“ತಂಕ್ರ ಜಾಕ್ರಸ್ತ ದುರ್ಲಭಂ” ಮಜ್ಜಿಗೆ ದೇವಲೋಕದ ದೇವೇಂದ್ರನಿಗೂ ಕೂಡ ದುರ್ಲಭವಾಗಿತ್ತಂತೆ. ಈ ಉಕ್ತಿಯೇ ಮಜ್ಜಿಗೆಯ ಪ್ರಾಧಾನ್ಯತೆಯನ್ನು ಸಾರಿ ಹೇಳುತ್ತದೆ. ಮಲೆನಾಡಿನ ಬ್ರಾಹ್ಮಣರ ಮನೆಗಳಲ್ಲಿ ಮಜ್ಜಿಗೆ ಹಾಗೂ ಅದರಿಂದ ತಯಾರಿಸಿದ ಭೋಜ್ಯಗಳಿಲ್ಲದೆ ದಿನದ ಊಟವೇ ಮುಕ್ತಾಯಗೊಳ್ಳದು. ಮಜ್ಜಿಗೆಯಿಂದ ವಿವಿಧ ರೀತಿಯ ಪದಾರ್ಥಗಳನ್ನು ಸಿದ್ಧ ಪಡಿಸುತ್ತಾರೆ. ಬಿಸಿಲಿನಿಂದ ಬಸವಳಿದು ಬಂದ ಅತಿಥಿಗಳಿಗೆ ಮಲೆನಾಡಿನ ಮನೆಗಳಲಿ ಮಜ್ಜಿಗೆಯನ್ನು ಪಾನೀಯವಾಗಿ ಬೆಲ್ಲ ಅಥವಾ ಉಪ್ಪಿನ ಮಿಶ್ರಣದೊಂದಿಗೆ ನೀಡುವುದು ಒಂದು ಪದ್ಧತಿ. ಅರ್ಶಸ್ಸು (Piles) ಹಾಗೂ ಕೆಲವು ಜೀರ್ಣಕ್ರಿಯೆ ಸಂಬಂಧಿ ರೋಗಗಳಲ್ಲಿ ಮಜ್ಜಿಗೆ ಹಾಗೂ ಅದರಿಂದ ಸಿದ್ಧಪಡಿಸಿದ ಔಷಧಗಳೇ ರಾಮಬಾಣ. ಹೀಗಿರುವ ಮಜ್ಜಿಗೆಯ ಆಯುರ್ವೇದ ಗ್ರಂಥಗಳಲ್ಲಿ ವಿವರಿಸಿರುವ ಗುಣ ದೋಷಗಳು, ತಯಾರಿಸುವ ವಿಧಾನ, ರೋಗಗಳಲ್ಲಿ ಉಪಯೋಗಗಳನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.
ಮಜ್ಜಿಗೆಯ ಗುಣಗಳು
ಮಜ್ಜಿಗೆಯು ಜೀರ್ಣಕ್ಕೆ ಹಗುರವಾದಂಥಹುದು. ಸಿಹಿ, ಕಷಾಯ ರಸ ಹಾಗೂ ಹುಳಿ ರಸಗಳು ಪ್ರಧಾನವಾಗಿರುತ್ತವೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತದೋಷಗಳನ್ನು ಶಮನ ಮಾಡುತ್ತದೆ. ಉಷ್ಣ ಗುಣವನ್ನು ಹೊಂದಿದೆ. ಬಾವು, ಉದರ (Ascites) ಅರ್ಶಸ್ (Piles), ಜೀರ್ಣ ಸಂಬಂಧಿ ರೋಗಗಳಲ್ಲಿ, ಅತಿಸಾರ ವಿಷ, ಮೂತ್ರ ಸಂಬಂಧಿ ವಿಕಾರಗಳಲ್ಲಿ ಇದನ್ನು ಉಪಯೋಗಿಸಬಹುದು. ಅಲ್ಲದೆ ಪ್ಲೀಹ ಸಂಬಂಧಿ ವಿಕಾರಗಳಲ್ಲಿ, ರಕ್ತಹೀನತೆ, ಹಾಗೂ ಅತಿಯಾಗಿ ತುಪ್ಪವನನ್ನು ಸೇವಿಸುವುದರಿಂದ ಉಂಟಾದ ವಿಕಾರಗಳನ್ನು ಶಮನ ಮಾಡುವುದು.
ತಯಾರಿಸುವ ವಿಧಾನ
1. ರೂಕ್ಷ ತಕ್ರ: ಇಲ್ಲಿ ಮೊಸರಿಗೆ ಅರ್ಧ ಪ್ರಮಾಣದಷ್ಟು ನೀರನ್ನು ಬೆರೆಸಿ ಕಡೆದು ಬೆಣ್ಣೆಯನ್ನು ಪೂರ್ತಿಯಾಗಿ ತೆಗೆದು ಬಿಡುವಂಥದ್ದು.
2. ಅರ್ಧೋಧೃತ ಸ್ನೇಹ ತಕ್ರ: ಇಲ್ಲಿ ಮೊಸರಿಗೆ ನೀರನ್ನು ಬೆರೆಸಿ ಕಡೆದು, ಅರ್ಧದಷ್ಟು ಬೆಣ್ಣೆಯನ್ನು ಮಾತ್ರ ತೆಗೆಯಲಾಗುತ್ತದೆ.
