಭತ್ತು ಗ್ರಹಗಳು ಎಂದು ಓದುತ್ತಿದ್ದೇವೆ. ಕಳೆದ ವರ್ಷ ಹಬ್ಬಲ್ ದೂರದರ್ಶಕ ಪ್ಲೂಟೋಕ್ಕೆ ಸೇರಿದ ಎರಡು ಚಂದ್ರರನ್ನು ಗುರುತಿಸಿದ್ದು ವಿಜ್ಞಾನಕ್ಕೊಂದು ಕೊಡುಗೆಯೇ. ಈಗ ವಿಜ್ಞಾನಿಗಳು ಪ್ಲೂಟೊದ ರಹಸ್ಯವನ್ನು ಭೇದಿಸ ಹೊರಟಿದ್ದಾರೆ. ನಾಸಾದಿಂದ ಹಾರಲಿರುವ ರಾಕೆಟ್ ಒಂದರಲ್ಲಿ ಕುಳಿತ ಪುಟ್ಟ ರೊಬೋಟ್ ಒಂದು ಪ್ಲೂಟೋ ಬಳಿ ಹೋಗಿ ಅದನ್ನು ಮಾತನಾಡಿಸಿಕೊಂಡು, ಅದರ ಆಸುಪಾಸಿನ ವಿವರಗಳನ್ನೆಲ್ಲ ಸೆರೆಹಿಡಿದು ತರಲಿದೆ.

‘ಟೆಂಪೆಲ್-ವನ್’
‘ಟೆಂಪೆಲ್-ವನ್’

ವಿಜ್ಞಾನಿಗಳ ಇಂಥ ಸಾಹಸ ಹೊಸದೇನೂ ಅಲ್ಲ. ಸೌರವ್ಯೂಹ ಹಾಗೂ ಇತರ ಆಕಾಶ ಕಾಯಗಳ ಉಗಮದ ಕುರಿತಾದ ಕುತೂಹಲಗಳು ಈವರೆಗೆ ಸೃಷ್ಟಿಯ ಅನೇಕಾನೇಕ ರಹಸ್ಯಗಳನ್ನು ಭೇದಿಸಿವೆ (ಅಥವಾ ಭೇದಿಸಿದೆ ಎಂದುಕೊಳ್ಳುತ್ತಿದ್ದೇವೆ). ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತೂ ಒಂದಿಲ್ಲೊಂದು ದುಸ್ಸಾಹಸವನ್ನು ನಡೆಸುತ್ತಲೇ ಇರುತ್ತದೆ. ಸೌರವ್ಯೂಹದ ಆಚೆಯಿಂದ ಹಾರಿ ಬರುವ ಧೂಮಕೇತುಗಳು ಇನ್ನೂ ಹೆಚ್ಚು ಬದಲಾಗಿಲ್ಲ, ಅವುಗಳಲ್ಲಿ ಉಗಮಕಾಲದ ಲಕ್ಷಣಗಳಿನ್ನೂ ಇವೆ, ಆದ್ದರಿಂದ ಧೂಮಕೇತುವಿನ ಅಂತರಾಳವನ್ನು ಶೋಧಿಸಿದರೆ ಆ ಕಾಲದ ಸುಳಿಹು ಸಿಗಬಹುದು ಎಂಬ ಹೆದ್ದಾಸೆ ವಿಜ್ಞಾನಿಗಳದ್ದು. ಏಳು ವರ್ಷಗಳ ಹಿಂದೆ ಧೂಮಕೇತು ವೈಲ್ಡ್-೨ ರ ಬೆನ್ನಟ್ಟಿ ಕಳುಹಿದ ಅಂತರಿಕ್ಷ ನೌಕೆ ಸ್ಟಾರ್ ಡಸ್ಟ್ ತನ್ನ ಪುಟ್ಟ ಡಬ್ಬಿಯಲ್ಲಿ ಧೂಮಕೇತುವಿನ ಧೂಳಿನ ಸಂಗ್ರಹಣೆಯ ಮಾದರಿಯನ್ನು ಭದ್ರವಾಗಿ ಸೆರೆಹಿಡಿದು ಮರಳಿ ಈಗ ಕೆಲವು ದಿನಗಳ ಹಿಂದೆ ತಾನೇ ಭೂಮಿಗೆ ಕಳುಹಿದೆ. ಅದು ಸಂಗ್ರಹಿಸಿ ತಂದ ವೈಜ್ಞಾನಿಕ ವಿವರಗಳನ್ನು