24.1 C
Sidlaghatta
Thursday, May 30, 2024

ಯುಜಿ-ಪಿಜಿ, ತಳಿಕೆ=ಬಂದಳಿಕೆ?

- Advertisement -
- Advertisement -

ಸಾಧ್ಯವಾದಷ್ಟು ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕಬೇಕು ಎಂಬ ಕಳಕಳಿಯನ್ನು ಎಲ್ಲರೂ ಮೆಚ್ಚುವಂತಹದ್ದೇ. ಆ ಒಂದು ಉದ್ದೇಶದಿಂದಲೇ ಇಂದು ತಾಲ್ಲೂಕು ಮತ್ತು ಕೆಲವು ಹೋಬಳಿ ಮಟ್ಟದಲ್ಲೂ ಸರಕಾರ ಪದವಿ ಕಾಲೇಜುಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಆಯಾ ಪ್ರದೇಶಗಳ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ಬಿ.ಎ., ಬಿ.ಕಾಂ., ಬಿ.ಬಿ.ಎಂ. ಮತ್ತು ಬಿ.ಎಸ್ಸಿ, ಪದವಿಗಳನ್ನು ಪ್ರಾರಂಭಿಸಲಾಗಿದೆ. ಹೀಗೆ ಯು.ಜಿ. (Under graduate) ಗಳು ಹೇಗೋ ಸಾಗುತ್ತಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ಪದವಿ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವ ದೃಷ್ಠಿಯಿಂದ ಅವುಗಳಲ್ಲಿ ಪಿ.ಜಿ. (Post Graduate) ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಒಮ್ಮೆಗೆ ಎಲ್ಲರಿಗೂ ಅವರವರು ಇರುವಲ್ಲೆ ಸ್ನಾತಕೋತ್ತರ ಶಿಕ್ಷಣ ದೊರಕುವಂತಾಗಬೇಕೆಂಬ ಆಸೆ ಸರಕಾರಕ್ಕೀರುವುದರಲ್ಲಿ ಯಾವುದೇ ದುರುದ್ದೇಶವಿಲ್ಲ. ಆದರೆ ಅದಕ್ಕನುಗುಣವಾಗಿ ಸಿದ್ಧತೆ ಇರದೇ ಹೋದರೆ ಅದು ಉದ್ದೇಶದ ಮೂಲತತ್ವಕ್ಕೆ ಧಕ್ಕೆ ನೀಡಬಹುದಾದ ಅಪಾಯವಿದೆ.
ಯು.ಜಿ. ಯೊಂದಿಗೆ ಪಿ.ಜಿ. ಗಳನ್ನು ತಳಿಕೆ ಹಾಕುತ್ತಾ ಹೋಗುವುದರಿಂದ ನಾವು ಅನೇಕ ಸ್ನಾತಕೋತ್ತರ ಶಿಕ್ಷಣ ಪಡೆದವರು ಪಡೆದ ಜ್ಞಾನ ಮತ್ತು ವ್ಯಕ್ತಿತ್ವವನ್ನು ಪ್ರಸ್ತುತ ಸನ್ನಿವೇಶದಲ್ಲಿ ಅವಲೋಕಿಸುತ್ತಲೇ ಅವಶ್ಯಕವಾದ ವಾತಾವರಣದ ಸೃಷ್ಠಿಯನ್ನು ಮಾಡುವತ್ತಾ ಮನ ಮಾಡಬೇಕಿದೆ.
ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ್ಕೋತರ ಅಧ್ಯಾಯನಕ್ಕೆ ಅಗತ್ಯವಾದ ವಾತಾವರಣವಿರುತ್ತದೆ. ಅಲ್ಲಿ ಅವರಷ್ಟೆ ಅಧ್ಯಯನದಲ್ಲಿ ತೊಡಗಿರುತ್ತಾರೆ. ಅವರಿಗೆ ಅಲ್ಲಿ ಅಗತ್ಯವಿರುವಷ್ಟು ಶಿಕ್ಷಕರ ಲಭ್ಯತೆ ಇದ್ದು, ಮಾರ್ಗದರ್ಶನಕ್ಕೆ ಕೊರತೆ ಇರುವುದಿಲ್ಲ. ಇದಕ್ಕೆ ಪೂರಕವಾಗಿ ಸುಸಜ್ಜಿತವಾದ ಗ್ರಂಥಾಲಯ ಸೌಲಭ್ಯ-ವಸತಿ ನಿಲಯಗಳ ಸೌಲಭ್ಯ ಎಲ್ಲವೂ ಒಂದೇ ಕ್ಯಾಂಪಸ್‍ನಲ್ಲಿ ಲಭ್ಯ. ಅದೂ ಅಲ್ಲದೇ ಅಲ್ಲಿನ ವಿಭಾಗಗಳಲ್ಲಿ ಹೊರಗಡೆಯಿಂದ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿಚಾರ ಸಂಕಿರಣ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಯುತ್ತಿರುತ್ತಾರೆ. ಹೀಗಾಗಿ ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ದೊರಕುವುದೂ ಅಲ್ಲದೇ ಅವರ ವ್ಯಕ್ತಿತ್ವ ವಿಕಸನಕ್ಕೆ ಅವು ಪೂರಕವಾಗಿರುತ್ತವೆ. ಡಾಕ್ಟರೇಟ್ ಆದ ಶಿಕ್ಷಕ ವೃಂದ-ಉತ್ತಮ ಗ್ರಂಥಾಲಯ-ಮಾರ್ಗದರ್ಶನ ಅವರಿಗೆ ಲಭ್ಯವಾಗುತ್ತಿರುತ್ತದೆ. ಆದರೆ ಯು.ಜಿ. ಪ್ರಾರಂಭಿಸಿದ ಪಿ.ಜಿ. ಗಳಲ್ಲಿ?
ಯಾವ ಯಾವುದೋ ಒತ್ತಡಕ್ಕೊಳಗಾಗಿ ಪದವಿ ಕಾಲೇಜು ಪ್ರಾರಂಭಿಸಿದ ಪಿ.ಜಿ.ಗಳ ವ್ಯವಸ್ಥೆ ಭಗವಂತನಿಗೆ ಪ್ರೀತಿ (ಅಪವಾದಗಳು ಇರಬಹುದು!) ನುರಿತ ಅಧ್ಯಾಪಕರ ಕೊರತೆ ಒಂದಡೆಯಾದರೆ-ಕೊಠಡಿಗಳ ಸಮಸ್ಯೆ ಒನ್ನೊಂದೆಡೆ ಪ್ರತ್ಯೇಕ ಗ್ರಂಥಾಲಯ ಸೌಲಭ್ಯ ಇರುವುದಿಲ್ಲ. ವಸತಿ ನಿಲಯಗಳ ಸಮಸ್ಯೆಯಂತೂ ಇದ್ದದ್ದೇ ಹಾಗಾಗಿ ಒಟ್ಟಾರೆ ಅವರು ತೆರೆದುಕೊಳ್ಳುವ ವಾತಾವರಣ ಕೇವಲ ಪದವಿ ಕಾಲೇಜಿನ ವಾತಾವರಣವೇ ವಿನಃ ವಿಶ್ವವಿದ್ಯಾಲಯದ ವಾತಾವರಣವಲ್ಲ. ವ್ಯಕ್ತಿತ್ವ ಅರಳುವುದು ಕೇವಲ ಪುಸ್ತಕದ ಓದಿನಿಂದಷ್ಟೆ ಸಾಧ್ಯವಿಲ್ಲ. ಅದಕ್ಕನುಗುಣವಾದ ವಾತಾವರಣ ಕೂಡ ಬಹಳ ಮುಖ್ಯ ಬಹುಶಃ ತಾವು ಗಮನಿಸಬಹುದಾದರೆ ಅಥವಾ ಗಮನಿಸಿದ್ದರೆ-ನೋಡಿ ಹೈಸ್ಕೂಲಿನ ಜೊತೆಗೆ ತಳಿಕೆ ಹಾಕಿಕೊಂಡು ಪಿಯುಸಿ ಓದಿದ ಮಕ್ಕಳು, ಸ್ವತಂತ್ರ್ಯವಾಗಿ ಪಿಯುಸಿ ಓದಿದ ಮಕ್ಕಳು, ಪದವಿ ಕಾಲೇಜುಗಳೊಂದಿಗೆ ತಳಿಕೆ ಹಾಕಿಕೊಂಡ ಪಿಯುಸು ಮಕ್ಕಳು ಇವರ ನಡಾವಳಿಕೆಗಳನ್ನು ಗಮನಿಸಿದ್ದವರಿಗೆ ನನ್ನ ಮಾತುಗಳು ಹೆಚ್ಚು ಸ್ಪಷ್ಟವಾಗಬಹುದು.
