ಸ್ವತಂತ್ರ ಭಾರತದ ಬಾಹ್ಯಾಕಾಶ ಸಂಶೋಧನೆ ಆರಂಭಗೊಂಡಿದ್ದು 1950 ರ ಆಸುಪಾಸಿನಲ್ಲಿ. ‘ಟಾಟಾ ಇನ್ಸ್ಟಿಟ್ಯುಟ್ ಆಫ್ ಫಂಡಮೆಂಟಲ್ ರಿಸರ್ಚ್’ ಸ್ಥಾಪನೆಗೊಂಡು ಬಾಹ್ಯಾಕಾಶ ವಿಕಿರಣಗಳ ಅಧ್ಯಯನಕ್ಕೆ ಅವಶ್ಯವಿರುವ ಉಪಕರಣಗಳ ನಿರ್ಮಾಣ, ಅವುಗಳ ಪರೀಕ್ಷೆ ಹೀಗೆ ಹೊಸ ಅಧ್ಯಾಯ ಪ್ರಾರಂಭವಾಯಿತು. ಅದಕ್ಕೆ ಸಂಬಂಧಿತ ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳು ಹುಟ್ಟುಹಾಕಲ್ಪಟ್ಟವು. ಅದೇ ವೇಳೆಗೆ ಅಂದರೆ 1957 ರಲ್ಲಿ ಸೋವಿಯೆತ್ ರಷ್ಯಾ ‘ಸ್ಪುಟನಿಕ್’ ಉಪಗ್ರಹವನ್ನು ಹಾರಿಬಿಟ್ಟಾಗ ಭೂಮಿಯನ್ನು ಸುತ್ತುಹಾಕುವ ಆ ಮಾನವನಿರ್ಮಿತ ನೌಕೆಯ ಬಗ್ಗೆ ಇಡೀ ಜಗತ್ತೇ ನಿಬ್ಬೆರಗಾಯಿತು. ನಮ್ಮಲ್ಲೂ ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಆಸಕ್ತಿ ಅಧಿಕಗೊಂಡಿತು.
ತಂತ್ರಜಾನ ಮುನ್ನಡೆಗೆ ಒತ್ತಾಸೆ ನೀಡಿದ ಅಂದಿನ ಪ್ರಧಾನಮಂತ್ರಿ ಜವಾಹರಲಾಲ ನೆಹರೂ ಅವರ ಹಾಗೂ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ನೇತೃತ್ವದಲ್ಲಿ ‘ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ’ ಇಸ್ರೋ ಜನ್ಮ ತಾಳಿತು. ಭಾರತದಲ್ಲಿ ಅಂತರಿಕ್ಷ ವಿಜ್ಞಾನ ಹೊಸ ಅಧ್ಯಾಯವನ್ನು ಆರಂಭಿಸಿತು.
ಇಸ್ರೋ ವಿಕ್ರಮ ಸಾರಾಭಾಯಿ ಅವರ ಕನಸಿನ ಕೂಸು. ಅವರ ಮಾತುಗಳಲ್ಲೇ ಹೇಳುವುದಾದರೆ ‘ಮುಂದುವರೆಯುತ್ತಿರುವ ದೇಶಗಳಿಗೆ ಬಾಹ್ಯಾಕಾಶ ವಿಜ್ಞಾನ ಬೇಕೆ ಎಂದು ಕೇಳುವವರಿದ್ದಾರೆ, ಆದರೆ ನಮಗೆ ನಮ್ಮ ಅಗತ್ಯದ ಕುರಿತು ಸ್ಪಷ್ಟತೆ ಇದೆ. ನಮ್ಮ ಜನತೆಯ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ ನಾವು ಯಾರನ್ನೂ ಅವಲಂಬಿಸಬೇಕಾಗಿಲ್ಲ’.
