23.4 C
Sidlaghatta
Sunday, July 6, 2025

ಭಾರತದ ಬಾಹ್ಯಾಕಾಶ ಸಾಧನೆಗಳು – ಭಾಗ 1

- Advertisement -
- Advertisement -

ಶ್ರೀಹರಿಕೋಟಾದ ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇಡೀ ವಿಶ್ವದ ದೃಷ್ಟಿ ಭಾರತದೆಡೆಗೆ ನೆಟ್ಟಿದೆ. ಭಾರತದ ಮೊಟ್ಟಮೊದಲ ಅಂತರ್‍ಗ್ರಹ ಬಾನನೌಕೆ ಅಂದು ಉಡಾವಣೆಗೊಳ್ಳಲಿದೆ. ಅದಕ್ಕೆಂದೇ ನಿರ್ಮಾಣಗೊಂಡ ಲಕಲಕನೆ ಹೊಳೆಯುವ ಮಂಗಳಯಾನ ಹೆಸರಿನ ಬಾನನೌಕೆ ವಾರದ ಮೊದಲೇ ರಾಕೆಟ್ಟಿನ ಬೆನ್ನೇರಿ ಕೂತಿದೆ. ಕ್ಷಣಗಣನೆ ಆರಂಭವಾಯಿತು. ಅಂತಿಮ ಹಂತದ ಸಿದ್ಧತೆಗಳೆಲ್ಲವೂ ಮುಗಿದು, ತಂಡದ ಮುಖಂಡರಿಂದ ಸೂಚನೆ ಬಂದೊಡನೆಯೇ ರಾಕೆಟ್ಟಿನ ಎಂಜಿನ್ ಉರಿಯಲಾರಂಭಿಸಿತು, ಹೊಗೆಯುಗುಳುತ್ತ ಮಂಗಳಯಾನ ನೌಕೆ ಆಗಸಕ್ಕೆ ಚಿಮ್ಮಿತು, ಅದರೊಂದಿಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸೇರ್ಪಡೆಯಾಯಿತು.
ಇದೇ ಭಾವೋದ್ವೇಗದ ಕ್ಷಣಗಳು ಐದು ವರ್ಷಗಳ ಹಿಂದೆ ‘ಚಂದ್ರಯಾನ’ದ ವೇಳೆಯಲ್ಲೂ ಎದುರಾಗಿದ್ದವು. ‘ಚಂದ್ರಯಾನ-1′, ಗಗನನೌಕೆಯ ಉಡ್ಡಯನ ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾಗಿತ್ತು. ಆ ನೌಕೆ ಚಂದ್ರನ ನೆಲಕ್ಕಪ್ಪಳಿಸಲೆಂದು ‘ಮೂನ್ ಇಂಪ್ಯಾಕ್ಟ್ ಪ್ರೊಬ್’, ವಿಕಿರಣಮಾಪಕ, ಖನಿಜ ಮಾಪಕ ಅಮೆರಿಕ, ಬಲ್ಗೆರಿಯಾ ದೇಶಗಳ ವೈಜ್ಞಾನಿಕ ಉಪಕರಣಗಳು ಇತ್ಯಾದಿ ಹತ್ತು ಪರಿಕರಗಳನ್ನು ಹೊತ್ತು ಬಾನಿಗೆ ಹಾರಿದ ಹಂತಹಂತವಾಗಿ ಮೇಲೇರತೊಡಗಿತ್ತು. ಮೊದಲ ಹಂತದಲ್ಲಿ ನೌಕೆ ದಾಟಿದ 36ಸಾವಿರ ಕಿ.ಮೀ. ಅಂತರ ಅಂದು ದಾಖಲೆಗೆ ಸೇರಿತು, ಏಕೆಂದರೆ ಆ ಎತ್ತರ ಭೂಸ್ಥಿರ ಉಪಗ್ರÀಹಗಳು ಹಾರಾಡುವ ಕಕ್ಷೆ, ಅಂದರೆ ಆ ಉಪಗ್ರಹಗಳು ಭೂಮಿಯದೇ ವೇಗದಲ್ಲಿ ಹಾರಾಡುತ್ತವೆ. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಭೂಸ್ಥಿರ ಕಕ್ಷೆಯನ್ನು ದಾಟಿದ ನೌಕೆ ಚಂದ್ರಯಾನ. ಹಾರುತ್ತ ಹಾರುತ್ತ ನೌಕೆ ಚಂದ್ರನನ್ನು ಇನ್ನೂ ಮತ್ತೂ ಸಮೀಪಿಸುತ್ತ ಎರಡು ತಾಸಿಗೊಮ್ಮೆ ಚಂದ್ರಪ್ರದಕ್ಷಿಣೆ ಮಾಡತೊಡಗಿತು. ಕ್ಯಾಮೆರಾ ಮತ್ತಿತರ ಉಪಕರಣಗಳು ನಿದ್ದೆಯಿಂದೆದ್ದವು. ವಿಧವಿಧದ ಕೋನಗಳಲ್ಲಿ ತೆಗೆದ ಚಂದ್ರಚಿತ್ರಗಳು ಭೂಮಿಗೆ ಬಂದು ತಲುಪತೊಡಗಿದವು. ‘ಮೂನ್ ಇಂಪ್ಯಾಕ್ಟ್ ಪ್ರೋಬ್’ ನೌಕೆಯಿಂದ ಹೊರಬಿದ್ದು, ಚಂದ್ರನೆಲಕ್ಕಪ್ಪಳಿಸುವ 30 ನಿಮಿಷಗಳ ಪಯಣ ಚಂದ್ರಯಾನದ ಪ್ರಮುಖ ಘಟ್ಟ. ಪ್ರೋಬ್ ಉಪಕರಣದೊಳಗೆ ಅವಿತಿಟ್ಟಿದ್ದ ಕ್ಯಾಮೆರಾ ನಿಮಿಷ ನಿಮಿಷಕ್ಕೂ ಸುತ್ತಲ ದೃಶ್ಯವನ್ನು ಸೆರೆಹಿಡಿಯುತ್ತಿತ್ತು. ಆ ಚಿತ್ರಗಳು ಕ್ಯಾಮೆರಾದಿಂದ ಮಾತೃನೌಕೆಗೆ, ಅಲ್ಲಿಂದ ಮಾತೃಭೂಮಿಗೆ ರವಾನೆಯಾಗತೊಡಗಿದವು. 2017 ರಲ್ಲಿ ಚಂದ್ರನ ಮೇಲೆ ಓಡಾಡುವ ಕೈಗಾಡಿಯೊಂದನ್ನು ಕಳುಹಿಸುವ ಇಸ್ರೋದ ಯೋಜನೆಗೆ ಈ ಚಿತ್ರಗಳು ಬಹಳೇ ಅನುಕೂಲವಾಗಲಿವೆಯೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇವೇ ಚಿತ್ರಗಳನ್ನಾಧರಿಸಿ, ಚಂದ್ರನಲ್ಲಿ ನೀರಿರುವ ಕುರುಹನ್ನು ಪತ್ತೆ ಹಚ್ಚಿದುದಾಗಿ ಇಸ್ರೋ ಮುಖಂಡರು ಘೋಷಿಸಿದಾಗ ಅದೊಂದು ಚರ್ಚೆಯ ವಸ್ತುವಾಯಿತು, ಆ ಮಾತು ಬೇರೆ. ಚಂದ್ರಯಾನ 2008ರ ಅಕ್ಟೋಬರ್ ವೇಳೆಗೆ ಚಂದ್ರನನ್ನು 3 ಸಾವಿರ ಬಾರಿ ಪ್ರದಕ್ಷಿಣೆಗೈದು 312 ದಿನಗಳವರೆಗೆ ಸತತವಾಗಿ ಸಂದೇಶಗಳನ್ನು ಕಳುಹಿಸಿತ್ತು. ಮುಂದೆ ತಾಂತ್ರಿಕ ಅಡಚಣೆಗಳೆದುರಾಗಿ ಸಂದೇಶಗಳು ನಿಂತವು.
ನಮ್ಮ ಸೌರಮಂಡಲದಲ್ಲಿ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ತೂನ್ ಇವೆಲ್ಲ ಸೂರ್ಯನನ್ನು ವಿವಿಧ ಅಂತರದಲ್ಲಿ, ವಿವಿಧ ರೂಪದ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿರುವ ಗ್ರಹಗಳು. ಇವುಗಳಲ್ಲಿ ಸೂರ್ಯನಿಂದ ತುಂಬ ಹತ್ತಿರವೂ ಅಲ್ಲ, ತುಂಬ ದೂರವೂ ಅಲ್ಲದೆ ಜೀವಜಾಲ ರೂಪುಗೊಳ್ಳಲು ಅನುಕೂಲ ವಾತಾವರಣವನ್ನು ಪಡೆದ ಏಕೈಕ ಗ್ರಹ ನಮ್ಮ ಭೂಮಿ. ಇದರ ಹೊರತಾಗಿ ನಮ್ಮ ಆಚಿನ ಕೆಂಪು ಬಣ್ಣವಾಗಿ ಕೋರೈಸುವ ಮಂಗಳಗ್ರಹದ ಬಗ್ಗೆ ನಮಗೆ ಇನ್ನಿಲ್ಲದ ಕುತೂಹಲ, ಸೌರವ್ಯೂಹದ ನಾಲ್ಕನೆಯ ಗ್ರಹವಾದ ಮಂಗಳ ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನ ಸುತ್ತ ನಮ್ಮಿಂದ ಕನಿಷ್ಟ 546 ಲಕ್ಷ ಕಿ.ಮೀ. ಹಾಗೂ ಗರಿಷ್ಟ 40 ಕೋಟಿ ಕಿಮೀ ದೂರದಲ್ಲಿ ಹಾರಾಡುತ್ತಿರುತ್ತದೆ.