ಯಾವುದೇ ಸೌಲಭ್ಯಗಳನ್ನು ನೀಡದೇ ಒಟ್ಟಾರೆ ಯು.ಜಿ.ಯೊಂದಿಗೆ ಪಿ.ಜಿ.ಗಳನ್ನು ತಳಿಕೆ ಹಾಕಿದರೆ–ಅಲ್ಲಿ ಅದು ಸ್ನಾತಕೋತ್ತರ ಪದವಿಯಾಗುವುದುಕ್ಕೆ ಬದಲಾಗಿ ನಾಲ್ಕು ಮತ್ತು ಐದನೇ ವರ್ಷದ ಪದವಿಗಷ್ಟೆ ಆಗಿಬಿಡಬಹುದಾದ ಅಪಾಯವಿದೆ. ಸೂಕ್ತ ಶಿಕ್ಷಕರ ಕೊರತೆ ಕೂಡ ಇದಕ್ಕೆ ಕಾರಣ.
ಇಂದು ಪದವಿ ಕಾಲೇಜುಗಳಲ್ಲಿರುವ ಡಾಕ್ಟರೇಟ್ ಆದ ಒಬ್ಬರೋ ಇಬ್ಬರೋ ಅಲ್ಲಿ ನಿಗದಿಗೊಳಿಸಿದ ಸ್ನಾತಕೋತ್ತರ ಕೇಂದ್ರಗಳಲ್ಲಿ ಇದ್ದಲ್ಲಿ ಅವರಲ್ಲಿ ಸಂಯೋಜಕರಾಗಿದ್ದು-ಅವರುಗಳ ಬಹಳಷ್ಟು ಸಮಯ ವಿಶ್ವವಿದ್ಯಾಲಯ, ಸರ್ಕಾರ, ಇಲಾಖೆಗಳೊಂದಿಗೆ ವ್ಯವಹರಿಸುವುದರಲ್ಲೆ ವ್ಯಯವಾಗುತ್ತದೆ. ಈಗಂತೂ ಯು.ಜಿ. ಗೇ ಸಾಕಷ್ಟು ಶಿಕ್ಷಕರಿರದೇ ಅತಿಥಿ ಉಪನ್ಯಾಸಕರನ್ನು ತಾತ್ಕಲಿಕವಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಅನುಭವದ ಕೊರತೆ, ಅನುಭವವು ಇರುವವರಿಗೆ ಯು.ಜಿ. ಮತ್ತು ಪಿ.ಜಿ. ಎರಡನ್ನು ನಿಭಾಯಿಸುವುದು ಕಷ್ಟ. ಇದು ಕೇವಲ ಮೂರು ಮೊಳದ ಬಟ್ಟೆಯಲ್ಲಿ ಮರ್ಯಾದೆ ಮುಚ್ಚುವಂತಹ ಕಸರತ್ತಾಗಿ ಬಿಡುತ್ತದೆ. ಮೇಲಕ್ಕೆಳೆದರೆ ಕೆಳಕ್ಕೆ ಖಾಲಿ-ಕೆಳಕ್ಕೆಳೆದರೆ ಮೇಲಕ್ಕೆ ಖಾಲಿ ಎರಡು ಕಡೆ ನ್ಯಾಯ ಒದಗಿಸಬೇಕಾದರೆ ಎರಡು ಕಡೆಗಳಿಗೆ ಸಾಲುವಷ್ಟು ಶಿಕ್ಷಕರ ನೇಮಕವಾಗಬೇಕು. ಪದವಿ ಕಾಲೇಜುಗಳಲ್ಲಿ ಆದರೂ ಸ್ನಾತಕೋತ್ತರ ಪದವಿ ಕೇಂದ್ರಗಳಿಗೇ ಪ್ರತ್ಯೇಕವಾದ ಕಟ್ಟಡ-ಸಾಕಷ್ಟು ಕೊಠಡಿಗಳು ಮತ್ತು ಸುಸಜ್ಜಿತ ಗ್ರಂಥಾಲಯದ ಸ್ಥಾಪನೆಯಾಗಬೇಕು. ಹಾಗಾದರೆ ಸಮಸ್ಯೆ ಒಂದಿಷ್ಟು ಬಗೆಹರಿದೀತು.