ವಿಶ್ಲೇಷಣೆ ನಡೆಸಲು ವಿಜ್ಞಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಶಕ್ತಿಯುತ ಸೂಕ್ಷ್ಮದರ್ಶಕದಡಿ ಈ ಧೂಳಿನ ಕಣಗಳನ್ನಿಟ್ಟು ದೊರಕುವ ಚಿತ್ರಗಳನ್ನು ಮೂವತ್ತು ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಲಾಗುವುದು. ಅವರೆಲ್ಲರೂ ಆ ಚಿತ್ರಗಳನ್ನು ವಿಶ್ಲೇಷಿಸಿ ವಿಶ್ವದ ಆದಿಯ ಮೂಲದ ಕುರಿತು ಒಂದಿಷ್ಟು ಸುಳಿಹನ್ನು ಕಂಡು ಹಿಡಿಯಬೇಕೆಂಬುದೇ ಇದರ ಉದ್ದೇಶ. ಇದಕ್ಕಿಂತ ಮೊದಲು ಬಾಹ್ಯಾಕಾಶ ನೌಕೆಯೊಂದು ‘ಜೆನೆಸಿಸ್’ಎಂಬ ಹೆಸರಿನ ಡಬ್ಬಿಯೊಂದರಲ್ಲಿ ಸೂರ್ಯನ ಕಣಗಳನ್ನು ಸಂಗ್ರಹಿಸಿ ತಂದರೂ ಆ ಡಬ್ಬಿ ನೆಲಕ್ಕೆ ಬಿದ್ದು ಒಳಗಿನ ಪುಡಿಗಳೆಲ್ಲ ಮಣ್ಣಿಗೆ ಸೇರಿ ವಿಜ್ಞಾನಿಗಳಿಗೆಲ್ಲ ಅತೀವ ನಿರಾಶೆಯನ್ನುಂಟುಮಾಡಿತ್ತು. ಕಳೆದ ವರ್ಷ ವ್ಯೋಮ ನೌಕೆಯೊಂದು ‘ಟೆಂಪೆಲ್-ವನ್’ಧೂಮಕೇತುವಿನ ನೆತ್ತಿಗೇ ಪೆಟ್ಟು ಕೊಟ್ಟು ಅಲ್ಲಿನ ವಿದ್ಯಮಾನಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಹಿಡಿದು ತಂದಿದೆ.
ಈ ಬಾರಿ ಅಮೆರಿಕದ ‘ನಾಸಾ’ನಡೆಸುತ್ತಿರುವ ಚಟುವಟಿಕೆ ಇವೆಲ್ಲಕ್ಕಿಂತ ಭಿನ್ನವಾದದ್ದು. ಈ ಕಾರ್ಯ ಕಳೆದ ಅನೇಕ ವರ್ಷಗಳ ಹಿಂದಿನಿಂದಲೇ ರೂಪುಗೊಳ್ಳುತ್ತಾ ಇತ್ತು. ೭೦೦ ಬಿಲಿಯನ್ ಡಾಲರ್ (ಅಂದರೆ ಸುಮಾರು ೩೫ ಲಕ್ಷ ಕೋಟಿ ರೂಪಾಯಿಗಳು!) ವೆಚ್ಚದ ಅದರ ಕಾರ್ಯಯೋಜನೆ, ನಮ್ಮಿಂದ ಬಹಳೇ ದೂರದ ಶೈತ್ಯ ಲೋಕದಲ್ಲಿ ಅಡ್ಡಾಡುತ್ತಿರುವ ಪ್ಲೂಟೋದ ರಹಸ್ಯವನ್ನು ಮಾನವ ಜಗತ್ತಿಗೆ ಸಾರಹೊರಟಿರುವ ಅದರ ಸಾಹಸ ತಂತ್ರಜ್ಞಾನ ಉತ್ತುಂಗಕ್ಕೇರಿರುವ ಈ ಕಾಲದಲ್ಲಿ ಕೂಡ ಸಾಮಾನ್ಯ ಜನರಿಗೆ ಕೇಳಲು ಕೌತುಕಮಯವಾಗಿದೆ.