ಕೇಂದ್ರ ಸರಕಾರದ ಸತತ ಬೆಂಬಲದಿಂದಾಗಿ ಇಸ್ರೋದ ಕಠಿಣವೂ ಪರಿಶ್ರಮದ್ದೂ ಆದ ಸಂಶೋಧನಾ ಕಾರ್ಯ ಭರದಿಂದ ಸಾಗಲು ಸಾಧ್ಯವಾಗಿದೆ. ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ, ತಿರುವನಂತಪುರ, ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾ, ಇಸ್ರೋ ಉಪಗ್ರಹ ಕೇಂದ್ರ ಬೆಂಗಳೂರು, ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ ಅಹ್ಮದಾಬಾದ್, ರಾಷ್ಟ್ರೀಯ ದೂರಸಂವೇದಿ ಕೇಂದ್ರ ಹೈದರಾಬಾದ್, ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಹಾಸನ, ಇತ್ಯಾದಿ ಇಸ್ರೋದ ಹತ್ತಾರು ಶಾಖೆಗಳು ಇಂದು ದೇಶದ ಉದ್ದಗಲಕ್ಕೂ ವಿಸ್ತರಿಸಿವೆ.
ನಮ್ಮ ಮೊಟ್ಟಮೊದಲ ಕೃತಕ ಉಪಗ್ರಹ ‘ಆರ್ಯಭಟ’ ಉಡಾವಣೆ ಆಗಿದ್ದು 1975 ರಲ್ಲಿ. ಅಂದು ಅದರ ತೂಕ 360 ಕೆ.ಜಿ. ಆದರೆ ಅದು ಹಾರಿದ್ದು, ಸೋವಿಯೆತ್ ರಷ್ಯಾದ ನೆಲದಿಂದ ಹಾಗೂ ರಷ್ಯಾದ ರಾಕೆಟ್ ಮೇಲೆ ಕೂತು. ಎಕ್ಸ್ ರೇ ಆಸ್ಟ್ರಾನಮಿ, ಸೋಲಾರ್ ಫೀಸಿಕ್ಸ್ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಹಾರಿದ ಈ ಉಪಗ್ರಹದ ಮೈಮೇಲೆಲ್ಲ ಸೋಲಾರ್ ಪ್ಯಾನೆಲ್ಲುಗಳು, ಅಂದರೆ ಸೂರ್ಯನ ಬೆಳಕೇ ಅದಕ್ಕೆ ಇಂಧನ. ಆದರೆ ಪವರ್ ಕಂಟ್ರೋಲ್ ಮಾಡುವ ಶಾಖೆ ವಿಫಲಗೊಂಡು, ಹಾರಿದ ನಾಲ್ಕೇ ದಿನಗಳಲ್ಲಿ ಎಲ್ಲಾ ಪ್ರಯೋಗಗಳು ಸ್ತಬ್ಧಗೊಂಡವು. 60 ಬಾರಿ ಸುತ್ತು ಹಾಕಿದ ಅರ್ಯಭಟ ಭೂವಾತಾವರಣವನ್ನು ಪ್ರವೇಶಿಸಿ ಉರಿದು ಭಸ್ಮವಾಯಿತು. ಅದರ ನೆನಪಿಗೆ ಅಂದಿನ ಎರಡು ರೂಪಾಯಿಯ ನೋಟುಗಳ ಮೇಲೆ ಆರ್ಯಭಟ ನೌಕೆಯ ಚಿತ್ರವನ್ನು ಮುದ್ರಿಸಲಾಯಿತು.
1979 ರಲ್ಲಿ 444 ಕೆ.ಜಿ. ತೂಕದ ಭಾಸ್ಕರ 1 ಮತ್ತು ಭಾಸ್ಕರ 2 ಮೇಲೇರುವಾಗ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಗತಿ ಹೊಂದಿತ್ತ್ತು, ದೇಶದಾದ್ಯಂತ ಟಿ.ವಿ. ವೀಕ್ಷಣೆ ಆಗಲೇ ಸಾಧ್ಯವಾಗಿದ್ದು. ಅದೂ ಕೂಡ ರಷ್ಯಾದ ನೆರವಿನಿಂದ ಹಾರಿತ್ತು.