2ಯುಜಿಗಳಲ್ಲಿನ ಪಿಜಿಗಳು ಸ್ವತಂತ್ರ್ಯವಲ್ಲ. ಅವು ಪದವಿ ಕಾಲೇಜುಗಳು ಸಂಲಗ್ನಗೊಂಡ ವಿಶ್ವವಿದ್ಯಾಲಯಗಳಿಗೆ ಅಧೀನ ಆಯಾ ವಿಶ್ವವಿದ್ಯಾಲಯಗಳ ವಿಭಾಗಗಳಿಗೆ ನಿಗದಿ ಪಡಿಸಿದ ಪಠ್ಯಗಳನ್ನೆ ಇಲ್ಲೂ ಬೋಧಿಸಬೇಕು. ಅಲ್ಲಿ ಅವರು ಅವರ ಅನುಕೂಲಕ್ಕೆ ತಕ್ಕಂತೆ ತಯಾರಿಸಿದ ಪ್ರಶ್ನೆಪತ್ರಿಕೆಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಉತ್ತರಿಸಬೇಕು. ಅವುಗಳ ಮೌಲ್ಯ ಮಾಪನ ಕೂಡ ವಿಶ್ವವಿದ್ಯಾಲಯಗಳ ಶಿಕ್ಷಕರಿಂದ ಮಾತ್ರ. ಹೀಗಾದಾಗ ಸಹಜವಾಗಿ ಸೌಲಭ್ಯವುಳ್ಳ ಮತ್ತು ಸೌಲಭ್ಯವಿರದ ವಿದ್ಯಾರ್ಥಿಗಳ ನಡುವೆ ಸ್ಪಷ್ಟ ಅಂತರ ಏರ್ಪಡುತ್ತಾ ಹೋಗುವುದು ಸಹಜ. ವಿಶ್ವವಿದ್ಯಾಲಯದವರು ಅವರ ಮಟ್ಟದಲ್ಲೇ ಯೋಜನೆ ಮಾಡಿದರೆ-ಆ ಮಟ್ಟಕ್ಕೇರದ ಇಲ್ಲಿನ ವಿದ್ಯಾರ್ಥಿಗಳಿಗೆ ಕೀಳರಿಮೆ ಕಾಡಬಹುದು. ಇದನ್ನೆಲ್ಲ ಪ್ರಾಮಾಣಿಕವಾಗಿ ಪರಿಶೀಲಿಸುವ ತುರ್ತು ಇದೆ.