ನ್ಯೂ ಹಾರಿಝಾನ್ಸ್
ನ್ಯೂ ಹಾರಿಝಾನ್ಸ್

೧೦೫೪ ಪೌಂಡ್ ತೂಕದ ದೊಡ್ಡ ಪಿಯಾನೋ ಒಂದನ್ನು ಹೋಲುವ (ಚಿತ್ರ ನೋಡಿ) ‘ನ್ಯೂ ಹಾರಿಝಾನ್ಸ್’ನೌಕೆ ಕಳೆದ ಜನವರಿ ೧೮ ರಂದು ಭೂಮಿಯಿಂದ ಲಾಖೀಡ್ ಮಾರ್ಟಿನ್ ರಾಕೆಟ್ಟಿನಿಂದ ಉಡ್ಡಯನಗೊಂಡು ಘಂಟೆಗೆ ೩೬ ಸಾವಿರ ಮೈಲುಗಳ ವೇಗದಲ್ಲಿ ಹಾರಿತು. (ಈ ವೇಗದಲ್ಲಿ ಚಂದ್ರನನ್ನು ಬರೀ ಒಂಭತ್ತು ತಾಸಿನಲ್ಲಿ ತಲುಪಬಹುದು.) ಬುಧ ಗ್ರಹದ ಬಳಿಯಲ್ಲಿ ಸಾಗುವ ಈ ನೌಕೆ ಬುಧನ ಗುರುತ್ವದ ಶಕ್ತಿಯನ್ನು ಬಳಸಿಕೊಂಡು ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ನಂತರ ಗಂಟೆಗೆ ೫೬ ಸಾವಿರ ಮೈಲಿ ವೇಗದಲ್ಲಿ ಒಂದೇ ಸಮನೆ ಹಾರುವುದೊಂದೇ ಅದರ ಕೆಲಸ. ಬಹಳ ದೂರವನ್ನು ಕ್ರಮಿಸಬೇಕಾದುದರಿಂದ ಅದರ ಶಕ್ತಿ ಮಾರ್ಗಮಧ್ಯದಲ್ಲಿ ಸೋರಿಹೋಗದಂತೆ ಅದನ್ನು ರೂಪಿಸಲಾಗಿದೆ. ಅಂದರೆ ತನ್ನ ಪಯಣದಲ್ಲಿ ವಾರಕ್ಕೆ ಒಂದು ಬಾರಿ ಮಾತ್ರ ಅದು ಭೂಮಿಗೆ ಸಂದೇಶವನ್ನು ಕಳಿಸಲಿದೆ. ವರ್ಷದಲ್ಲಿ ಒಂದು ಬಾರಿ ಉಪಕರಣಗಳ ಪರೀಕ್ಷೆಗೆಂದು ಭೂಮಿಯ ಕಂಟ್ರೋಲ್ ರೂಮಿನಿಂದ ಸಂದೇಶ ಪಡೆಯಲಿದೆ.
