19.1 C
Sidlaghatta
Sunday, March 3, 2024

ಆಟೋಗ್ರಾಫ್ ಎಂಬ ನೆನಪಿನ ವಿಮಾನವೇರಿ..

- Advertisement -
- Advertisement -

ಚಂದದ ಗೊಂಬೆಯಂಗಡಿ ಎದುರು ನಿಂತ ಮಗುವೊಂದು ತನ್ನ ಖುಷಿಯನ್ನು ವ್ಯಕ್ತ ಪಡಿಸಲಾಗದೇ ಬೆರಗುಗಣ್ಣಿನಿಂದ ಕಣ್ಣು ಮಿಟುಕಿಸದೆ ನೋಡುವ ಹಾಗೆ, ಅಂದು ನನ್ನ ಪುಟ್ಟ ಪುಸ್ತಕವೊಂದನ್ನ ನೋಡುತ್ತಾ ನಿಂತೆ. ಎಷ್ಟು ದಿನವಾಗಿತ್ತು ಅದನ್ನು ಮುಟ್ಟಿನೋಡದೇ! ಹಿಂದೊಮ್ಮೆ ಶಾಲೆ ಬದಲಿಸುವಾಗ, ಕಾಲೇಜು ಬಿಡುವಾಗ, ಚಿಕ್ಕ ಪುಸ್ತಕದಲ್ಲಿ ಗೆಳೆಯರಿಂದ ಆಟೋಗ್ರಾಫ್ ಬರೆಸಿಟ್ಟುಕೊಂಡ ಪುಸ್ತಕವದು. ನನ್ನ ಜೀವನದ ಹಾದಿಯಲ್ಲಿ ಕೆಲಕಾಲ ಹೆಜ್ಜೆಯಿಟ್ಟು ಜೊತೆಯಾದವರ ನೆನೆದ ಮನಸ್ಸು ಅಂದು ಹುಡುಕಿಕೊಟ್ಟದ್ದು ಇದೇ ಪುಸ್ತಕವನ್ನು. ಭದ್ರವಾಗಿ ಬೀಗ ಹಾಕಿಟ್ಟಿದ್ದ ಪುಸ್ತಕವದು! ಬಹುಶ: ಆ ಪುಟ್ಟ ಪುಟ್ಟ ಸಾಲುಗಳು ಎಲ್ಲಿ ಹಾರಿ ಹೋದಾವು ಎಂಬ ಭ್ರಮೆ ಇದ್ದಿರಬೇಕು ನನಗೆ!
ಪುಸ್ತಕ ತೆರೆಯುತ್ತಿದ್ದಂತೆ ನನಗೇ ತಿಳಿಯದೇ ಮುಗುಳು ನಗೆಯೊಂದು ಮೂಡಿತ್ತು. 20 ವರ್ಷಗಳ ಜೀವನ ಒಂದು ಪುಟ್ಟ ಸಿನಿಮಾದಂತೆ ಕಣ್ಣೆದುರಿಗೆ ಹಾದು ಹೋಗಿತ್ತು. ಅದರಲ್ಲಿ ಅದೆಷ್ಟು ಜನ ಕಣ್ಣೆದುರಿಗೆ ಬಂದು ಹೋದವರು! ಅದರಲ್ಲಿ ಕೆಲವರು ಪ್ರೀತಿಯಿಂದ, ಹಲವರು ತುಂಟತನದಿಂದ, ಇನ್ನೂ ಕೆಲವರು ಹಠದಿಂದ ಏನೇನೆಲ್ಲಾ ಬರೆದ ದೊಡ್ಡ ಹಾಗೂ ದಡ್ಡ ಸಾಲುಗಳನ್ನು ಓದಿದರೆ ಈಗ ತಮಾಷೆಯೆನಿಸುತ್ತದೆ.
