ವರ್ಷವಿಡೀ ವಿದ್ಯಾರ್ಥಿಗಳು ಓದಿನಲ್ಲಿ ತೊಡಗಿರಲಿ. ವರ್ಷದಲ್ಲಿ ಓದಿದ್ದನ್ನೆಲ್ಲ ಒಂದೇ ಬಾರಿ ಉತ್ತರಿಸುವುದಕ್ಕಿಂತ, ಅರ್ಧಧನ ವರ್ಷ ಓದಿ ಉತ್ತರಿಸಲಿ, ತನ್ಮೂಲಕ ಫಲಿತಾಂಶ ಹೆಚ್ಚಳವಾಗಲಿ ಎಂಬಿತ್ಯಾದಿ ಘನ ಉದ್ದೇಶದಿಂದ ವಿಶ್ವವಿದ್ಯಾನಿಲಯಗಳಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಗೆ ಬಂದಿತು. ಇದರಿಂದ ಉದ್ದೇಶಗಳು ಈಡೇರಿದವೇ ಎಂಬ ಕುರಿತಾದ ಅವಲೋಕನ ಕೂಡ ಇಂದಿನ ಅಗತ್ಯ. ಆದರೆ ಆ ಕುರಿತು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಬದಲಿಗೆ ಬಂದ ವ್ಯವಸ್ಥೆಯನ್ನು ಒಪ್ಪಿಕೊಂಡು ಹೇಗೋ ಹಾಗೆ ಎಂದು ಮುಂದುವರೆಸುತ್ತಿದ್ದಾರೆ. ಇದರಿಂದಾಗುತ್ತಿರುವ ತೊಂದರೆಗಳ ಕುರಿತು ಚಕಾರ ಎತ್ತದ ಸ್ಥಿತಿಯೊಳಗೆ ನಾವಿದ್ದೇವೆ.
ವರ್ಷವಿಡೀ ವಿದ್ಯಾರ್ಥಿಗಳು ಶೈಕ್ಷಣಿಕ ವಾತಾವರಣದಲ್ಲಿದ್ದು, ಕ್ರೀಯಾಶೀಲ ಚಟುವಟಿಕೆಗಳಲ್ಲಿ ತೊಡಗಿರಬೇಕೆಂಬ ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲ. ಆದರೆ ಶೈಕ್ಷಣಿಕ ವಾತಾವರಣಕ್ಕೆ ಬದಲಾಗಿ ಬರಿಯ ಓದಿನ ಕಂಠಪಾಠ ಮಾಡುವುದಕಷ್ಟೇ ವಿದ್ಯಾರ್ಥಿಗಳು ಸೀಮಿತವಾಗುತ್ತಿದ್ದಾರೆ. ಒಂದು ಸೆಮಿಸ್ಟರ್‍ನಲ್ಲಿ ಎರಡು ಕಿರುಪರೀಕ್ಷೆಗಳು. ಅವುಗಳನ್ನಾಧರಿಸಿ ಆಂತರಿಕ ಅಂಕಗಳು. ಹೀಗಾಗಿ ವಿದ್ಯಾರ್ಥಿಗಳು ಸದಾ ಪರೀಕ್ಷೆಗಳನ್ನು ಎದುರಿಸುವ ಭಯದೊಳಗೆ ಬದುಕುತ್ತಿದ್ದಾರೆ. ಒಂದು ಸೆಮಿಸ್ಟಾರ್‍ಗಾಗಲೀ ಪಠ್ಯೇತರ ಚಟುವಟಿಕೆಗಳಿಗಾಗಲೀ ವೇಳೆ ಅಲಭ್ಯ. ಹೀಗಾಗಿ ವಿದ್ಯಾರ್ಥಿಗಳು ಉರುಹಚ್ಚುವ ಹಕ್ಕಿಗಳಾಗುತ್ತಿದ್ದಾರೆಯೇ ವಿನ: ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ತಮ್ಮನ್ನು ತೆರೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಅನಿವಾರ್ಯವಾಗಿ ಮುಕ್ತಾಯ ಸಮಾರಂಭಗಳಷ್ಟೇ ನಡೆಯುತ್ತಿದೆ. ಯಾಕೆಂದರೆ ಪಠ್ಯಗಳನ್ನು ಮುಗಿಸುವ ಪರೀಕ್ಷೆಗಳನ್ನು ನಡೆಸುವ ಆಂತರಿಕ ಅಂಕಗಳನ್ನು ನೀಡುವ ಮೌಲ್ಯಮಾಪನ ಮಾಡುವ ಒತ್ತಡದಲ್ಲಿ ಶಿಕ್ಷಕರೂ ಇರುತ್ತಾರೆ. ಹಾಗಾಗಿ ಪರಸ್ಪರ ಹೊಂದಾಣಿಕೆ ಕೂಡಾ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆ ಇದ್ದಂತಹಾ ಸಾಂಸ್ಕøತಿಕ ಕ್ರೀಡಾ ವಾತಾವರಣ ವಿದ್ಯಾರ್ಥಿಗಳಿಗೆ ಲಭ್ಯವಾಗದೇ ಬರಿಯ ಓದಿನ ಏಕತಾನತೆಗೆ ಅವರು ಒಗ್ಗಿಕೊಳ್ಳುತ್ತಾ ಕುಗ್ಗುತ್ತಿದ್ದಾರೆ.