‘ನ್ಯೂ ಹಾರಿಝಾನ್ಸ್’ಇತರ ಅಂತರಿಕ್ಷ ವಾಹನಗಳಂತೆ ಸೂರ್ಯನ ಬೆಳಕಿನಿಂದ ಶಕ್ತಿಯನ್ನು ಹಾಗೂ ವಿದ್ಯುತ್ತನ್ನು ಪಡೆಯುವುದಿಲ್ಲ. ಏಕೆಂದರೆ ಸೌರಮಂಡಲದ ಅಂಚಿನತ್ತ ಸಾಗುತ್ತಿದ್ದಂತೆ ಅದಕ್ಕೆ ದೊರೆಯುವ ಸೂರ್ಯರಶ್ಮಿಯ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಅದು ಶೀತಲಲೋಕಕ್ಕೆ ತೆರಳುತ್ತದೆ. ಬೇಕಾಗುವ ಶಕ್ತಿಗೆಂದು ೩೩ ಕೆಜಿಯಷ್ಟು ಪ್ಲುಟೋನಿಯಂ ಗುಂಡುಗಳನ್ನು ಅದರ ಒಡಲಲ್ಲಿ ಇಡಲಾಗಿದೆ. ಆ ಹರಳುಗಳು ಹೊರ ಸೂಸುವ ವಿಕಿರಣವನ್ನು ಬಳಸಿಕೊಂಡು ಥರ್ಮೋಎಲೆಕ್ಟ್ರಿಕ್ ಜನರೇಟರ್ ದಿನಕ್ಕೆ ೨೦೦ ವ್ಯಾಟ್ ವಿದ್ಯುತ್ ತಯಾರಾಗುವ ವ್ಯವಸ್ಥೆ ಅದರಲ್ಲಿದೆ.*
ಮೂರು ಬಿಲಿಯನ್ ಅಥವಾ ಮೂವತ್ತು ಸಾವಿರ ಕೋಟಿ ಮೈಲುಗಳಷ್ಟನ್ನು ಕ್ರಮಿಸಲು ‘ನ್ಯೂ ಹಾರಿಝಾನ್ಸ್’ಒಂಭತ್ತು ವರ್ಷಗಳಷ್ಟು ಕಾಲ ತೆಗೆದುಕೊಳ್ಳುವುದೆಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ‘ನ್ಯೂ ಹಾರಿಝಾನ್ಸ್’ನೇರವಾಗಿ ಪ್ಲೂಟೋದ ಮೇಲೆ ಹೋಗಿ ಇಳಿಯುವುದಿಲ್ಲ. ಅಷ್ಟಕ್ಕೂ ಪ್ಲೂಟೋದ ಮೇಲ್ಮೈನಲ್ಲಿ ಏನಿದೆಯೆಂದು ಇದುವರೆಗೂ ಸ್ಪಷ್ಟವಾಗಿ ತಿಳಿದಿಲ್ಲ. ಅದರ ಕಕ್ಷೆಯೊಳಕ್ಕೆ ಸೇರಿಕೊಂಡು ಅದರ ಸುತ್ತು ತಿರುಗುವುದೂ ಇಲ್ಲ, ಬದಲಾಗಿ ಬಾಹ್ಯಾಕಾಶದಲ್ಲಿ ಪ್ಲೂಟೋದಿಂದ ೬೨೦೦ ಮೈಲು ದೂರದಲ್ಲಿ ನಿಂತು ಅಲ್ಲಿನ ಪರಿಸರದಲ್ಲಿ ನಡೆಯುವ ಚಟುವಟಿಕೆಗಳನ್ನು ಕ್ಲಿಕ್ಕಿಸಲಿದೆ. ನಂತರ ಅದರ ಅತಿ ದೊಡ್ಡದಾದ ಚಂದ್ರನಾದ ಶರಾನ್ ಬಳಿ ಅಂದರೆ ಅದರಿಂದ ೧೬,೮೦೦ ಮೈಲು ದೂರದಲ್ಲಿ ನಿಂತು ಅದನ್ನು ನಿಟ್ಟಿಸಿ ತನ್ನ ಕ್ಯಾಮರಾದಲ್ಲಿ ದಾಖಲಿಸಲಿದೆ. ಪ್ಲೂಟೋ ಮತ್ತು ಶೆರಾನರ ಸೂರ್ಯನಿಗೆದುರಾಗದ ಕಪ್ಪು ಬದಿಯನ್ನೂ, ಅಲ್ಲಿರಬಹುದಾದ ಮಂಜಿನ ಮುಸುಕನ್ನೂ ಅದು ಪರೀಕ್ಷಿಸಲಿದೆ. ನಂತರ ವೈಪರ್** ಬೆಲ್ಟಿನೊಳಕ್ಕೆ ನುಗ್ಗಿ ತನ್ನ ಅನ್ವೇಷಣೆಯನ್ನು ಮುಂದುವರೆಸಲಿದೆ. ಅಲ್ಲಿಂದ ಅದು ಕಳಿಸುವ ರೇಡೀಯೋ ತರಂಗದ ಸಿಗ್ನಲ್ಲುಗಳು ಬೆಳಕಿನ ವೇಗದಲ್ಲಿ ಪ್ರಸಾರವಾದರೂ ಭೂಮಿ ತಲುಪಲು ೪ ಘಂಟೆಗಳನ್ನು ತೆಗೆದುಕೊಳ್ಳುತ್ತವೆ. ಪ್ಲೂಟೋದ ಬಳಿ ನಿಶ್ಚಿತ ಸ್ಥಳದಲ್ಲಿ ನಿಲ್ಲುವ ಮೂರು ತಿಂಗಳು ಮೊದಲಿನಿಂದಲೇ ತನ್ನ ಸುತ್ತಲಿನ ಪರಿಸರದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ‘ನ್ಯೂ ಹಾರಿಝಾನ್ಸ್’ನ ಕ್ಯಾಮೆರಾವನ್ನು ಸಜ್ಜುಗೊಳಿಸಲಾಗಿದೆ.
‘ನ್ಯೂ ಹಾರಿಝಾನ್ಸ್’ನಲ್ಲಿ ಇರುವ ಉಪಕರಣಗಳೆಲ್ಲವೂ ಒತ್ತಾಗಿ ಜೋಡಿಸಲಾದ, ಅತ್ಯಂತ ಚಿಕ್ಕ ಸ್ವರೂಪದ ಹಾಗೂ ಅತಿ ಕಡಿಮೆ ಶಕ್ತಿಯನ್ನು ಬಳಸುವಂತೆ ರೂಪಿತವಾದ ದಕ್ಷ ಉಪಕರಣಗಳು. ಇವುಗಳಲ್ಲಿ ಮುಖ್ಯವಾಗಿದ್ದು ಅತಿಗೆಂಪು, ಅತಿನೇರಳೆ ಮತ್ತು ಬಾಹ್ಯಾಕಾಶದ ಚಿತ್ರಗಳನ್ನು ಸೆರೆಹಿಡಿಯುವ ಮೂರು ಕ್ಯಾಮೆರಾಗಳು. ಪ್ಲೂಟೋದ ಮೇಲ್ಮೈ ಉಷ್ಣತೆಯನ್ನು ಹಾಗೂ ಅಲ್ಲಿನ ವಾತಾವರಣದಿಂದ ಬಿಡುಗಡೆಯಾಗುವ ವಸ್ತುಗಳನ್ನು ಪರೀಕ್ಷಿಸಲೆಂದು ಮೂರು ಸ್ಪೆಕ್ಟ್ರೋಮೀಟರುಗಳಿವೆ.
ಇಷ್ಟೇ ಅಲ್ಲ, ಅಮೆರಿಕದ ಬಾವುಟ, ಖಾಸಗಿ ಕ್ಷೇತ್ರದಲ್ಲಿ ಮೊದಲು ಹಾರಿಬಿಡಲಾದ ‘ಸ್ಪೇಸ್ಶಿಪ್ ವನ್’ನೌಕೆಯ ಒಂದು ಚಿಕ್ಕ ಚೂರು ಹಾಗೂ ಅಂತರ್ಜಾಲದ ಮೂಲಕ ‘ನ್ಯೂ ಹಾರಿಝಾನ್ಸ್’ಗೆ ತಮ್ಮ ಬೆಂಬಲ ಸೂಚಿಸಿದ ೪೩೫,೦೦೦ ಜನರ ಸಹಿ ಇರುವ ಸಿಡಿ, ಪ್ಲೂಟೋದ ಸುತ್ತಮುತ್ತಲ ಪರಿಸರದಲ್ಲಿನ ಧೂಳಿನ ಕಣಗಳನ್ನು ಸೆರೆಹಿಡಿಯಲೆಂದು ಕೊಲರಾಡೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ‘ಡಸ್ಟ್ ಕೌಂಟರ್’ಇವುಗಳನ್ನೂ ನೌಕೆಯೊಳಗೆ ನೀಟಾಗಿ ಜೋಡಿಸಿಡಲಾಗಿದೆ.