ಮುಂದೆ ರೋಹಿಣಿ ಸರಣಿ ಉಪಗ್ರಹಗಳು ಹಾರುವ ವೇಳೆಗೆ ನಮ್ಮದೇ ಆದ ಉಡಾವಣಾ ವ್ಯವಸ್ಥೆ ಕೈಗೆಟುಕಿತ್ತು. 1994 ರಲ್ಲಿ ಶ್ರೀಹರಿಕೋಟಾದಿಂದ ಉಡಾವಣೆಗೊಂಡ ರೋಹಿಣಿ ಸರಣಿಯ ಮುಂದುವರೆದ ಭಾಗವಾದ ಎಸ್ಸಾರ್‍ಓಎಸೆಸ್ ಉಪಗ್ರಹಗಳು ಭೂವಾತಾವರಣದ ಹೊರ ಅಂಚಿನ ಅಯಾನುಗೋಳದ ಉಷ್ಣತೆ, ಎಲೆಕ್ಟ್ರಾನುಗಳ ಸಾಂದ್ರತೆ ಮತ್ತಿತರ ಗುಣಲಕ್ಷಣಗಳನ್ನು ಅಂದರೆ ಪಕ್ಕಾ ವೈಜ್ಞಾನಿಕ ಅಧ್ಯಯನಕ್ಕೆಂದು ಉಪಕರಣಗಳನ್ನು ಹೊತ್ತು ಹಾರತೊಡಗಿದ್ದವು.
ಭಾರತದ ಪ್ರಥಮ ಉಪಗ್ರಹ ಉಡಾವಣಾ ವಾಹನ ಎಸ್ಸೆಲ್ವಿ ತಯಾರಾಗಿದ್ದು 1979 ರಲ್ಲಿ ಅಂತರಿಕ್ಷದ 500 ಕಿ.ಮೀ. ದೂರದವರೆಗೆ ನಲವತ್ತು ಕೆ.ಜಿ. ಭಾರವನ್ನು ಹೊತ್ತು ಹಾರಬಲ್ಲ ಉಪಗ್ರಹಗಳ ಉಡ್ಡಯನ ಎಸ್ಸೆಲ್ವಿಯಿಂದ ಸಾಧ್ಯವಾಯಿತು. ಮುಂದೆ ಒಂದು ಕಡೆ ಉಪಗ್ರಹಗಳ ನಿರ್ಮಾಣ, ಇನ್ನೊಂದೆಡೆ ಅವುಗಳನ್ನು ಬಾನಿಗೆ ಹಾರಿಬಿಡಲು ಅವಶ್ಯವಿರುವ ಮಷಿನರಿಗಳ ತಯಾರಿ ಎರಡೂ ಒಟ್ಟೊಟ್ಟಿಗೆ ಸಾಗಿದವು. 90ರ ದಶಕದಲ್ಲಿ ದೂರಸಂವೇದಿ ಉಪಗ್ರಹಗಳನ್ನು ನಮ್ಮದೇ ಆದ ಪೋಲಾರ ಸೆಟೆಲೈಟ್ ಲಾಂಚ್ ವಾಹನದ ಮೂಲಕ ಬಾನಿಗೆ ಹಾರಿಬಿಡಲಾಯಿತು. ಈ ವಾಹನ ಅತ್ಯಂತ ಯಶಸ್ವೀ ವಾಹನವೆನಿಸಿ ಇದುವರೆಗೆ 40 ವಿದೇಶೀ ಹಾಗೂ ನಮ್ಮದೇಶದ 31 ಉಪಗ್ರಹಗಳನ್ನು ವಿವಿಧ ಕಕ್ಷೆಗಳಿಗೆ ಹೊತ್ತೊಯ್ದಿದೆ.
2008ರಲ್ಲಿ ಭಾರತ 11 ಉಪಗ್ರಹಗಳನ್ನು ಬಾನಿಗೆ ಕಳುಹಿಸಿತು. ಅವುಗಳಲ್ಲಿ 9 ಬೇರೆ ದೇಶಗಳ ಉಪಗ್ರಹಗಳು, ಅಲ್ಲದೆ 11 ಉಪಗ್ರಹಗಳನ್ನು ಒಂದೇ ರಾಕೆಟಿನಲ್ಲಿ ಉಡಾವಣೆಗೊಳಿಸಿದ್ದು ನಮ್ಮ ಹೆಗ್ಗಳಿಕೆಯೇ ಆಗಿದೆ.