“ಡೇಟೆಡ್ ಫಾರೆವರ್” ಎಂದು ಒಬ್ಬ ಹೇಳಿದರೆ, “ಸಮಯ ಸರಿಯಬಹುದು, ಜಗತ್ತಿನಲ್ಲಿ ಎಲ್ಲವೂ ಬದಲಾಗಬಹುದು, ಆದರೆ ನಮ್ಮ ಸ್ನೇಹ ಶಾಶ್ವತ ” ಎನ್ನುತ್ತಾಳೆ ಇನ್ನೊಬ್ಬಳು!” ನಮ್ಮ ಗೆಳೆತನ ನಮ್ಮಿಬ್ಬರ ಕೊನೆಯುಸಿರು ಇರುವವರೆಗೆ” ಎಂದ ಗೆಳತಿ ಎಲ್ಲಿದ್ದಾಳೋ, ಹೇಗಿದ್ದಾಳೋ ಈಗ ನೋಡುವ ಅಸೆಯಾಗುತ್ತದೆ. ನನ್ನ ಹೆಸರಿನ ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥ ಕೊಟ್ಟು ಹೊಸ ಅರ್ಥ ಸೃಷ್ಟಿಸಿದ ಬುಧ್ಧಿವಂತರಿದ್ದಾರೆ. ಹೀಗೆ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ, ವ್ಯಂಗವಾಗಿ, ತಮಾಷೆಯಾಗಿ ಬರೆದುಕೊಟ್ಟ ಎಷ್ಟೋ ಜನ ಒಮ್ಮೆ ನೆನಪಾದರು. ಬಹುಶ: ಆಗ ಇದನ್ನೆಲ್ಲ ಓದಿ ಖುಷಿ ಪಟ್ಟವಳು ನಾನು, ಆದರೆ ಈಗ ಓದಿದರೆ ನಗು ಬರುವುದುಂಟು.
ಎಷ್ಟೊ ಬಾರಿ ನಾನು ಚಿಕ್ಕವಳಿದ್ದಾಗ, ಈ ಆಟೋಗ್ರಾಫ್ ಬರೆದುಕೊಡುವುದಕ್ಕೆ, ಬೇರೆಯವರಿಂದ ಬರೆಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದೆ. ಪ್ರತೀ ಬಾರಿಯೂ ಅನಿಸುತ್ತಿದ್ದುದು, ಈ ನಮ್ಮ ಸ್ನೇಹ ನಿಜವಾಗಿದ್ದರೆ, ಅವರು ನಮ್ಮುಳಗೆ ಅಚ್ಚೊತ್ತಿದ್ದರೆ, ಅದು ಶಾಶ್ವತ. ಎಂದೆಂದಿಗೂ ಯಾರೂ ಅಳಿಸಲಾಗದು. ಇದಕ್ಕೆ ಈ ಪುಸ್ತಕದ ನೆರವು ಬೇಕಾ? ಎಂದು. ಈ ಸ್ನೇಹವೆಂಬುದು ಒಂದು ಸಮುದ್ರವಿದ್ದಂತೆ. ಇಲ್ಲೆ ಹಳೇ ನೀರು ಹೊಸ ನೀರು ಸೇರಿಯೇ ಹೊಸ ಅಲೆಯಾಗಬೇಕು. ಹಾಗಿದ್ದರೆ ಈ ಹಳೆಯ ಸ್ನೇಹವನ್ನು ನಾ ಮರೆಯುದುಂಟಾ? ನಮ್ಮ ಗೆಳೆತನಕ್ಕೆ ಈ ಪುಸ್ತಕದ ಹಂಗು ಬೇಕಾ? ನನ್ನ ಮನಸ್ಸು ಸಾಲದಾ? ಎಂದು ಪ್ರತೀ ಬಾರಿಯೂ ಪುಸ್ತಕವನ್ನು ಕೈಗೆತ್ತಿಕೊಂಡಾಗ ಅನ್ನಿಸುತ್ತಿದ್ದುದು ನಿಜ.
ಆದರೆ….ಕೆಲವೊಮ್ಮೆ ದೇವರು ಇಲ್ಲ ಎಂದು ವಾದ ಮಾಡುವವನೊಬ್ಬ, ಸುತ್ತಲಿನ ಜನರೆಲ್ಲರೂ ಜಾತ್ರೆಯಲ್ಲಿ ದೇವರಿಗೆ ಕೈ ಮುಗಿಯುವುದನ್ನು ನೋಡಿ ಭಯದಿಂದಲೋ, ತನಗೇನಾದರಾದೀತು ಎಂಬ ಕಾರಣದಂದಲೋ ತನ್ನ ಕೈಗಳನ್ನೂ ಜೋಡಿಸಿದಂತೆ, ನಾನೂ ಕೂಡ ಎಲ್ಲರ ಹಾಗೆ, ಈ ಆಟೋಗ್ರಾಫ್ ಪುಸ್ತಕದ ಹಾಳೆಗಳನ್ನು ತುಂಬಿಸಿಟ್ಟಿದ್ದೆ. ಇದರ ಅಸ್ತಿತ್ವದ ಅನುಭವ ನನಗೆ ಈಚೆಗೆ ತಿಳಿದದ್ದು, ಅರಿವಾದದ್ದು.