ಪ್ಲೂಟೋದ ವ್ಯಾಸ ೧೪೬೬ ಮೈಲುಗಳು, ಪ್ಲೂಟೋ ಸೂರ್ಯನಿಗಿಂತ ೩.೭ ಬಿಲಿಯನ್ ಮೈಲು ದೂರದಲ್ಲಿ ಅಂದರೆ ಭೂಮಿ ಮತ್ತು ಸೂರ್ಯರ ನಡುವಣ ದೂರಕ್ಕಿಂತ ಮೂವತ್ತೊಂಭತ್ತು ಪಟ್ಟು ಅಧಿಕ ದೂರದಲ್ಲಿದೆ. ತನ್ನ ಸುತ್ತಲೂ ತಿರುಗಲು ೬.೪ ದಿನಗಳು ಹಾಗೂ ಸೂರ್ಯನ ಸುತ್ತ ಸುತ್ತಲು ೨೪೮ ವರ್ಷಗಳು ಬೇಕಾಗುತ್ತವೆ. ಸರಾಸರಿ ಮೇಲ್ಮೈ ಉಷ್ಣತೆ -೨೪೩ ಡಿಗ್ರಿ ಸೆಂಟಿಗ್ರೇಡುಗಳು. ಸೂರ್ಯನಿಗೆ ಸಮೀಪವಾಗಿರುವ ಶಿಲೆ, ಬಂಡೆಗಳಿಂದ ಕೂಡಿದ ನಾಲ್ಕು ಗ್ರಹಗಳು, ನಂತರದ ನಾಲ್ಕು ಅನಿಲಭರಿತ ಗ್ರಹಗಳಿಗೆ ಹೋಲಿಸಿದರೆ ಪ್ಲೂಟೊದಲ್ಲಿ ಏನಿದೆಯೆಂಬುದು ಖಚಿತವಾಗಿ ತಿಳಿದಿಲ್ಲ. ಆದರೂ ಮುಖ್ಯವಾಗಿ ಘನೀಕೃತಗೊಂಡ ಸಾರಜನಕ, ಇಂಗಾಲದ ಮಾನಾಕ್ಸೈಡ್, ಮಿಥೇನ್ ಅನಿಲಗಳು ಇವೆ. ಇವೆಲ್ಲವೂ ಸೂರ್ಯನ ಸುತ್ತು ಗಸ್ತು ಹೊಡೆಯುವಾಗ ಸೂರ್ಯನಿಗೆದುರಾದ ಭಾಗದಲ್ಲಿ ನೀರಾಗುತ್ತ, ವಿರುದ್ಧ ದಿಕ್ಕಿನಲ್ಲಿ ಗಟ್ಟಿಯಾಗುತ್ತ ಚಲಿಸುತ್ತಿವೆ. ಇವೆಲ್ಲವೂ ಭೂಮಿಯಲ್ಲೇ ಕೂತು ವೈಜ್ಞಾನಿಕ ಉಪಕರಣಗಳನ್ನು, ಭೌತ ಮತ್ತು ಗಣಿತದ ಸಮೀಕರಣಗಳನ್ನು ಬಳಸಿ ವಿಜ್ಞಾನಿಗಳು ಕಂಡುಕೊಂಡ ಮಾಹಿತಿಗಳು. ಶೆರಾನ್ ಪ್ಲೂಟೋದ ಅರ್ಧದಷ್ಟಿರುವುದರಿಂದ ಅವೆರಡೂ ಸೇರಿ ಅವಳಿ ಗ್ರಹಸಮುಚ್ಚಯಗಳೇ ಎಂಬ ಊಹೆಯನ್ನೂ ಕೆಲವು ವಿಜ್ಞಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
‘ಪ್ಲೂಟೋದ ಬಗ್ಗೆ ಈಗ ನಮಗೆ ಗೊತ್ತಿರುವ ವಿಷಯಗಳು ಬರೇ ಒಂದು ಸ್ಟಾಂಪಿನ ಹಿಂದೆ ಬರೆಯುವಷ್ಟಿದೆ. ‘ನ್ಯೂ ಹಾರಿಝಾನ್ಸ್’ಯಶಸ್ಸಿನ ನಂತರ ಒಂದು ಪುಸ್ತಕ ಬರೆಯುವಷ್ಟು ವಿವರಗಳು ಸಿಗಬಹುದು’ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಕೊಲೆನ್ ಹಾರ್ಟ್ಮನ್, ಈ ಯೋಜನೆಯ ಮುಖ್ಯಸ್ಥ. ಆದರೆ ಅದಕ್ಕಿನ್ನೂ ಕಾಯಬೇಕು.