PSLVಯ ನಂತರ ಇನ್ನೂ ಉನ್ನತ ತಂತ್ರಜ್ಞಾನ ಬಳಸಿದ GSLVಅಂದರೆ Geosynchronous satellite launch vehicle, , ಅಂದರೆ, ಉಪಗ್ರಹಗಳನ್ನು 36 ಸಾವಿರ ಕಿ.ಮೀ. ಎತ್ತರದ ಭೂಸ್ಥಿರ ಕಕ್ಷೆಗೆ ತಲುಪಿಸುವ ಉಡಾವಣಾ ವಾಹನ 2010ರಲ್ಲಿ ತಯಾರಾಯಿತು. ಸುಮಾರು 5 ಟನ್ ತೂಕದ ಉಪಗ್ರಹವನ್ನು ಬೆನ್ನಮೇಲೆ ಹೊರುವ ರಾಕೆಟ್ಟನ್ನು ಹಾರಿಸುವ ಸಾಮರ್ಥ್ಯ ಹೊಂದಿದ ಜಿಎಸಸ್ಸೆಲ್ವಿ ಮೊದಲೆರಡು ಬಾರಿ ಹಾರುವ ಹಂತಗಳಲ್ಲಿ ವೈಫಲ್ಯ ಕಂಡಿತು. ಮರಳಿ ಪ್ರಯತ್ನ ಪಟ್ಟ ಇಸ್ರೋ ತಂತ್ರಜ್ಞರು ಮೂರನೆಯ ಬಾರಿ ಕ್ರಿಯೋಜೆನಿಕ್ ಎಂಜಿನ್ ತಂತ್ರಜಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಜಿಸ್ಯಾಟ್ ಉಪಗ್ರಹವನ್ನು ಉಡಾವಣೆಗೊಳಿಸಿದರು. ಆಗ ಕ್ರಿಯೋಜೆನಿಕ್ ತಂತ್ರಜ್ಞಾನ ಸಾಮರ್ಥ್ಯ ಪಡೆದ ಜಗತ್ತಿನ 6ನೆಯ ರಾಷ್ತ್ರವೆಂಬ ಖ್ಯಾತಿಗೆ ಭಾರತ ಪಾತ್ರವಾಯಿತು.
ದೇಶದ ಹೆಮ್ಮೆಯ ಉಪಗ್ರಹ ಸರಣಿ ಇನ್ಸ್ಯಾಟ ಸರಣಿ 1982 ರಿಂದ ಏಷ್ಯಾ ಖಂಡದಲ್ಲಿಯೇ ಬೃಹತ್ ಸಂಪರ್ಕ ಜಾಲ ಎಂಬ ಖ್ಯಾತಿಯನ್ನು ಪಡೆದ ಇನ್ಸ್ಯಾಟ್ ದೇಶದ ಅಂತರಿಕ್ಷ ಇಲಾಖೆ, ದೂರಸಂಪರ್ಕ ಇಲಾಖೆ, ಹವಾಮಾನ ಇಲಾಖೆ ಹಾಗೂ ಆಕಾಶವಾಣಿ ಮತ್ತು ದೂರದರ್ಶನ ಇವೆಲ್ಲವೂ ಜಂಟಿಯಾಗಿ ನಿಭಾಯಿಸುತ್ತಿರುವ ಸಂಪರ್ಕ ಜಾಲ. ಭೂಸ್ಥಿರಕಕ್ಷೆಯಲ್ಲಿ ಅಲ್ಲಲ್ಲಿ ಹಾರಾಡುತ್ತಿರುವ ಇನ್ಸಾಟ್ ಉಪಗ್ರಹಗಳು ಫೋನು, ಟಿ.ವಿ. ಸಂಪರ್ಕ, ಹವಾಮಾನ ಅಧ್ಯಯನ ಇತ್ಯಾದಿ ಹಲವಾರು ಕ್ಷೇತ್ರಗಳನ್ನು ನಿಭಾಯಿಸುತ್ತಿವೆ. ಹಾಸನ ಮತ್ತು ಭೋಪಾಲ ನಗರಗಳಲ್ಲಿ ಕಂಟ್ರೋಲ್ ಕೇಂದ್ರಗಳಿವೆ.