ಈ ಡಿಜಿಟಲ್ ಜಗತ್ತಿನಲ್ಲಿ, ಕೈ ಬೆರಳುಗಳ ತುದಿಯಲ್ಲೇ ಎಲ್ಲವೂ ಸಿಗುವ ಹೊತ್ತಲ್ಲಿ, ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ನಡುವೆ ಈ ಪುಟ್ಟ ಪುಸ್ತಕದ ಉಪಯೋಗ ನಮಗಾರಿಗೂ ಇಲ್ಲ. ಸಾವಿರಕ್ಕೂ ಹೆಚ್ಚು ಗೆಳೆಯರ ಗೆಳೆತನ ಹೊಂದಿದ ಫೇಸ್ ಬುಕ್ ಅಕೌಂಟಿನಲ್ಲಿ, ಯಾರು ಬೇಕಾದರೂ ಎಷ್ಟು ಹೊತ್ತಿಗೂ ಸಿಗುತ್ತಾರೆ. ಸಮಯವಿದ್ದರೆ ಹರಟುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲಿ, ಶಾಲಾ ಕಾಲೇಜು ಬಿಡುವಾಗ. “ಏ ಯಾಕ್ರೋ ಅಳ್ತಿರಾ? ಫೇಸ್ ಬುಕ್ ಅಲ್ಲಿ ಮೀಟ್ ಮಾಡೋಣ ಬಿಡಿ” ಅಂದವರೇ ಹೆಚ್ಚು. ನಿಜ ಈ ಜಾಲತಾಣಗಳು ನಾವು ದೂರದಲ್ಲಿದ್ದರೂ ಹತ್ತಿರದಲ್ಲಿದ್ದೇವೆ ಎಂಬ ಭಾವನೆಯನ್ನು ಮೂಡಿಸಿ ಮುದ ನೀಡುತ್ತದೆ. ಗೆಳೆತನದ ಭರವಸೆಗೆ ಇದು ಸಹಕಾರಿ ಕೂಡ. ಆದರೆ, ಈ ಪುಟ್ಟ ಪುಸ್ತಕವನ್ನು ಮುಂದೊಂದು ದಿನ ಓದಿದಾಗ ಸಿಗುವ ಆನಂದವನ್ನು, ಇದಕ್ಕೆ ಹೋಲಿಸಲಾಗದು. ಇದು ನಮ್ಮ ಗೆಳೆಯರು ಸದ್ಯದಲ್ಲ್ಲಿ ದೂರವಿದ್ದಾರೆ ಹಾಗು ನಾವು ಜೀವನದಲ್ಲಿ ಬಹುದೂರ ಸಾಗಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಪ್ರತೀ ಬಾರಿ ಓದಿದಾಗಲೂ ಪದಗಳು ಅದೇ ಆದರೂ ಅದರ ಅರ್ಥ ಅನುಭವ ಬೇರೆಯಾಗುತ್ತಾ ಹೋಗುತ್ತದೆ. ಕೆಲವು ಬಾರಿ ನಮಗೇ ಅರಿಯದೆ ಎಲ್ಲೋ ಕಳೆದುಹೋದ ನಮ್ಮ ಅಂತರಂಗದ ಶಕ್ತಿಯನ್ನು ಮರು ಭರಿಸುತ್ತದೆ.
ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಬಂದ ಆ ಪುಟಾಣಿಗಳು, ನಮ್ಮ ಬಾಲ್ಯವನ್ನ್ನು ಮತ್ತೆ ನೆನಪಿಸುತ್ತಾರೆ. ಹತ್ತಿರವಿದ್ದೂ ದೂರವಿರುವ, ದೂರವಿದ್ದೂ ಹತ್ತಿರವಿದ್ದಂತೆ ತೋರುವ ಈ ಜೀವನದ ವೈರುಧ್ಯ, ನನಗೆ ಅರ್ಥವಾದದ್ದು ಮೊನ್ನೆ ಈ ಬಾಲ್ಯದ ಸ್ನೇಹಿತರನ್ನು ಒಡಿಲಿನಲ್ಲಿ ಹಿಡಿದಿಟ್ಟುಕೊಂಡ ಈ ಪುಟ್ಟ ಪುಸ್ತಕದಿಂದ.
ನೀವು ಕೂಡ ಇದನ್ನು ಜೋಪಾನವಾಗಿಟ್ಟಿದ್ದರೆ, ಒಮ್ಮೆ ಅದರ ಪುಟಗಳನ್ನು ತಿರುವಿಹಾಕಿ. ಆ ಚೊಕ್ಕ ಮನಸ್ಸಿನ ಚಿಕ್ಕ ಚಿಕ್ಕ ಭಾವನೆಗಳು ನಿಮ್ಮ ಮನಸ್ಸಿಗೆ ಮತ್ತೆ ಖುಷಿಯ ರೆಕ್ಕೆಯನ್ನು ಹಚ್ಚುತ್ತದೆ. ಏನಂತೀರ?
ಸ್ಫೂರ್ತಿ ವಾನಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!