* ವಿಕಿರಣ ಸೂಸುವ ಅಣುಹರಳುಗಳನ್ನು ಬಳಸುವುದಕ್ಕೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೇ ಮೊದಲಲ್ಲ, ಈ ಹಿಂದೆಯೂ ಅನೇಕ ಬಾಹ್ಯಾಕಾಶ ನೌಕೆಗಳಲ್ಲಿ ಅಣುವಿದ್ಯುತ್ ಶಕ್ತಿಯನ್ನು ಬಳಸಲಾಗಿದೆ. ಅಕಸ್ಮಾತ್ತಾಗಿ ಅವಘಡವೇನಾದರೂ ಘಟಿಸಿದರೆ ಆ ಅಣುಹರಳುಗಳು ಬಾಹ್ಯಾಕಾಶದಲ್ಲಿ ಅಥವಾ ಭೂಮಿಯ ಪರಿಸರದಲ್ಲಿ ಹೊರಬಿದ್ದು ಉಂಟುಮಾಡಬಹುದಾದ ಅಪಾಯಗಳ ಕುರಿತು ಹಲಬಾರಿ ಧ್ವನಿ ಎತ್ತಲಾಗಿದೆ. ಅಂಥದ್ದೇನೂ ಆಗುವುದಿಲ್ಲ ಎಂದು ವಿಜ್ಞಾನಿಗಳು ಪರಿಸರವಾದಿಗಳ ಬಾಯಿ ಮುಚ್ಚಿಸಿದ್ದಾರೆ. ಒಂದು ವೇಳೆ ಅಪಘಾತ ಸಂಭವಿಸಿದರೂ ಪ್ಲುಟೋನಿಯಮ್ ಹರಳುಗಳುಳ್ಳ ಡಬ್ಬಿ ಒಡೆಯುವುದಿಲ್ಲ ಆಷ್ಟು ಬಲಿಷ್ಠವಾಗಿದೆ ಎಂದು ಆಶ್ವಾಸನೆ ನೀಡಿದ್ದಾರೆ.
** ವೈಪರ್ ಪಟ್ಟಿ:
೪೫೦ ಕೋಟಿ ವರ್ಷಗಳ ಹಿಂದೆ ಅಂತರಿಕ್ಷದಲ್ಲಿ ಸೌರವ್ಯೂಹದ ಜನನವಾಗಿ ಸೂರ್ಯ ಮತ್ತು ಅದರ ಸುತ್ತ ತಿರುಗುವ ಗ್ರಹಗಳು ತಯಾರಾದವು. ಆ ಪ್ರಕ್ರಿಯೆಯಲ್ಲಿ ಉಳಿದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಹೆಚ್ಚಿನವು ಪ್ಲೂಟೋದ ಆಚೆ ಸೌರವ್ಯೂಹದ ಅತಿ ಹೊರಗಿನ ಊರ್ತ್ ಕವಚದಲ್ಲಿ ಇಂದಿಗೂ ಸುತ್ತುತ್ತಿವೆ. ಅಸಂಖ್ಯಾತ ಚಿಕ್ಕ, ಪುಟ್ಟ ಚೂರುಗಳು ನೆಪ್ಚೂನ್ ಗ್ರಹದ ಆಚೆ ಪ್ಲೂಟೋಗಿಂತ ಮೊದಲು ಒಂದು ಗೋಲದಲ್ಲಿ ಸುತ್ತುತ್ತಿವೆ. ಈ ಕವಚವನ್ನು ವೈಪರ್ ಪಟ್ಟಿ ಎನ್ನಲಾಗುತ್ತಿದೆ. ಸೂರ್ಯನಿಂದ ಅತಿ ದೂರದಲ್ಲಿರುವುದರಿಂದ ಆ ಪ್ರದೇಶದಲ್ಲಿ ಮಂಜಿನ ಗೋಲಗಳನ್ನು ಆವರಿಸಿರುವ ಚಿಕ್ಕ, ಅತಿ ಚಿಕ್ಕ ಆಕಾಶಕಾಯಗಳಿವೆ.