3. ಅನುಧೃತ ಸ್ನೇಹ ತಕ್ರ ಅಥವಾ ಘೋಲ: ಇಲ್ಲಿಮೊಸರಿಗೆ ನೀರನ್ನು ಬೆರೆಸದೆಯೆ ಕಡೆಯುವುದು. ಇಲ್ಲಿ ಬೆಣ್ಣೆಯನ್ನು ತೆಗೆಯಲಾಗುವುದಿಲ್ಲ.
ಇವೆಲ್ಲವುಗಳಲ್ಲಿ ಬೆಣ್ಣೆಯನ್ನು ಪೂರ್ತಿಯಾಗಿ ತೆಗೆದ ರೂಕ್ಷ ತಕ್ರ (ಮಜ್ಜಿಗೆ) ಅತ್ಯಂತ ಶ್ರೇಷ್ಠ.
ಮಜ್ಜಿಗೆಯನ್ನು ಯಾವಾಗ ಬಳಸಬಾರದು?
1. ಉಷ್ಣಕಾಲಗಳಾದ ಶರದ್ ಋತು ಹಾಗೂ ಗ್ರೀಷ್ಮ ಋತುಗಳಲ್ಲಿ ಮಜ್ಜಿಗೆಯನ್ನು ಉಪಯೋಗಿಸಬಾರದು.
2. ಅತಿಯಾಗಿ ದುರ್ಬಲರಾದವರು ಮಜ್ಜಿಗೆಯನ್ನು ಉಪಯೋಗಿಸ ಕೂಡದು.
3. ಮೂರ್ಛೆ ರೋಗದಲ್ಲಿ, ರಕ್ತ ಪಿತ್ತಜ, ವಿಕಾರಗಳಲ್ಲಿ, ಕೈ ಕಾಲುಗಳಲ್ಲಿ ಉರಿ, ಅಂಗಾಂಗಗಳಲ್ಲಿ ದಾಹ ಹಾಗೂ ಹೊಟ್ಟೆಯಲ್ಲಿ ದಾಹ ಇರುವವರು ಮಜ್ಜಿಗೆಯನ್ನು ಬಳಸದಿದ್ದರೆ ಉತ್ತಮ.
ಮಜ್ಜಿಗೆಯನ್ನು ಯಾವಾಗ ಬಳಸಬಹುದು?
ಶೀತಕಾಲದಲ್ಲಿ, ಜೀರ್ಣ ಶಕ್ತಿ ಕುಂದಿರುವವರು, ಕಫ ಹಾಗೂ ವಾತ ಪ್ರಾಧಾನ್ಯತೆಯುಳ್ಳ ರೋಗಗಳಲ್ಲಿ, ದುಷ್ಟವಾತ ವಿಕಾರಗಳಲ್ಲಿ, ದೇಹದಲ್ಲಿರುವ ಸ್ರೋತಸ್ಸುಗಳ ಅವರೋಧಗಳಲ್ಲಿ ಮಜ್ಜಿಗೆಯನ್ನು ಬಳಸತಕ್ಕದ್ದು.
ದೋಷ ಪ್ರಾಧಾನ್ಯತೆಗನುಗುಣವಾಗಿ ಮಜ್ಜಿಗೆಯ ಬಳಕೆ
ವಾತದೋಷದ ವಿಕಾರಗಳಲ್ಲಿ ಹುಳಿ ಮಜ್ಜಿಗೆಯನ್ನು ಸೈಂಧವ ಲವಣದೊಂದಿಗೆ ಸೇವನೆ ಮಾಡುವುದು ಉತ್ತಮ. ಪಿತ್ತ ವಿಕಾರಗಳಲ್ಲಿ ಸಕ್ಕರೆಯೊಂದಿಗೆ ಸೇವನೆ ಮಾಡಬಹುದು ಹಾಗೂ ಕಫಜ ವಿಕಾರಗಳಲ್ಲಿ ಹಿಪ್ಪಲಿ, ಕಾಳುಮೆಣಸು ಹಾಗೂ ಶುಂಠಿಯೊಂದಿಗೆ ಮಜ್ಜಿಗೆಯ ಸೇವನೆ ಮಾಡುವುದು ಹಿತಕರ.
“ಅತಿಯಾದರೆ ಅಮೃತವೂ ವಿಷ” ಅಂತೆಯೇ ಮಜ್ಜಿಗೆಯ ಗುಣ ದೋಷಗಳನ್ನು ತಿಳಿದು, ನಮ್ಮ ನಮ್ಮ ದೇಹ ಪ್ರಕೃತಿಗೆ, ಋತುವಿಗೆ, ಜೀರ್ಣ ಶಕ್ತಿಗೆ ಅಡ್ಡಿಯಾಗದ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕರ ಪ್ರಯತ್ನಿಸೋಣ ಅಲ್ಲವೆ?
ಡಾ. ನಾಗಶ್ರೀ.ಕೆ.ಎಸ್
- Advertisement -
- Advertisement -
- Advertisement -
- Advertisement -