ಇನ್ನೂ ಯುಜಿ ಯೊಂದಿಗೆ ಪಿ.ಜಿ.ಗಳನ್ನು ತಳಿಕೆ ಹಾಕಿ ಆಯಾ ಪ್ರದೇಶಗಳಲ್ಲೇ ಸ್ನಾತಕೋತ್ತರ ಶಿಕ್ಷಣ ಲಭ್ಯವಾಗುತ್ತದೆಂದಾಗ ಅದರ ಗರಿಷ್ಠ ಪ್ರಯೋಜನವನ್ನು ಪಡೆಯುವವರು ವಿದ್ಯಾರ್ಥಿನಿಯರು ಹೆಚ್ಚಿನ ಅಂಕಗಳಿಸಿ ಪದವಿ ಪೂರೈಸಿದ ವಿದ್ಯಾರ್ಥಿನಿಯರು ಮನೆಯಲ್ಲಿದ್ದೇನು ಮಾಡುವುದು ಹೇಗೋ ಇಲ್ಲೆ ಪಿ.ಜಿ. ಇದೆ ಎಂದು ಸೇರಿದರೆ ಅದು ಅವರು ಹೊತ್ತು ಕಳೆಯಲು ಕಂಡು ಕೊಳ್ಳುವ ಸುಲಭ ಉಪಾಯವಾಗಬಹುದು. ನಿಜಕ್ಕೂ ಆಸಕ್ತಿವುಳ್ಳ ಸ್ವಲ್ಪ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಇಲ್ಲಿ ಜಾಗೆ ಸಿಗದೇ ಇನ್ನೆನೇನೋ ಕೆಲಸಗಳಲ್ಲಿ ತೊಡಗಿಸಿಬಿಡಬಹುದು. ಹೊತ್ತು ಹೋಗದೇ ಹವ್ಯಾಸಕ್ಕಾಗಿ ಬರುವವರೇ ಅಧಿಕವಾದರೆ ಆಸಕ್ತಿ ಇರುವವರ ಆಸಕ್ತಿಯನ್ನು ಒತ್ತಿಸಿದರೆ? ಒಟ್ಟಾರೆ ವಾತಾವರಣದ ಪ್ರಭಾವವನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಂತ ಅಪವಾದಗಳಿರುವುದಿಲ್ಲವೆಂದಲ್ಲ ಆದರೆ ಅಪವಾದಗಳನ್ನೆ ಎಂದಿಗೂ ವ್ಯಾಖ್ಯಾ ಎಂದು ಪರಿಗಣಿಸಲಾಗುವುದಿಲ್ಲ.
ಯುಜಿಗಳೊಂದಿಗಿನ ಪಿಜಿಗಳು ಪ್ರತಿವರ್ಷ ಬಹಳಷ್ಟು ಸ್ನಾತಕೋತ್ತರ ಪದವೀಧರರನ್ನು ಸಮಾಜಕ್ಕೆ ನೀಡಬಹುದು. ನಾವು ಹೆಚ್ಚು ಹೆಚ್ಚು ಜನರಿಗೆ ಉನ್ನತ ಶಿಕ್ಷಣವನ್ನು ನೀಡುತ್ತಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆ ಕುರಿತು ದಾಖಲೆಗಳನ್ನು ನೀಡಬಹುದು. ಆದರೆ ಯಾವತ್ತೂ ಉತ್ಪಾದನೆ ಬೇಡಿಕೆಯಾಧಾರಿತವಾಗಿರಬೇಕು. ರಾಶ್ಯುತ್ಪನ್ನ ಮಾಡಿ ಗಿರಾಕಿಗಳಿಲ್ಲದ್ದಿದ್ದಲ್ಲಿ ಅದು ದಿವಾಳಿತನಕ್ಕೆ ದಾರಿ ಮಾಡಿಕೊಡಬಲ್ಲದು. ಉತ್ಪನ್ನದ ವಿನಿಯೋಗ ಮತ್ತು ವಿತರಣೆ ಸಮರ್ಪಕವಾಗಿ ಆದಾಗಲೇ ಉತ್ಪನ್ನಕ್ಕೊಂದು ಬೆಲೆ ಬರುತ್ತದೆ ಎಂಬ ಸರಳ ಸತ್ಯವನ್ನು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಉದಾಹರಣೆಗೆ ಹೇಳುವುದಾದರೆ ತಾಲ್ಲೂಕು ಕೇಂದ್ರವಾದ ಸಾಗರ ಒಂದರಲ್ಲೇ ಎರಡು ಪದವಿ ಕಾಲೇಜುಗಳಲ್ಲಿ ಎಂ.