ಹೊಸ, ಸೂರ್ಯನನ್ನು ಸುತ್ತುತ್ತಿದೆ ಎನ್ನಲಾದ, ಇನ್ನೂವರೆಗೆ ಹೆಸರಿಡದ ಗ್ರಹವೊಂದನ್ನು ವಿಜ್ಞಾನಿಗಳು ಕಳೆದ ಜುಲೈ ತಿಂಗಳಲ್ಲಿ ಖಚಿತಪಡಿಸಿದ್ದಾರೆ. ಸುಮಾರು ೩೦೦೦ ಕಿಮೀ ವ್ಯಾಸವಿರುವ ಅದನ್ನು ಸೌರವ್ಯೂಹದ ಹತ್ತನೆಯ ಗ್ರಹವೆನ್ನುವುದೋ ಅಥವಾ ಒಂಭತ್ತನೆಯದೋ ಎಂಬ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಪ್ಲೂಟೋ ವೈಪರ್ ಪಟ್ಟಿಯ ಇತರ ಸಾವಿರಗಟ್ಟಲೆ ಆಕಾಶಕಾಯಗಳಂತೆಯೇ ಸೂರ್ಯನನ್ನು ಸುತ್ತುತ್ತಿರುವ ವಸ್ತು ಎಂದು ಹೇಳಲಾಗುತ್ತಿದೆ. ಏಕೆಂದರೆ ಪ್ಲೂಟೋ ಮಾತ್ರ ಇತರ ಗ್ರಹಗಳಿಗಿಂತ ಭಿನ್ನವಾಗಿದೆ. ಅದರ ಕಕ್ಷೆ ಉಳಿದವುಗಳಂತಿರದೆ ತೀರಾ ಅಂಡಾಕಾರವಾಗಿದೆ. ಕಕ್ಷೆಯ ಈ ಆಕಾರದಿಂದಾಗಿ ಸೂರ್ಯನಿಂದ ಪ್ಲೂಟೋದ ಅಂತರ ಆಗಾಗ ಹೆಚ್ಚುಕಡಿಮೆಯಾಗುತ್ತಿರುತ್ತದೆ. ಒಮ್ಮೊಮ್ಮೆ ಅದು ಸೂರ್ಯನಿಗೆ ಸಮೀಪವಿದ್ದರೆ ಮತ್ತೊಮ್ಮೆ ಅತಿ ದೂರದಲ್ಲಿರುತ್ತದೆ. ಪ್ಲೂಟೋ ಮತ್ತು ನೆಪ್ಚೂನಿನ ಕಕ್ಷೆಗಳು ಒಮ್ಮೊಮ್ಮೆ ಮೇಳೈಸುವುದೂ ಉಂಟು. ಇಷ್ಟೇ ಅಲ್ಲ, ಉಳಿದ ಗ್ರಹಗಳ ಕಕ್ಷೆಗಿಂತ ಪ್ಲೂಟೋ ೧೭ ಡಿಗ್ರಿ ಓರೆಯಾಗಿದ್ದುಕೊಂಡು ಚಲಿಸುತ್ತಿದೆ.
ಸರೋಜಾ ಪ್ರಕಾಶ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!