ವರ್ಷವಿಡೀ ಇರುವ ಸಿಲೆಬಸ್ಸನ್ನು ಅರ್ಧ ಅರ್ಧ ವಿಂಗಡಿಸಿ, ಒಂದೊಂದು ಸೆಮಿಸ್ಟರ್‍ಗೆಂದು ನಿಗದಿಪಡಿಸಿ, ಅಷ್ಟಕ್ಕೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಷ್ಟಷ್ಟನ್ನೇ ನೆನಪಿಟ್ಟುಕೊಳ್ಳುವುದು ಸುಲಭವೆಂದು ಸಾರುತ್ತಾರೆ. ಆದರೆ ಪ್ರಶ್ನೆಯೆಂದರೆ ಒಂದು ವರ್ಷ ಓದಿದ್ದನ್ನು ನೆನಪಿಟ್ಟುಕೊಳ್ಳಲಾಗದ ವಿದ್ಯಾರ್ಥಿಗಳು ಓದಿದ್ದನ್ನು ಜೀವನ ಪರ್ಯಂತ ನೆನಪಿಟ್ಟುಕೊಳ್ಳಲು ಹೇಗೆ ಸಾಧ್ಯ?. ಕಲಿತಂತೆ ಮರೆಯಬೇಕೆಂದಾದರೆ ಆ ಕಲಿಕೆಯಾದರೂ ಯಾಕೆ?
ಈ ಸೆಮಿಸ್ಟರ್ ಪದ್ದತಿಯಲ್ಲಿ ಪರೀಕ್ಷೆಗಳದ್ದೇ ಒಂದು ದೊಡ್ಡ ಕೆಲಸ. ನಾಲ್ಕು ನಾಲ್ಕು ತಿಂಗಳ ಕಲಿಕಾ ಅವಧಿ. ಎರಡೆರಡು ತಿಂಗಳ ಪರೀಕ್ಷಾ ಮೌಲ್ಯಮಾಪನದ ಅವಧಿ. ಇದು ಹೆಚ್ಚಾದದ್ದೂ ಇದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳೇ ವರ್ಷದ ನಾಲ್ಕು ತಿಂಗಳನ್ನು ಆಪೋಷಣೆ ತೆಗೆದುಕೊಳ್ಳುವುದು ವ್ಯವಸ್ಥೆಯ ದುರಂತ. ಹೀಗಾಗಿ ಇದು ಒಂದೆಡೆ ಶಿಕ್ಷಕ ಸ್ನೇಹಿಯೂ ಆಗದೇ, ಇನ್ನೊಂದೆಡೆ ವಿದ್ಯಾರ್ಥಿ ಸ್ನೇಹಿಯೂ ಆಗದೇ ನಡೆಯುತ್ತಿದೆ. ಶಿಕ್ಷಕರಿಗೂ ವರ್ಷವಿಡೀ ಇದೇ ಕೆಲಸವಾಗಿ, ರಜೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದರೂ, ಇವರನ್ನು ಇನ್ನೂ ಮಧ್ಯಂತರ ರಜೆ ಪಡೆವ ನೌಕರ ವರ್ಗ ಎಂದೇ ಸರ್ಕಾರ ಪರಿಭಾವಿಸುವುದರಿಂದ ಇವರಿಗೆ ಅತ್ತ ರಜೆಯೂ ಇರದೇ, ಇತ್ತ ಗಳಿಕೆ ರಜೆ ಕೂಡಾ ಲಭ್ಯವಾಗದೇ ಬೇಸರದಲ್ಲಿರುವುದು ನಿಜ. ಪದವಿಗೆ ಸೇರಿದವರಿಗೆ ಪದವಿ ಮುಗಿಯುವ ಹೊತ್ತಿಗೆ ಒಟ್ಟು ಆರು ಸೆಮಿಸ್ಟರ್ ಮುಗಿಸಬೇಕು. ಪ್ರತೀ ಸೆಮಿಸ್ಟರ್ ಪದ್ದತಿಯು ವಿಶ್ವ ವಿದ್ಯಾಲಯದ ಪಬ್ಲಿಕ್ ಪರೀಕ್ಷೆ. ಕೇಂದ್ರ ಮೌಲ್ಯಮಾಪನ ಇದರ ಬದಲಿಗೆ ಮೊದಲನೆಯ ನಾಲ್ಕು ಸೆಮಿಸ್ಟರ್ ಪರೀಕ್ಷೆಗಳನ್ನು ಆಯಾ ಶಿಕ್ಷಣ ಸಂಸ್ಥೆಗಳಲ್ಲೇ ಮಾಡಿ ಫಲಿತಾಂಶ ನೀಡಿದರೆ ಹೆಚ್ಚು ಅನುಕೂಲ. ಕೊನೆಯ ಎರಡು ಸೆಮಿಸ್ಟರ್ ಪರೀಕ್ಷೆಗಳಿಗೆ ಬೇಕಾದರೆ ಪಬ್ಲಿಕ್ ಪರೀಕ್ಷೆಗಳು ಜರುಗಿ ಕೇಂದ್ರ ಮೌಲ್ಯ ಮಾಪನ ಜರುಗಿದರೆ ಸಾಕು. ಇದರ ಆಧಾರದ ಮೇಲೆ ಫಲಿತಾಂಶ ನಿರ್ಧಾರಿತವಾದರೆ ಅಷ್ಟೇ ಸಮಯ ಮತ್ತು ಶ್ರಮದ ಉಳಿತಾಯದ ಜೊತೆಗೆ ವಿಶ್ವವಿದ್ಯಾಲಯಕ್ಕೆ ಹಣದ ಉಳಿತಾಯವೂ ಆಗುತ್ತದೆ. ಬೇಕಿದ್ದರೆ ವೃತ್ತಿಪರ ಕೋರ್ಸ್‍ಗಳಿಗೆ ಪಿಯುಸಿ ಪರೀಕ್ಷೆಯ ಅನಂತರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದರೂ ಆದೀತು. ಅದರ ಆಧಾರದ ಮೇಲೆ ಬಿಎ, ಎಂಎ ಇತ್ಯಾದಿಗಳಿಗೆ ಸೇರಲು ಸಾಧ್ಯವಾಗಬೇಕು. ಹೀಗಾದಾಗ ಒಟ್ಟಾರೆ ಪರೀಕ್ಷೆಗಳ ಸಂಖ್ಯೆ, ಮೌಲ್ಯಮಾಪನ ದಿನಗಳಿಗಾಗಿ ವ್ಯಯಿಸುವ ದಿನಗಳು, ಕಡಿಮೆಯಾಗುವುದು ಎಲ್ಲರೂ ಒಪ್ಪುವ ವಿಷಯ. ಹಾಗೂ ಅಷ್ಟರ ಮಟ್ಟಿಗೆ ಪರೀಕ್ಷಾ ಅಕ್ರಮಗಳು ಕಡಿಮೆಯಾಗಬಹುದೇನೋ?.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಪ್ರಶ್ನೆ ಪತ್ರಿಕೆ ಬಹಿರಂಗದಂತಹ ಪ್ರಕರಣಗಳಿಗೆ ಉತ್ತರ ಪತ್ರಿಕೆಗಳನ್ನು ಮತ್ತೆ ಸೇರಿಸುವ ಪ್ರಕರಣಗಳನ್ನೂ ಸೇರಿಸಿಕೊಂಡು ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಜನರು ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಪೂರ್ಣ ಪರಿಹಾರ ಸಾಧ್ಯವಾಗದಿರಬಹುದಾದರೂ, ಪರಿಹಾರಕ್ಕೆ ಪ್ರಯತ್ನಿಸಲು