ಕಾಂ. ಕಲಿಕೆಯ ಸೌಲಭ್ಯವಿದೆ. ಒಳ್ಳೆಯದೇ ಆದರೆ ಪ್ರತಿ ವರ್ಷ ಇವುಗಳಿಂದ ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯೋಗದ ಸಮಸ್ಯೆಗೆ ಉತ್ತರ ಸರಳವಾಗಿಲ್ಲ. ಸ್ನಾತಕೋತ್ತರ ಪಡೆದವರು ಅದಕ್ಕನುಗುಣವಾದ ಉದ್ಯೋಗವನ್ನು ನಿರೀಕ್ಷಿಸಿರುತ್ತಾರೆ. (ಅದೂ ತಪ್ಪು ಇರಬಹುದು) ಆದರೆ ಅದಕ್ಕನುಗುಣವಾಗಿ ಉದ್ಯೋಗ ದೊರಕದಿದ್ದಾಗ ಅವರೆಲ್ಲ ಅವರಿಗೆ ಶಿಕ್ಷಣ ನೀಡಿದ ಸರ್ಕಾರವನ್ನೇ ದೂಷಿಸುತ್ತಾರೆ ಅಥವಾ ಉದ್ಯೋಗ ದೊರಕದ ನಿರಾಶೆಯಿಂದ ಖಿನ್ನತೆಯ ಮುಖ ಹೊತ್ತು ಬೇರೆ ಬೇರೆ ಕಡೆ ಸೇರಿಕೊಳ್ಳುತ್ತಾರೆ. ಸಿಕ್ಕದ್ದನ್ನು ಪ್ರೀತಿಸದೇ-ಸಿಗದಿದ್ದುದ್ದಕ್ಕೆ ಹಪಹಪಿಸುತ್ತಾ ಮನಃ ಶಾಂತಿಯನ್ನು ಕಳೆದುಕೊಂಡ ಅತೃಪ್ತ ಗುಂಪೊಂದು ಸಮಾಜದಲ್ಲಿ ನಮ್ಮರಿವಿಗೆ ಬಾರದಂತೆ ಸೃಷ್ಟಿಯಾಗುತ್ತಾ ಹೋಗುವ ಸಾಧ್ಯತೆಗಳಿವೆ.
ಯುಜಿ ಯೊಂದಿಗೆ ಪಿಜಿ ತಳಿಕೆ ಹಾಕಿದರೆ ತಪ್ಪಲ್ಲ. ಆದರೆ ಅದಕ್ಕೆ ಅನುಗುಣವಾದ ಅವಶ್ಯಕತೆಗಳ್ನು ಪೂರೈಸಿಕೊಡದಿದ್ದಲ್ಲಿ ಪರಿಣಾಮದಲ್ಲಿ ಹೊರಬರುವ ಪ್ರತಿಭೆಗಳು ಬಂದಳಿಕೆಗಳಾಗುವ ಅಪಾಯವಿದೆ. ಅವರವರು ಅವರ ಕಾಲ ಮೇಲೆ ನಿಲ್ಲುವಂತಹ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವುದು ಇದಕ್ಕಿಂತ ಉತ್ತಮವೇನೋ? ಇದರೊಟ್ಟಿಗೆ ಚಿಂತಿಸಬೇಕಾದ ಇನ್ನೊಂದು ಅಂಶವೆಂದರೆ – ಒಂದೆಡೆ ರಾಶ್ಯುತ್ಪನ್ನ-ಇನ್ನೊಂದೆಡೆ ಗುಣಮಟ್ಟ-ಇವೆರಡನ್ನು ಸಂಬಾಳಿಸಿಕೊಂಡು ಪ್ರಗತಿ ಸಾಧಿಸುವತ್ತಾ ಕಾರ್ಯತತ್ಪರವಾಗುವುದು ಕಷ್ಟವಾದರೂ ಅಗತ್ಯವೆನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಲವೇ?
ರವೀಂದ್ರ ಭಟ್ ಕುಳಿಬೀಡು

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!