ಮುಂದೊಮ್ಮೆ ಮಾನವ ಮಂಗಳಗ್ರಹಕ್ಕೆ ಹೋಗಿ ವಾಸಿಸಲು ಸಾಧ್ಯವಿರಬಹುದೆ? ಅಲ್ಲಿ ಜೀವಿಗೆ ಅನುಕೂಲಕರವಾದ ಸಂಪನ್ಮೂಲಗಳೇನಿರಬಹುದು? ಮಾನವ ಅದನ್ನು ವಾಸಯೋಗ್ಯ ಗ್ರಹವಾಗಿಸಬಹುದೆ? ಈ ಕುತೂಹಲದಿಂದಾಗಿಯೇ ಇಂದು ಮುಂದುವರೆದ ಹಾಗೂ ಮುಂದುವರೆಯುತ್ತಿರುವ ದೇಶಗಳು ಅಪಾರ ಹಣ ಹಾಕಿ ಮಂಗಳನ ಬಗ್ಗೆ ಸಂಶೋಧನೆ ನಡೆಸುತ್ತಿವೆ.
ಮಾನವ ನಿರ್ಮಿತ ಬಾನನೌಕೆಯನ್ನು ನಿರ್ಮಿಸಿ ಹಾರಿಬಿಡುವ ಸಾಹಸಕಾರ್ಯ ಸುಲಭ ಸಾಧ್ಯವಲ್ಲ. ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ವಾಯುಮಂಡಲದ ಭದ್ರ ಕೋಟೆಯನ್ನೂ ದಾಟಿ ಬಾಹ್ಯ ಅಂತರಿಕ್ಷವನ್ನು ಸೇರಿ ಅಲ್ಲಿ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವರಿಯುವಂಥ ಬಾನನೌಕೆಯ ನಿರ್ಮಾಣ ಹಾಗೂ ಅವುಗಳ ಉಡಾವಣೆ ಎರಡೂ ಅತ್ಯಂಥ ಕರಾರುವಾಕ್ ಹಾಗೂ ಕರಗತ ತಂತ್ರವನ್ನು ಬೇಡುವ ಕುಶಲಕಲೆಗಳು. ಅಲ್ಲಿ ಭೌತ, ಗಣಿತ, ರಸಾಯನ ವಿಜ್ಞಾನಗಳನ್ನು ಬಳಸಿ ಅನ್ವೇಷಿಸಿದ ತಂತ್ರಜ್ಞಾನಗಳ ಸಂಗಮವಾಗುತ್ತದೆ. ಮಾನವನ ಬುದ್ಧಿಶಕ್ತಿಯ ಪ್ರದರ್ಶನವಾಗುತ್ತದೆ. ಭೂಮಿಯನ್ನು ಸುತ್ತುವರೆಯುವ ಪ್ರತಿಯೊಂದೂ ಉಪಗ್ರಹದ ಕಕ್ಷೆ ಬೇರೆ ಬೇರೆಯಾಗಿರಬೇಕು, ಅವು ಒಂದಕ್ಕೊಂದು ಎದುರಾಗಬಾರದು, ನಿರ್ದಿಷ್ಟ ಎತ್ತರಕ್ಕೆ, ನಿರ್ದಿಷ್ಟ ವೇಗದೊಂದಿಗೆ ಉಪಗ್ರಹಗಳ ಉಡಾವಣೆಯಾಗಬೇಕು.
ಇನ್ನು ಉಪಗ್ರಹಗಳು ಹೊತ್ತೊಯ್ಯುವ ವೈಜ್ಞಾನಿಕ ಉಪಕರಣಗಳು, ಅವುಗಳ ನಿರ್ಮಾಣ, ಅವುಗಳನ್ನು ಉಪಗ್ರಹದೊಳಕ್ಕೆ ಜೋಡಿಸಿಡುವ ವೈಖರಿ ಇವೂ ಕೂಡ ಬಹು ಸವಾಲಿನ ಕಾರ್ಯಗಳೇ. ಹಾಗೆಯೇ ಬಹು ಹಣ ಬೇಡುವ ಯೋಜನೆಗಳೇ.