ಯತ್ನಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಶೇಕಡಾ 75 ರ ಹಾಜರಾತಿ, ಕಡ್ಡಾಯ ಎಂದು ತಿಳಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತಾಗಬೇಕು. ವರ್ಷವಡೀ ಕನಿಷ್ಟ ತರಗತಿಯಲ್ಲಿ ಕೂತಿದ್ದರೆ, ಕಲಿಕೆಗೆ ಅಷ್ಟು ಸಾಕು. ಗುಣಮಟ್ಟ ತನ್ನಿಂದ ತಾನೇ ಬರಬಲ್ಲದು. ಇದಕ್ಕೆ ಅಗತ್ಯವಾಗಿ ಪ್ರತೀ ತರಗತಿಗೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದರೆ ವಿದ್ಯಾರ್ಥಿ ಮತ್ತು ಶಿಕ್ಷಕರಿಬ್ಬರೂ ಫೋರ್ಜರೀ ಹಾಜರಾತಿ ನೀಡಲು ಸಾಧ್ಯವಾಗುವುದಿಲ್ಲ. ಕಾಲೇಜಿಗೇ ಬಾರದೇ ಅಡ್ಡ ದಾರಿಯ ಮೂಲಕ ವಿದ್ಯಾರ್ಥಿಗಳು ಉತ್ತೀರ್ಣರಾಗುವುದಕ್ಕೆ ಅವಕಾಶವಿರುವುದಾದರೆ ನ್ಯಾಯಯುತವಾಗಿ ಪ್ರತೀದಿನವೂ ಕಾಲೇಜಿಗೆ, ಕ್ಲಾಸಿಗೆ ಕುಳಿತುಕೊಳ್ಳುವವರನ್ನು ಯಾಕೆ ಉತ್ತೀರ್ಣ ಎಂದು ಘೋಷಿಸಬಾರದು? ಮೊದಲ ಎರಡು ವರ್ಷಗಳ ನಾಲ್ಕು ಸೆಮಿಸ್ಟರ್‍ಗೆ ಈ ಪದ್ದತಿಯಾದರೂ ಸಾಕು. ಕೊನೆಯ ಎರಡು ಸೆಮಿಸ್ಟರ್‍ಗೆ ಈ ಪದ್ಧತಿಯೊಂದಿಗೆ ಪಬ್ಲಿಕ್ ಪರೀಕ್ಷೆ ಕೂಡಾ ಜರುಗಲಿ. ಇನ್ನು ತರಗತಿಯಲ್ಲಿ ಸಿಸಿ ಟಿವಿಯನ್ನು ಅಳವಡಿಸಿದರೆ ಸೂಕ್ತ. ವಿದ್ಯಾರ್ಥಿಗಳ ಪ್ರತಿಯೊಂದೂ ಚಲನವಲನಗಳು ಹಾಗೆ ಶಿಕ್ಷಕರದ್ದೂ ಕೂಡಾ ದಾಖಲಾಗುವಂತಾದರೆ ಒಂದು ಹದದ ಎಚ್ಚರಿಕೆ ಇರುತ್ತದೆ. ಅದೇ ಸಾಕಾಗುತ್ತದೆ. ಇಷ್ಟಕ್ಕೂ ಈ ಸಾಮಾನ್ಯ ಪದವಿ ಪರೀಕ್ಷೆಗಳ ಅಂಕ ಪಟ್ಟಿಯನ್ನಷ್ಟೇ ನೋಡಿ ಇಂದು ಯಾರೂ ನೌಕರಿ ನೀಡುವುದಿಲ್ಲ. ನೌಕರಿ ನೀಡಲು ಪ್ರತೀ ಸಂಸ್ಥೆ ಕೂಡಾ ತನ್ನ ಅಗತ್ಯಕ್ಕನುಗುಣವಾಗಿ ಪ್ರತ್ಯೇಕ ಪರೀಕ್ಷೆಗಳನ್ನೇ ನಡೆಸಿ ಆಯ್ಕೆ ಮಾಡಿಕೊಳ್ಳುತ್ತದೆ.