ಭಾರತೀಯ ಸಂಜಾತೆ ಅಂತರಿಕ್ಷಯಾನಿ ದಿವಂಗತ ಕಲ್ಪನಾ ಚಾವ್ಲಾ ಅವರ ನೆನಪಿಗೆ ಕಲ್ಪನಾ ಹೆಸರಿನ ಸಂಪೂರ್ಣವಾಗಿ ಹವಾಮಾನ ವರದಿಗೆಂದೇ ತಯಾರಾದ ಉಪಗ್ರಹ ಭೂಸ್ಥಿರ ಕಕ್ಷೆಯಲ್ಲಿ ಹಾರಾಡುತ್ತಿದೆ. ಹಾಗೆಯೇ ಆಯಾರೆಸ್, ದೂರಸಂವೇದಿ ಉಪಗ್ರಹಗಳ ಸರಣಿ. ಈ ಸರಣಿಯಲ್ಲಿ ಕೆಲವು ಉಪಗ್ರಹಗಳು, ಎಜುಸ್ಯಾಟ್, ಕಾರ್ಟೊಸ್ಯಾಟ್, ಓಶನ್‍ಸ್ಯಾಟ್, ರಿಸೋರ್ಸ್ಯಾಟ್ ಇತ್ಯಾದಿ. ‘ಸರಲ್’ ಸಮುದ್ರದ ತೆರೆಗಳು ಉಬ್ಬರ, ಇಳಿತಗಳ ಅಧ್ಯಯನಕ್ಕೆಂದು ಉಡಾವಣೆಗೊಂಡ ಉಪಗ್ರಹ.
ದೂರಸಂವೇದಿ ಉಪಗ್ರಹ ಮಣ್ಣು ಸವಕಳಿ, ಮೀನುಗಾರಿಕೆ, ಲೋಹ ಮತ್ತು ಅದಿರು ನಿಕ್ಷೇಪ, ಮಹಾಪೂರ, ಬರ ನಿರ್ವಹಣೆ, ಅಂತರ್ಜಲ, ಹವಾಮಾನ, ಕಂಪ್ಯೂಟರ್ ಸಂಪರ್ಕ, ರೇಡಿಯೋ ಜಾಲ, ಟೆಲೆಫೋನ್ ಲಿಂಕ್, ರೈಲು ಮತ್ತು ರಸ್ತೆ ಸಾಗಾಟ, ಟಿ.ವಿ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಇಂದು ಉಪಗ್ರಹ ಸೇವೆಯನ್ನು ನಾವು ಪಡೆಯುತ್ತಿದ್ದೇವೆ. ಐದು ನಗರಗಳಲ್ಲಿ ಉಪಗ್ರಹ ನಿರ್ವಹಣಾ ಕೇಂದ್ರಗಳು ಕಾರ್ಯಗೈಯ್ಯುತ್ತಿವೆ.
ಹಾಗೆಯೇ ತಂತ್ರಜ್ಞಾನದಲ್ಲಿ ಇನ್ನೊಂದು ಮುಖವಿದೆ, ಹಾರಿ ಬಿಟ್ಟ ಉಪಗ್ರಹಗಳು ತಮ್ಮ ಕಾರ್ಯದ ಅವಧಿಯ ಬಳಿಕ ನಿರುಪಯೋಗಿ ವಸ್ತುಗಳಾಗುತ್ತವೆ. ಅವುಗಳನ್ನು ಮರಳಿ ಭೂಮಿಗೆ ತರಿಸುವುದು ಅತ್ಯಂತ ದುಬಾರಿ ವೆಚ್ಚ ಹಾಗೂ ಕ್ಲಿಷ್ಟ ತಂತ್ರಜ್ಞಾನ ಬೇಡುವ ಕೆಲಸ, ಆದ್ದರಿಂದ ಅವುಗಳನ್ನು ಅಲ್ಲಿಯೇ ಕೈಬಿಡಲಾಗುತ್ತದೆ. ಅಂಥ ನೂರಾರು ಉಪಗ್ರಹಗಳು ಭೂಆಚಿನ ಆಕಾಶದಲ್ಲಿ ಹಾರಾಡುತ್ತಲಿದ್ದು ಅವೀಗ ಬಾನಕಸ ಎನಿಸಿಕೊಂಡಿವೆ. ಬಾನಕಸದ ನಿರ್ವಹಣೆ ಯಾರ ಹೊಣೆ ಎಂಬುದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆ.
ಅದಿರಲಿ, ಇಂದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಸರು ತಂದುಕೊಡುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೂ ಮುಖ್ಯ ಕಾರಣ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ. ಅಲ್ಲವೆ?
ಮುಗಿಯಿತು.
ಸರೋಜಾ ಪ್ರಕಾಶ.
- Advertisement -
- Advertisement -
- Advertisement -
- Advertisement -