ಬಾಹ್ಯ ಅವಕಾಶದಲ್ಲಿರುವ ನೌಕೆ ಸತತವಾಗಿ ಹಾರಾಡುತ್ತಿರುತ್ತದೆ, ಹಾಗಾಗಿ ಅದರೊಂದಿಗೆ ಭೂಮಿಯಿಂದ ಅವಿರತ ಸಂಪರ್ಕದಲ್ಲಿರುವುದೊಂದು ಇಂದಿನ ತಂತ್ರಜ್ಞಾನದ ಅದ್ಭುತ ವೈಶಿಷ್ಟ್ಯವೇ ಎನ್ನಬಹುದು.
ಬೆಂಗಳೂರಿನ ಹೊರವಲಯದಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್, ಹಾರಿಬಿಟ್ಟ ಉಪಗ್ರಹಗಳ ಮೇಲೆ ಸದಾಕಾಲ ಕಣ್ಣಿಟ್ಟು, ಅವುಗಳಿಗೆ ಸಂದೇಶ ಕಳುಹಿಸುವ ಹಾಗೂ ಸಂದೇಶ ಪಡೆಯುವ ಕಾರ್ಯವನ್ನು ನಿರ್ವಹಿಸುತ್ತಿದೆ.
ಮಂಗಳಯಾನ ನೌಕೆಯ ಯಶಸ್ವಿ ಉಡಾವಣೆಯಿಂದಾಗಿ ಹತ್ತಾರು ವಿಷಯಗಳಲ್ಲಿ ಭಾರತ ದಾಖಲೆಗಳನ್ನು ಹುಟ್ಟುಹಾಕಿದೆ. ಕೆಲವುಗಳ ಉಲ್ಲೇಖ ಹೀಗಿದೆ:
1. ಮೊದಲನೆ ಪ್ರಯತ್ನದಲ್ಲಿ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿರುವ ಮೊದಲ ದೇಶ ಭಾರತ.
2. ಮಂಗಳನಲ್ಲಿಗೆ ಉಪಗ್ರಹ ಕಳುಹಿಸುವಲ್ಲಿ ಸಾಫಲ್ಯ ಕಂಡ ರಷ್ಯಾ, ಅಮೆರಿಕಾ, ಐರೋಪ್ಯ ಸಂಘಟನೆಗಳ ಸಾಲಿಗೆ ಭಾರತ ನಾಲ್ಕನೆಯ ದೇಶವಾಗಿ ಸೇರ್ಪಡೆ.
3. ಮಂಗಳಯಾನಕ್ಕೆ ತಗುಲಿದ ವೆಚ್ಚ ಬರೀ 450 ಕೋಟಿ ರೂಪಾಯಿ. ಆದ್ದರಿಂದ ಇದುವರೆಗೆ ನಡೆದ ಅಂತರಗ್ರಹ ಹಾರಾಟಗಳಲ್ಲಿ ಅತಿ ಕಡಿಮೆ ವೆಚ್ಚದ ಬಾನನೌಕೆ ಎಂಬ ಹೆಗ್ಗಳಿಕೆಯನ್ನೂ ಮಂಗಳಯಾನ ಪಡೆದಿದೆ. ಇದು ಬಾಹ್ಯಾಕಾಶ ಕುರಿತಾದ ಇಂಗ್ಲಿಷ್ ಸಿನೆಮಾ ‘ಗ್ರಾವಿಟಿ’ಯ ನಿರ್ಮಾಣಕ್ಕೆ ಆದ ವೆಚ್ಚಕ್ಕಿಂತ ಕಡಿಮೆ, ನೂರಿಪ್ಪತ್ತು ಕೋಟಿ ಭಾರತೀಯರಲ್ಲಿ ಒಬ್ಬೊಬ್ಬರದ್ದೂ ಬರೀ ನಾಲ್ಕು ರೂಪಾಯಿ ಹಾಕಿದಷ್ಟು ಮಾತ್ರವೇ ವೆಚ್ಚ ಎಂಬಿತ್ಯಾದಿಯಾಗಿ ಇದನ್ನು ಬಣ್ಣಿಸಲಾಗುತ್ತಿದೆ.
ಮುಂದುವರೆಯುವುದು..
ಸರೋಜ ಪ್ರಕಾಶ್

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!