ಕೇವಲ ಫಲಿತಾಶ ಹೆಚ್ಚಳವಾಗಬೇಕೆಂದಿದ್ದರೆ, ಒಂದು ವಿಷಯದಲ್ಲಿ ಕನಿಷ್ಠ 40 ಅಂಕಗಳನ್ನು ಪಡೆದರೆ ಉತ್ತೀರ್ಣ ಎಂದಿದ್ದಲ್ಲಿ, ಓದುವ ಒಟ್ಟಾರೆ ವಿಷಯಗಳಲ್ಲಿ ಶೇಕಡಾ 40 ರಷ್ಟು ವಿಷಯಗಳಲ್ಲಿ ಉತ್ತೀರ್ಣರಾದರೆ ಒಟ್ಟಾರೆ ಉತ್ತೀರ್ಣ ಎಂದು ಘೋಷಿಸುವುದು ಸೂಕ್ತ. ಫಲಿತಾಂಶದ ಹೆಚ್ಚಳ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣದ ಹೆಚ್ಚಳವೇ ವಿನ: ಅವರ ಗುಣಮಟ್ಟದ ಹೆಚ್ಚಳದ ಅಳತೆಗೋಲಲ್ಲ. ಹೆಚ್ಚು ಹೆಚ್ಚು ಪರೀಕ್ಷೆಗಳ ಒತ್ತಡವಿರದಿದ್ದಾಗ ಮಾತ್ರ ವಿದ್ಯಾರ್ಥಿಗಳು ಸಾಂಸ್ಕøತಿಕ ಚಟುವಟಿಕೆಗಳಲ್ಲಿ, ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಸಕ್ರೀಯವಾಗಿ ತೊಡಗಿಸಿಕೊಳ್ಳಲು ಸಾಧ್ಯ. ಇದರಿಂದಾಗಿ ಒತ್ತಡದ ವಾತಾವರಣದಿಂದ ಒಂದಷ್ಟು ಹಗುರವಾಗಿ ಇರುವಂತಾದರೆ, ಅದು ಒಟ್ಟಾರೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಡಬಲ್ಲದು.
ವರ್ಷದ ನಾಲ್ಕು ತಿಂಗಳುಗಳಷ್ಟು ಸುದೀರ್ಘವಾದ ಅವಧಿಯನ್ನು ಪರೀಕ್ಷಾ ಕಾರ್ಯಗಳಿಗಾಗಿ ಮೀಸಲಿಡುವುದರ ಮುಖಾಂತರ ಆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ದೊರಕಬಹುದಾದ ಶೈಕ್ಷಣಿಕ ವಾತಾವರಣ ದೊರಕದಂತಾಗಿದೆ. ಮತ್ತು ನಾಲ್ಕು ತಿಂಗಳುಗಳ ಕಾಲ ಪರೀಕ್ಷಾ ಒತ್ತಡದಲ್ಲಿಯೇ ವಿದ್ಯಾರ್ಥಿ ಸಮುದಾಯ ಮತ್ತು ಶಿಕ್ಷಕ ಸಮುದಾಯ ಇರಬೇಕಾಗಿದೆ. ಸೆಮಿಸ್ಟರ್ ಪದ್ದತಿಯ ಹಿಂದೆ ಇರುವ ಆದರ್ಶವನ್ನು ಪ್ರಶ್ನಿಸಲಾಗದು. ಆದರೆ ಅದರಿಂದಾಗುತ್ತಿರುವ ಅಪಾಯಗಳನ್ನು ಪ್ರಶ್ನಿಸದೇ ಇರಲೂ ಆಗದು. ಮತ್ತು ಅದೀಗ ಕೇವಲ ಮರೀಚಿಕೆಯಾಗಿದೆಯೇ ಅಥವಾ ಅದರ ಗುರಿಯನ್ನು ಸಂಪೂರ್ಣವಾಗಿಯಲ್ಲದಿದ್ದರೂ, ಪೂರ್ಣತೆಗೆ ಹತ್ತಿರವಾಗಿಯಾದರೂ ಸಾಧಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಬೇಕಾದದ್ದು ಯಾವುದೇ ಸುಧಾರಣೆಗೆ ಮುನ್ನ ಅನುಸರಿಸಬೇಕಾದ ಕ್ರಮ. ಪ್ರಶ್ನಿಸಿಕೊಳ್ಳುತ್ತಲೇ, ಉತ್ತರಗಳನ್ನು ಕಂಡುಕೊಳ್ಳುತ್ತಲೇ ಬೆಳವಣಿಗೆ ಸಾಧ್ಯವಾಗಬಹುದೇ ವಿನ: ಒಪ್ಪಿಕೊಳ್ಳುತ್ತಾ, ತೆಪ್ಪಗೆ ಸಾಗುವುದಕಷ್ಟೇ ಸೀಮಿತವಾಗುವುದರಿಂದಲ್ಲ.
ರವೀಂದ್ರ ಭಟ್ ಕುಳಿಬೀಡು
- Advertisement -
- Advertisement -
- Advertisement -
- Advertisement -